ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾಲಿಂಪಿಕ್ಸ್: ಪ್ಯಾರಿಸ್‌ನತ್ತ ಭಾರತದ ಮೊದಲ ತಂಡ

Published : 21 ಆಗಸ್ಟ್ 2024, 14:17 IST
Last Updated : 21 ಆಗಸ್ಟ್ 2024, 14:17 IST
ಫಾಲೋ ಮಾಡಿ
Comments

ನವದೆಹಲಿ: ಪ್ಯಾರಿಸ್‌ ಹವಾಮಾನಕ್ಕೆ ಒಗ್ಗಿಕೊಳ್ಳುವ ಉದ್ದೇಶದಿಂದ ಜಾವೆಲಿನ್ ತಾರೆ ಸುಮಿತ್ ಅಂಟಿಲ್‌ ಅವರನ್ನು ಒಳಗೊಂಡ ಭಾರತದ ಅಥ್ಲೀಟುಗಳ ಮೊದಲ ತಂಡ ಪ್ಯಾರಾಲಿಂಪಿಕ್ಸ್ ಕ್ರೀಡೆಗಳಲ್ಲಿ ಭಾಗಿಯಾಗಲು ಒಂದು ವಾರ ಮೊದಲೇ ಫ್ರಾನ್ಸ್ ರಾಜಧಾನಿಗೆ ತೆರಳಿತು. ಅಥ್ಲೀಟುಗಳ ತಂಡ ಐದು ಚಿನ್ನ ಸೇರಿ ಡಜನ್ ಪದಕಗಳ ಮೇಲೆ ಕಣ್ಣಿಟ್ಟಿದೆ.

16 ಅಥ್ಲೀಟುಗಳ ತಂಡ ಪ್ಯಾರಿಸ್‌ನ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಲಿದ್ದು, ಕ್ರೀಡೆಗಳ ಉದ್ಘಾಟನಾ ಸಮಾರಂಭಕ್ಕೆ ಮೂರು ದಿವಸ ಮೊದಲು ಕ್ರೀಡಾ ಗ್ರಾಮಕ್ಕೆ ತೆರಳಲಿದೆ.

ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳಲ್ಲಿ ಚಿನ್ನ ಉಳಿಸಿಕೊಂಡ ಭಾರತದ ಮೊದಲ ಕ್ರೀಡಾಪಟು ಎಂಬ ಹಿರಿಮೆಗೆ ಯತ್ನಿಸುತ್ತಿರುವ ಸುಮಿತ್‌ ಫ್ರಾನ್ಸ್‌ ರಾಜಧಾನಿಗೆ ಹತ್ತಿರದ ತಾಣದಲ್ಲಿ ಅಭ್ಯಾಸದಲ್ಲಿ ತೊಡಗಲಿದ್ದಾರೆ.

‘ಸುಮಿತ್ ಅಂಟಿಲ್ ಮತ್ತು ಕೆಲವು ಪ್ಯಾರಾ ಅಥ್ಲೀಟುಗಳು ನೆಲ್ಸನ್ ಮಂಡೇಲಾ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ. ನಂತರ ಕ್ರೀಡಾ ಗ್ರಾಮಕ್ಕೆ ವಾಸ್ತವ್ಯ ಬದಲಾಯಿಸುವರು’ ಎಂದು ಪ್ಯಾರಾ ಅಥ್ಲೆಟಿಕ್ಸ್‌ ಹೆಡ್‌ ಕೋಚ್‌ ಸತ್ಯನಾರಾಯಣ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಸ್ಟೇಡ್‌ ಡಿ ಫ್ರಾನ್ಸ್‌ ಕ್ರೀಡಾಂಗಣದಿಂದ 5 ಕಿ.ಮೀ. ದೂರದಲ್ಲಿರುವ ನೆಲ್ಸನ್ ಮಂಡೇಲಾ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ಅಥ್ಲೆಟಿಕ್ಸ್‌, ರಗ್ಬಿ, ಟೆನಿಸ್‌, ವೀಲ್‌ಚೇರ್ ಟೆನಿಸ್‌ ಮತ್ತು ಈಜುಕೊಳದ ವ್ಯವಸ್ಥೆಯಿದೆ.

ಪ್ಯಾರಾಲಿಂಪಿಕ್ಸ್‌ ಆಗಸ್ಟ್‌ 30 ರಿಂದ ಸೆಪ್ಟೆಂಬರ್ 8ರವರೆಗೆ ನಡೆಯಲಿದೆ. ಸ್ಟೇಡ್‌ ಡಿ ಫ್ರಾನ್ಸ್‌ನಲ್ಲಿ 8ರಂದು ಸಮಾರೋಪ ನಡೆಯಲಿದೆ.

‘ಪ್ಯಾರಾ ಅಥ್ಲೆಟಿಕ್ಸ್‌ ತಂಡದಿಂದ ನಾವು ಐದು ಚಿನ್ನದ ಪದಕ ಮತ್ತು ಒಟ್ಟು 12 ಪದಕಗಳನ್ನು ಗೆಲ್ಲುವ ಗುರಿಹೊಂದಿದ್ದೇವೆ. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಅತ್ಯುತ್ತಮ ಸಾಧನೆಯಾಗಲಿದೆ’ ಎಂದು ಅವರು ಹೇಳಿದರು.

ಜಪಾನ್‌ನ ಕೋಬೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತದ ಅಥ್ಲೀಟುಗಳು ಆರು ಚಿನ್ನ, ಐದು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು. ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದು ಇದುವರೆಗಿನ ಭಾರತದ ಸರ್ವಶ್ರೇಷ್ಠ ಸಾಧನೆಯಾಗಿತ್ತು. ಹೀಗಾಗಿ ಸತ್ಯನಾರಾಯಣ ಅವರು ತಂಡದಿಂದ ಉತ್ತಮ ಸಾಧನೆ ನಿರೀಕ್ಷಿಸಿದ್ದಾರೆ.

ಸುಮಿತ್ ಅಂಟಿಲ್ (ಪುರುಷರ ಜಾವೆಲಿನ್‌ ಎಫ್‌64), ದೀಪ್ತಿ ಜೀವಾಂಜಿ (ಮಹಿಳೆಯರ 400 ಮೀ. ಟಿ20), ಸಚಿನ್ ಖಿಲಾರಿ (ಪುರುಷರ ಶಾಟ್‌ಪಟ್‌ ಎಫ್‌46), ಏಕ್ತಾ ಭುವನ್ (ಮಹಿಳೆಯರ ಕ್ಲಬ್‌ ಥ್ರೊ ಎಫ್‌51)(, ಸಿಮ್ರಾನ್‌ ಶರ್ಮ (ಮಹಿಳೆಯರ 200 ಮೀ. ಟಿ12) ಮತ್ತು ಮರಿಯಪ್ಪನ್ ತಂಗವೇಲು (ಪುರುಷರ ಹೈಜಂಪ್‌ ಟಿ42) ಚಿನ್ನ ಗೆದಿದ್ದರು.

2021ರ ಟೋಕಿಯೊ ಪ್ಯಾರಾ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ದಾಖಲೆಯ 19 ಪದಕಗಳನ್ನು (5 ಚಿನ್ನ, 8 ಬೆಳ್ಳಿ ಮತ್ತು 6 ಕಂಚು) ಗೆದ್ದುಕೊಂಡು ಗಮನ ಸೆಳೆದಿದ್ದರು. ಈ ಬಾರಿ ಭಾರತ 12 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ 84 ಅಥ್ಲೀಟುಗಳ ದಂಡನ್ನು ಕಳುಹಿಸುತ್ತಿದೆ. ಇದು ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳಲ್ಲಿ ಭಾರತ ಕಳುಹಿಸುತ್ತಿರುವ ಅತಿ ದೊಡ್ಡ ತಂಡವೆನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT