ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ | ಕುಸ್ತಿಪಟುಗಳ ಮನವಿಗೆ ಉತ್ತರಿಸಿ: ಕೇಂದ್ರ, WFIಗೆ ಹೈಕೋರ್ಟ್ ಸೂಚನೆ

Published 4 ಮಾರ್ಚ್ 2024, 15:58 IST
Last Updated 4 ಮಾರ್ಚ್ 2024, 15:58 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಡಿಸೆಂಬರ್‌ನಲ್ಲಿ ನಡೆದ ಭಾರತ ಕುಸ್ತಿ ಫೆಡರೇಷನ್‌ ಚುನಾವಣೆಯನ್ನು ಕಾನೂನುಬಾಹಿರ ಮತ್ತು ಅದನ್ನು ಅನೂರ್ಜಿಗೊಳಿಸಬೇಕು ಎಂದು ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶಾ ಫೋಗಾಟ್, ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವ್ರತ ಕಾದಿಯಾನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರ ಮತ್ತು ಫೆಡರೇಷನ್ (ಡಬ್ಲ್ಯುಎಫ್ಐ) ಪ್ರತಿಕ್ರಿಯೆ ಕೋರಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಕೇಂದ್ರ ಸರ್ಕಾರ, ಡಬ್ಲ್ಯುಎಫ್ಐ ಮತ್ತು ಡಬ್ಲ್ಯುಎಫ್ಐನ ಅಡ್‌ಹಾಕ್‌ ಸಮಿತಿಗೆ ನೋಟಿಸ್ ನೀಡಿದ್ದಾರೆ.

ಈ ವಿಷಯದಲ್ಲಿ ಸೂಚನೆಗಳನ್ನು ಪಡೆಯಲು ನ್ಯಾಯಾಲಯವು ಕೇಂದ್ರ ಸರ್ಕಾರದ ವಕೀಲ ಅನಿಲ್ ಸೋನಿ ಅವರಿಗೆ ಸಮಯ ನೀಡಿತು ಮತ್ತು ಮುಂದಿನ ವಿಚಾರಣೆಯನ್ನು ಮಾರ್ಚ್ 7 ಕ್ಕೆ ಪಟ್ಟಿ ಮಾಡಿತು.

ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕಳೆದ ವರ್ಷ ಜಂತರ್ ಮಂತರ್‌ನಲ್ಲಿ ಕೆಲವು ಅಂತರರಾಷ್ಟ್ರೀಯ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಹಿರಿಯ ವಕೀಲ ದಯಾನ್ ಕೃಷ್ಣನ್ ಡಬ್ಲ್ಯುಎಫ್ಐ ಅನ್ನು ಪ್ರತಿನಿಧಿಸಿದರು.

2023ರ ಡಿಸೆಂಬರ್ 21 ರಂದು ನಡೆದ ಡಬ್ಲ್ಯುಎಫ್ಐ ಚುನಾವಣೆಗಳು ಕ್ರೀಡಾ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಕುಸ್ತಿ ಕ್ರೀಡೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಯನ್ನು ಕೈಗೊಳ್ಳದಂತೆ ಫೆಡರೇಶನ್‌ಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಡಬ್ಲ್ಯುಎಫ್ಐ ಹಲವಾರು ತಪ್ಪುಗಳನ್ನು ಮಾಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಡಬ್ಲ್ಯುಎಫ್ಐನ ದೈನಂದಿನ ಚಟುವಟಿಕೆ ಮುಂದುವರಿಸಲು ತಾತ್ಕಾಲಿಕ ಸಮಿತಿಗೆ ನಿರ್ದೇಶನ ನೀಡುವಂತೆ ಅಥವಾ ಪರ್ಯಾಯವಾಗಿ, ಸಂಸ್ಥೆಯ ನಿರ್ವಹಣೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸುವಂತೆ ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT