ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ 100 ಮೀ. ಓಟದಲ್ಲಿ ಜಮೈಕ ಪ್ರಾಬಲ್ಯ; ಫ್ರೇಸರ್‌ ಪ್ರೈಸ್‌ಗೆ ಐದನೇ ಚಿನ್ನ

ವಿಶ್ವ ಅಥ್ಲೆಟಿಕ್ಸ್‌
Last Updated 19 ಜುಲೈ 2022, 5:24 IST
ಅಕ್ಷರ ಗಾತ್ರ

ಯೂಜೀನ್‌, ಅಮೆರಿಕ: ಜಮೈಕದ ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್‌, ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 100 ಮೀ. ಓಟದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು.

ಭಾನುವಾರ ನಡೆದ ಸ್ಪರ್ಧೆಯಲ್ಲಿ ಅವರು ಕೂಟ ದಾಖಲೆಯೊಂದಿಗೆ 10.67 ಸೆಕೆಂಡುಗಳಲ್ಲಿ ಗುರಿ ತಲುಪಿದರು. 35 ವರ್ಷದ ಫ್ರೇಸರ್‌ ಪ್ರೈಸ್‌ಗೆ ವಿಶ್ವ ಅಥ್ಲೆಟಿಕ್ಸ್‌ನ 100 ಮೀ. ಓಟದಲ್ಲಿ ಒಟ್ಟಾರೆಯಾಗಿ ದೊರೆತ ಐದನೇ ಪದಕ ಇದಾಗಿದೆ.

ಅವರು ಈ ಮೊದಲು 2009, 2013, 2015 ಮತ್ತು 2019 ರಲ್ಲಿ 100 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದರು. ವಿಶ್ವ ಅಥ್ಲೆಟಿಕ್ಸ್‌ನ ಟ್ರ್ಯಾಕ್‌ ಸ್ಪರ್ಧೆಯ ಒಂದೇ ವಿಭಾಗದಲ್ಲಿ ಐದು ಚಿನ್ನ ಗೆದ್ದ ಮೊದಲ ಅಥ್ಲೀಟ್‌ ಎಂಬ ಹಿರಿಮೆ ಅವರಿಗೆ ಒಲಿಯಿತು.

ಜಮೈಕ ಕ್ಲೀನ್‌ಸ್ವೀಪ್: ಮಹಿಳೆಯರ 100 ಮೀ. ಓಟದ ಮೂರೂ ಪದಕಗಳು ಜಮೈಕ ಪಾಲಾದವು. ಶೆರಿಕ ಜಾನ್ಸನ್‌ (10.73 ಸೆ.) ಬೆಳ್ಳಿ ಹಾಗೂ ಎಲೈನ್ ಥಾಂಪ್ಸನ್ ಹೆರಾ (10.81 ಸೆ.) ಕಂಚು ಗೆದ್ದರು.

ವಿಶ್ವ ಅಥ್ಲೆಟಿಕ್ಸ್‌ನ ಮಹಿಳೆಯರ 100 ಮೀ. ಓಟದ ಮೂರೂ ಪದಕಗಳು ಒಂದೇ ದೇಶದ ಅಥ್ಲೀಟ್‌ಗಳ ಪಾಲಾಗಿದ್ದು ಇದೇ ಮೊದಲು. ಪುರುಷರ ವಿಭಾಗದಲ್ಲಿ ಅಮೆರಿಕ ಕೂಡಾ ‘ಕ್ಲೀನ್‌ಸ್ವೀಪ್‌’ ಸಾಧನೆ ಮಾಡಿತ್ತು.

‘ವೃತ್ತಿಜೀವನದಲ್ಲಿ ಎಷ್ಟು ಬಾರಿ ಹಿನ್ನಡೆ ಅನುಭವಿಸಿದ್ದೇನೆ, ಎಷ್ಟು ಬಾರಿ ಪುಟಿದೆದ್ದು ಬಂದಿದ್ದೇನೆ ಎಂಬುದನ್ನು ನನಗೆ ಊಹಿಸಲೂ ಸಾಧ್ಯವಿಲ್ಲ. ಇಲ್ಲಿ ಮತ್ತೆ ಎದ್ದು ಬಂದಿದ್ದೇನೆ’ ಎಂದು ಐತಿಹಾಸಿಕ ಚಿನ್ನ ಗೆದ್ದ ಫ್ರೇಸರ್‌ ಪ್ರೈಸ್‌ ಪ್ರತಿಕ್ರಿಯಿಸಿದರು.

ಗೆಬ್ರೆಸೆಲಾಸಿಗೆ ಮ್ಯಾರಥಾನ್‌ ಚಿನ್ನ: ಕೊನೆಯ ಎರಡು ಕಿ.ಮೀ.ಗಳಲ್ಲಿ ವೇಗ ಹೆಚ್ಚಿಸಿಕೊಂಡ ಇಥಿಯೋಪಿಯದ ಗೊಟಿಟೊಮ್ ಗೆಬ್ರೆಸೆಲಾಸಿ, ಮಹಿಳೆಯರ ಮ್ಯಾರಥಾನ್‌ನಲ್ಲಿ ಚಿನ್ನ ಗೆದ್ದರು. ಅವರು 42 ಕಿ.ಮೀ. ದೂರವನ್ನು ಎರಡು ಗಂಟೆ 18.11 ನಿಮಿಷಗಳಲ್ಲಿ ಕ್ರಮಿಸಿದರು.

ಕೆನ್ಯಾದ ಜುಡಿತ್‌ ಜೆಪ್ಟಮ್ ಕೊರಿರ್‌ (2 ಗಂ. 18.20 ನಿ.) ಬೆಳ್ಳಿ ಗೆದ್ದರೆ, ಕೆನ್ಯಾ ಮೂಲದ ಇಸ್ರೇಲ್‌ನ ಅಥ್ಲೀಟ್ ಲೊನಾ ಚೆಮ್ತಾಯ್ ಸಲ್ಪಿಟರ್‌ (2 ಗಂ. 20.18 ನಿ.) ಅವರು ಬೆಳ್ಳಿ ತಮ್ಮದಾಗಿಸಿಕೊಂಡರು.

2021ರ ಬರ್ಲಿನ್‌ ಮ್ಯಾರಥಾನ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದ ಗೆಬ್ರೆಸೆಲಾಸಿ, ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT