ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡ್ಮಿಂಟನ್: ಭಾರತ ಮಹಿಳಾ ತಂಡಕ್ಕೆ ಮಣಿದ ಚೀನಾ

ಏಷ್ಯಾ ಟೀಮ್ ಚಾಂಪಿಯನ್‌ಷಿಪ್‌
Published 14 ಫೆಬ್ರುವರಿ 2024, 13:27 IST
Last Updated 14 ಫೆಬ್ರುವರಿ 2024, 13:27 IST
ಅಕ್ಷರ ಗಾತ್ರ

ಶಾ ಆಲಂ (ಮಲೇಷ್ಯಾ): ಪಿ.ವಿ.ಸಿಂಧು ದೀರ್ಘಕಾಲದ ವಿರಾಮದ ನಂತರ ಅಂಕಣಕ್ಕೆ ಮರಳಿದರಲ್ಲದೇ ಗೆಲುವಿನ ಆರಂಭ ಮಾಡಿದರು. ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಷಿಪ್ಸ್‌ನಲ್ಲಿ ಬುಧವಾರ ಭಾರತ 3–2 ರಿಂದ ಪ್ರಬಲ ಚೀನಾ ತಂಡವನ್ನು ಸೋಲಿಸಿ ಅಚ್ಚರಿಯ ಫಲಿತಾಂಶ ನೀಡಿತು. ಭಾರತ ಪುರುಷರ ತಂಡ 4–1 ರಿಂದ ಹಾಂಗ್‌ಕಾಂಗ್‌ ಮೇಲೆ ಜಯಗಳಿಸಿತು.

ಡಬ್ಲ್ಯು ಗುಂಪಿನಲ್ಲಿ ಎರಡೇ ತಂಡಗಳಿದ್ದು ಭಾರತ ನಾಕೌಟ್‌ಗೆ ಅರ್ಹತೆ ಪಡೆಯುವುದು ಖಚಿತವಾಗಿತ್ತು. ಆದರೆ ಅಗ್ರ ಶ್ರೇಯಾಂಕದ ಚೀನಾ ಮೇಲೆ ಅಚ್ಚರಿಯ ಜಯಗಳಿಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.

ಗಾಯಾಳಾದ ಕಾರಣ ಕಳೆದ ಅಕ್ಟೋಬರ್‌ನಿಂದ ಸಿಂಧು ಪ್ರಮುಖ ಟೂರ್ನಿಗಳಲ್ಲಿ ಆಡಿರಲಿಲ್ಲ. ಬುಧವಾರ ಅವರು 21–17, 21–15 ರಿಂದ ತಮಗಿಂತ ಮೇಲಿನ ಕ್ರಮಾಂಕದ ಹಾನ್‌ ಯು ಅವರನ್ನು 40 ನಿಮಿಷಗಳಲ್ಲಿ ಮಣಿಸಿದರು. ಸಿಂಧು ಪ್ರಸ್ತುತ 11 ನೇ ಕ್ರಮಾಂಕದ ಪಡೆದಿದ್ದಾರೆ. ಯು ಎಂಟನೇ ಕ್ರಮಾಂಕ ಪಡೆದಿದ್ದಾರೆ.

ತನಿಶಾ ಕ್ರಾಸ್ಟೊ– ಅಶ್ವಿನಿ ಪೊನ್ನಪ್ಪ ಜೋಡಿ ನಂತರ 19–21, 16–21 ರಲ್ಲಿ ಲಿಯು ಶೆಂಗ್‌ ಶು– ತಾನ್ ನಿಂಗ್ ಅವರಿಗೆ ಮಣಿಯಿತು. ಅಶ್ಮಿತಾ ಚಾಲಿಹಾ 13–21, 15–21ರಲ್ಲಿ ವಿಶ್ವದ 9ನೇ ಕ್ರಮಾಂಕದ ಆಟಗಾರ್ತಿ ವಾಂಗ್‌ ಝಿ ಯಿ ಅವರಿಗೆ ಮಣಿದ ಕಾರಣ ಚೀನಾ 2–1 ರಲ್ಲಿ ಮುನ್ನಡೆ ಸಾಧಿಸಿತು.‌ ಆದರೆ ಟ್ರೀಸಾ ಜೋಳಿ– ಗಾಯತ್ರಿ ಗೋಪಿಚಂದ್ ಜೋಡಿ 10–21, 21–18, 21–17 ರಿಂದ ಚೀನಾದ ಲಿ ಯಿ ಜಿಂಗ್‌– ಲುವೊ ಷು ಮಿನ್ ಅವರನ್ನು ಸೋಲಿಸಿದ್ದರಿಂದ ಸ್ಕೋರ್ ಸಮನಾಯಿತು. ನಿರ್ಣಾಯಕ ಸಿಂಗಲ್ಸ್ ಪಂದ್ಯದಲ್ಲಿ ಅನ್ಮೋಲ್ ಖಾರ್ಬ್ 22–20, 14–21, 21–18 ರಿಂದ ವು ಉವೊ ಯು ಅವರನ್ನು ಹಿಮ್ಮಟ್ಟಿಸಿದ್ದಿಂದ ಭಾರತದ 3–2ರಲ್ಲಿ ರೋಚಕ ಜಯಪಡೆಯಿತು.

ಪುರುಷರ ವಿಭಾಗದಲ್ಲಿ ಭಾರತ ತಂಡ 4–1 ರಿಂದ ಹಾಂಗ್‌ಕಾಂಗ್ ತಂಡವನ್ನು ಸೋಲಿಸಿ ‘ಎ’ ಗುಂಪಿನಿಂದ ನಾಕ್‌ಔಟ್‌ಗೆ ಅರ್ಹತೆ ಪಡೆಯಿತು. ಮೊದಲ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್ ನೇರ ಆಟಗಳಿಂದ ಎನ್ಜಿ ಕಾ ಲಾಂಗ್‌  ಅವರಿಗೆ ಸೋತರು. ಆದರೆ ನಂತರದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಭಾರತದ ಆಟಗಾರರು ಜಯಭೇರಿ ಭಾರಿಸಿದರು.

ಭಾರತ ಗುರುವಾರ ಅಗ್ರ ಶ್ರೇಯಾಂಕದ ಚೀನಾ ತಂಡವನ್ನು ಎದುರಿಸಲಿದ್ದು, ಗುಂಪಿನ ವಿಜೇತರ ನಿರ್ಧಾರವಾಗಲಿದೆ. ಮಂಗಳವಾರ ಹಾಂಗ್‌ಕಾಂಗ್‌ 0–5 ರಿಂದ ಚೀನಾ ತಂಡಕ್ಕೆ ಮಣಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT