ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ ಅಡ್ಡಿಗಳ ನಡುವೆಯೂ ಕಬಡ್ಡಿಯಲ್ಲಿ ಸಾಧನೆ..!

ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲೂ ಮಿಂಚಿದ್ದ ಕುಗ್ರಾಮ ಸವಳಹಳ್ಳ ತಾಂಡಾದ ವಿದ್ಯಾರ್ಥಿನಿಯರು
Last Updated 7 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬಸವನಬಾಗೇವಾಡಿ:ಇಲ್ಲಗಳ ಸರಮಾಲೆಯಲ್ಲೇ ಸವಳಹಳ್ಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು, ಕ್ರೀಡಾಸಕ್ತಿಯಿಂದ ಎಲ್ಲರೂ ಹುಬ್ಬೇರಿಸುವಂಥ ಸಾಧನೆಗೈದಿದ್ದಾರೆ.

ಸತತ ಮೂರು ವರ್ಷ ಕಬಡ್ಡಿ ಪಂದ್ಯಾಟದಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದ ಈ ಶಾಲಾ ವಿದ್ಯಾರ್ಥಿನಿಯರು, 2017–18ನೇ ಸಾಲಿನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕುಗ್ರಾಮದ ಕಬಡ್ಡಿ ಸಾಧನೆಯ ಯಶೋಗಾಥೆಯನ್ನು ಎಲ್ಲೆಡೆ ಪಸರಿಸಿದ್ದಾರೆ.

ಆಟವಾಡಲು ಶಾಲಾ ಆವರಣದಲ್ಲಿ ಸ್ಥಳವಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರಿಲ್ಲ... ಈ ಎಲ್ಲವನ್ನೂ ಮೆಟ್ಟಿ ನಿಂತ ವಿದ್ಯಾರ್ಥಿನಿಯರು, ಛಲದಿಂದ ಸಾಧನೆಗೈದಿದ್ದಾರೆ. ಶಾಲಾ ಆಸುಪಾಸಿನ ಬಿತ್ತನೆಯಾಗದ ಹೊಲದಲ್ಲೇ ಸತತ ಅಭ್ಯಾಸ ನಡೆಸಿ, ಯಶಸ್ಸಿನ ಪಥದಲ್ಲಿ ಹೆಜ್ಜೆ ಹಾಕಿದ್ದಾರೆ.

ಇವರಿಗೆ ಮುಖ್ಯೋಪಾಧ್ಯಾಯ ಎಸ್‌.ಎಂ.ಸಜ್ಜನ, ಹಿರಿಯ ವಿದ್ಯಾರ್ಥಿನಿಯರ ಮಾರ್ಗದರ್ಶನ, ಸಹ ಶಿಕ್ಷಕ ಕೆ.ಪಿ.ಗಾಣಿಗೇರ ಇನ್ನಿತರರು ನಿತ್ಯ ಬೆಳಿಗ್ಗೆ 6ರಿಂದ 8.30, ಸಂಜೆ 4.30ರಿಂದ 6.30ರವರೆಗೆ ತರಬೇತಿ ನೀಡುತ್ತಿದ್ದಾರೆ. ಹಳೆಯ ವಿದ್ಯಾರ್ಥಿ ವಿಜಯಕುಮಾರ ರಜಪೂತ ಸಹ ಸಾಥ್ ನೀಡುತ್ತಿದ್ದಾರೆ.

ವಿಶೇಷ ತರಬೇತಿ:ಶಾಲಾ ವಿದ್ಯಾರ್ಥಿನಿಯರ ಕಬಡ್ಡಿ ತಂಡ ರಾಜ್ಯ ಮಟಕ್ಕೆ ಆಯ್ಕೆಯಾದ ಸಂದರ್ಭ, ಗ್ರಾಮಸ್ಥರು ಹಾಗೂ ಇತರರ ಸಹಕಾರದಿಂದ ಕೊಲ್ಹಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್‌.ಎನ್‌.ಗಿಡ್ಡಪ್ಪಗೋಳ, ಸಂಗಣ್ಣ ಅಗಸರ, ಕಬಡ್ಡಿ ಅಮೆಚೂರ್ ಜಿಲ್ಲಾ ಕಾರ್ಯದರ್ಶಿ ರಮೇಶ ಪಾಟೀಲ 20 ದಿನ ವಿಶೇಷ ತರಬೇತಿ ನೀಡಿದ್ದರು.

ಮಕ್ಕಳಿಗೆ ಉತ್ತಮ ತರಬೇತಿ ಕೊಡಿಸಿದ್ದರಿಂದ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದರು. ತಂಡದ ಇಬ್ಬರು ಸದಸ್ಯರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಭೀಮಾಬಾಯಿ ಲಮಾಣಿ ಹೇಳಿದರು.

‘ಸಾಧಕರಿಗೆ ಕೊರತೆಗಳು ಅಡ್ಡಿಯಾಗಲಾರವು. ನಿರಂತರ ಪ್ರಯತ್ನದಿಂದ ಯಶಸ್ಸು ಕಾಣಲು ಸಾಧ್ಯ ಎಂಬುದಕ್ಕೆ ನಮ್ಮ ಶಾಲೆಯ ವಿದ್ಯಾರ್ಥಿನಿಯರೇ ಸಾಕ್ಷಿ’ ಎನ್ನುತ್ತಾರೆ ಸಹ ಶಿಕ್ಷಕಿ ಗಿರಿಜಾ ಪಾಟೀಲ.

‘ಶಾಲೆ ಆರಂಭಕ್ಕೂ ಮುನ್ನ ಹಾಗೂ ಅವಧಿ ಮುಗಿದ ನಂತರ ವಿದ್ಯಾರ್ಥಿನಿಯರಿಗೆ ಅಭ್ಯಾಸದಲ್ಲಿ ತಲ್ಲೀನರಾಗುವಂತೆ ಉತ್ತೇಜಿಸುತ್ತೇವೆ. ಅವರು ಸಹ ಆಸಕ್ತಿಯಿಂದ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ತರಬೇತುದಾರರು ಆಗಿರುವ ಸಹ ಶಿಕ್ಷಕ ಕೆ.ಪಿ.ಗಾಣಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯಾರ್ಥಿಗಳಲ್ಲಿನ ಕ್ರೀಡಾಸಕ್ತಿಯನ್ನು ಗುರುತಿಸಿ, ಬಿಡುವಿನ ವೇಳೆಯಲ್ಲಿ ಕಬಡ್ಡಿ ಆಟಕ್ಕೆ ಅಗತ್ಯವಿರುವ ವ್ಯಾಯಾಮ ಸೇರಿದಂತೆ, ಆಟದ ನಿಯಮಾವಳಿ ತಿಳಿಸಿಕೊಡುತ್ತಿದ್ದೇನೆ’ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ವಿಜಯಕುಮಾರ ರಜಪೂತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT