ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈಮಂಡ್‌ ಲೀಗ್‌: ನೀರಜ್‌ ಚೋಪ್ರಾಗೆ ಎರಡನೇ ಸ್ಥಾನ

ಡೈಮಂಡ್‌ ಲೀಗ್‌ ಫೈನಲ್ಸ್‌ ಕಿರೀಟ ಉಳಿಸಿಕೊಳ್ಳಲು ವಿಫಲ
Published 17 ಸೆಪ್ಟೆಂಬರ್ 2023, 13:39 IST
Last Updated 17 ಸೆಪ್ಟೆಂಬರ್ 2023, 13:39 IST
ಅಕ್ಷರ ಗಾತ್ರ

ಯೂಜಿನ್, ಅಮೆರಿಕ: ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ಜಾವೆಲಿನ್‌ ಥ್ರೋ ಸ್ಪರ್ಧಿ ಭಾರತದ ನೀರಜ್‌ ಚೋಪ್ರಾ ಅವರು ಡೈಮಂಡ್‌ ಲೀಗ್‌ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲು ವಿಫಲರಾದರು.

ಅಮೆರಿಕದ ಯೂಜಿನ್‌ನಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ 83.80 ಮೀ. ಸಾಧನೆಯೊಂದಿಗೆ ಅವರು ಎರಡನೇ ಸ್ಥಾನ ಪಡೆದರು. ಜಾವೆಲಿನ್‌ಅನ್ನು 84.24 ಮೀ. ದೂರ ಎಸೆದ ಜೆಕ್‌ ರಿಪಬ್ಲಿಕ್‌ನ ಯಾಕುಬ್‌ ವಾದ್ಲೇಚ್, ಡೈಮಂಡ್‌ ಲೀಗ್‌ ಚಾಂಪಿಯನ್‌ ಆದರು.

25 ವರ್ಷದ ಚೋಪ್ರಾ ಕಳೆದ ವರ್ಷ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಜೂರಿಚ್‌ನಲ್ಲಿ ನಡೆದಿದ್ದ ಆ ಕೂಟದಲ್ಲಿ 88.44 ಮೀ. ಸಾಧನೆ ಮಾಡಿದ್ದರು. ಕಳೆದ ತಿಂಗಳು ಬುಡಾಪೆಸ್ಟ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಅವರು,  ಇಲ್ಲಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.

ಅವರ ಮೊದಲ ಪ್ರಯತ್ನ ಫೌಲ್‌ ಆಗಿದ್ದರೆ, ಎರಡನೇ ಪ್ರಯತ್ನದಲ್ಲಿ 83.80 ಮೀ. ಸಾಧನೆ ಮಾಡಿದರು. ಬಳಿಕದ ನಾಲ್ಕು ಅವಕಾಶಗಳಲ್ಲಿ ಕ್ರಮವಾಗಿ– 81.37 ಮೀ., ಫೌಲ್, 80.74  ಮೀ ಹಾಗೂ 80.90 ಮೀ. ದೂರ ಕಂಡುಕೊಂಡರು. ಈ ಋತುವಿನಲ್ಲಿ ನೀರಜ್ ಅವರಿಂದ 85 ಮೀ. ಗಿಂತ ಕಡಿಮೆ ಸಾಧನೆ ಮೂಡಿಬಂದದ್ದು ಇದೇ ಮೊದಲು.

ಚೋಪ್ರಾ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನ 89.94 ಮೀ. ಆಗಿದ್ದರೆ, ಈ ಋತುವಿನ ಉತ್ತಮ ಸಾಧನೆ 88.77 ಮೀ. ಆಗಿದೆ. ಡೈಮಂಡ್‌ ಲೀಗ್‌ನ ದೋಹಾ ಮತ್ತು ಲೂಸಾನ್‌ ಲೆಗ್‌ನಲ್ಲಿ ಅವರು ಅಗ್ರಸ್ಥಾನ ಪಡೆದಿದ್ದರು.

ಆರು ಸ್ಪರ್ಧಿಗಳಿದ್ದ ಕಣದಲ್ಲಿ ಯಾರಿಂದಲೂ 85 ಮೀ. ಗಿಂತ ಹೆಚ್ಚಿನ ಸಾಧನೆ ಮೂಡಿಬರಲಿಲ್ಲ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದ ವಾದ್ಲೇಚ್‌, ಮೂರನೇ ಬಾರಿ ಡೈಮಂಡ್‌ ಲೀಗ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು 2017 ಮತ್ತು 2018 ರಲ್ಲಿ ಚಾಂಪಿಯನ್‌ ಆಗಿದ್ದರು.

ವಾದ್ಲೇಚ್‌ ಡೈಮಂಡ್‌ ಲೀಗ್‌ ಟ್ರೋಫಿಯೊಂದಿಗೆ ₹ 26.58 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಂಡರು. ನೀರಜ್‌ಗೆ ₹ 9.97 ಲಕ್ಷ ನಗದು ಬಹುಮಾನ ಲಭಿಸಿತು.

ನೀರಜ್‌ ಅವರು ಹಾಂಗ್‌ಜೌ ಏಷ್ಯನ್‌ ಕೂಟದಲ್ಲಿ ಪಾಲ್ಗೊಳ್ಳಲಿದ್ದು, ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ. 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಅವರು ಚಿನ್ನ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT