ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು ಸೇವಿಸಿದ ಜೂಡೊ ಪಟು ದೀಪಾಂಶು ಅಮಾನತು

Last Updated 25 ಆಗಸ್ಟ್ 2020, 15:36 IST
ಅಕ್ಷರ ಗಾತ್ರ

ನವದೆಹಲಿ: ನಿಷೇಧಿತ ಉದ್ದೀಪನ ಮದ್ದು ಫ್ಯೂರೊಸೆಮೈಡ್ ಸೇವಿಸಿದ್ದ ಜೂಡೊ ಪಟು ದೀಪಾಂಶು ಬಲಿಯಾನ್ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಶಿಸ್ತು ಸಮಿತಿ (ಎಡಿಡಿಪಿ) 22 ತಿಂಗಳು ಅಮಾನತುಗೊಳಿಸಿದೆ.

ಏಷ್ಯನ್ಜೂನಿಯರ್ ಜೂಡೊ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ಆಯ್ಕೆಗಾಗಿ ಕಳೆದ ವರ್ಷದ ಜೂನ್‌ನಲ್ಲಿ ಭೋಪಾಲ್‌ನಲ್ಲಿ ಟ್ರಯಲ್ಸ್‌ ನಡೆದಿತ್ತು. ಆಗ ದೀಪಾಂಶು ಅವರ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಅವರು ಉದ್ದೀಪನ ಮದ್ದು ಸೇವಿಸಿರುವುದು ಪರೀಕ್ಷೆಯಲ್ಲಿ ಸಾಬೀತಾಗಿತ್ತು.ಟ್ರಯಲ್ಸ್‌ನಲ್ಲಿ 90ಕೆಜಿ ವಿಭಾಗದಲ್ಲಿ ಅವರು ಆಯ್ಕೆಯಾಗಿದ್ದರು.

ನಿಯಮ 10.2.1ರ ಅನ್ವಯ ಬಲಿಯಾನ್ ಅವರನ್ನು ನಾಲ್ಕು ವರ್ಷ ಅಮಾನತುಗೊಳಿಸಬೇಕು ನಾಡಾ ಶಿಫಾರಸು ಮಾಡಿತ್ತು. ಆದರೆ ಅವರು ಉದ್ದೇಶಪೂರ್ವಕವಾಗಿ ಮದ್ದು ಸೇವಿಸಿದ್ದರು ಎಂಬುದನ್ನು ಸಾಬೀತು ಮಾಡಲು ಅದು ವಿಫಲವಾಗಿತ್ತು. ಉದ್ದೇಶಪೂರ್ವಕವಲ್ಲದ ತಪ್ಪಿಗೆ ಎರಡು ವರ್ಷ ಅಮಾನತು ಶಿಕ್ಷೆ ವಿಧಿಸಲಾಗುತ್ತದೆ. ನಾಡಾ ಸೂಕ್ತ ಸಂದರ್ಭದಲ್ಲಿ ನೋಟಿಸ್ ನೀಡದ ಕಾರಣ ಅಮಾನತು ಅವಧಿಯನ್ನು ಎರಡು ತಿಂಗಳು ಕಡಿಮೆ ಮಾಡಲಾಗಿದ್ದು ಒಂದು ವರ್ಷ 10 ತಿಂಗಳಿಗೆ ಇಳಿಸಲಾಗಿದೆ. ಕಳೆದ ವರ್ಷದ ಅಕ್ಟೋಬರ್ 17ರಿಂದ ಇದು ಪೂರ್ವಾನ್ವಯವಾಗಲಿದೆ.

ನಾಡಾದ ಉದ್ದೀಪನ ತಡೆ ಅಪೀಲುಗಳ ಸಮಿತಿಗೆ21 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಲು ಕ್ರೀಡಾಪಟುವಿಗೆ ಅವಕಾಶವಿದೆ. ಎಡಿಡಿಪಿಗೆ ಅಹನಾ ಮಹರೋತ್ರಾ ಅಧ್ಯಕ್ಷರಾಗಿದ್ದು ಜಗಬೀರ್ ಸಿಂಗ್ ಮತ್ತು ಪಿಎಸ್‌ಎಂ ಚಂದ್ರನ್ ಸದಸ್ಯರಾಗಿದ್ದಾರೆ. ವೈದ್ಯರ ಬಳಿಗೆ ಹೋಗುವಾಗ, ತಾನೊಬ್ಬ ಕ್ರೀಡಾಪಟುವಾಗಿದ್ದು ಔಷಧಿಯನ್ನು ಎಚ್ಚರಿಕೆಯಿಂದ ನೀಡುವಂತೆ ಬಲಿಯಾನ್ ಹೇಳಬೇಕಾಗಿತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಜೂಡೊದಲ್ಲಿ ದೇಹಭಾರದ ಆಧಾರದಲ್ಲಿ ಸ್ಪರ್ಧೆಯ ವಿಭಾಗಗಳನ್ನು ನಿರ್ಣಯಿಸಲಾಗುತ್ತದೆ. ಫ್ಯೂರೊಸೆಮೈಡ್ ಮೂತ್ರದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ದೇಹಭಾರ ಕಡಿಮೆ ಮಾಡುತ್ತದೆ. ನಿರ್ದಿಷ್ಟ ಭಾರದ ವಿಭಾಗದಲ್ಲಿ ಸ್ಪರ್ಧಿಸುವ ಸಲುವಾಗಿ ಕ್ರೀಡಾಪಟು ಈ ಮದ್ದು ಸೇವಿಸಿರಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT