ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಪ್ರಕಾಶ್ ಪಡುಕೋಣೆ ಚೇತರಿಕೆ

Last Updated 4 ಮೇ 2021, 11:31 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅವರು ಚೇತರಿಸಿಕೊಳ್ಳುತ್ತಿದ್ದು, ಎರಡು ಅಥವಾ ಮೂರು ದಿನಗಳಲ್ಲಿ ಮನೆಗೆ ಮರಳುವ ನಿರೀಕ್ಷೆಯಿದೆ.

‘10 ದಿನಗಳ ಹಿಂದೆ ಪ್ರಕಾಶ್, ಅವರ ಪತ್ನಿ ಉಜ್ಜಲಾ ಹಾಗೂ ಪುತ್ರಿ ಅನೀಶಾ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಪರೀಕ್ಷೆ ಮಾಡಿಸಿಕೊಂಡಾಗ ಕೋವಿಡ್ ಇರುವುದು ಖಚಿತಪಟ್ಟಿತ್ತು. ಅವರೆಲ್ಲರೂ ಪ್ರತ್ಯೇಕವಾಸದಲ್ಲಿದ್ದರು. ಆದರೆ ಪ್ರಕಾಶ್ ಅವರಿಗೆ ಜ್ವರದ ತೀವ್ರತೆ ಕಡಿಮೆಯಾಗಿರಲಿಲ್ಲ. ಹೀಗಾಗಿ ಅವರು ಹೋದ ಶನಿವಾರ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು‘ ಎಂದು ಪ್ರಕಾಶ್ ಅವರ ಮಿತ್ರ ಹಾಗೂ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ (ಪಿಪಿಬಿಎ) ನಿರ್ದೇಶಕ ವಿಮಲ್ ಕುಮಾರ್ ಹೇಳಿದ್ದಾರೆ.

‘ಪ್ರಕಾಶ್ ಈಗ ಆರೋಗ್ಯವಾಗಿದ್ದಾರೆ. ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ. ಅವರ ಪತ್ನಿ ಮತ್ತು ಪುತ್ರಿ ಮನೆಯಲ್ಲೇ ಇದ್ದಾರೆ‘ ಎಂದು ವಿಮಲ್ ಹೇಳಿದರು.

65 ವರ್ಷದ ಪ್ರಕಾಶ್ ಅವರು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಗೆದ್ದ ಭಾರತದ ಮೊದಲ ಆಟಗಾರ ಎನಿಸಿಕೊಂಡವರು. 1980ರಲ್ಲಿ ಅವರು ಈ ಸಾಧನೆ ಮಾಡಿದ್ದರು.

1970–80ರ ದಶಕದಲ್ಲಿ ವಿಶ್ವ ಬ್ಯಾಡ್ಮಿಂಟನ್‌ನಲ್ಲಿಪ್ರಕಾಶ್ ಪಡುಕೋಣೆಯವರದು ಪ್ರಮುಖ ಹೆಸರು. ಆ ವೇಳೆ ಅವರು ಭಾರತ ಕ್ರೀಡಾ ಕ್ಷೇತ್ರದಲ್ಲಿ ಮಾದರಿ ಎನಿಸಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕವೊಂದನ್ನು ಗೆದ್ದ ಭಾರತದ ಮೊದಲ ಆಟಗಾರ ಎಂಬ ಶ್ರೇಯವೂ ಪ್ರಕಾಶ್ ಅವರದ್ದು. 1983ರಲ್ಲಿ ಡೆನ್ಮಾರ್ಕ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಂಚಿನ ಪದಕ ವಿಜೇತರಾಗಿದ್ದರು.

ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ (ಬಿಎಐ) ಅಧ್ಯಕ್ಷ ಮತ್ತು ಭಾರತ ತಂಡಕ್ಕೆ ಕೋಚ್ ಆಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT