ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಕುಸ್ತಿ: ಸೆಮಿಫೈನಲ್‌ನಲ್ಲಿ ಸೋತ ಅಮನ್‌

Published : 8 ಆಗಸ್ಟ್ 2024, 23:30 IST
Last Updated : 8 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಪ್ಯಾರಿಸ್‌: ಭಾರತ ಯುವ ಕುಸ್ತಿಪಟು ಅಮನ್‌ ಸೆಹ್ರಾವತ್‌ ಅವರು ಒಲಿಂಪಿಕ್ಸ್‌ ಪುರುಷರ ಕುಸ್ತಿ ಸ್ಪರ್ಧೆಗಳ 57 ಕೆ.ಜಿ. ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ರೀ ಹಿಗುಚಿ ಅವರಿಗೆ 0–10 ರಿಂದ ಮಣಿದರು.

ರಿಯೊ ಒಲಿಂಪಿಕ್ಸ್‌ನಲ್ಲಿ (2016) ಬೆಳ್ಳಿ ಗೆದ್ದಿದ್ದ, 28 ವರ್ಷ ವಯಸ್ಸಿನ ಹಿಗುಚಿ ಅವರು ಕೇವಲ ಮೂರು ನಿಮಿಷಗಳಲ್ಲಿ ಮುಕ್ತಾಯಗೊಂಡ ಈ ಸೆಣಸಾಟವನ್ನು ಉತ್ತಮ ತಾಂತ್ರಿಕ ಕೌಶಲದ ಆಧಾರದಲ್ಲಿ ಗೆದ್ದರು.

ಪುರುಷರ ವಿಭಾಗದಲ್ಲಿ ಭಾರತದ ಏಕೈಕ ಕುಸ್ತಿಪಟುವಾಗಿ ಪ್ಯಾರಿಸ್‌ ಕ್ರೀಡೆಗಳಿಗೆ ಅರ್ಹತೆ ಪಡೆದಿದ್ದ ಅಮನ್‌ ಶುಕ್ರವಾರ ಕಂಚಿನ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಗುಲೊಮ್‌ಜಾನ್‌ ಅಬ್ದುಲ್ಲೇವ್‌ ಅವರನ್ನು ಎದುರಿಸಲಿದ್ದಾರೆ.

ಟೋಕಿಯೊ ಕ್ರೀಡೆಗಳಲ್ಲಿ ಈ ಕ್ಲಾಸ್‌ನಲ್ಲಿ ರವಿ ದಹಿಯಾ ಅವರು ಬೆಳ್ಳಿ ಗೆದ್ದಿದ್ದರು. ಆದರೆ ಈ ಬಾರಿ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಅಮನ್‌, ರವಿ ಅವರನ್ನು ಸೋಲಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಇದಕ್ಕೆ ಮೊದಲು ಅಮನ್‌ ಕ್ವಾರ್ಟರ್‌ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್, ಅಲ್ಬೇನಿಯಾದ  ಝೆಲಿಮ್‌ಖಾನ್‌ ಅಬಕರೊವ್‌ ಅವರನ್ನು ತಾಂತ್ರಿಕ ಕೌಶಲದ ಆಧಾರದಲ್ಲಿ ಸೋಲಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆದಿದ್ದರು.‌

21 ವರ್ಷದ ಅಮನ್‌ ಉತ್ತಮ ಲಯದಲ್ಲಿದ್ದು ಎರಡನೇ ಸುತ್ತಿನಲ್ಲಿ ಎದುರಾಳಿಯ ಕಾಲುಗಳನ್ನು ‘ಲಾಕ್‌’ ಮಾಡಿಟ್ಟರು. ಕೆಲವು ಬಾರಿ ಅವರನ್ನು ಕೆಡವಿ ಎಂಟು ಪಾಯಿಂಟ್ಸ್‌ ಗಳಿಸಿದರು. ಅಂತಿಮವಾಗಿ 12–0ಯಿಂದ ಗೆಲುವು ಪಡೆದರು.

ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಅವರು ಮಾಜಿ ಯುರೋಪಿಯನ್ ಚಾಂಪಿಯನ್‌, ನಾರ್ತ್‌ ಮ್ಯಾಸಿಡೊನಿಯಾದ ವ್ಲಾದಿಮಿರ್‌ ಇಗೊರೊವ್‌ ಅವರನ್ನು 10–0ಯಿಂದ ಮಣಿಸಿದ್ದರು.

ಅನ್ಶು ಮಲಿಕ್‌ಗೆ ಸೋಲು

ಮಹಿಳೆಯರ ವಿಭಾಗದ 57 ಕೆ.ಜಿ. ಸ್ಪರ್ಧೆಯಲ್ಲಿ ಭಾರತದ ಅನ್ಶು ಮಲಿಕ್‌ ಹೊರಬಿದ್ದರು. ಅವರು ಪ್ರಿಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ಹಿರಿಯ ಕುಸ್ತಿಪಟು ಹೆಲೆನ್‌ ಲೂಯಿಸ್‌ ಮರೊಲಿಸ್‌ ಅವರಿಗೆ 2–7 ರಲ್ಲಿ ಸೋತರು.

ಈ ಸೆಣಸಾಟ 2021ರ ವಿಶ್ವಚಾಂಪಿಯನ್‌ಷಿಪ್‌ ಫೈನಲ್‌ನ ಪುನರಾವರ್ತನೆಯಂತೆ ಇತ್ತು. ಆ ಬಾರಿ ಅಮೆರಿಕದ ಅನುಭವಿ ಹೆಲೆನ್‌, ಭಾರತದ ಕುಸ್ತಿಪಟುವನ್ನು ಸೋಲಿಸಿದ್ದು, ಅನ್ಶು ಬೆಳ್ಳಿ ಗೆದ್ದಿದ್ದರು.

2016ರ ರಿಯೊ ಗೇಮ್ಸ್‌ನಲ್ಲಿ ಚಿನ್ನ, 2020ರ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಹೆಲೆನ್‌ ಅವರು ಫೈನಲ್ ತಲುಪಿದಲ್ಲಿ ಅನ್ಶು ಅವರಿಗೆ ರೆಪೆಷಾಜ್ ಮೂಲಕ ಕಂಚಿನ ಪದಕಕ್ಕೆ ಪೈಪೋಟಿ ನಡೆಸುವ ಅವಕಾಶ ದಕ್ಕಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT