ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ: ಪಾಕಿಸ್ತಾನದ ಚಿನ್ನದ ಹುಡುಗ ನೂಹ್‌ ಭಟ್‌

Last Updated 4 ಆಗಸ್ಟ್ 2022, 11:37 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಪ್ರಸಕ್ತ ಸಾಲಿನ ಕಾಮನ್‌ವೆಲ್ತ್‌ ಗೇಮ್ಸ್‌ (ಸಿಡಬ್ಲ್ಯುಜಿ)ನಲ್ಲಿ ಪಾಕಿಸ್ತಾನಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದು ಕೊಟ್ಟ ಮುಹಮ್ಮದ್‌ ನೂಹ್‌ ಭಟ್‌ ಅವರು ಭಾರತದಿಂದ ಸಿಕ್ಕಿರುವ ಪ್ರೀತಿ ಮತ್ತು ಬೆಂಬಲದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಸೂಪರ್‌ಸ್ಟಾರ್‌ ಮೀರಾಬಾಯಿ ಚಾನು ಅವರ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದರೊಂದಿಗೆ ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿತ್ತ ಮೀರಾಬಾಯಿ ಚಾನು ಅವರು ಭಾರತಕ್ಕಷ್ಟೇ ಅಲ್ಲ ನೆರೆಯ ರಾಷ್ಟ್ರಕ್ಕೂ ನೆಚ್ಚಿನ ಕ್ರೀಡಾಪಟು ಎಂಬುದು ಸಾಬೀತಾಗಿದೆ. ನೂಹ್‌ ಭಟ್‌ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡುತ್ತಿದ್ದಂತೆ ಅಭಿನಂದಿಸಿದ ಮೊದಲಿಗರ ಪೈಕಿ ಚಾನು ಇದ್ದಿದ್ದು ಉಭಯ ರಾಷ್ಟ್ರದ ಸೌಹಾರ್ದತೆಗೆ ಸಾಕ್ಷಿಯಾಗಿದೆ.

ಮೀರಾಬಾಯಿ ಚಾನು ಅವರು ಅಭಿನಂದಿಸಿದ್ದನ್ನು ಮತ್ತು ತಮ್ಮ ಪ್ರದರ್ಶನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದನ್ನು 'ಇದೊಂದು ಅತ್ಯದ್ಭುತ ಕ್ಷಣ' ಎಂದು ನೂಹ್‌ ಭಟ್‌ ಬಣ್ಣಿಸಿದ್ದಾರೆ.

ಪುರುಷರ 109+ ಕೆ.ಜಿ ವಿಭಾಗದಲ್ಲಿ ದಾಖಲೆಯ 405 ಕೆ.ಜಿ ಎತ್ತುವ ಮೂಲಕ 24 ವರ್ಷದ ನೂಹ್‌ ಭಟ್‌ ಚಿನ್ನದ ಪದಕದ ಸಾಧನೆ ಮಾಡಿದರು.

'ಮೀರಾಬಾಯಿ ನಮಗೆ ಸ್ಫೂರ್ತಿ. ದಕ್ಷಿಣ ಏಷ್ಯಾದ ರಾಷ್ಟ್ರಗಳಿಂದ ಬಂದಿರುವ ನಾವು ಒಲಿಂಪಿಕ್ಸ್‌ ಪದಕಗಳನ್ನು ಗೆಲ್ಲಬಲ್ಲೆವು ಎಂಬುದನ್ನು ತೋರಿಸಿಕೊಟ್ಟವರು. ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಅವರು ಬೆಳ್ಳಿ ಗೆದ್ದಿದ್ದು ನಮಗೆ ಅಪಾರ ಹೆಮ್ಮೆಯನ್ನುಂಟು ಮಾಡಿದೆ' ಎಂದು ನೂಹ್‌ ಭಟ್‌ ಹೇಳಿದ್ದಾರೆ.

ಇದೇ ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿರುವ ಭಾರತದ ವೇಟ್‌ಲಿಫ್ಟರ್‌ ಗುರ್ದೀಪ್‌ ಸಿಂಗ್‌ ಅವರು ಆತ್ಮೀಯ ಸ್ನೇಹಿತರ ಪೈಕಿ ಒಬ್ಬರು ಎಂದು ನೂಹ್‌ ಭಟ್‌ ತಿಳಿಸಿದ್ದಾರೆ. ನಾವು ಕಳೆದ 7-8 ವರ್ಷಗಳಿಂದ ಅತ್ಯುತ್ತಮ ಸ್ನೇಹಿತರು. ಕೆಲ ಸಮಯ ವಿದೇಶದಲ್ಲಿ ಜೊತೆಯಾಗಿ ತರಬೇತಿ ಪಡೆದಿದ್ದೇವೆ. ನಾವು ಯಾವಾಗಲೂ ಸ್ನೇಹಮಯದಿಂದ ಸಂಪರ್ಕದಲ್ಲಿರುತ್ತೇವೆ. ಕಾಮನ್‌ವೆಲ್ತ್‌ನಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳಾಗಿದ್ದರೂ ನಮಗದು ಭಾರತ-ಪಾಕ್‌ ನಡುವಣ ಯುದ್ಧ ಎಂದೆನಿಸಲಿಲ್ಲ. ವೈಯಕ್ತಿಕ ಸಾಮರ್ಥ್ಯದ ಸ್ಪರ್ಧೆಯೆಂದಷ್ಟೇ ಭಾವಿಸಿದ್ದೆವು. ಗೆಲುವಷ್ಟೇ ನನಗೆ ಮುಖ್ಯವಾಗಿತ್ತು ಎಂದು ತಮ್ಮಿಬ್ಬರ ಬಾಂಧವ್ಯದ ಬಗ್ಗೆ ತಿಳಿಸಿದ್ದಾರೆ.

ನಾನು ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದೆ. ಅಲ್ಲಿ ನನಗೆ ಸಿಕ್ಕಿದ ಬೆಂಬಲವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ. ಭಾರತಕ್ಕೆ ಪುನಃ ಹೋಗಬೇಕು. ನನಗೆ ಪಾಕಿಸ್ತಾನದಲ್ಲಿರುವ ಬೆಂಬಲಿಗರಿಗಿಂತ ಹೆಚ್ಚು ಭಾರತದಲ್ಲಿ ಇದ್ದಾರೆ ಎಂದೆನಿಸುತ್ತಿದೆ ಎಂದು ನೂಹ್‌ ಭಟ್‌ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT