ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ನಿಶಾಂತ್‌

Published 12 ಮಾರ್ಚ್ 2024, 0:13 IST
Last Updated 12 ಮಾರ್ಚ್ 2024, 0:13 IST
ಅಕ್ಷರ ಗಾತ್ರ

ಬುಸ್ಟೊ ಆರ್ಸಿಝಿಯೊ, ಇಟಲಿ: ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ನಿಶಾಂತ್‌ ದೇವ್ ಅವರು ಪ್ರಥಮ ವಿಶ್ವ ಒಲಿಂಪಿಕ್‌ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಗ್ರೀಸ್‌ನ ಕ್ರಿಸ್ಟೋಸ್ ಕರೈಟಿಸ್ ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿಸುವ ಮೂಲಕ ಒಲಿಂಪಿಕ್ಸ್‌ ಕೋಟಾಕ್ಕೆ ಮತ್ತಷ್ಟು ಹತ್ತಿರವಾದರು.

ಭಾನುವಾರ ತಡರಾತ್ರಿ ನಡೆದ 71 ಕೆ.ಜಿ ವಿಭಾಗದ ಪ್ರಿ ಕ್ವಾರ್ಟರ್‌ಫೈನಲ್‌ ಸೆಣಸಾಟದಲ್ಲಿ ಭಾರತದ 23 ವರ್ಷದ  ಆಟಗಾರ ದೇವ್‌ 5–0 ಒಮ್ಮತದ ತೀರ್ಪು ಪಡೆದು ಎಂಟರ ಘಟ್ಟವನ್ನು ಪ್ರವೇಶಿಸಿದರು. ಇಲ್ಲಿ ಸೆಮಿಫೈನಲ್‌ ಪ್ರವೇಶಿಸುವ ನಾಲ್ಕೂ ಬಾಕ್ಸರ್‌ಗಳು ಪ್ಯಾರಿಸ್‌ ಒಲಿಂಪಿಕ್‌ ಕೋಟಾ ಪಡೆಯಲಿದ್ದು, ಅದಕ್ಕಾಗಿ ದೇವ್‌ ಅವರು ಒಂದೇ ಹೆಜ್ಜೆ ಮುಂದೆ ಸಾಗಬೇಕಿದೆ.

ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಸ್ಪರ್ಧೆಗೆ ಎದುರು ನೋಡುತ್ತಿರುವ ದೇವ್ ಅವರು ಸೋಮವಾರ ತಡರಾತ್ರಿ ನಡೆಯುವ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ 2021ರ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಅಮೆರಿಕದ ಒಮರಿ ಜೋನ್ಸ್‌ ಅವರನ್ನು ಎದುರಿಸಲಿದ್ದಾರೆ.

ಈ ಕೂಟದಲ್ಲಿ ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ಭಾರತದ ಒಂಬತ್ತು ಬಾಕ್ಸರ್‌ಗಳು ಕಣಕ್ಕೆ ಇಳಿದಿದ್ದು, ಆ ಪೈಕಿ ಎಂಟು ಮಂದಿ ಒಲಿಂಪಿಕ್ಸ್‌ ಕೋಟಾ ಗಿಟ್ಟಿಸಲು ವಿಫಲರಾಗಿದ್ದಾರೆ. ಹರಿಯಾಣದ ದೇವ್‌ ಏಕೈಕ ಭರವಸೆಯಾಗಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಎಂಟರ ಘಟ್ಟದ ಸೆಣಸಾಟದಲ್ಲಿ ದೇವ್‌ ಮುನ್ನಡೆದರೆ ಪ್ಯಾರಿಸ್‌ಗೆ ಟಿಕೆಟ್‌ ಪಡೆಯುವ ಭಾರತದ ಐದನೇ ಮತ್ತು ಮೊದಲ ಪುರುಷ ಬಾಕ್ಸರ್‌ ಅವರಾಗಲಿದ್ದಾರೆ. ಏಷ್ಯನ್‌ ಕ್ರೀಡಾಕೂಟದ ಮೂಲಕ ನಿಖತ್ ಜರೀನ್ (50 ಕೆ.ಜಿ), ಪ್ರೀತಿ ಪವಾರ್ (54 ಕೆ.ಜಿ), ಪರ್ವೀನ್ ಹೂಡಾ (57 ಕೆಜಿ) ಮತ್ತು ಲವ್ಲಿನಾ ಬೊರ್ಗೊಹೈನ್ (75 ಕೆಜಿ) ಅವರು ಮುಂದಿನ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಈಗಾಗಲೇ ಗಳಿಸಿದ್ದಾರೆ.

ಇಲ್ಲಿ ವಿಫಲವಾದ ಬಾಕ್ಸರ್‌ಗಳು ಬ್ಯಾಂಕಾಕ್‌ನಲ್ಲಿ ಮೇ 23ರಿಂದ ಜೂನ್ 3ರವರೆಗೆ ನಡೆಯಲಿರುವ ಎರಡನೇ ವಿಶ್ವ ಒಲಿಂಪಿಕ್‌ ಬಾಕ್ಸಿಂಗ್‌ ಅರ್ಹತಾ ಟೂರ್ನಿಯ ಮೂಲಕ ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆಯುವ ಕೊನೆಯ ಅವಕಾಶ ಹೊಂದಿದ್ದಾರೆ. 45 ರಿಂದ 51 ಬಾಕ್ಸರ್‌ಗಳು ಅಲ್ಲಿ ಅರ್ಹತೆ ಪಡೆಯುತ್ತಾರೆ.‌

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಒಂಬತ್ತು ಬಾಕ್ಸರ್‌ಗಳು ಸ್ಪರ್ಧಿಸಿದ್ದು, ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT