ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್‌ಶಿಪ್‌: ಕ್ವಾರ್ಟರ್‌ ಫೈನಲ್‌ಗೆ ಭಾರತ ತಂಡ

Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡವು ಹಾಂಗ್‌ಕಾಂಗ್‌ ತಂಡವನ್ನು 5–0 ಅಂತರದಿಂದ ಮಣಿಸಿ ಏಷ್ಯಾ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ ಷಿಪ್ ಕ್ವಾರ್ಟರ್ ಫೈನಲ್‌ ಪ್ರವೇಶಿಸಿತು.

ಇಂಡೋನೇಷ್ಯಾದ ಯೋಗ್ಯಕರ್ತದಲ್ಲಿ ಶನಿವಾರ ನಡೆದ ಪಂದ್ಯಗಳಲ್ಲಿ ಭಾರತದ ಆಟಗಾರರು ಉತ್ತಮ ಆರಂಭ ಮಾಡಿದರು. 

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆಯುಷ್ ಶೆಟ್ಟಿ 21-14, 21-9ರಿಂದ ಲಾಮ್ ಕಾ ಟೊ ಅವರನ್ನು ನಿರಾಯಾಸವಾಗಿ ಸೋಲಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ತಾರಾ ಶಾ 21-23, 21-16, 21-13ರಿಂದ ಲಿಯಾಂಗ್ ಕಾ ವಿಂಗ್ ವಿರುದ್ಧ ಜಯ ಸಾಧಿಸಿದರು. ಮೊದಲ ಗೇಮ್‌ನಲ್ಲಿ ಮುಗ್ಗರಿಸಿದರೂ, ನಂತರದ ಗೇಮ್‌ಗಳಲ್ಲಿ ತಾರಾ ಪುಟಿದೆದ್ದರು.

ಸಮರವೀರ್ ಮತ್ತು ರಾಧಿಕಾ ಶರ್ಮಾ ಮಿಶ್ರ ಡಬಲ್ಸ್ ಜೋಡಿಯು 21-10, 21-14ರಿಂದ ಡೆಂಗ್ ಮತ್ತು ಲಿಯು ವಿರುದ್ಧ ಗೆಲುವು ದಾಖಲಿಸಿದರು.

ನಿಕೋಲಸ್ ಮತ್ತು ತುಷಾರ್ ಅವರ ಪುರುಷರ ಡಬಲ್ಸ್ ತಂಡವು 21-16, 21-17ರಿಂದ ಚುಂಗ್ ಮತ್ತು ಯುಂಗ್ ಅವರನ್ನು ಮಣಿಸಿತು. ಶ್ರೀನಿಧಿ ಮತ್ತು ರಾಧಿಕಾ ಅವರನ್ನು ಒಳಗೊಂಡ ಮಹಿಳೆಯರ ಡಬಲ್ಸ್‌ ಜೋಡಿಯು 21-12, 21-19ರಿಂದ ಲಿಯಾಂಗ್ ಮತ್ತು ಲಿಯು ಅವರನ್ನು ಪರಾಭವಗೊಳಿಸಿತು.

ನಂತರದ ದಿನದಾಟದಲ್ಲಿ ಭಾರತ ತಂಡವು ಮಲೇಷ್ಯಾ ವಿರುದ್ಧ 0–5 ಅಂತರದಲ್ಲಿ ಪರಾಭವಗೊಂಡಿತು. ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷಯ್ ಶರ್ಮಾ 14-21, 15-21ರಿಂದ ಇಯೋಜಿನ್ ಇವ್ ಅವರಿಗೆ ಶರಣಾದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ರಕ್ಷಿತಾ 13-21, 21-5, 15-21ರಿಂದ ಓಂಗ್ ಕ್ಸಿನ್ ಯೀ ವಿರುದ್ಧ ಸೋತರು.

ಪುರುಷರ ಡಬಲ್ಸ್‌ನಲ್ಲಿ ನಿಕೋಲಸ್ ಮತ್ತು ತುಷಾರ್ ಜೋಡಿ 12-21, 19-21ರಿಂದ ಗೂಂಟಿಂಗ್ ಮತ್ತು ಥಾಯ್ ಜೋಡಿಗೆ ಸೋಲೊಪ್ಪಿಕೊಂಡರು. ಮಹಿಳಾ ಡಬಲ್ಸ್‌ನಲ್ಲಿ ರಕ್ಷಿತಾ ಮತ್ತು ಶ್ರೀಯಾನ್ಶಿ 21-14, 14-21, 12-21ರಿಂದ ಓಂಗ್ ಮತ್ತು ಟಿಂಗ್ ವಿರುದ್ಧ ಸೋತರು. ಮಿಶ್ರ ಡಬಲ್ಸ್‌ನಲ್ಲಿ ಸಮರವೀರ್ ಮತ್ತು ರಾಧಿಕಾ 21-18, 15-21, 10-21ರಿಂದ ಲೋ ಮತ್ತು ಚೋಂಗ್ ವಿರುದ್ಧ ಪರಾಭವಗೊಂಡರು.

‘ಸಿ’ ಗುಂಪುನಲ್ಲಿದ್ದ ನಾಲ್ಕು ತಂಡಗಳ ಪೈಕಿ ಮಲೇಷ್ಯಾ ಮತ್ತು ಭಾರತ ಕ್ವಾರ್ಟರ್‌ ಫೈನಲ್‌ ಪ್ರವೇಶ ಮಾಡಿವೆ. ಹಾಂಗ್‌ಕಾಂಗ್‌ ಮತ್ತು ಬಾಂಗ್ಲಾದೇಶ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಕ್ವಾರ್ಟರ್ ಫೈನಲ್‌ನ ಪಂದ್ಯಗಳು ಭಾನುವಾರ ನಡೆಯಲಿವೆ.

ಸಮರವೀರ್ ಮತ್ತು ರಾಧಿಕಾ ಶರ್ಮಾ
ಸಮರವೀರ್ ಮತ್ತು ರಾಧಿಕಾ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT