ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಇಲಾಖೆಗಳ ಉದ್ಯೋಗಗಳಲ್ಲಿ ಕ್ರೀಡಾ ಮೀಸಲಾತಿ: ಬೊಮ್ಮಾಯಿ ಭರವಸೆ

Last Updated 29 ಆಗಸ್ಟ್ 2021, 16:31 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇಕಡಾ ಎರಡರಷ್ಟು ಕ್ರೀಡಾ ಮೀಸಲಾತಿ ನೀಡಿರುವ ಮಾದರಿಯನ್ನು ಉಳಿದ ಸರ್ಕಾರಿ ಇಲಾಖೆಗಳಲ್ಲಿ ಜಾರಿ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಶ್ವಾಸನೆ ನೀಡಿದರು.

ಭಾನುವಾರ ಕರ್ನಾಟಕ ಒಲಿಂಪಿಕ್ ಸಂಸ್ಥೆಯು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಒಲಿಂಪಿಯನ್ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾನು ಗೃಹ ಸಚಿವನಾಗಿದ್ದಾಗ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 2ರಷ್ಟು ಮೀಸಲಾತಿಗೆ ಕ್ರಮ ಕೈಗೊಂಡಿದ್ದೆ. ಈಗ ರಾಜ್ಯ ಸರ್ಕಾರದ ಇತರೆ ಇಲಾಖೆಗಳಲ್ಲಿ ನೇಮಕ‌ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು. ರಾಜ್ಯದಲ್ಲಿ ಕ್ರೀಡಾಭಿವೃದ್ಧಿಗೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಇನ್ನೂ ಕೆಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಒಲಿಂಪಿಕ್ಸ್‌ನಲ್ಲಿ ಕನ್ನಡಿಗರ ಪ್ರಾತಿನಿಧ್ಯ ಯಾಕಿರಬಾರದು ಎಂಬ ಘೋಷವಾಕ್ಯದಡಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ. ಮುಂದಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದಲ್ಲಿ 75 ಅಥ್ಲೀಟ್‌ಗಳನ್ನು ದತ್ತು ಪಡೆದು ತರಬೇತಿ ನೀಡುವ ಯೋಜನೆ ಘೋಷಿಸಿದ್ದೇವೆ. ಇದಕ್ಕಾಗಿ ಕ್ರೀಡಾ ಸಚಿವರ ನೇತೃತ್ವದ ಸಮಿತಿ ಕಾರ್ಯಪ್ರವೃತ್ತವಾಗಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಖೇಲೊ ಇಂಡಿಯಾ ಘೋಷಿಸಿದ್ದಾರೆ. ಇದೊಂದು ಅರ್ಥಪೂರ್ಣ ಯೋಜನೆಯಾಗಿದೆ. ಯುವಜನತೆಯನ್ನು ಕ್ರೀಡೆ ಮತ್ತು ಆರೋಗ್ಯ ರಕ್ಷಣೆಯತ್ತ ಸೆಳೆದುಕೊಂಡಿದೆ. ಜೀವನದಲ್ಲಿ ವ್ಯಕ್ತಿತ್ವ, ಶಿಸ್ತು ಮತ್ತು ಆರೋಗ್ಯವನ್ನು ನೀಡುವ ಕ್ರೀಡೆಗಳು ಮುಖ್ಯ. ಇದು ಪ್ರಧಾನಿಗಳ ದೂರದೃಷ್ಟಿಯ ಫಲವಾಗಿದೆ. ಖೇಲ್‌ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನಚಂದ್ ಅವರ ಹೆಸರು ನೀಡುವ ಮೂಲಕ ದಿಗ್ಗಜ ಹಾಕಿ ಆಟಗಾರನನ್ನೂ ಗೌರವಿಸಿದ್ದಾರೆ’ ಎಂದು ಬೊಮ್ಮಾಯಿ ಬಣ್ಣಿಸಿದರು.

‘ರಾಜ್ಯದಲ್ಲಿ ಕ್ರೀಡಾ ಬಜೆಟ್‌ನಲ್ಲಿ ಅನುದಾನ ಹೆಚ್ಚಳ ಮಾಡುವ ಬೇಡಿಕೆಗೆ ಸ್ಪಂದಿಸಲಾಗುವುದು. ಮಾರ್ಚ್‌ನಲ್ಲಿ ನಡೆಯುವ ಆಯವ್ಯಯ ಪತ್ರ ಮಂಡನೆಯಲ್ಲಿ ಅನುದಾನ ಘೋಷಿಸಲಾಗುವುದು. ವಲಯವಾರು ಅಂತರರಾಷ್ಟ್ರೀಯ ಕ್ರೀಡಾ ಕಾಂಪ್ಲೆಕ್ಸ್‌ ನಿರ್ಮಿಸುವುದು. ಮುಖ್ಯವಾಗಿ ತರಬೇತುದಾರರನ್ನು ನೇಮಕ ಮಾಡುವ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೊತ್, ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್, ಪ್ರಧಾನ ಕಾರ್ಯದರ್ಶಿ ಅನಂತರಾಜು, ಕ್ರೀಡಾ ಸಚಿವ ನಾರಾಯಣಗೌಡ ಹಾಜರಿದ್ದರು.

ಈ ಸಂದರ್ಭದಲ್ಲಿ ಶ್ರೀಹರಿ ನಟರಾಜ್ (ಟೋಕಿಯೊ ಒಲಿಂಪಿಕ್ಸ್ ಈಜು), ಬಿ.ಎಸ್. ಅಂಕಿತಾ (ಮಹಿಳಾ ಹಾಕಿ ತಂಡದ ಸಹಾಯಕ ಕೋಚ್), ಫವಾದ್ ಮಿರ್ಜಾ (ಈಕ್ವೆಸ್ಟ್ರಿಯನ್), ಅದಿತಿ ಅಶೋಕ್ (ಗಾಲ್ಫ್‌) ಅವರಿಗೆ ತಲಾ ₹ 2 ಲಕ್ಷ ರೂಪಾಯಿ ಚೆಕ್ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಫವಾದ್ ಮಿರ್ಜಾ ಮತ್ತು ಅದಿತಿ ಅಶೋಕ್ ಅವರು ಖುದ್ದು ಹಾಜರಿರಲಿಲ್ಲ. ಫವಾದ್ ಪರವಾಗಿ ಅವರ ತಂದೆ ಚೆಕ್ ಸ್ವೀಕರಿಸಿದರು.

ಧ್ಯಾನಚಂದ್ ಪ್ರಶಸ್ತಿ ಪುರಸ್ಕೃತ ಅಥ್ಲೀಟ್ ಉದಯ ಕೆ ಪ್ರಭು, ಒಲಿಂಪಿಯನ್ ಹಾಕಿಪಟುಗಳಾದ ಅಲನ್, ಶೊಫೀಲ್ಡ್, ರವಿ ನಾಯ್ಕರ್, ಸಾಬು ವರ್ಕಿ, ಒಲಿಂಪಿಯನ್ ಜುಡೊಕಾ ನಜೀಬ್ ಆಗಾ, ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಿ. ಹೊನ್ನಪ್ಪಗೌಡ, ಕಬಡ್ಡಿ ಮತ್ತು ಆಟಗಾರ್ತಿ ವಿ. ತೇಜಸ್ವಿನಿಬಾಯಿ(ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ) ಅವರನ್ನು ಗೌರವಿಸಲಾಯಿತು.

ಜೂನಿಯರ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪದಕವಿಜೇತ ಅಥ್ಲೀಟ್ ಪ್ರಿಯಾ ಮೋಹನ್ ಅವರಿಗೆ ಉದಯೋನ್ಮುಖ ಅಥ್ಲೀಟ್‌ ಗೌರವ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT