ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಐ: ಡನ್ ರಾಜೀನಾಮೆ ಸ್ವಿಕೃತಿ, ವಿದೇಶಿ ಕೋಚ್ ಮಿಟ್ರುಕ್ ಮುಂದುವರಿಕೆ 

Published 18 ಮಾರ್ಚ್ 2024, 17:53 IST
Last Updated 18 ಮಾರ್ಚ್ 2024, 17:53 IST
ಅಕ್ಷರ ಗಾತ್ರ

ನವದೆಹಲಿ: ಪ್ರಥಮ ವಿಶ್ವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳ ನಿರಾಶಾದಾಯಕ ಪ್ರದರ್ಶನದ ಹಿನ್ನೆಲೆಯಲ್ಲಿ ಹೈ ಪರ್ಫಾಮೆನ್ಸ್ ಡೈರೆಕ್ಟರ್‌ (ಎಚ್‌ಪಿಡಿ) ಬರ್ನಾಡ್‌ ಡನ್‌ ಅವರು ನೀಡಿದ ರಾಜೀನಾಮೆಯನ್ನು ಸೋಮವಾರ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (ಬಿಎಫ್‌ಐ) ಅಂಗೀಕರಿಸಿದೆ. ತಂಡವು ವಿದೇಶಿ ತರಬೇತುದಾರ ದಿಮಿಟ್ರಿ ಮಿಟ್ರುಕ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಮುಂದುವರಿಸಲಿದೆ.  

ಐರ್ಲೆಂಡ್‌ನ ವೃತ್ತಿಪರ ಬಾಕ್ಸರ್‌ ಆಗಿರುವ ಡನ್‌ ಅವರನ್ನು 2022ರ ಅಕ್ಟೋಬರ್‌ನಲ್ಲಿ ಎಚ್‌ಪಿಡಿ ಆಗಿ ನೇಮಕ ಮಾಡಲಾಗಿತ್ತು. ಅವರು ಇಟಲಿಯಿಂದಲೇ ರಾಜೀನಾಮೆ ಕಳುಹಿಸಿದ್ದರು.

ಒಂಬತ್ತು ಬಾಕ್ಸರ್‌ಗಳು ಬರಿಗೈಯಲ್ಲಿ ಹಿಂದಿರುಗಿದ ಬಳಿಕ ನಡೆದ ಫೆಡರೇಷನ್‌ನ ಸಭೆಯಲ್ಲಿ ಅವರನ್ನು ಕರ್ತವ್ಯಗಳಿಂದ ಮುಕ್ತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

‘ಬರ್ನಾಡ್‌ ಡನ್  ಬಿಎಫ್ಐನ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದರು. ಆದರೆ, ದುರದೃಷ್ಟವಶಾತ್ ನಾವು ಪರಸ್ಪರ ಬೇರ್ಪಡಬೇಕಾಗಿದೆ. ಅವರ ರಾಜೀನಾಮೆಯನ್ನು ಸಮಿತಿ ಅಂಗೀಕರಿಸಿದೆ’ ಎಂದು ಬಿಎಫ್ಐ ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದಾರೆ.

ದಿಮಿಟ್ರಿ ಕಳೆದ ವರ್ಷದ ಫೆಬ್ರುವರಿಯಲ್ಲಿ ಭಾರತ ಬಾಕ್ಸಿಂಗ್ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು.

ಪುರುಷರ ತಂಡದ ಮುಖ್ಯ ಕೋಚ್ ಸಿ.ಎ. ಕುಟ್ಟಪ್ಪ, ಕೋಚ್‌ಗಳಾದ ಎಲ್. ದೇವೇಂದ್ರೊ ಸಿಂಗ್, ತೋರಕ್ ಖರ್ಪ್ರಾನ್, ಖಿಮಂದ್ ಬೆಲ್ವಾಲ್, ಡಿಎಸ್ ಯಾದವ್, ಪ್ರಣಮಿಕಾ ಬೋರಾ, ಅಭಿಷೇಕ್ ಸಾಹ್ ಮತ್ತು ಪೂನಂ ಶರ್ಮಾ ಅವರು ಕೋಚಿಂಗ್ ತಂಡದ ಭಾಗವಾಗಿ ಮುಂದುವರಿಯಲಿದ್ದಾರೆ.

ಜೈ ಸಿಂಗ್ ಪಾಟೀಲ್ ಮತ್ತು ದುರ್ಗಾ ಪ್ರಸಾದ್ ಗಂಧಮಲ್ಲ ಅವರು ತರಬೇತುದಾರರ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಭಾರತದ ಬಾಕ್ಸರ್‌ಗಳಿಗೆ ಕೇವಲ ಒಂದು ಅರ್ಹತಾ ಪಂದ್ಯಾವಳಿ ಮಾತ್ರ ಉಳಿದಿದೆ. ಈವರೆಗೆ ನಾಲ್ವರು ಮಹಿಳೆಯರಷ್ಟೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT