ಪ್ಯಾರಿಸ್: ಸತತ ಎರಡನೇ ಪ್ಯಾರಾಲಿಂಪಿಕ್ ಕೂಟದಲ್ಲಿ ಚಿನ್ನದ ಪದಕ ಗಳಿಸಿದ ಜಾವೆಲಿನ್ ಥ್ರೋ ಅಥ್ಲೀಟ್ ಸುಮಿತ್ ಅಂಟಿಲ್ ಅವರ ಜಯದ ಗುಟ್ಟು ಏನು ಗೊತ್ತೆ?
ಸತತ ಎರಡು ಒಲಿಂಪಿಕ್ ಕೂಟದಲ್ಲಿ ಪದಕ ಜಯದ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರು, ‘ಯಾವುದೇ ರೀತಿಯ ಹೊಸ ತಂತ್ರ ಪ್ರಯತ್ನಿಸಬೇಡ. ಪ್ಯಾರಿಸ್‌ನಲ್ಲಿ ಉತ್ತಮ ವಾತಾವರಣ ಇದೆ. ಅದೊಂದು ಒಳ್ಳೆಯ ಅನುಭವ ಆಗಲಿದೆ’ ಎಂದು ಕಳಿಸಿದ್ದ ಸಂದೇಶ ಅಂಟಿಲ್ ಆತ್ಮವಿಶ್ವಾಸ ಹೆಚ್ಚಿಸಿತ್ತು.
‘ಪ್ಯಾರಿಸ್ ಒಲಿಂಪಿಕ್ಸ್ ನಂತರ ನೀರಜ್ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆದರೆ ಅವರು ನನ್ನ ಪರಿಚಯದ ವ್ಯಕ್ತಿಯ ಮೂಲಕ (ಮ್ಯಾನೇಜರ್) ಸಂದೇಶ ಕಳಿಸಿದ್ದರು. ಅದನ್ನು ಅಚ್ಚುಕಟ್ಟಾಗಿ ಪಾಲಿಸಿರುವೆ’ ಎಂದು ಸುಮಿತ್ ಹೇಳಿದ್ದಾರೆ.
ಅವರು ಸೋಮವಾರ ತಡರಾತ್ರಿ ನಡೆದ ಎಫ್ 64 ವಿಭಾಗದ ಜಾವೆಲಿನ್ ಥ್ರೋನಲ್ಲಿ 70.59 ಮೀಟರ್ಸ್ ದೂರ ಥ್ರೋ ಸಾಧನೆ ಮಾಡಿದರು. ದಾಖಲೆಯೊಂದಿಗೆ ಚಿನ್ನ ಗೆದ್ದರು. ಅವರು ಹೋದ ಸಲದ ಒಲಿಂಪಿಕ್ಸ್‌ನಲ್ಲಿಯೂ ಚಿನ್ನ ಜಯಿಸಿದ್ದರು.
ಹರಿಯಾಣದ ಸೋನಿಪತ್‌ನವರಾದ ಸುಮಿತ್ ಅವರಿಗೆ ಈಗ 26 ವರ್ಷ. 2015ರಲ್ಲಿ ಸಂಭವಿಸಿದ್ದ ಮೋಟಾರ್ ಬೈಕ್ ಅಪಘಾತದಲ್ಲಿ ಎಡ ಮಂಡಿಯ ಕೆಲಗಿನ ಕಾಲು ಕಳೆದುಕೊಂಡರು. ಕೃತಕ ಕಾಲು ಅಳವಡಿಸಿಕೊಂಡಿರುವ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಚಿನ್ನದ ಪದಕ ಜಯಿಸಿದ್ದರು.
ಇದರೊಂದಿಗೆ ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
‘ಅಗ್ರಸ್ಥಾನಕ್ಕೇರುವುದು ಸುಲಭ. ಆದರೆ ಆ ಸ್ಥಾನವನ್ನು ಉಳಿಸಿಕೊಳ್ಳುವುದು ಕಡುಕಷ್ಟ. ಆದರೂ ನಾನು ಛಲ ಬಿಟ್ಟಿಲ್ಲ. ಮುಂಬರುವ ದೊಡ್ಡ ಕೂಟಗಳಲ್ಲಿ ಪದಕ ಬೇಟೆ ಮುಂದುವರಿಸುವೆ. ಮುಂದಿನ ವರ್ಷ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ನಡೆಯಲಿದೆ. 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಚಿನ್ನ ಗೆದ್ದು ಹ್ಯಾಟ್ರಿಕ್ ಮಾಡುವ ಆಸೆ ಇದೆ’ ಎಂದು ಸುಮಿತ್ ಹೇಳಿದ್ದಾರೆ.
ಸಿಹಿ ತ್ಯಜಿಸಿದ್ದ ಅಂಟಿಲ್
ಸುಮಾರು ಒಂದು ವರ್ಷ ಬೆನ್ನಿನ ಗಾಯದಿಂದ ಬಳಲಿದ್ದರೂ ಸುಮಿತ್ ಅಂಟಿಲ್ ಅವರು ಪದಕ ಸಾಧನೆ ಮಾಡುವಲ್ಲಿ ಹಿಂದೆ ಬೀಳಲಿಲ್ಲ. ಎರಡನೇ ಬಾರಿ ಚಿನ್ನ ಗೆಲ್ಲುವ ತಮ್ಮ ಕನಸು ನನಸು ಮಾಡಿಕೊಳ್ಳಲು ಆಹಾರ ಪದ್ಧತಿಯಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದರು. ಸಿಹಿ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ದೇಹ ತೂಕವು ಹೆಚ್ಚದಂತೆ ಕಾಳಜಿ ವಹಿಸಿದ್ದರು. ಬೆನ್ನುನೋವಿನಿಂದಾಗ ಅದೆಷ್ಟೋ ರಾತ್ರಿ ನಿದ್ದೆಯನ್ನೇ ಮಾಡಿರಲಿಲ್ಲ. ಇದರಿಂದಾಗಿ ಅವರ ಸಾಮರ್ಥ್ಯದಲ್ಲಿ ವ್ಯತ್ಯಾಸವಾಗುವ ಅಪಾಯವಿತ್ತು.