ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಚೀಟಿಗಳಲ್ಲಿ ಕ್ರಿಕೆಟ್‌ ಲೋಕ....

Last Updated 26 ಮೇ 2019, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಮೊದಲ ಬಾರಿ ಅಂಚೆ ಚೀಟಿ ಬಿಡುಗಡೆಯಾಗಿದ್ದು 1971ರಲ್ಲಿ. ಭಾರತವು ಆ ವರ್ಷ ವೆಸ್ಟ್‌ ಇಂಡೀಸ್‌ ವಿರುದ್ಧ, ನಂತರ ಇಂಗ್ಲೆಂಡ್‌ ವಿರುದ್ಧ ತವರಿನಲ್ಲೇ ಗೆದ್ದ ಚಾರಿತ್ರಿಕ ಸಾಧನೆಯ ನೆನಪಿಗಾಗಿ ‘ಕ್ರಿಕೆಟ್‌ ವಿಕ್ಟರೀಸ್‌’ ಹೆಸರಿನಲ್ಲಿ ಈ ಅಂಚೆ ಚೀಟಿ ಬಿಡುಗಡೆಯಾಗಿತ್ತು. ಆ ಅಂಚೆಚೀಟಿ 20 ಪೈಸೆ ಮುಖಬೆಲೆ ಹೊಂದಿತ್ತು.

1975ರಲ್ಲಿ ಮೊದಲ ಬಾರಿ ಏಕದಿನ ಅಂತರರಾಷ್ಟ್ರೀಯ ವಿಶ್ವ ಕಪ್‌ ಪಂದ್ಯಾವಳಿ ಆರಂಭವಾಯಿತು. ನಂತರ ವಿಶ್ವಕಪ್‌ಗಳ ಸಂದರ್ಭದಲ್ಲಿ ಕ್ರಿಕೆಟ್‌ ಆಡುವ ವಿವಿಧ ದೇಶಗಳು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡತೊಡಗಿದವು.

ವೆಸ್ಟ್‌ ಇಂಡೀಸ್‌ ತಂಡ ವಿಶ್ವಕಪ್‌ ಗೆದ್ದುಕೊಂಡಾಗ ನಾಯಕರಾಗಿದ್ದವರು ಕ್ಲೈವ್‌ ಲಾಯ್ಡ್‌. ಈ ಮಹಾನ್‌ ಆಟಗಾರ 1985ರಲ್ಲಿ ನಿವೃತ್ತಿಯಾದಾಗ ಗಯಾನಾ ದೇಶ ನಾಲ್ಕು ವಿಶೇಷ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿತ್ತು. ಅವುಗಳಲ್ಲಿ ಒಂದು ಅಂಚೆ ಚೀಟಿಯಲ್ಲಿ ಈ ಕನ್ನಡಕಧಾರಿ ಆಟಗಾರ ‘ಪ್ರುಡೆನ್ಶಿಯಲ್‌ ವಿಶ್ವಕಪ್‌’ ಹಿಡಿದಿದ್ದ ಚಿತ್ರವೂ ಇತ್ತು.

ಆಸ್ಟ್ರೇಲಿಯಾದಲ್ಲಿ ನಡೆದಿದ್ದ 1992ರ ಐದನೇ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮೊದಲ ಬಾರಿ ವಿಜಯಿಯಾಗಿತ್ತು. ಅದರ ನೆನಪಿನಲ್ಲಿ ಆ ವರ್ಷದ ಏಪ್ರಿಲ್‌ನಲ್ಲಿ ಮೂರು ಅಂಚೆ ಚೀಟಿಗಳನ್ನು ಪಾಕಿಸ್ತಾನ ಬಿಡುಗಡೆ ಮಾಡಿತ್ತು. ಒಂದರಲ್ಲಿ ತಂಡದ ನಾಯಕ ಇಮ್ರಾನ್‌ ಖಾನ್‌ ಚಿತ್ರವಿತ್ತು. 1996ರಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದ ಶ್ರೀಲಂಕಾ ತ್ರಿಕೋನಾಕಾರದ ನಾಲ್ಕು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿತ್ತು.

ಭಾರತ, 1996ರ ವಿಶ್ವಕಪ್‌ಗೆ ಪೂರ್ವಭಾವಿಯಾಗಿ (ಶ್ರೀಲಂಕಾ, ಪಾಕಿಸ್ತಾನ ಜೊತೆ ಆತಿಥ್ಯ ವಹಿಸಿತ್ತು) ನಾಲ್ಕು ಮಂದಿ ದಿಗ್ಗಜ ಆಟಗಾರರ ಚಿತ್ರವಿರುವ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿತ್ತು. ಈ ಅಂಚೆಚೀಟಿಗಳು 1995ರ ಡಿಸೆಂಬರ್‌ನಲ್ಲಿ ಡಿ.ಬಿ. ‌ದೇವಧರ್‌, ಕರ್ನಲ್‌ ಸಿ.ಕೆ.ನಾಯ್ದು, ವಿಜಯ್‌ ಮರ್ಚೆಂಟ್‌, ವಿನೂ ಮಂಕಡ್‌ ಚಿತ್ರ ಹೊಂದಿದ್ದವು. ನಂತರ ವಿಶ್ವಕಪ್‌ಗೆ ಸಂಬಂಧಿಸಿ ಭಾರತ ಅಂಚೆ ಇಲಾಖೆಯಿಂದ ಅಂಚೆ ಚೀಟಿಗಳು ಹೊರಬರಲಿಲ್ಲ. 2012ರಲ್ಲಿ ಭಾರತ ಎರಡನೇ ಬಾರಿ ವಿಶ್ವಕಪ್‌ ಗೆದ್ದರೂ ಸಹ.

ಕೆರಿಬಿಯನ್‌ ದ್ವೀಪಸಮೂಹಕ್ಕೆ ಸೇರಿದ ಸೇಂಟ್ ವಿನ್ಸೆಂಟ್‌ ದೇಶದ ವಿಶೇಷ ಎಂದರೆ ಅದು ವಿವಿಧ ದೇಶಗಳ ಪ್ರಮುಖ ಆಟಗಾರರ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ವಿವ್‌ ರಿಚರ್ಡ್‌ ಜೊತೆಗೆ ಭಾರತದ ಸುನೀಲ್‌ ಗಾವಸ್ಕರ್‌, ಕಪಿಲ್ ದೇವ್‌, ಪಾಕಿಸ್ತಾನದ ಇಮ್ರಾನ್‌ ಖಾನ್‌, ಇಂಗ್ಲೆಂಡ್‌ ಆರಂಭ ಆಟಗಾರ ಗ್ರಹಾಂ ಗೂಚ್‌, ಮೈಕ್‌ ಗ್ಯಾಟಿಂಗ್‌, ಆಲ್‌ರೌಂಡರ್ ಇಯಾನ್‌ ಬಾಥಂ, ಆಸ್ಟ್ರೇಲಿಯಾದ ಮಹಾನ್‌ ವೇಗಿ ಡೆನಿಸ್‌ ಲಿಲಿ ಅವರಲ್ಲಿ ಒಳಗೊಂಡಿದ್ದಾರೆ.

ಶ್ರೀಲಂಕಾ 2007ರಲ್ಲಿ ಮುತ್ತಯ್ಯ ಮುರಳೀಧರನ್‌ ಅವರ ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ಅವರು 710 ಟೆಸ್ಟ್‌ ವಿಕೆಟ್‌ಗಳನ್ನು ಪಡೆದು ಶೇನ್‌ ವಾರ್ನ್‌ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ನೆನಪಿಗಾಗಿ ವೃತ್ತಾಕಾರದ ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ಅದು ಆ ದೇಶದ ಇತಿಹಾಸದಲ್ಲೇ ಮೊದಲ ವೃತ್ತಾಕಾರದ ಅಂಚೆ ಚೀಟಿಯಾಗಿತ್ತು.‌

ಸಚಿನ್‌ ತೆಂಡೂಲ್ಕರ್‌ 2013ರಲ್ಲಿ ನಿವೃತ್ತರಾದಾಗ ಭಾರತ ಎರಡು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿತ್ತು. ವಿಶೇಷವೆಂದರೆ ಭಾರತಕ್ಕಿಂತ ಮೊದಲೇ ಐದು ದೇಶಗಳು ಈ ಮಹಾನ್‌ ಕ್ರಿಕೆಟಿಗನ ಅಂಚೆ ಚೀಟಿ ಬಿಡುಗಡೆ ಮಾಡಿದ್ದವು. ರಿಪಬ್ಲಿಕ್ ಆಫ್‌ ಟೋಗೊ, ಯುನೈಟೆಡ್‌ ಕಿಂಗ್‌ಡಂ, ಗಿನಿಯಾ ಬಿಸಾವು, ಸೇಂಟ್‌ ವಿನ್ಸೆಂಟ್‌ ಆ್ಯಂಡ್‌ ನೇವಿಸ್‌ ದೇಶಗಳು ಈ ದೇಶಗಳಲ್ಲಿ ಒಳಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT