ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ಮುನ್ನವೇ 90 ಮೀ. ಮೈಲಿಗಲ್ಲು ಗುರಿ: ನೀರಜ್ ಚೋಪ್ರಾ ವಿಶ್ವಾಸ

ಜಾವೆಲಿನ್‌ ಥ್ರೊ ಸ್ಪರ್ಧಿ ನೀರಜ್ ಚೋಪ್ರಾ ವಿಶ್ವಾಸ
Published 11 ಏಪ್ರಿಲ್ 2024, 13:28 IST
Last Updated 11 ಏಪ್ರಿಲ್ 2024, 13:28 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್‌ ಜಾವಲಿನ್‌ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮುನ್ನವೇ 90 ಮೀ. ಮೈಲಿಗಲ್ಲು ಸಾಧಿಸುವ ಗುರಿ ಹೊಂದಿದ್ದಾರೆ. ಈಗ ನಡೆಯುತ್ತಿರುವ ಸಿದ್ಧತೆ ಗಮನಿಸಿದರೆ ಒಲಿಂಪಿಕ್ಸ್‌ಗೆ ಮೊದಲೇ ಈ ಗುರಿ ಸಾಕಾರಗೊಳ್ಳಬಹುದು ಎಂದು ಚೋಪ್ರಾ ಹೇಳಿದ್ದಾರೆ.

ಸ್ಪರ್ಧೆಯೊಂದರಲ್ಲಿ ಚೋಪ್ರಾ ಅವರ ಶ್ರೇಷ್ಠ ಎಸೆತ 89.94 ಮೀ. ದೂರ ದಾಖಲಾಗಿದೆ. ಈ ಸಾಧನೆ  2022ರ ಸ್ಟಾಕ್‌ಹೋಮ್‌ (ಸ್ವೀಡನ್‌) ಡೈಮಂಡ್‌ ಲೀಗ್‌ನಲ್ಲಿ ದಾಖಲಾಗಿತ್ತು. ತರಬೇತಿಯ ವೇಳೆ ಅವರು ಜಾವೆಲಿನ್‌ಅನ್ನು 90 ಮೀ. ದೂರ ಎಸೆದಿದ್ದಾರೆ. ಆದರೆ ಸ್ಪರ್ಧೆಯಲ್ಲಿ ಈ ಮೈಲಿಗಲ್ಲು ಇದುವರೆಗೆ  ದಾಟಿಲ್ಲ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಚಿನ್ನ ಉಳಿಸಿಕೊಳ್ಳುವ ಗುರಿ ಹೊಂದಿರುವ 26 ವರ್ಷದ ಚೋಪ್ರಾ, ‘ನಾನು ಈ ಕೂಟಕ್ಕೆ ಮೊದಲೇ 90 ಮೀ. ದಾಟಲು ಪ್ರಯತ್ನಿಸುವೆ. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮೊದಲೇ ಅದು ಈಡೇರಬಹುದು. ಸಿದ್ಧತೆ ಸುಗಮವಾಗಿ ಸಾಗುತ್ತಿದ್ದು, ಒಲಿಂಪಿಕ್ಸ್‌ವರೆಗೆ ಕಾಯಬೇಕಾಗಿಲ್ಲ. ಅದಕ್ಕೆ ಮೊದಲೇ ಸಾಕಾರಗೊಳ್ಳಬಹುದು’ ಎಂದು ಗುರುವಾರ ಟರ್ಕಿಯಿಂದ ವರ್ಚುವಲ್ ಸಂವಾದದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಹಾಲಿ ವಿಶ್ವ ಚಾಂಪಿಯನ್ ಚೋಪ್ರಾ ಅವರು, ಕೆಲ ಸಮಯದಿಂದ ಸ್ಪರ್ಧೆಗಳಿಲ್ಲದ ಕಾರಣ ಫಿಟ್ನೆಸ್ ಮತ್ತು ಸಾಮರ್ಥ್ಯವೃದ್ಧಿಯಲ್ಲಿ ನಿರತರಾಗಿದ್ದಾರೆ. ಇದು ಕೌಶಲದಲ್ಲಿ ಸುಧಾರಣೆ ಕಾಣಲು ನೆರವಾಗಿದೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾ ಮತ್ತು ಟರ್ಕಿಯಲ್ಲಿ ಅವರು ಸ್ಟ್ರೆಂಥ್ ಮತ್ತು ಕಂಡಿಷನಿಂಗ್‌ ಶಿಬಿರದಲ್ಲೂ ಭಾಗಿಯಾಗಿದ್ದರು.

‘ಟೋಕಿಯೊ ಒಲಿಂಪಿಕ್ಸ್ ಯಶಸ್ಸಿನಿಂದ ನನ್ನ ಆತ್ಮವಿಶ್ವಾಸ ವೃದ್ಧಿಯಾಗಿದೆ. ಕೆಲವು ಸ್ಪರ್ಧೆಗಳಲ್ಲಿ ಯಶಸ್ಸೂ ಒಲಿದಿದೆ. ಎರಡು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನ, ಬೆಳ್ಳಿ, ಡೈಮಂಡ್‌ ಲೀಗ್‌ನಲ್ಲಿ ಟ್ರೋಫಿ, ಜೊತೆಗೆ ಕೆಲವು ಉತ್ತಮ ಥ್ರೋಗಳು. ಜೊತೆಗೆ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನ ಉಳಿಸಿಕೊಂಡಿದ್ದೇನೆ’ ಎಂದರು.

‘ಟೋಕಿಯೊ ಮತ್ತು ಪ್ಯಾರಿಸ್‌ ಒಲಿಂಪಿಕ್ಸ್‌ ನಡುವೆ ದೊರೆತ ಯಶಸ್ಸು ನನ್ನಲ್ಲಿ ಸಾಕಷ್ಟು ವಿಶ್ಬಾಸ ಮೂಡಿಸಿದೆ. ಪ್ರಬಲ ಸ್ಪರ್ಧಿಗಳ ಜೊತೆಗೆ ನಾನು ಉತ್ತಮ ಪೈಪೋಟಿ ನಡೆಸಬಲ್ಲೆ’ ಎಂದಿದ್ದಾರೆ ಚೋಪ್ರಾ.

ಚೋಪ್ರಾ ಅವರು ಮೇ 10ರಂದು ದೋಹಾ ಡೈಮಂಡ್‌ ಲೀಗ್‌ ಕೂಟದ ಮೂಲಕ ಸ್ಪರ್ಧಾಕಣಕ್ಕೆ ಮರಳಲಿದ್ದಾರೆ. ಇದರ ನಂತರ ಜೂನ್ 18ರಂದು ಫಿನ್ಲೆಂಡ್‌ನ ತುರ್ಕುವಿನಲ್ಲಿ ಪಾವೊ ನೂರ್ಮಿ ಕೂಟ ನಡೆಯಲಿದೆ. ಅಲ್ಲಿ ಅವರಿಗೆ ಜರ್ಮನಿಯ 19 ವರ್ಷದ ಪ್ರತಿಭಾನ್ವಿತ ಮ್ಯಾಕ್ಸ್ ದೆಹ್ನಿಂಗ್‌ ಎದುರಾಗಲಿದ್ದಾರೆ. ‘90 ಮೀ. ಕ್ಲಬ್‌’ಗೆ ಸೇರ್ಪಡೆಗೊಂಡ ಇತ್ತೀಚಿನ ಪ್ರತಿಭಾವಂತ ಸ್ಪರ್ಧಿ ಅವರು.

ದಹ್ನಿಂಗ್ ಅವರು ನೀರಜ್ ಅವರಿಗೆ ಪ್ರಬಲ ಸವಾಲು ಒಡ್ಡುವ ಸ್ಪರ್ಧಿಯಾಗಿ ಮೂಡಿಬರುವ ಸಾಧ್ಯತೆಯಿದೆ. ಇತ್ತೀಚೆಗೆ ಜರ್ಮನಿಯ ಸ್ಪರ್ಧೆಯೊಂದರಲ್ಲಿ 90.20 ಮೀ. ದೂರ ಭರ್ಚಿಯನ್ನು  ಎಸೆದಿರುವ ಅವರು ಈ ಸಾಧನೆ ಮಾಡಿದ ಅತಿ ಕಿರಿಯ ಸ್ಪರ್ಧಿ ಎನಿಸಿದ್ದಾರೆ.

‘ಅವರನ್ನು ಸ್ಪರ್ಧೆಯಲ್ಲಿ ಎದುರಾಗುವ ಗಳಿಗೆಗೆ ತವಕದಿಂದ ಕಾಯುತ್ತಿದ್ದೇನೆ. ನಾನು ಟೋಕಿಯೊದಲ್ಲಿ ಪಾಲ್ಗೊಂಡಿದ್ದಾಗ ಅಲ್ಲಿ 90+ ಮೀಟರ್‌ ದೂರ ಎಸೆದ ಕೆಲವು ಸ್ಪರ್ಧಿಗಳಿದ್ದರು. ಇದು ದೊಡ್ಡ ವಿಷಯವಲ್ಲ. ಆ ನಿರ್ದಿಷ್ಟ ದಿನ ನೀವೇನು ಮಾಡುತ್ತೀರಿ ಎಂಬುದಷ್ಟೇ ಲೆಕ್ಕಕ್ಕೆ ಬರುತ್ತದೆ’ ಎಂದು ಚೋಪ್ರಾ ಹೇಳಿದ್ದಾರೆ.

ಜೇನಾಗೂ ಸಾಧ್ಯತೆ:

ಹಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ 87.54 ಮೀ. ಸಾಧನೆ ದಾಖಲಿಸಿದ್ದ, 28 ವರ್ಷದ ಕಿಶೋರ್ ಜೇನಾ ಅವರು ತಮಗಿಂತ ಮೊದಲು 90 ಮೀ. ಮೈಲಿಗಲ್ಲನ್ನು ದಾಟಿದರೆ ತಮಗೆ ಅಚ್ಚರಿಯೇನೂ ಆಗದು ಎಂದೂ ನೀರಜ್ ಹೇಳಿದ್ದಾರೆ.

‘ವಿಶ್ವ ಚಾಂಪಿಯನ್‌ಷಿಪ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಅವರು (ಜೇನಾ) ಸಾಧಿಸಿರುವ ಪ್ರಗತಿ ಗಮನಿಸಿದರೆ ಅವರು ನನಗಿಂತ ಮೊದಲೇ 90 ಮೀ. ದೂರ ದಾಟಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT