ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಮನ್‌ವೆಲ್ತ್‌, ವಿಶ್ವ ಚಾಂಪಿಯನ್‌ಷಿಪ್‌: ಪದಕ ವಿಜೇತರಿಗೆ ಬಿಎಐನಿಂದ ನಗದು ಘೋಷಣೆ

Last Updated 6 ಸೆಪ್ಟೆಂಬರ್ 2022, 12:54 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ವಿಜೇತ ದೇಶದ ಬ್ಯಾಡ್ಮಿಂಟನ್ ಪಟುಗಳಿಗೆ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ) ಒಟ್ಟು ₹ 1.5 ಕೋಟಿ ನಗದು ಬಹುಮಾನ ಘೋಷಿಸಿದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಈ ವರ್ಷ ನಡೆದ ಕಾಮನ್‌ವೆಲ್ತ್ ಕೂಟದಲ್ಲಿ ಭಾರತ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಜಯಿಸಿತ್ತು. 2021 ಮತ್ತು 2022ರ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಮೂರು ಪದಕಗಳು ದೇಶದ ಆಟಗಾರರಿಗೆ ಒಲಿದಿದ್ದವು.

‘ನಮ್ಮ ಆಟಗಾರರು ನಿರಂತರವಾಗಿ ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ. ಈ ನಗದು ಬಹುಮಾನ ಅವರ ಮಹತ್ಸಾಧನೆಗೆ ಸಲ್ಲಿಸುತ್ತಿರುವ ಒಂದು ಪುಟ್ಟ ಗೌರವ‘ ಎಂದು ಬಿಎಐ ಅಧ್ಯಕ್ಷ ಹಿಮಂತ್ ಬಿಸ್ವ ಶರ್ಮಾ ಹೇಳಿದ್ದಾರೆ.

ಕಾಮನ್‌ವೆಲ್ತ್ ಕೂಟದ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಜಯಿಸಿದ 10 ಮಂದಿಯ ತಂಡಕ್ಕೆ ₹ 30 ಲಕ್ಷ, ನೆರವು ಸಿಬ್ಬಂದಿಗೆ ತಲಾ ₹ 1.5 ಲಕ್ಷ, ಪುರುಷ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಚಿನ್ನ ಗೆದ್ದ ಲಕ್ಷ್ಯ ಸೇನ್‌ ಮತ್ತು ಪಿ.ವಿ.ಸಿಂಧು ಅವರಿಗೆ ತಲಾ ₹ 20 ಲಕ್ಷ, ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ ಚಿರಾಗ್‌ ಶೆಟ್ಟಿ– ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಜೋಡಿಗೆ ₹ 25 ಲಕ್ಷ ಬಹುಮಾನ ಘೋಷಿಸಲಾಗಿದೆ.

ಗಾಯತ್ರಿ ಗೋಪಿಚಂದ್‌– ತ್ರಿಶಾ ಜೋಲಿ (ಮಹಿಳಾ ಡಬಲ್ಸ್‌ ಕಂಚು) ಜೋಡಿಗೆ ₹ 7.5 ಲಕ್ಷ, ಬರ್ಮಿಂಗ್‌ಹ್ಯಾಮ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಕಂಚು ಗೆದ್ದಿದ್ದಕ್ಕೆ ಕಿದಂಬಿ ಶ್ರೀಕಾಂತ್‌ ಅವರಿಗೆ ₹ 5 ಲಕ್ಷ, 2021ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಜಯಿಸಿದ್ದಕ್ಕೆ ₹ 10 ಲಕ್ಷ ಪ್ರಕಟಿಸಲಾಗಿದೆ. ಇದೇ ವಿಶ್ವ ಕೂಟದಲ್ಲಿ ಕಂಚು ಜಯಿಸಿದ ಲಕ್ಷ್ಯ ಅವರಿಗೆ ₹ 5 ಲಕ್ಷ ಬಹುಮಾನ ಘೋಷಿಸಲಾಗಿದೆ.

ಕಳೆದ ತಿಂಗಳು ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ ಡಬಲ್ಸ್‌ನಲ್ಲಿ ಕಂಚು ಗೆದ್ದ ಚಿರಾಗ್‌ ಮತ್ತು ಸಾತ್ವಿಕ್ ಅವರಿಗೆ ₹ 7.5 ಲಕ್ಷ ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT