ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ ಅರ್ಹತಾ ಕುಸ್ತಿ: ಬಜರಂಗ್ ಪೂನಿಯಾ, ರವಿ ದಹಿಯಾಗೆ ಸೋಲು

Published 10 ಮಾರ್ಚ್ 2024, 14:49 IST
Last Updated 10 ಮಾರ್ಚ್ 2024, 14:49 IST
ಅಕ್ಷರ ಗಾತ್ರ

ಸೋನೆಪತ್, ಹರಿಯಾಣ: ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪೂನಿಯಾ ಮತ್ತು ರವಿ ದಹಿಯಾ ಅವರು ರಾಷ್ಟ್ರೀಯ ತಂಡ ಆಯ್ಕೆ ಟ್ರಯಲ್ಸ್‌ನಲ್ಲಿ  ಸೋತು, ಪ್ಯಾರಿಸ್ ಒಲಿಂಪಿಕ್ ಅರ್ಹತಾ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.  

ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಪೂನಿಯಾ, ಪುರುಷರ ಫ್ರೀಸ್ಟೈಲ್ 65 ಕೆಜಿ ಸೆಮಿಫೈನಲ್‌ನಲ್ಲಿ ರೋಹಿತ್ ಕುಮಾರ್ ವಿರುದ್ಧ 1-9 ಅಂತರದಲ್ಲಿ ಸೋಲನುಭವಿಸಿದರು.

ಆರಂಭಿಕ ಸುತ್ತಿನಲ್ಲಿ ರವೀಂದರ್ (ಮಾನದಂಡಗಳ ಮೇಲೆ 3-3) ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ರವೀಂದರ್ ಅವರು ಪಂದ್ಯದಲ್ಲಿ ಪಾಯಿಂಟ್ ಅನ್ನು ಬಿಟ್ಟುಕೊಡದಿದ್ದರೆ, ಪೂನಿಯಾ ಆರಂಭಿಕ ಪಂದ್ಯದಲ್ಲೇ ಸೋಲುತ್ತಿದ್ದರು.   

ಐಒಎ ಅಡ್‌ಹಾಕ್ ಸಮಿತಿ ಆಯೋಜಿಸಿರುವ ಟ್ರಯಲ್ಸ್‌ಗೆ ತಯಾರಿ ನಡೆಸಲು ಪೂನಿಯಾ ರಷ್ಯಾದಲ್ಲಿ ತರಬೇತಿ ಪಡೆದಿದ್ದರು.

ಸ್ಪರ್ಧೆಯಿಂದ ಹೊರಬೀಳುತ್ತಿದ್ದಂತೆ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರ ತೊರೆದರು. ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ (ನಾಡಾ) ಅಧಿಕಾರಿಗಳು ಪುನಿಯಾ ಅವರಿಂದ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲು ಪ್ರಯತ್ನಿಸಿದರು. ಆದರೆ ಬಜರಂಗ್ ಅವರು ಮೂರನೇ-ನಾಲ್ಕನೇ ಸ್ಥಾನದ ಪಂದ್ಯಕ್ಕೂ ಬರಲಿಲ್ಲ.  

ಸುಜೀತ್ ಕಲಾಕಲ್ ಈಗ ಭಾರತ ತಂಡದಲ್ಲಿ ಸ್ಥಾನ ಪಡೆದ ನಂತರ ಪ್ಯಾರಿಸ್ ಕ್ರೀಡಾಕೂಟಕ್ಕೆ 65 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆಯಲು ಪ್ರಯತ್ನಿಸಲಿದ್ದಾರೆ. ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಸುಜೀತ್ ಫೈನಲ್‌ನಲ್ಲಿ ರೋಹಿತ್ ಅವರನ್ನು ಸೋಲಿಸಿದರು. ರೋಹಿತ್ ಈಗ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಟ್ರಯಲ್ಸ್‌ನಲ್ಲಿ ವಿಜೇತರಾದವರು ಏಪ್ರಿಲ್ 19-21 ರವರೆಗೆ ಬಿಷ್ಕೆಕ್‌ನಲ್ಲಿ ಮತ್ತು ಮೇ 9-12 ವರೆಗೆ ಇಸ್ತಾಂಬುಲ್‌ನಲ್ಲಿ  ನಡೆಯಲಿರುವ ಏಷ್ಯನ್ ಮತ್ತು ವಿಶ್ವ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆಯುತ್ತಾರೆ.

ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಮತ್ತು ಏಷ್ಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತ ಅಮನ್‌ ಸೆಹ್ರಾವತ್‌ ಇಬ್ಬರೂ ಸ್ಪರ್ಧೆಯಲ್ಲಿದ್ದ ಕಾರಣ ನಾರ್ಡಿಕ್ ಮಾದರಿಯಲ್ಲಿ ಆಯೋಜಿಸಲಾಗುತ್ತಿರುವ ಪುರುಷರ 57 ಕೆಜಿ ವಿಭಾಗ ಕಠಿಣವಾಗಿತ್ತು.  

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ದಹಿಯಾ, ಆರಂಭಿಕ ಪಂದ್ಯದಲ್ಲಿ ಅಮನ್ ವಿರುದ್ಧ 13-14 ಅಂತರದಲ್ಲಿ ಸೋತರು. ಇಬ್ಬರೂ ಛತ್ರಸಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಂತರದ ಪಂದ್ಯದಲ್ಲಿ ದಹಿಯಾ ಅವರು ಉದಿತ್ ವಿರುದ್ಧ ಸೋತರು.

ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಅಮನ್ 57 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದುವರೆಗೆ ಭಾರತದಿಂದ ಅಂತಿಮ್‌ ಪಂಘಲ್‌ (ಮಹಿಳೆಯರ 53 ಕೆಜಿ) ಪ್ಯಾರಿಸ್ ಒಲಿಂಪಿಕ್‌ಗೆ ಅರ್ಹತೆ ಗಳಿಸಿರುವ ಏಕೈಕ ಕುಸ್ತಿಪಟುವಾಗಿದ್ದಾರೆ. 

ಜೈದೀಪ್ (74 ಕೆಜಿ), ದೀಪಕ್ ಪೂನಿಯಾ (86 ಕೆಜಿ), ದೀಪಕ್ ನೆಹ್ರಾ (97 ಕೆಜಿ) ಮತ್ತು ಸುಮಿತ್ ಮಲಿಕ್ (125 ಕೆಜಿ) ಟ್ರಯಲ್ಸ್ ಗೆದ್ದ ಇತರ ಕುಸ್ತಿಪಟುಗಳು.

ಏಷ್ಯನ್ ಕ್ವಾಲಿಫೈಯರ್‌ಗೆ ಭಾರತ ತಂಡ: ಅಮನ್ ಶೆರಾವತ್ (57 ಕೆಜಿ ), ಸುಜೀತ್ ಕಲ್ಕಲ್ (65 ಕೆಜಿ), ಜೈದೀಪ್ (74 ಕೆಜಿ), ದೀಪಕ್ ಪುನಿಯಾ (86 ಕೆಜಿ), ದೀಪಕ್ ನೆಹ್ರಾ (97 ಕೆಜಿ), ಸುಮಿತ್ ಮಲಿಕ್ (125 ಕೆಜಿ) ವಿಭಾಗ.

ಬಜರಂಗ್ ಪೂನಿಯಾ
ಬಜರಂಗ್ ಪೂನಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT