ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿ: ಮಂಗಳೂರು ಜಯಭೇರಿ

Published 24 ನವೆಂಬರ್ 2023, 4:57 IST
Last Updated 24 ನವೆಂಬರ್ 2023, 4:57 IST
ಅಕ್ಷರ ಗಾತ್ರ

ಉಡುಪಿ: ಜುಂಜುನುವಿನ ಎಸ್‌ಜೆಜೆಟಿ ವಿಶ್ವವಿದ್ಯಾಲಯವನ್ನು ಮಣಿಸಿದ ಆತಿಥೇಯ ಮಂಗಳೂರು ವಿಶ್ವವಿದ್ಯಾಲಯ ತಂಡ ಇಲ್ಲಿ ಗುರುವಾರ ಆರಂಭಗೊಂಡ ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಮಂಗಳೂರು ವಿಶ್ವವಿದ್ಯಾಲಯ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಹಯೋಗದಲ್ಲಿ ನಡೆಯುತ್ತಿರುವ ಟೂರ್ನಿಯ ದಿನದ ಕೊನೆಯ ಪಂದ್ಯದಲ್ಲಿ ಮಂಗಳೂರು ವಿವಿ 73–42ರಲ್ಲಿ ಎಸ್‌ಜೆಜೆಟಿಯನ್ನು ಮಣಿಸಿತು. ರೋಹ್ಟಕ್‌ನ ಬಲಿಷ್ಠ ಎಂ.ಡಿ ವಿಶ್ವವಿದ್ಯಾಲಯ ಎದುರು ಮೈಸೂರು ವಿವಿ ಸೋತಿತು.

‘ಸಿ’ ಗುಂಪಿನ ಪಂದ್ಯದ ಆರಂಭದಲ್ಲಿ ಎಸ್‌ಜೆಜೆಟಿ ಸ್ವಲ್ಪ ಪ್ರತಿರೋಧ ಒಡ್ಡಿತು. ಆದರೆ ಅಮೋಘ ಆಟವಾಡಿದ ಮಂಗಳೂರು ಸತತ ಪಾಯಿಂಟ್ ಗಳಿಸಿ ಮುನ್ನಡೆ ಸಾಧಿಸುತ್ತ ಸಾಗಿತು. ಒಂದು ಹಂತದಲ್ಲಿ 29–7ರಲ್ಲಿ ಮುನ್ನುಗ್ಗಿತು. 41–15ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ತಂಡ ದ್ವಿತೀಯಾರ್ಧದಲ್ಲಿ ಮತ್ತಷ್ಟು ಪ್ರಬಲ ಆಟವಾಡಿತು. ಮಯಂಕ್‌ ಮತ್ತು ರತನ್ ಅವರ ರೇಡಿಂಗ್, ಮೊಹಮ್ಮದ್ ನಿಶಾನ್–ನಿಖಿಲ್ ಜೋಡಿಯ  ಅಮೋಘ ಟ್ಯಾಕ್ಲಿಂಗ್ ಮುಂದೆ ಎದುರಾಳಿಗಳು ನಿರುತ್ತರರಾದರು. ಮಂಗಳೂರು ವಿವಿಯ ಸ್ಕೋರು 50ಕ್ಕೆ ತಲುಪಿದಾಗ ಎಸ್‌ಜೆಜೆಟಿ ಗಳಿಸಿದ್ದು ಕೇವಲ 22 ಪಾಯಿಂಟ್‌. ಅಂತಿಮ ಹಂತದಲ್ಲಿ ಎಸ್‌ಜೆಜೆಟಿ ಸೊಗಸಾದ ಆಟವಾಡಿ ಸೋಲಿನ ಅಂತರ ಕಡಿಮೆ ಮಾಡಿಕೊಂಡಿತು. 

‘ಡಿ’ ಗುಂಪಿನ ಎಂ.ಡಿ ವಿವಿ ಎದುರಿನ ಪಂದ್ಯದಲ್ಲಿ ಮೈಸೂರು ತಂಡ 44–52ರಲ್ಲಿ ಸೋತಿತು. ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಪಂದ್ಯದಲ್ಲಿ ಮೈಸೂರು ತಂಡ ಪ್ರೇಕ್ಷಕರನ್ನು ರಂಜಿಸಿತು. ಒಂದು ಹಂತದಲ್ಲಿ 15–15ರ ಸಮಬಲ ಸಾಧಿಸಿ ನಿಟ್ಟುಸಿರು ಬಿಟ್ಟಿತು. ಕೇವಲ 2 ಪಾಯಿಂಟ್‌ಗಳ ವ್ಯತ್ಯಾಸದೊಂದಿಗೆ ವಿರಾಮಕ್ಕೆ ತೆರಳಿದ ತಂಡಗಳು ದ್ವಿತೀಯಾರ್ಧದಲ್ಲೂ ಛಲ ಬಿಡದೆ ಆಟವಾಡಿದವು.

ಟೂರ್ನಿಯ ಮೊದಲ ಪಂದ್ಯದಲ್ಲಿ ಪಂಜಾಬ್‌ನ ಗುರು ಕಾಶಿ ವಿವಿ ಜೆಎನ್‌ಸಿ ವಿವಿ ಎದುರು 53–35ರಲ್ಲಿ ಜಯ ಗಳಿಸಿತು. ಔರಂಗಾಬಾದ್‌ನ ಡಾ.ಬಿಎಂಬಿ ವಿವಿ 50–48ರಲ್ಲಿ ಯೋಗಿ ವೇಮನ ವಿವಿ ವಿರುದ್ಧ, ವಿಬಿಎಸ್‌ ಪೂರ್ವಾಂಚಲ್ ವಿವಿ 65–25ರಲ್ಲಿ ಹರಿಯಾಣದ ಬನ್ಸಿಲಾಲ್ ವಿವಿ ವಿರುದ್ಧ, ಚಂಢೀಗಢ ವಿವಿ 55–36ರಲ್ಲಿ ಜಗನ್ನಾಥ ಸಂಸ್ಕೃತ ವಿವಿ ವಿರುದ್ಧ  ಗೆಲುವು ದಾಖಲಿಸಿತು. ವೇಲ್ಸ್ ಚೆನ್ನೈ ಮತ್ತು ಡಿಎವಿ ಇಂದೋರ್‌, ಕೋಟ ಮತ್ತು ಅದಮಾಸ್ ವಿವಿಗಳಿಗೆ ವಾಕ್ ಓವರ್ ಲಭಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT