ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌: ಚಿನ್ನ ಗೆದ್ದ ರಾಹಿ ಸರ್ನೋಬತ್‌

ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ಧತೆ
Last Updated 28 ಜೂನ್ 2021, 12:52 IST
ಅಕ್ಷರ ಗಾತ್ರ

ಒಸಿಜೆಕ್‌, ಕ್ರೊವೇಷ್ಯಾ: ಅಮೋಘ ಲಯದಲ್ಲಿರುವ ಭಾರತದ ರಾಹಿ ಸರ್ನೋಬತ್‌ ಅವರು ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳೆಯರ 25 ಮೀಟರ್ಸ್‌ ಪಿಸ್ತೂಲ್ ವಿಭಾಗದಲ್ಲಿ ಅವರು ಸೋಮವಾರ ಅಗ್ರಸ್ಥಾನ ಗಳಿಸಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಯುವ ಶೂಟರ್‌ ಮನು ಭಾಕರ್‌ ಏಳನೇ ಸ್ಥಾನಕ್ಕೆ ಸಮಾಧಾನಪಡಬೇಕಾಯಿತು.

ಈ ಟೂರ್ನಿಯಲ್ಲಿ ಭಾರತ ಗೆದ್ದ ಮೊದಲ ಚಿನ್ನದ ಪದಕ ಇದು. ಎರಡು ಬೆಳ್ಳಿ ಮತ್ತು ಒಂದು ಕಂಚು ಈಗಾಗಲೇ ತಂಡದ ಮಡಿಲು ಸೇರಿವೆ.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ 30 ವರ್ಷದ ರಾಹಿ, ಫೈನಲ್‌ನಲ್ಲಿ 39 ಸ್ಕೋರ್ ದಾಖಲಿಸಿದರು. ಅರ್ಹತಾ ಸುತ್ತಿನಲ್ಲಿ 591 ಸ್ಕೋರ್ ಗಳಿಸಿ ಎರಡನೇ ಸ್ಥಾನ ಪಡೆದಿದ್ದರು.

ಬೆಳ್ಳಿ ಗೆದ್ದ ಫ್ರಾನ್ಸ್‌ನ ಮತಿಲ್ದೆ ಲ್ಯಾಮೊಲ್ಲೆ ಫೈನಲ್‌ನಲ್ಲಿ ದಾಖಲಿಸಿದ ಸ್ಕೋರ್ 31.

ಮನು ಭಾಕರ್ ಫೈನಲ್‌ನಲ್ಲಿ ಕೇವಲ 11 ಸ್ಕೋರ್ ದಾಖಲಿಸಿದ್ದರು. ಶೂಟ್ ಆಫ್‌ನಲ್ಲಿ ಅವರು ಬಲ್ಗೇರಿಯಾದ ವಿಕ್ಟೋರಿಯಾ ಚೈಕಾ ಎದುರು ಸೋಲನುಭವಿಸಿದರು.

ಸೌರಭ್‌ ಚೌಧರಿ ಹಾಗೂ ಮನು ಜೊತೆಯಾಗಿ 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ಅಲ್ಲದೆ ಮನು, ರಾಹಿ ಹಾಗೂ ಯಶಸ್ವಿನಿ ದೇಸ್ವಾಲ್ ಅವರಿದ್ದ ಮಹಿಳಾ ತಂಡ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ತನ್ನದಾಗಿಸಿಕೊಂಡಿತ್ತು.

ಇದಕ್ಕೂ ಮೊದಲು ಸೌರಭ್ ಚೌಧರಿ ಪುರುಷರ 10 ಮೀಟರ್ಸ್ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚು ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT