ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಣ್ಣೆ ವರಸೆಯಲ್ಲಿ ಕಲಘಟಗಿ ಕಲಿಗಳ ಛಾಪು

Last Updated 8 ಜುಲೈ 2018, 20:09 IST
ಅಕ್ಷರ ಗಾತ್ರ

ಸಿಲಂಬಂ (ದೊಣ್ಣೆವರಸೆ) ಎಂದರೆ ತಮಿಳುನಾಡಿನ ಜಾನಪದ ಕ್ರೀಡೆ. ಈ ಸಮರ ಕಲೆಯಲ್ಲಿ ತಮಿಳುನಾಡಿನ ಪಟುಗಳದ್ದೇ ಪಾರಮ್ಯ ಇದೆ. ಇದೀಗ ಕರ್ನಾಟಕದ ಇಬ್ಬರು ಹುಡುಗರು ಕೂಡ ಈ ಕ್ರೀಡೆಯಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಸಿದ್ಧರಾಗಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಬಸವರಾಜ ರಾಯಕೊಪ್ಪ ಹಾಗೂ ಪುಂಡಲೀಕ ಗಾಯಕವಾಡ ದಕ್ಷಿಣ ಏಷ್ಯಾ ವಲಯದ ದೊಣ್ಣೆವರಸೆ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ. ಈ ಕ್ರೀಡಾಕೂಟ ಜುಲೈ 13ರಿಂದ 15ರ ವರೆಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆಯಲಿದೆ.

ದೊಣ್ಣೆವರಸೆ ಸ್ಪರ್ಧೆಗೆ ರಾಷ್ಟ್ರೀಯ ತಂಡದ ಆಯ್ಕೆಗಾಗಿ ಇತ್ತೀಚಿಗೆ ಚೆನ್ನೈನಲ್ಲಿ ರಾಷ್ಟ್ರಮಟ್ಟದ ಟೂರ್ನಿ ಮತ್ತು ಟ್ರಯಲ್ಸ್‌ ನಡೆದಿತ್ತು. ಆಗ ವಿವಿಧ ರಾಜ್ಯಗಳ ಸಾವಿರಾರು ಸ್ಪರ್ಧಿಗಳು ಭಾಗವಹಿಸಿದ್ದರು. ಕಠಿಣ ಪೈಪೋಟಿ, ತಂಡದಲ್ಲಿ ಸ್ಥಾನ ಗಿಟ್ಟಿಸಲು ನಡೆದ ಚುರುಕಿನ ಹೋರಾಟದ ನಡುವೆಯೂ ಬಸವರಾಜ ಮತ್ತು ಪುಂಡಲೀಕ ಅವರು ಗಮನ ಸೆಳೆದಿದ್ದಾರೆ.

ಈ ಕ್ರೀಡೆಯಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡಬೇಕು ಎನ್ನುವ ಗುರಿ ಅವರದ್ದು. ಆರ್ಥಿಕವಾಗಿ ಸಬಲರಲ್ಲದೇ ಇದ್ದರೂ ಈ ಸಮಸ್ಯೆ ಅವರ ಸಾಧನೆಗೆ ಅಡ್ಡಿಯಾಗಿಲ್ಲ. ನಿತ್ಯ ಬೆಳಿಗ್ಗೆ 5ರಿಂದ ಎರಡು ಗಂಟೆ ದೊಣ್ಣೆವರಸೆ ಅಭ್ಯಾಸ ಮಾಡುವ ಪುಂಡಲೀಕ ನಂತರ ಗೌಂಡಿಗಳ (ಕಟ್ಟಡ ಕಾರ್ಮಿಕರು) ಕೈಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಬಸವರಾಜ, ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಬ್ಬರೇ ಆಟಗಾರರು: ರಾಷ್ಟ್ರೀಯ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದು ಇವರಿಬ್ಬರು ಮಾತ್ರ. ಮೂರು ದಿನ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ಭಾರತ, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳ ತಂಡಗಳು ಪಾಲ್ಗೊಳ್ಳಲಿವೆ. ಕೈಯಲ್ಲಿನ ಲಾಠಿ ತಿರುಗಿಸುವ ಮೂಲಕ ವಿವಿಧ ಕಸರತ್ತುಗಳನ್ನು ಪ್ರದರ್ಶಿಸುವ ಸವಾಲು ಸ್ಪರ್ಧಿಗಳ ಮುಂದಿರುತ್ತದೆ.


ಬಸವರಾಜ ರಾಯಕೊಪ್ಪ

ಏನಿದು ಕ್ರೀಡೆ?
ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಖ್ಯಾತಿ ಪಡೆದಿರುವ ದೊಣ್ಣೆವರಸೆ ಕರ್ನಾಟಕದಲ್ಲಿ ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಹಲವು ಸ್ಪರ್ಧಿಗಳಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕೆಲವರು ಶಾಲಾಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ.

ಸಿಂಗಲ್‌, ಡಬಲ್‌, ಸ್ಟಿಕ್‌ ಫೈಟ್‌, ಭರ್ಚಿ, ತಲವಾರ, ಸಿಂಗಲ್‌ ಸ್ಟಿಕ್‌, ಡಬಲ್‌ ಸ್ಟಿಕ್‌ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಬಸವರಾಜ ಮತ್ತು ಪುಂಡಲೀಕ ಇವರಿಬ್ಬರೂ ಸಿಂಗಲ್‌ ಸ್ಟಿಕ್‌ ಮತ್ತು ಸ್ಟಿಕ್‌ ಫೈಟ್‌ ಸ್ಪರ್ಧೆಗಳಲ್ಲಿ ಸವಾಲನ್ನು ಎದುರಿಸಬೇಕು. ವಿವಿಧ ವಯೋಮಾನದವರಿಗೆ ಪ್ರತ್ಯೇಕ ಸ್ಪರ್ಧೆಗಳು ಜರುಗುತ್ತವೆ.

ತಮಿಳುನಾಡಿನಲ್ಲಿ ಈ ಕ್ರೀಡೆ ಹೊಂದಿದ ಪ್ರಭಾವದಿಂದ ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಉತ್ತರಾಂಚಲದಲ್ಲಿಯೂ ನಿಧಾನವಾಗಿ ಬೆಳೆಯುತ್ತಿದೆ. ಕೊಪ್ಪಳದಲ್ಲಿ ನಡೆದಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪುಂಡಲೀಕ ಸಿಂಗಲ್‌ ಸ್ಪಿಕ್‌ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಎರಡು ಸಲ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಭಾಗವಹಿಸಿದ್ದರು. ಹಲವು ಸ್ಪರ್ಧೆಗಳಲ್ಲಿ ಒಟ್ಟು ಎರಡು ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಜಯಿಸಿದ್ದಾರೆ.

‘ಈ ಕ್ರೀಡೆಯ ನಿಯಮಗಳು ಏನು, ಹೇಗೆ ಆಡಬೇಕು ಎನ್ನುವುದರ ಬಗ್ಗೆ ಮೊದಲು ನನಗೆ ಗೊತ್ತಿರಲಿಲ್ಲ. ಗಳಗಿಹುಲಕೊಪ್ಪದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಜಶೇಖರ ಚವ್ಹಾಣ್‌ ಸರ್‌ ಇದರ ಬಗ್ಗೆ ಹೇಳಿಕೊಟ್ಟರು. ಪಾಲ್ಗೊಳ್ಳುವ ಮೊದಲು ಸ್ಪರ್ಧೆಗಳನ್ನು ನೋಡು ಎಂದು ಹೇಳಿದ್ದರು. ಇದರಿಂದ ಮುಂದೆ ಸ್ಪರ್ಧೆ ಎದುರಿಸಲು ಸಾಧ್ಯವಾಯಿತು. ಈಗ ದಕ್ಷಿಣ ಏಷ್ಯಾ ವಲಯದ ಟೂರ್ನಿಗೆ ಆಯ್ಕೆಯಾಗಿದ್ದೇನೆ. ಇದಕ್ಕಿಂತ ಖುಷಿ ಇನ್ನೇನಿದೆ’ ಎಂದು ಪುಂಡಲೀಕ ಸಂತಸ ಹಂಚಿಕೊಂಡರು. ಪುಂಡಲೀಕ ಸದ್ಯ ಧಾರವಾಡದ ಶಿವಾಜಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾರೆ.

‘ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೋದಾಗ ತಮಿಳುನಾಡಿನ ಸ್ಪರ್ಧಿಗಳು ಪರಿಚಯವಾದರು. ಅಲ್ಲಿ ಈ ಕ್ರೀಡೆ ಹೆಚ್ಚು ಖ್ಯಾತಿ ಹೊಂದಿದೆ. ನಮ್ಮಲ್ಲಿ ಈಗ ದೊಣ್ಣೆವರಸೆ ಬೆಳೆಯಬೇಕಾಗಿದೆ’ ಎಂದರು.

‘ಪಿಯುಸಿ ಪ್ರಥಮ ವರ್ಷದಲ್ಲಿದ್ದಾಗ ಆಟದ ನಿಯಮಗಳ ಬಗ್ಗೆ ತಿಳಿದುಕೊಂಡೆ, ಕೊಪ್ಪಳದಲ್ಲಿ ನಡೆದ ಟೂರ್ನಿಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದೆ. ನಂತರ ದೆಹಲಿ ಮತ್ತು ತಮಿಳುನಾಡಿನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಲಭಿಸಿತು. ಪದಕ ಗೆಲ್ಲಲು ಕೂಡ ಸಾಧ್ಯವಾಯಿತು’ ಎಂದು ಬಸವರಾಜ ಸಂತೋಷ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT