ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LSG vs DC | 'ಪ್ಲೇಆಫ್' ಸ್ಪರ್ಧೆಯಲ್ಲಿ ಉಳಿಯಲು ರಾಹುಲ್, ಪಂತ್ ಪಡೆಗಳ ಪೈಪೋಟಿ

Published 13 ಮೇ 2024, 23:30 IST
Last Updated 13 ಮೇ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಕನ್ನಡಿಗ ಕೆ.ಎಲ್. ರಾಹುಲ್ ಅವರ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ.

ರಾಹುಲ್ ಅವರು ಲಖನೌ ತಂಡದ ನಾಯಕತ್ವವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವುದು ಇದಕ್ಕೆ ಕಾರಣ. ಈಚೆಗೆ ಸನ್‌ರೈಸರ್ಸ್ ಹೈದರಾಬಾದ್ ಎದುರು ಪಂದ್ಯದ ಲಖನೌ ಸೋತಿತ್ತು. ಆಗ ಮೈದಾನದಲ್ಲಿಯೇ ತಂಡದ ಮಾಲೀಕರು ರಾಹುಲ್ ಅವರನ್ನು ‘ವಾಗ್ದಂಡನೆ‘ಗೊಳಪಡಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿತ್ತು. ಆದ್ದರಿಂದಲೇ ರಾಹುಲ್ ಅವರು ತಂಡವನ್ನು ತೊರೆಯುವ ಕುರಿತ ಮಾತುಗಳು ಕೇಳಿಬರುತ್ತಿವೆ.

ಇದೀಗ ಅವರ ಮುಂದೆ ತಮ್ಮ ಸಾಯಕತ್ವ ಮತ್ತು ಬ್ಯಾಟಿಂಗ್ ಸಾಮರ್ಥ್ಯವನ್ನು ತೋರಿಸುವ ಅವಕಾಶಗಳಿವೆ. ಲೀಗ್ ಹಂತದಲ್ಲಿ ತನ್ನ ಪಾಲಿನ ಎರಡೂ ಪಂದ್ಯಗಳನ್ನು ಗೆದ್ದರೆ ಲಖನೌ ತಂಡಕ್ಕೆ ಪ್ಲೇಆಫ್ ಪ್ರವೇಶ ಸುಗಮವಾಗಲಿದೆ. ಅದರಲ್ಲಿ ಒಂದು ಪಂದ್ಯವು ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ಎದುರು ನಡೆಯಲಿದೆ. ಕೊನೆಯ ಲೀಗ್ ಪಂದ್ಯವಾಡುತ್ತಿರುವ ಡೆಲ್ಲಿ ತಂಡಕ್ಕೂ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವೇ ಆಗಿದೆ.

ರಾಹುಲ್ ಅವರು ಇತ್ತೀಚೆಗೆ ಟಿ20 ಮಾದರಿಯಲ್ಲಿ ಉತ್ತಮ ಲಯದಲ್ಲಿ ಇಲ್ಲ. ಅದರಿಂದಾಗಿಯೇ ಅವರು ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿಯೂ ಸ್ಥಾನ ತಪ್ಪಿಸಿಕೊಂಡಿದ್ದಾರೆನ್ನಲಾಗಿದೆ. ಅಲ್ಲದೇ ಐಪಿಎಲ್‌ನಲ್ಲಿ 12 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಇಷ್ಟೇ ಅಂಕ ಹೊಂದಿರುವ ಆರ್‌ಸಿಬಿ ಮತ್ತು ಡೆಲ್ಲಿ ಕ್ರಮವಾಗಿ ಐದು ಹಾಗೂ ಆರನೇ ಸ್ಥಾನದಲ್ಲಿವೆ.

ಕಳೆದ ಪಂದ್ಯದಿಂದ ಇಲ್ಲಿಯವರೆಗೆ ಐದು ದಿನಗಳ ಬಿಡುವು ಲಖನೌ ತಂಡಕ್ಕೆ ಸಿಕ್ಕಿತ್ತು. ಈ ಅವಧಿಯಲ್ಲಿ ತಂಡವು ತನ್ನ ಲೋಪಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿದೆ.

ಕ್ವಿಂಟನ್ ಡಿ ಕಾಕ್ ಹಾಗೂ  ರಾಹುಲ್ ಅವರು ಪವರ್‌ಪ್ಲೇನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ತಂಡಕ್ಕೆ ಉತ್ತಮ ಆರಂಭ ದೊರೆಯುತ್ತದೆ.  ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೊಯಿನಿಸ್ ಹಾಗೂ ನಿಕೊಲಸ್ ಪೂರನ್ ಅವರು ಒತ್ತಡರಹಿತವಾಗಿ ತಮ್ಮ ಬೀಸಾಟವಾಡಬಹುದು.

ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಅಲ್ಪಮೊತ್ತಕ್ಕೆ ಕುಸಿಯಲಿದ್ದ ತಂಡವನ್ನು ಪೂರನ್ ಮತ್ತು ಆಯುಷ್ ಬಡೋನಿ ಅವರೇ ಪಾರು ಮಾಡಿದ್ದರು. ಆದರೆ ಬೌಲಿಂಗ್ ವಿಭಾಗವು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ವೇಗಿ ಮಯಂಕ್ ಯಾದವ್ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್ ಪರಿಣಾಮಕಾರಿಯಾಗಿಲ್ಲ. ಅದರಿಂದಾಗಿಯೇ ಸನ್‌ರೈಸರ್ಸ್ ಒಂದೂ ವಿಕೆಟ್ ನಷ್ಟವಿಲ್ಲದೇ ಗುರಿ ಸಾಧಿಸಿತು.

ಬೌಲರ್‌ಗಳಾದ ನವೀನ್ ಉಲ್ ಹಕ್, ಕೃಣಾಲ್ ಪಾಂಡ್ಯ, ರವಿ ಬಿಷ್ಣೋಯಿ  ಅವರ ಮುಂದೆ ಡೆಲ್ಲಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲಿದೆ.

ಅಮಾನತು ಶಿಕ್ಷೆಯಿಂದಾಗಿ ಆರ್‌ಸಿಬಿ ಎದುರು ಕಣಕ್ಕಿಳಿಯದ ರಿಷಭ್ ಪಂತ್ ಅವರು ಮತ್ತೆ ತಂಡಕ್ಕೆ ಮರಳುವರು. ಆರ್‌ಸಿಬಿ ಎದುರು ಕೆಟ್ಟ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ವೈಫಲ್ಯದಿಂದ ಡೆಲ್ಲಿ ಸೋತಿತು. ಜೇಕ್ ಫ್ರೇಸರ್ ಮೆಕ್‌ಗುರ್ಕ್, ಶಾಯ್ ಹೋಪ್, ಟ್ರಿಸ್ಟನ್ ಸ್ಟಬ್ಸ್‌ ಹಾಗೂ ಡೇವಿಡ್ ವಾರ್ನರ್ ಅವರು ಅಬ್ಬರಿಸಿದರೆ ಡೆಲ್ಲಿ ಗೆಲುವಿನ ಕನಸಿಗೆ ಬಲ ಬರಲಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT