ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: 50 ಕೆಜಿ ವಿಭಾಗದಲ್ಲಿ ವಿನೇಶಾಗೆ ಗೆಲುವು

ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ನಾಟಕೀಯ ಬೆಳವಣಿಗೆ
Published 11 ಮಾರ್ಚ್ 2024, 16:30 IST
Last Updated 11 ಮಾರ್ಚ್ 2024, 16:30 IST
ಅಕ್ಷರ ಗಾತ್ರ

ಪಟಿಯಾ: ನಾಟಕೀಯ ಬೆಳವಣಿಗೆಗಳನ್ನು ಕಂಡ ರಾಷ್ಟ್ರೀಯ ತಂಡದ ಕುಸ್ತಿ ಆಯ್ಕೆ ಟ್ರಯಲ್ಸ್‌ನಲ್ಲಿ ಸೋಮವಾರ ವಿನೇಶಾ  ಫೋಗಾಟ್‌ ಅವರು 50 ಕೆಜಿ ವಿಭಾಗದಲ್ಲಿ ಗೆದ್ದರು. ಸೆಣಸಾಟದ ಬಳಿಕ ವಿನೇಶಾ ಅವರು ರಾಷ್ಟ್ರೀಯ ಉದ್ದೀಪನ ಮದ್ದುತಡೆ ಸಂಸ್ಥೆ (ನಾಡಾ) ಅಧಿಕಾರಿಗಳಿಗೆ ಮೂತ್ರದ ಮಾದರಿ ನೀಡದೆ ಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ಉದ್ದೀಪನ ಮದ್ದು ಪರೀಕ್ಷೆ ಭಾಗವಾಗಿ ಟ್ರಯಲ್ಸ್‌ ವಿಜೇತರ ಮಾತ್ರದ ಮಾದರಿ ಸಂಗ್ರಹಿಸಲು ನಾಡಾ ತಂಡ ಇಲ್ಲಿಗೆ ಬಂದಿತ್ತು. ಆದರೆ, ವಿನೇಶಾ ತನ್ನ ಮಾದರಿಯನ್ನು ನೀಡಿಲ್ಲ ಎಂದು ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ. ಆದರೆ, ಈ ವಿಷಯ ತನಗೆ ತಿಳಿದಿಲ್ಲ ಎಂದು ಕುಸ್ತಿ ಅಡ್‌ಹಾಕ್‌  ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ನಾಡಾ ನಿಯಮಗಳ ಪ್ರಕಾರ, ‘ಮಾದರಿ ಸಂಗ್ರಹ ತಪ್ಪಿಸುವುದು; ಅಥವಾ ಅಧಿಕೃತ ಸೂಚನೆಯ ನಂತರವೂ ಸೂಕ್ತ ಸಮರ್ಥನೆ ಇಲ್ಲದೆ ಮಾದರಿ ಸಂಗ್ರಹಕ್ಕೆ ನಿರಾಕರಿಸುವುದು ಅಥವಾ ವಿಫಲವಾಗುವುದು ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆ (ಎಡಿಆರ್‌ವಿ) ಆಗುತ್ತದೆ.

ವಿನೇಶಾ ಅವರು ಬೆಳಿಗ್ಗೆ ಮಹಿಳೆಯರ 50 ಕೆಜಿ ಮತ್ತು 53 ಕೆಜಿ ವಿಭಾಗಗಳಲ್ಲಿ ಟ್ರಯಲ್ಸ್‌ ಆರಂಭಿಸಲು ಬಿಡಲಿಲ್ಲ. 53 ಕೆಜಿ ತೂಕ ವಿಭಾಗದಲ್ಲಿ ಅಂತಿಮ ಟ್ರಯಲ್ಸ್‌ ಅನ್ನು ಒಲಿಂಪಿಕ್ಸ್‌ಗೆ ಮೊದಲೇ ನಡೆಸಲಾಗುವುದು ಎಂದು ಅಧಿಕಾರಿಗಳು ಲಿಖಿತ ಭರವಸೆ ನೀಡಬೇಕೆಂದು ಆಗ್ರಹಿಸಿದರು. ಹೀಗಾಗಿ ಎರಡೂ ವಿಭಾಗದ ಸ್ಪರ್ಧೆಗಳು ವಿಳಂಬವಾದವು. ಕೆಲವು ಮಹಿಳಾ ಪೈಲ್ವಾನರು ಇದಕ್ಕೆ ಆಕ್ಷೇಪಿಸಿದರು. ಹೀಗಾಗಿ ಅಧಿಕಾರಿಗಳು ಸಮಾಲೋಚನೆಯಲ್ಲಿ ತೊಡಗಿದರು.

ಭಾರತ ಕುಸ್ತಿ ಫೆಡರೇಷನ್ ಅಡ್‌ಹಾಕ್ ಸಮಿತಿಯು ಅವರ ಬೇಡಿಕೆಗೆ ಸಮ್ಮತಿಸಿದ ಬಳಿಕ, ಜಕಾರ್ತಾ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶಾ 50 ಕೆಜಿ ವಿಭಾಗದಲ್ಲಿ ಶಿವಾನಿ ಅವರನ್ನು 11-6 ಅಂತರದಿಂದ ಸೋಲಿಸಿದರು. ಮುಂದಿನ ತಿಂಗಳು ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ಸ್ಥಾನ ಪಡೆದರು.

ಆದರೆ, ವಿನೇಶಾ 53 ಕೆಜಿ ವಿಭಾಗದಲ್ಲಿ ಅಂಜು ವಿರುದ್ಧ 0-10 ತಾಂತ್ರಿಕ ಶ್ರೇಷ್ಠತೆ ಆಧಾರದ ಮೇಲೆ ಸೋತರು.

50 ಕೆಜಿ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ಬೆಳಗ್ಗೆ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರಕ್ಕೆ ಬಂದಿದ್ದರು. ವಿಶ್ವ ಕುಸ್ತಿ ಸಂಸ್ಥೆ  (ಯುಡಬ್ಲ್ಯುಡಬ್ಲ್ಯು) ನ ನಿಯಮಾವಳಿಯ ಏಳನೇ ವಿಧಿ ಅನ್ವಯ, ಒಬ್ಬ ಸ್ಪರ್ಧಿ ಒಂದೇ ದಿನದಲ್ಲಿ ಒಂದು ತೂಕ ವಿಭಾಗದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ಆದರೆ, ವಿನೇಶಾ ಅವರು ಸೋಮವಾರ ಎರಡು ಪ್ರತ್ಯೇಕ ತೂಕ ವಿಭಾಗಗಳಲ್ಲಿ ಟ್ರಯಲ್ಸ್‌ನಲ್ಲಿ ಕಾಣಿಸಿಕೊಂಡರು. 

ಈ ಮೊದಲು 29 ವರ್ಷದ ಫೋಗಾಟ್, 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ, ಅಂತಿಮ್ ಪಂಘಲ್ ಈಗಾಗಲೇ ಆ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವುದರಿಂದ ತಮ್ಮ ತೂಕದ ವಿಭಾಗವನ್ನು ಕಡಿಮೆ ಮಾಡಿದ್ದಾರೆ.

ಸ್ಪರ್ಧೆ ಆರಂಭಿಸಲು ಬಿಡದೆ, ಲಿಖಿತ ಭರವಸೆಗೆ ಒತ್ತಾಯಿಸಿದರು. ಸೋಮವಾರ 50 ಕೆಜಿ ಮತ್ತು 53 ಕೆಜಿ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ಅನುಮತಿ ಕೋರಿದರು. ಅಧಿಕಾರಿಗಳು ಚರ್ಚೆಯಲ್ಲಿ ತೊಡಗಿದರು.

53 ಕೆಜಿ ವಿಭಾಗದಲ್ಲಿ ಭಾರತದ ಸ್ಪರ್ಧಿಯ ಆಯ್ಕೆಗೆ ಅಂತಿಮ ಟ್ರಯಲ್ ನಡೆಸಲಾಗುವುದು ಎಂದು ಐಒಎ ತಾತ್ಕಾಲಿಕ ಸಮಿತಿ ಈಗಾಗಲೇ ಘೋಷಿಸಿದೆ. ಈ ವಿಭಾಗದಲ್ಲಿ ಅತ್ಯುತ್ತಮ ನಾಲ್ಕು ಕುಸ್ತಿಪಟುಗಳು ಟ್ರಯಲ್ಸ್‌ನಲ್ಲಿ  ಸ್ಪರ್ಧಿಸಲಿದ್ದಾರೆ ಮತ್ತು ವಿಜೇತರು ಅಂತಿಮ್ ಅವರೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ವಿಜೇತರು ಭಾರತವನ್ನು ಪ್ರತಿನಿಧಿಸುತ್ತಾರೆ. 

‘ವಿನೇಶಾ ಅವರು ಸರ್ಕಾರದ ಭರವಸೆ ಕೇಳಿದ್ದಾರೆ. ಡಬ್ಲ್ಯುಎಫ್‌ಐ ಮರಳಿ ಅಧಿಕಾರ ಪಡೆದರೆ, ಫೆಡರೇಶನ್ ಆಯ್ಕೆ ನೀತಿ ಬದಲಾಯಿಸಬಹುದು ಎಂಬ ಭಯ ಇರಬಹುದು. ಆದರೆ, ಸರ್ಕಾರ ಈ ಬಗ್ಗೆ ಹೇಗೆ ಭರವಸೆ ನೀಡಲು ಸಾಧ್ಯ? ಆಯ್ಕೆ ವಿಷಯಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’ ಎಂದು ತರಬೇತುದಾರರೊಬ್ಬರು ಹೇಳಿದರು.

ಸ್ಪರ್ಧೆಗೆ ಅನುಮತಿ

ನವದೆಹಲಿ (ಪಿಟಿಐ):  ಸ್ಪರ್ಧಿ ಕೇವಲ ಒಂದು ವಿಭಾಗದಲ್ಲಿ ಸ್ಪರ್ಧಿಸಬಹುದು ಎಂಬ ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ನಿಯಮದ ಹೊರತಾಗಿಯೂ ಪಟಿಯಾಲದಲ್ಲಿ ನಡೆಯಲಿರುವ ರಾಷ್ಟ್ರೀಯ ಟ್ರಯಲ್ಸ್‌ನ 50 ಕೆಜಿ ಮತ್ತು 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ವಿನೇಶಾ ಫೋಗಾಟ್‌ ಅವರ ಮನವಿಯನ್ನು ಅಡ್‌ಹಾಕ್‌ ಸಮಿತಿಯ ಎಲ್ಲಾ ಮೂವರು ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದು ಸಮಿತಿ  ಅಧ್ಯಕ್ಷ ಭೂಪೇಂದರ್ ಸಿಂಗ್ ಬಜ್ವಾ ಸೋಮವಾರ ಸ್ಪಷ್ಟಪಡಿಸಿದರು.

‘ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಬೇಕೆಂಬ ವಿನೇಶ್ ಅವರ ಮನವಿಯನ್ನು ಸ್ವೀಕರಿಸಲು ಒಪ್ಪಿಕೊಂಡಿತು’ ಎಂದು ಬಜ್ವಾ ಪಿಟಿಐಗೆ ತಿಳಿಸಿದರು.

ಪಟಿಯಾಲ ಟ್ರಯಲ್ಸ್‌ನಲ್ಲಿ ವಿಜೇತರಾದವರು ಕಿರ್ಗಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಒಲಿಂಪಿಕ್ ಅರ್ಹತಾ ಪಂದ್ಯಗಳಿಗೆ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ವಿಶ್ವ ಒಲಿಂಪಿಕ್ ಅರ್ಹತಾ ಪಂದ್ಯಗಳಿಗೆ ತೆರಳಿದ್ದಾರೆ ಎಂದು ಬಜ್ವಾ ಹೇಳಿದರು.

‘ರನ್ನರ್ ಅಪ್ ತಂಡಗಳು ಏಷ್ಯಾ ಚಾಂಪಿಯನ್‌ಷಿಪ್‌ (ಕಿರ್ಗಿಸ್ತಾನದಲ್ಲಿಯೂ ಸಹ) ಭಾಗವಹಿಸಲಿದ್ದು, ಆ ಸ್ಪರ್ಧೆಯ ವಿಜೇತರು ಒಲಿಂಪಿಕ್ಸ್‌ಗೆ ತೆರಳುವ ಮೊದಲು ಮೇ ಅಂತ್ಯದಲ್ಲಿ ಟ್ರಯಲ್ಸ್‌ನಲ್ಲಿ (ಒಲಿಂಪಿಕ್ ಕೋಟಾ ವಿಜೇತರ ವಿರುದ್ಧ) ಸ್ಪರ್ಧಿಸಲಿದ್ದಾರೆ.  

ಟ್ರಯಲ್ಸ್‌ ವಿಜೇತರು:

50 ಕೆ.ಜಿ: ವಿನೇಶಾ ಫೋಗಾಟ್, 53 ಕೆ.ಜಿ: ಅಂಜು, 55 ಕೆ.ಜಿ. ತಮನ್ನಾ, 57 ಕೆ.ಜಿ: ಅನ್ಶು ಮಲಿಕ್‌, 59 ಕೆ.ಜಿ.: ಪುಷ್ಪಾ ಯಾದವ್, 62 ಕೆ.ಜಿ: ಮಾನಸಿ, 65 ಕೆ.ಜಿ:  ಅಂತಿಮ್. 68 ಕೆ.ಜಿ. ನಿಶಾ, 72 ಕೆ.ಜಿ. ಹರ್ಷಿತಾ, 76 ಕೆ.ಜಿ: ರೀತಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT