ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್: ಚಿನ್ನ ಗೆದ್ದ ಬಜರಂಗ್ ಪೂನಿಯಾ

ಫೈನಲ್‌ಗೆ ಪರ್ವೀನ್ ರಾಣಾ
Last Updated 23 ಏಪ್ರಿಲ್ 2019, 19:06 IST
ಅಕ್ಷರ ಗಾತ್ರ

ಕ್ಸಿಯಾನ್: ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗಳಿಸುವುದರೊಂದಿಗೆ ಭಾರತ ಶುಭಾರಂಭ ಮಾಡಿದೆ.

ಮಂಗಳವಾರ ನಡೆದ ಪಂದ್ಯಗಳಲ್ಲಿ ಅಗ್ರಕ್ರಮಾಂಕದ ಬಜರಂಗ್‌ ಪೂನಿಯಾ 65 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದರೆ, ಪರ್ವೀನ್‌ ರಾಣಾ ಫೈನಲ್‌ ಪ್ರವೇಶಿಸಿದ್ದಾರೆ.

ಪುರುಷರ ಫ್ರೀ–ಸ್ಟೈಲ್‌ ವಿಭಾಗದಲ್ಲಿ ಬಜರಂಗ್‌ ಅವರುಕಜಕಸ್ತಾನದ ಸಯ್ಯತ್ಬೆಕ್ ಒಕಸೊವ್ ‌ವಿರುದ್ಧ 12–7ರಿಂದ ಗೆದ್ದರು. ಪ್ರಾರಂಭದಲ್ಲಿ 2–7ರಿಂದ ಹಿನ್ನಡೆ ಅನುಭವಿಸಿದ್ದ ಪೂನಿಯಾ ನಂತರ ಆಕ್ರಮಣಕಾರಿಯಾಗಿ ಆಟವಾಡಿದರು.

ಕೊನೆ ಬೆಲ್‌ಗೆ 60 ಸೆಕೆಂಡ್‌ ಉಳಿದಿದ್ದಾಗ ಪುಟಿದೆದ್ದ ಪೂನಿಯಾ, 8 ಅಂಕ ಗಿಟ್ಟಿಸಿಕೊಂಡು ಅಭಿಮಾನಿಗಳಲ್ಲಿ ಕಿಚ್ಚು ಹತ್ತಿಸಿದ್ದರು. ರೋಚಕ ಗೆಲುವು ಪಡೆಯುವುದರೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದರು.

ಬಜರಂಗ್‌ ಅವರಮುಂದಿನ ನಡೆಯನ್ನು ಗುರುತಿಸಲು ಎದುರಾಳಿಗೆ ಆಗಲಿಲ್ಲ. ವೇಗ ಮತ್ತು ಬಲವಾದ ಪಟ್ಟುಗಳಿಗೆ ಕಜಕ್‌ ಆಟಗಾರ ಶರಣಾಗಬೇಕಾಯಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಉಜ್ಬೆಕಿಸ್ತಾನದ ಸಿರಾಜಿದ್ದೀನ್‌ ಕಶನೊವ್ ಅವರನ್ನು 12–1ರಿಂದ ಮಣಿಸಿದ್ದರು.

ಫೈನಲ್‌ಗೆ ಪರ್ವೀನ್‌: 79 ಕೆ.ಜಿ ವಿಭಾಗದಲ್ಲಿ ಪರ್ವೀನ್ ರಾಣಾ ಅವರು ಕಜಕಸ್ತಾನದಗ್ಯಾಲಿಮ್ಝಾನ್ ಉಸೆರ್ಬೇವ್‌ ಅವರನ್ನು 3–2ರಿಂದ ಮಣಿಸಿದರು. ಫೈನಲ್‌ನಲ್ಲಿ ಚಿನ್ನಕ್ಕಾಗಿ ಇರಾನ್‌ನ ಮೊಹಮ್ಮದ್‌ ತೆಮೌರಿ ವಿರುದ್ಧ ಸೆಣಸಲಿದ್ದಾರೆ.

57 ಕೆ.ಜಿ ವಿಭಾಗದಲ್ಲಿ ರವಿಕುಮಾರ್‌ ಅವರು ತೈವಾನ್‌ನ ತ್ಸೋ ಲಿಯೂ ‌ಅವರನ್ನು 4–0ರಿಂದ ಸೋಲಿಸುವ ಮೂಲಕ ಕಂಚಿನ ಪದಕದ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಸತ್ಯವ್ರತ್‌ ಕದಿಯಾನ್‌ ಅವರು 97 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಆದರೆ, 70 ಕೆ.ಜಿ ವಿಭಾಗದಲ್ಲಿ ರಜನೀಶ್‌ ಅವರು ಸೋತು ಟೂರ್ನಿಯಿಂದ ಹೊರನಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT