ಗುರುಗ್ರಾಮ: ಆರು ಬಾರಿಯ ಚಾಂಪಿಯನ್ ಸೂರ್ಯಶೇಖರ ಗಂಗೂಲಿ, 61ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನ 9ನೇ ಸುತ್ತಿನಲ್ಲಿ ಭಾನುವಾರ ಮೂರನೇ ಶ್ರೇಯಾಂಕದ ಎಸ್.ಪಿ.ಸೇತುರಾಮನ್ ಜೊತೆ ‘ಡ್ರಾ’ ಮಾಡಿಕೊಂಡರು. ಆ ಮೂಲಕ ಒಟ್ಟು ಎಂಟು ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.
ಈ ಟೂರ್ನಿಯಲ್ಲಿ ಇನ್ನು ಎರಡು ಸುತ್ತಿನ ಪಂದ್ಯಗಳು ಉಳಿದಿವೆ. ಗಂಗೂಲಿ 16 ವರ್ಷಗಳ ಹಿಂದೆ (2008ರಲ್ಲಿ) ಕೊನೆಯ ಬಾರಿ ರಾಷ್ಟ್ರಿಯ ಚಾಂಪಿಯನ್ ಆಗಿದ್ದರು. 2003 ರಿಂದ 2008ರವರೆಗೆ ಅವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಆಧಿಪತ್ಯ ಸ್ಥಾಪಿಸಿದ್ದರು.
ನಾಲ್ಕನೇ ಬೋರ್ಡ್‌ನಲ್ಲಿ ಅರ್ಜುನ್ ಆದಿರೆಡ್ಡಿ (ತೆಲಂಗಾಣ) ಅವರನ್ನು ಸೋಲಿಸಿದ ರೈಲ್ವೇಸ್‌ನ ಐಎಂ ಅರಣ್ಯಕ್ ಘೋಷ್ ಅವರು ಒಟ್ಟು ಏಳೂವರೆ ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಗ್ರ್ಯಾಂಡ್‌ಮಾಸ್ಟರ್‌ಗಳಾದ ಸೇತುರಾಮನ್ (ಪಿಎಸ್‌ಸಿಬಿ), ಎಂ.ಆರ್.ಲಲಿತ್‌ಬಾಬು (ಆಂಧ್ರಪ್ರದೇಶ), ಶ್ರೀರಾಮ್ ಝಾ (ಎಲ್‌ಐಸಿ), ಕಾರ್ತಿಕ್ ವೆಂಕಟರಾಮನ್ (ಆಂಧ್ರಪ್ರದೇಶ) ಸೇರಿದಂತೆ 13 ಆಟಗಾರರು ತಲಾ ಏಳು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.
ರೈಲ್ವೇಸ್‌ನ ನೀಲಾಶ್ ಸಹಾ (7) ಅವರು ಕರ್ನಾಟಕದ ಅಂಟಾನಿಯೊ ವಿಯಾನಿ ಡಿಕುನ್ಹ (6) ಅವರನ್ನು ಸೋಲಿಸಿದರು. ಕರ್ನಾಟಕದ ಎ.ಬಾಲಕಿಶನ್ (6.5) ಅವರು ಪಶ್ಚಿಮ ಬಂಗಾಳದ ಸೌಮಿಕ್ ಬಂದೋಪಾಧ್ಯಾಯ (5.5) ಅವರನ್ನು ಮಣಿಸಿದರು.