ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲುಸಾನ್‌ನಲ್ಲಿ ಕಳವಳದಲ್ಲೇ ಸ್ಪರ್ಧಿಸಿದ್ದೆ: ನೀರಜ್‌ ಚೋಪ್ರಾ

Published 3 ಜುಲೈ 2023, 23:30 IST
Last Updated 3 ಜುಲೈ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ‘ಸ್ನಾಯು ಸೆಳೆತದಿಂದ ಚೇತರಿಸಿಕೊಂಡು ಆಗಷ್ಟೇ ಪುನರಾಗಮನ ಮಾಡಿದ್ದ ಕಾರಣ ನನ್ನ ಫಿಟ್ನೆಸ್‌ ಮಟ್ಟ ಪೂರ್ಣಪ್ರಮಾಣದಲ್ಲಿರಲಿಲ್ಲ. ಹೀಗಾಗಿ ಕಳೆದ ವಾರ, ಲುಸಾನ್‌ನ ಡೈಮಂಡ್‌ ಲೀಗ್‌ನಲ್ಲಿ ನನ್ನೆಲ್ಲಾ ಸಾಮರ್ಥ್ಯ ಬಳಸಿಕೊಳ್ಳಬೇಕೇ, ಬೇಡವೇ ಎಂಬ ದ್ವಂದ್ವದಲ್ಲಿದ್ದೆ’ ಎಂದು ಜಾವೆಲಿನ್‌ ಥ್ರೊ ತಾರೆ ನೀರಜ್‌ ಚೋಪ್ರಾ ಸೋಮವಾರ ಒಪ್ಪಿಕೊಂಡಿದ್ದಾರೆ.

ಒಲಿಂಪಿಕ್‌ ಚಾಂಪಿಯನ್‌ ಚೋಪ್ರಾ ಅವರು ಜೂನ್‌ 30ರಂದು ನಡೆದ ಡೈಮಂಡ್‌ ಲೀಗ್‌ನಲ್ಲಿ 87.66 ಮೀ. ಸಾಧನೆಯೊಡನೆ ಸತತ ಎರಡನೇ ಚಿನ್ನ ಗೆದ್ದುಕೊಂಡಿದ್ದರು. ಆದರೆ ಈ ಪ್ರದರ್ಶನ ಅವರ ಇತ್ತೀಚಿನ ಉತ್ತಮ ಥ್ರೋಗಳ ಸನಿಹದಲ್ಲಿರಲಿಲ್ಲ.

ಸ್ಪರ್ಧೆಯ ನಂತರ ಚೋಪ್ರಾ ಅವರು ತಮ್ಮ ಮುಂದಿನ ಸ್ಪರ್ಧೆ ಬುಡಾಪೆಸ್ಟ್‌ನಲ್ಲಿ ಎಂದು ಹೇಳಿದ್ದರು. ಹೀಗಾಗಿ ಅವರು ಕೆಲವು ಅಂತರರಾಷ್ಟ್ರೀಯ ಕೂಟಗಳನ್ನು ಕಳೆದುಕೊಳ್ಳಲಿದ್ದಾರೆ. ಹಂಗೆರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಆಗಸ್ಟ್‌ 19 ರಿಂದ 27ರವರೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ನಡೆಯಲಿದೆ. ಜಾವೆಲಿನ್‌ ಸ್ಪರ್ಧೆ ಆ. 25ರಂದು ಅರ್ಹತಾ ಸುತ್ತಿನೊಡನೆ ಆರಂಭವಾಗಲಿದೆ.

‘ಒಟ್ಟಾರೆ (ಲೂಸಾನ್‌ನಲ್ಲಿ) ನನ್ನ ಫಿಟ್ನೆಸ್‌ ಮಟ್ಟ ಸ್ವಲ್ಪ ಕಡಿಮೆಯಿತ್ತು. ಈ ಹಿಂದೆ ಗಾಯಾಳಾಗಿದ್ದ ಕಾರಣ ನನ್ನ ಮನಸ್ಸಿನಲ್ಲಿ ನಾನು ಶೇ 100ರಷ್ಟು ಫಿಟ್ ಆಗಿದ್ದೇನೆಯೇ, ಇಲ್ಲವೇ? ನಾನು ಸಾಮರ್ಥ್ಯವನ್ನು ಪೂರ್ಣವಾಗಿ ತೊಡಗಿಸಿಕೊಳ್ಳಬೇಕೇ, ಬೇಡವೇ ಎಂಬ ಪ್ರಶ್ನೆಗಳು ಎದ್ದಿದ್ದವು’ ಎಂದು ಚೋಪ್ರಾ ಅವರು ವರ್ಚುವಲ್‌ ಆಗಿ ನಡೆದ ಮಾಧ್ಯಮ ಸಂವಾದದಲ್ಲಿ ಹೇಳಿದರು.

‘ತರಬೇತಿ ಮೂಲಕ ಫಿಟ್ನೆಸ್‌ ಸುಧಾರಿಸಿಕೊಳ್ಳಬೇಕಿದೆ. ಇದರಿಂದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಾನು ಅತ್ಯುತ್ತಮ ಪ್ರಯತ್ನ ಹಾಕಿ ಚಿನ್ನ ಗೆಲ್ಲುವ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯ’ ಎಂದರು.

25 ವರ್ಷದ ಚೋಪ್ರಾ, ವರ್ಷದ ಮೊದಲ ಪ್ರಮುಖ ಕೂಟವಾದ ದೋಹಾ ಡೈಮಂಡ್‌ ಲೀಗ್‌ನಲ್ಲಿ (ಮೇ 5ರಂದು) ಚಿನ್ನ ಗೆದ್ದುಕೊಂಡಿದ್ದರು. ಆದರೆ, ನಂತರ ತರಬೇತಿ ವೇಳೆ ಸ್ನಾಯು ನೋವು ಕಾಣಿಸಿಕೊಂಡಿದೆ ಎಂದು ಅವರು ಮೇ 29ರಂದು ಹೇಳಿದ್ದರು.

‘ಈ ವರ್ಷ ಮೂರು ಪ್ರಮುಖ (ಆಗಸ್ಟ್‌ನಲ್ಲಿ ನಡೆಯುವ ವಿಶ್ವ ಚಾಂಪಿ ಯನ್‌ಷಿಪ್‌, ಸೆಪ್ಟೆಂಬರ್‌ನಲ್ಲಿ ನಡೆಯುವ ಡೈಮಂಡ್‌ ಲೀಗ್‌ ಫೈನಲ್ಸ್‌ ಮತ್ತು ಅಕ್ಟೋಬರ್‌ನಲ್ಲಿ ನಡೆಯುವ ಏಷ್ಯನ್ ಗೇಮ್ಸ್‌) ಕೂಟಗಳು ನಿಗದಿಯಾಗಿವೆ. ಹೀಗಾಗಿ ಗಾಯಗೊಳ್ಳದಂತೆ ನೋಡಿಕೊಳ್ಳುವುದು ನನ್ನ ಮೊದಲ ಗುರಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT