ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಓಪನ್ ಸರ್ಫಿಂಗ್: ಕಮಲಿ ಕಮಾಲ್‌; ಮತ್ತೊಮ್ಮೆ ‘ಡಬಲ್‌’

Published 2 ಜೂನ್ 2024, 23:43 IST
Last Updated 2 ಜೂನ್ 2024, 23:43 IST
ಅಕ್ಷರ ಗಾತ್ರ

ಮಂಗಳೂರು: ಅಲೆಗಳ ಮೇಲೆ ರೋಮಾಂಚಕ ಏರಿಳಿತಗಳನ್ನು ಪ್ರದರ್ಶಿಸುತ್ತ ಸ್ಕೋರ್‌ ಕಲೆ ಹಾಕಿದ ತಮಿಳುನಾಡಿನ ಕಮಲಿಮೂರ್ತಿ, ಇಲ್ಲಿನ ಸುರತ್ಕಲ್‌ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ನಡೆದ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್‌ ಪಟ್ಟ ತಮ್ಮದಾಗಿಸಿಕೊಂಡರು.

ಮಂತ್ರ ಸರ್ಫಿಂಗ್ ಕ್ಲಬ್‌ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಆಶ್ರಯದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್‌ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಅಂತರರಾಷ್ಟ್ರೀಯ ಸರ್ಫರ್ ತಮಿಳುನಾಡಿನ ಅಜೀಶ್ ಅಲಿ ಮತ್ತು ಬಾಲಕರ ವಿಭಾಗದಲ್ಲಿ ತಯಿನ್ ಅರುಣ್ ಪ್ರಶಸ್ತಿ ಗೆದ್ದುಕೊಂಡರು. ತಯಿನ್ ಕೂಡ ತಮಿಳುನಾಡು ಕ್ರೀಡಾಪಟು. ಕಮಲಿ ಮೂರ್ತಿ ಕಳೆದ ಬಾರಿಯೂ ಮಹಿಳೆಯರ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್ ಎನಿಸಿಕೊಂಡಿದ್ದರು. 

ಮಹಿಳೆಯರ ಫೈನಲ್‌ನಲ್ಲಿ ಒಟ್ಟು ಏಳು ಅಲೆಗಳನ್ನು ಎದುರಿಸಿದ ಕಮಲಿ ಎರಡರಲ್ಲಿ ಯಶಸ್ಸು ಕಂಡರು. ಮೊದಲ ಯಶಸ್ವಿ ಅಲೆಯನ್ನು ದಾಟಿ 6 ಸ್ಕೋರು ಕಲೆ ಹಾಕಿದ ಅವರು ಮತ್ತೊಂದರಲ್ಲಿ 6.40ರ ಸಾಧನೆ ಮಾಡಿದರು. ಅವರಿಗೆ ಭಾರಿ ಪೈಪೋಟಿ ನೀಡಿದ, 2022ರ ಚಾಂಪಿಯನ್‌ ಗೋವಾದ ಸುಗರ್ ಶಾಂತಿ ಬನಾರಸಿ, ಮೊದಲ ಯಶಸ್ಸಿನಲ್ಲಿ ಎಂಟು ಪಾಯಿಂಟ್ ಗಳಿಸಿ ಭರವಸೆ ಮೂಡಿಸಿದ್ದರು. ಮತ್ತೊಂದರಲ್ಲಿ 4.23 ಸ್ಕೋರು ಗಳಿಸಿ 0.17 ಅಂತರದ ಹಿನ್ನಡೆಯೊಂದಿಗೆ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಕೇವಲ 2.97 ಸ್ಕೋರು ಗಳಿಸಿದ ಮುಂಬೈಯ ನೇಹಾ ವೈದ್ ಮೂರನೇ ಸ್ಥಾನ ಗಳಿಸಿದರು. 

ಮೂವರು ಕಣದಲ್ಲಿದ್ದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕಮಲಿ ಸುಲಭವಾಗಿ ಜಯ ಗಳಿಸಿದರು. ಗರಿಷ್ಠ 7.17 ಸ್ಕೋರ್‌ನೊಂದಿಗೆ ಒಟ್ಟು 12.17ರ ಸಾಧನೆ ಮಾಡಿದ ಅವರು ಪ್ರತಿಸ್ಪರ್ಧಿ ದಮಯಂತಿ ಶ್ರೀರಾಮ್‌ ಅವರನ್ನು 6.24ರ ಅಂತರದಲ್ಲಿ ಮಣಿಸಿದರು. 

ಜಿದ್ದಾಜಿದ್ದಿಯ ಫೈನಲ್

ತಮಿಳುನಾಡಿನ ನಾಲ್ವರ ಜಿದ್ದಾಜಿದ್ದಿಗೆ ಸಾಕ್ಷಿಯಾದ ಪುರುಷರ ವಿಭಾಗದ ಫೈನಲ್‌ನಲ್ಲಿ ಅಜೀಶ್ ಅಲಿ ನಾಲ್ಕನೇ ಅಲೆಯಲ್ಲಿ 7.40 ಸ್ಕೋರು ಗಳಿಸಿ ಸಂಭ್ರಮಿಸಿದರು. ಎಲ್‌ ಸಾಲ್ವಡೋರ್‌ನಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಉತ್ಸಾಹದಲ್ಲಿದ್ದ ಅಜೀಶ್ ಒಟ್ಟಾರೆ 14.70 ಸ್ಕೋರುಗಳ ಸಾಧನೆ ಮಾಡಿದರೆ ಶ್ರೀಕಾಂತ್ ಗರಿಷ್ಠ 7.07 ಸೇರಿದಂತೆ ಒಟ್ಟು 12.57 ಸ್ಕೋರು ಗಳಿಸಿ ರನ್ನರ್ ಅಪ್ ಆದರು. 

ಹರೀಶ್ ಪಿ ಎದುರು 1.77ರ ಮುನ್ನಡೆಯೊಂದಿಗೆ ಚಾಂಪಿಯನ್‌ ಆದ ತಯಿನ್ ಅರುಣ್, ಓಪನ್ ಸರ್ಫಿಂಗ್‌ನ ಮೊದಲ ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು. ಹರೀಶ್‌ಗೆ ಪ್ರಬಲ ಪೈಪೋಟಿ ನೀಡಿದ ಪ್ರಹ್ಲಾದ್ ಶ್ರೀರಾಮ್ ಮೂರನೇ ಸ್ಥಾನ ಗಳಿಸಿದರೆ, ಕರ್ನಾಟಕದ ಪ್ರದೀಪ್ ಪೂಜಾರ್ ನಾಲ್ಕನೇ ಸ್ಥಾನ ಗಳಿಸಿದರು.

ಪ್ರಶಸ್ತಿ ಸುತ್ತಿನ ಫಲಿತಾಂಶಗಳು: ಪುರುಷರ ಮುಕ್ತ ವಿಭಾಗ: ಅಜೀಶ್ ಅಲಿ–1 (ತಮಿಳುನಾಡು, ಸ್ಕೋರು:14.70), ಶ್ರೀಕಾಂತ್ ಡಿ–2 (ತಮಿಳುನಾಡು: 12.57), ಸಂಜಯ್‌ ಕುಮಾರ್ ಎಸ್‌–3 (ತಮಿಳುನಾಡು: 11.10), ಸಂಜಯ್ ಸೆಲ್ವಮಣಿ–4 (ತಮಿಳುನಾಡು: 6.17); ಮಹಿಳೆಯರ ಮುಕ್ತ ವಿಭಾಗ: ಕಮಲಿಮೂರ್ತಿ–1 (ತಮಿಳುನಾಡು: 12.40), ಸುಗರ್ ಶಾಂತಿ ಬನಾರಸಿ–2 (ಗೋವಾ:12.23), ನೇಹಾ ವೈದ್–3 (ಮಹಾರಾಷ್ಟ್ರ: 2.97); ಬಾಲಕರ ವಿಭಾಗ: ತಯಿನ್ ಅರುಣ್–1 (ತಮಿಳುನಾಡು:10.17), ಹರೀಶ್ ಪಿ–2 (ತಮಿಳುನಾಡು: 8.40), ಪ್ರಹ್ಲಾದ್ ಶ್ರೀರಾಮ್‌–3 (7.47), ಪ್ರದೀಪ್ ಪೂಜಾರ್–4 (ಕರ್ನಾಟಕ: 5.34); ಬಾಲಕಿಯರ ವಿಭಾಗ: ಕಮಲಿಮೂರ್ತಿ–1 (ತಮಿಳುನಾಡು: 12.17), ದಮಯಂತಿ ಶ್ರೀರಾಮ್–2 (ತಮಿಳುನಾಡು: 5.93), ಮಹತಿ ಶ್ರೀನಿವಾಸ ಭಾರತಿ–3 (ತಮಿಳುನಾಡು:
2.07).

ಪುರುಷರ ಮುಕ್ತ ವಿಭಾಗದಲ್ಲಿ ಚಾಂಪಿಯನ್ ಆದ ಅಜೀಶ್ ಅಲಿ ಅಲೆಯನ್ನು ದಾಟಿ ಬಂದ ಸಂದರ್ಭ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್ 
ಪುರುಷರ ಮುಕ್ತ ವಿಭಾಗದಲ್ಲಿ ಚಾಂಪಿಯನ್ ಆದ ಅಜೀಶ್ ಅಲಿ ಅಲೆಯನ್ನು ದಾಟಿ ಬಂದ ಸಂದರ್ಭ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್ 
ಮಹಿಳೆಯರ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್‌ ಕಮಲಿಮೂರ್ತಿ ಅವರ ಸಾಹಸ ಪ್ರದರ್ಶನ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್ 
ಮಹಿಳೆಯರ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್‌ ಕಮಲಿಮೂರ್ತಿ ಅವರ ಸಾಹಸ ಪ್ರದರ್ಶನ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್ 
ಬಾಲಕರ ವಿಭಾಗದ ಪ್ರಶಸ್ತಿ ಗೆದ್ದ ತಯಿನ್ ಅರುಣ್ ಅಲೆಯೊಂದಿಗೆ ಸೆಣಸಿದ ರೀತಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್ 
ಬಾಲಕರ ವಿಭಾಗದ ಪ್ರಶಸ್ತಿ ಗೆದ್ದ ತಯಿನ್ ಅರುಣ್ ಅಲೆಯೊಂದಿಗೆ ಸೆಣಸಿದ ರೀತಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್ 
ಎಲ್ಲ ವಿಭಾಗದಲ್ಲೂ ಚಾಂಪಿಯನ್ ಆದ ತಮಿಳುನಾಡು ಸರ್ಫರ್‌ಗಳು ಬಾಲಕರ ವಿಭಾಗದ ಪ್ರಶಸ್ತಿ ಗೆದ್ದು ಸಂಭ್ರಮಿಸಿದ ತಯಿನ್ ಅರುಣ್  ಗೋವಾದ ಸುಗರ್ ಶಾಂತಿ ಬನಾರಸಿ ಮಹಿಳಾ ವಿಭಾಗದ ರನ್ನರ್ ಅಪ್
ಮಾಜಿ ಚಾಂಪಿಯನ್‌ ಸುಗರ್ ಶಾಂತಿ ಬನಾರಸಿ ಅವರು ಕಣದಲ್ಲಿ ಇದ್ದ ಕಾರಣ ಮುಕ್ತ ವಿಭಾಗದ ಸ್ಪರ್ಧೆ ಸವಾಲಿನದ್ದಾಗಿತ್ತು. ಆದರೂ ಶಾಂತಚಿತ್ತದಿಂದ ಇದ್ದು ಒತ್ತಡದಿಂದ ಮುಕ್ತವಾಗಲು ಪ್ರಯತ್ನಿಸಿದೆ. ಅದರ ಫಲವಾಗಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು.
–ಕಮಲಿ ಮೂರ್ತಿ ಡಬಲ್ ಪ್ರಶಸ್ತಿ ಗೆದ್ದ ಸರ್ಫರ್‌
ಇಲ್ಲಿ ಪರಿಸ್ಥಿತಿ ಪೂರಕವಾಗಿತ್ತು. ಅದರ ಸಂಪೂರ್ಣ ಲಾಭ ಪಡೆದುಕೊಂಡೆ. ಮೊದಲ ಪ್ರಶಸ್ತಿ ಗೆದ್ದಿರುವುದು ಅತ್ಯಂತ ಖುಷಿ ತಂದಿದೆ. ಭವಿಷ್ಯದಲ್ಲಿ ಸಾಧನೆ ಮಾಡಲು ಮಂಗಳೂರಿನಲ್ಲಿ ಗೆದ್ದ ಈ ಪ್ರಶಸ್ತಿ ನೆರವಾಗಲಿದೆ ಎಂಬ ಭರವಸೆ ಇದೆ.
–ತಯಿನ್ ಅರುಣ್‌ ಬಾಲಕರ ವಿಭಾಗದ ಚಾಂಪಿಯನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT