ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಅಮೃತ್‌ರಾಜ್‌ಗೆ ಮಾತೃವಿಯೋಗ

Last Updated 20 ಏಪ್ರಿಲ್ 2019, 20:12 IST
ಅಕ್ಷರ ಗಾತ್ರ

ಚೆನ್ನೈ: ಅಂತರರಾಷ್ಟ್ರೀಯ ಟೆನಿಸ್ ಆಟಗಾರ ವಿಜಯ್ ಅಮೃತರಾಜ್ ಅವರ ತಾಯಿ ಮ್ಯಾಗಿ ಅಮೃತ್‌ರಾಜ್ (92)ಅವರು ಶನಿವಾರ ಬೆಳಿಗ್ಗೆ ನಿಧನರಾದರು.

ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಪತಿ ರಾಬರ್ಟ್ ಅಮೃತರಾಜ್ ಅವರು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು.

ಅವರಿಗೆ ಮೂವರು ಪುತ್ರರಾದ ವಿಜಯ್ ಅಮೃತರಾಜ್, ಆನಂದ್ ಅಮೃತರಾಜ್ ಮತ್ತು ಅಶೋಕ್ ಅಮೃತರಾಜ್ ಇದ್ದಾರೆ. ಮೂವರು ಸಹೋದರರು ಭಾರತದ ಅಗ್ರ ಟೆನಿಸ್ ಆಟಗಾರರಾಗಿದ್ದರು. ವಿಜಯ್‌ ಅಮೃತ್‌ರಾಜ್‌ ಅವರು ಸದ್ಯ ತಮಿಳುನಾಡು ಟೆನಿಸ್‌ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

‘ಮಾರ್ಚ್‌ 21ರಂದು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅಮ್ಮನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ವಾರಗಳ ಕಾಲ ಚಿಕಿತ್ಸೆ ಪಡೆದು, ಕಳೆದ ಸೋಮವಾರ ಮನೆಗೆ ಮರಳಿದ್ದರು. ಶನಿವಾರ ಬೆಳಿಗ್ಗೆ 6.15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ನಮ್ಮ ಸಾಧನೆಗೆ ಸ್ಫೂರ್ತಿಯಾಗಿದ್ದವರು ಅವರು. ನಾವು ಇಂದು ಏನು ಸಾಧಿಸಿದ್ದೇವೆಯೋ, ಅದಕ್ಕೆಲ್ಲವೂ ತಾಯಿಯೇ ಕಾರಣ’ ಎಂದು ಆನಂದ್ ಅಮೃತರಾಜ್ ತಿಳಿಸಿದ್ದಾರೆ.

1985ರಲ್ಲಿ ವಿಜಯ್‌ ಅಮೃತ್‌ರಾಜ್‌ ಅವರ ಜೊತೆಗೂಡಿ ‘ಬ್ರಿಟಾನಿಯಾ ಅಮೃತ್‌ರಾಜ್‌ ಟೆನಿಸ್‌ ಅಕಾಡೆಮಿ’ಯನ್ನು ಸ್ಥಾಪಿಸಿದ್ದ ಮ್ಯಾಗಿ ಅವರು, ಸುಮಾರು ಎರಡು ದಶಕಗಳ ಕಾಲ ಈ ಸಂಸ್ಥೆಯನ್ನು ಮುನ್ನಡೆಸಿದ್ದರು. ಇಲ್ಲಿಂದ ಅನೇಕ ಆಟಗಾರರು ಹೊರಹೊಮ್ಮಿದ್ದರು.

ಲಿಯಾಂಡರ್‌ ಪೇಸ್‌, ಗೌರವ್‌ ನಟೇಕರ್‌, ರೋಹಿತ್‌ ರಾಜ್‌ಪಾಲ್‌, ಸೋಮ್‌ದೇವ್‌ ದೇವವರ್ಮನ್‌ ಸೇರಿದಂತೆ ಅನೇಕರು ಈ ಸಂಸ್ಥೆಯಲ್ಲೇ ತರಬೇತಿ ಪಡೆದು, ರಾಷ್ಟ್ರ– ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆದಿದ್ದಾರೆ. ಇದೇ 23ರಂದು ನುಂಗಂಬಾಕ್ಕಂನಲ್ಲಿರುವ ಸೇಂಟ್‌ ತೆರೇಸಾ ಚರ್ಚ್‌ನಲ್ಲಿ ಆಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT