ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಲಿಯಾನ್‌ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಿಯಾಂಶು ರಾಜಾವತ್‌ಗೆ ಕಿರೀಟ

Last Updated 10 ಏಪ್ರಿಲ್ 2023, 2:50 IST
ಅಕ್ಷರ ಗಾತ್ರ

ಆರ್ಲಿಯಾನ್‌, ಫ್ರಾನ್ಸ್‌: ರೋಚಕ ಹಣಾಹಣಿಯಲ್ಲಿ ಜಯ ಸಾಧಿಸಿದ ಭಾರತದ ಪ್ರಿಯಾಂಶು ರಾಜಾವತ್ ಅವರು ಆರ್ಲಿಯಾನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಭಾನುವಾರ ನಡೆದ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಪ್ರಿಯಾಂಶು 21-15, 19-21, 21-16ರಿಂದ ಡೆನ್ಮಾರ್ಕ್‌ನ ಮ್ಯಾಗ್ನಸ್‌ ಜೋಹಾನ್‌ಸನ್‌ ಅವರನ್ನು ಮಣಿಸಿದರು. ಇದರೊಂದಿಗೆ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಸೂಪರ್‌ 300 ಮಟ್ಟದಲ್ಲಿ ಮೊದಲ ಸಲ ಪ್ರಶಸ್ತಿ ಗೆದ್ದ ಸಂಭ್ರಮ ಅವರದಾಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 49ನೇ ಸ್ಥಾನದಲ್ಲಿರುವ ಮ್ಯಾಗ್ನಸ್ ಅವರಿಗೆ 68 ನಿಮಿಷಗಳಲ್ಲಿ ಸೋಲಿನ ರುಚಿ ತೋರಿಸಿದ 58ನೇ ಕ್ರಮಾಂಕದ ಪ್ರಿಯಾಂಶು ಅವರಿಗೆ ಇದು ವೃತ್ತಿ ಜೀವನದ ದೊಡ್ಡ ಪ್ರಶಸ್ತಿಯೂ ಆಗಿದೆ.

ಇಬ್ಬರೂ ಆಟಗಾರರು ಅರ್ಹತಾ ಸುತ್ತಿನಲ್ಲಿ ಗೆದ್ದು ಟೂರ್ನಿಯ ಮುಖ್ಯ ಸುತ್ತು ಪ್ರವೇಶಿಸಿದ್ದರು.

ಜಿದ್ದಾಜಿದ್ದಿನ ಹಣಾಹಣಿ: 21 ವರ್ಷದ ಉಭಯ ಆಟಗಾರರು ಮೊದಲ ಬಾರಿ ಮುಖಾಮುಖಿಯಾಗಿದ್ದ ಈ ಪಂದ್ಯದಲ್ಲಿ ತೀವ್ರ ಸೆಣಸಾಟದಲ್ಲಿ ಭಾಗಿಯಾದರು. ಟೂರ್ನಿಯುದ್ದಕ್ಕೂ ಆಕ್ರಮಣಕಾರಿ ಆಟದ ಮೂಲಕ ಗಮನಸೆಳೆದಿದ್ದ ಪ್ರಿಯಾಂಶು ಇಲ್ಲಿಯೂ ಅದೇ ರೀತಿಯ ಆಟದಿಂದ ಎದುರಾಳಿಯನ್ನು ಕಂಗೆಡಿಸುವ ಪ್ರಯತ್ನ ನಡೆಸಿದರು.

ಆಕ್ರಮಣಕಾರಿ ಹೊಡೆತಗಳ ಮೂಲಕ ಮೊದಲ ಗೇಮ್‌ನ ಆರಂಭದಲ್ಲಿ 6–5ರಿಂದ ಮುನ್ನಡೆ ಸಾಧಿಸಿದರು. ಮ್ಯಾಗ್ನಸ್‌ ಅವರ ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಗೆ ಪ್ರತ್ಯುತ್ತರ ನೀಡಿ ವಿರಾಮದ ವೇಳೆಗೆ ಮೂರು ಪಾಯಿಂಟ್ಸ್‌ನಿಂದ ರಾಜಾವತ್ ಮುನ್ನಡೆ ಕಾಯ್ದುಕೊಂಡರು.

ವಿರಾಮದ ನಂತರ ಪ್ರಿಯಾಂಶು ಅವರ ಹಿಡಿತ ಬಿಗಿಗೊಂಡಿತು. 18–11ರಿಂದ ಮುನ್ನಡೆದ ಅವರು ಅದೇ ಲಯದೊಂದಿಗೆ ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನಲ್ಲಿ ಮ್ಯಾಗ್ನಸ್‌ ಅವರು ಡಿಫೆನ್ಸ್ ಆಟಕ್ಕೆ ಒತ್ತುಕೊಟ್ಟರು. ಆರಂಭದಲ್ಲಿ ಅವರಿಗೆ 6–3ರ ಮೇಲುಗೈ ಸಿಕ್ಕಿತು. ಭಾರತದ ಆಟಗಾರ ಪದೇ ಪದೇ ನೆಟ್‌ಗೆ ಚೆಂಡು ಹೊಡೆದರು. ಇದರ ಲಾಭ ಪಡೆದ ಮ್ಯಾಗ್ನಸ್‌ 14–9ರಿಂದ ಮುನ್ನಡೆ ಗಳಿಸಿದರು. ನಂತರ ಪ್ರಿಯಾಂಶು ಅವರ ಪುಟಿದೇಳುವ ಪ್ರಯತ್ನವನ್ನು ವಿಫಲಗೊಳಿಸಿ ಗೇಮ್ ತಮ್ಮದಾಗಿಸಿಕೊಂಡರು.

ಮೂರನೇ ಗೇಮ್‌ ಮತ್ತಷ್ಟು ರೋಚಕತೆ ಪಡೆದು ಕೊಂಡಿತು. ಪ್ರಿಯಾಂಶು ಆರಂಭದಲ್ಲಿ 5–0ಯಿಂದ ಮುನ್ನಡೆದರು. ಬಳಿಕ ಡೆನ್ಮಾರ್ಕ್ ಆಟಗಾರ 9–9ರಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಬಳಿಕ ದೀರ್ಘ ರ‍್ಯಾಲಿಗಳಲ್ಲಿ ಎದುರಾಳಿಯನ್ನು ಹಿಂದಿಕ್ಕಿದ ಪ್ರಿಯಾಂಶು ಗೇಮ್‌ ಹಾಗೂ ಪಂದ್ಯ ಗೆದ್ದು ಬೀಗಿದರು.

ಟೂರ್ನಿಯಲ್ಲಿ ಪ್ರಿಯಾಂಶು ಅವರು ಫೋರ್‌ಹ್ಯಾಂಡ್‌ ಕ್ರಾಸ್‌ಕೋರ್ಟ್‌ ಜಂಪ್‌ ಮೂಲಕ ಸ್ಮ್ಯಾಷ್‌ಗಳನ್ನು ಪ್ರಯೋಗಿಸಿದ್ದು ಪ್ರೇಕ್ಷಕರ ಗಮನ ಸೆಳೆಯಿತು. ಇದು ಅವರ ನೆಚ್ಚಿನ ಹೊಡೆತ ಕೂಡ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT