ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ತಪ್ಪು ನಕ್ಷೆ ಪ್ರಕಟ: ಕ್ಷಮೆಯಾಚಿಸಿದ ಮೋಟೊಜಿಪಿ ಸಂಘಟಕರು

Published 22 ಸೆಪ್ಟೆಂಬರ್ 2023, 15:22 IST
Last Updated 22 ಸೆಪ್ಟೆಂಬರ್ 2023, 15:22 IST
ಅಕ್ಷರ ಗಾತ್ರ

ಗ್ರೇಟರ್‌ ನೋಯ್ಡಾ: ಭಾರತದಲ್ಲಿ ಇದೇ ಮೊದಲ ಬಾರಿ ನಡೆಯಲಿರುವ ಮೋಟೊಜಿಪಿ ರೇಸ್‌ಗೆ (ಗ್ರ್ಯಾನ್‌ಪ್ರಿ ಮೋಟರ್‌ಸೈಕಲ್‌ ರೇಸಿಂಗ್‌) ಮುನ್ನ ವಿವಾದ ತಲೆದೋರಿದೆ.

ಇಲ್ಲಿನ ಬುದ್ಧ ಇಂಟರ್‌ನ್ಯಾಷನಲ್‌ ಸರ್ಕಿಟ್‌ನಲ್ಲಿ ಶುಕ್ರವಾರ ನಡೆದ ಅಭ್ಯಾಸದ ಅವಧಿಯ ನೇರ ಪ್ರಸಾರದ ವೇಳೆ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಲಾಗಿದೆ. ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಭೂಪ್ರದೇಶ ಇರಲಿಲ್ಲ.

ಈ ತಪ್ಪು ಅರಿವಿಗೆ ಬರುತ್ತಿದ್ದಂತೆಯೇ ಮೋಟೊಜಿಪಿ ಸಂಘಟಕರು ಕ್ಷಮೆಯಾಚಿಸಿದ್ದಾರೆ. ‘ಅಭ್ಯಾಸದ ಅವಧಿಯ ನೇರ ಪ್ರಸಾರದ ವೇಳೆ ತೋರಿಸಲಾದ ನಕ್ಷೆಗೆ ಸಂಬಂಧಿಸಿದಂತೆ ಭಾರತದಲ್ಲಿನ ನಮ್ಮ ಅಭಿಮಾನಿಗಳ ಕ್ಷಮೆಯಾಚಿಸುತ್ತೇವೆ. ರೇಸ್‌ಗೆ ಆತಿಥ್ಯ ವಹಿಸಿರುವ ದೇಶಕ್ಕೆ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದು ನಮ್ಮ ಉದ್ದೇಶವಾಗಿತ್ತೇ ಹೊರತು ಅನ್ಯ ಉದ್ದೇಶ ಇರಲಿಲ್ಲ’ ಎಂದು ‘ಎಕ್ಸ್‌’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಷಾದನೀಯ: ‘ಭಾರತದ ನಕ್ಷೆಯನ್ನು ತಪ್ಪಾಗಿ ಪ್ರಕಟಿಸಿರುವುದು ಅತ್ಯಂತ ವಿಷಾದನೀಯ. ಮೋಟೊಜಿಪಿ ಸಂಘಟಕರು ಈ ಪ್ರಮಾದಕ್ಕೆ ಕ್ಷಮೆಯಾಚಿಸಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಫೆಡರೇಷನ್‌ ಆಫ್‌ ಮೋಟರ್ ಸ್ಪೋರ್ಟ್ಸ್‌ ಕ್ಲಬ್ಸ್‌ ಆಫ್‌ ಇಂಡಿಯಾ (ಎಫ್‌ಎಂಎಸ್‌ಸಿಐ) ಅಧ್ಯಕ್ಷ ಅಕ್ಬರ್ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.

‘ಭಾರತದ ನಕ್ಷೆ ಮತ್ತು ತ್ರಿವರ್ಣ ಧ್ವಜವನ್ನು ತೋರಿಸುವಾಗ ಯಾವುದೇ ತಪ್ಪು ಉಂಟಾಗದಂತೆ ಎಚ್ಚರ ವಹಿಸಬೇಕೆಂಬ ಸಲಹೆಯನ್ನು ಸಂಘಟಕರಿಗೆ ಎಫ್‌ಎಂಎಸ್‌ಸಿಐ ನೀಡುತ್ತದೆ’ ಎಂದಿದ್ದಾರೆ.

ರೇಸ್‌ನ ಎಲ್ಲ ಮೂರು ವಿಭಾಗಗಳ (ಮೋಟೊ 2, ಮೋಟೊ 2 ಮತ್ತು ಮೋಟೊಜಿಪಿ) ಸ್ಪರ್ಧಿಸಲು ಶುಕ್ರವಾರ ಅಭ್ಯಾಸ ನಡೆಸಿದರು. ಶನಿವಾರ ಅರ್ಹತಾ ಸುತ್ತು ನಡೆಯಲಿದ್ದು, ರೇಸ್‌ ಭಾನುವಾರ ಆಯೋಜನೆಯಾಗಿದೆ.

2013ರ ಫಾರ್ಮುಲಾ ಒನ್‌ ರೇಸ್‌ ಬಳಿಕ ಭಾರತದಲ್ಲಿ ನಡೆಯಲಿರುವ ಅತ್ಯಂತ ದೊಡ್ಡ ಮೋಟರ್‌ ಸ್ಪೋರ್ಟ್ಸ್‌ ಸ್ಪರ್ಧೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT