ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆ ಬಿತ್ತಿದಂತೆ ಬೆಳೆ...!

Last Updated 6 ಮೇ 2013, 10:38 IST
ಅಕ್ಷರ ಗಾತ್ರ

`ತ್ರೀ ಈಡಿಯಟ್ಸ್' ಚಲನಚಿತ್ರದಲ್ಲಿ ನಮ್ಮ ಈಗಿನ ಶಿಕ್ಷಣದ ಮೇಲೆ ಬೆಳಕು ಚೆಲ್ಲುವ ಒಂದು ದೃಶ್ಯವಿದೆ. ನಾಯಕ ಅಮೀರ್ ಖಾನ್ ಒಂದು ಪುಸ್ತಕ ನೋಡಿ ಬೋರ್ಡಿನ ಮೇಲೆ ಒಂದು ಪದ ಬರೆಯುತ್ತಾನೆ. ಅದರ ಅರ್ಥ ಏನೆಂದು ಎರಡು ನಿಮಿಷದಲ್ಲಿ ಹೇಳುವಂತೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸವಾಲು ಹಾಕುತ್ತಾನೆ.

ಆ ತರಗತಿಯಲ್ಲಿದ್ದ ಪ್ರಾಂಶುಪಾಲರೂ ಸೇರಿದಂತೆ ಎಲ್ಲರೂ ಸ್ಪರ್ಧೆಗೆ ಇಳಿಯುತ್ತಾರೆ. ತಾವೇ ಆ ಪದದ ಅರ್ಥವನ್ನು ಮೊದಲು ಕಂಡುಹಿಡಿಯಬೇಕೆಂಬ ಪೈಪೋಟಿಯಿಂದ ಸರಸರನೆ ಪುಸ್ತಕಗಳ ಪುಟಗಳನ್ನು ತಿರುವಿಹಾಕ ತೊಡಗುತ್ತಾರೆ. ಆದರೆ ಯಾರಿಗೂ ಅದರ ಅರ್ಥ ತಿಳಿಯುವುದಿಲ್ಲ. ಆಗ ಅಮೀರ್ ಖಾನ್ ನಕ್ಕು ಹೇಳುತ್ತಾನೆ.

`ನೋಡಿ, ನಮ್ಮ ಶಿಕ್ಷಣ ಹೇಗೆ ಪೈಪೋಟಿ ಮತ್ತು ಮೇಲುಗೈ ಸಾಧನೆಗೆ ಪ್ರೇರೇಪಿಸುತ್ತಿದೆ ಎಂದು. ಕುತೂಹಲ ಅಥವಾ ಜ್ಞಾನದಾಹವನ್ನು ಅದು ಉಂಟು ಮಾಡುತ್ತಿಲ್ಲ. ನಾನು ಈ ಪದವನ್ನು ಬರೆದಾಗ ನೀವ್ಯಾರೂ `ಇದೇನಿದು, ತಿಳಿದುಕೊಳ್ಳೋಣ' ಎಂಬ ಆಸಕ್ತಿ ವ್ಯಕ್ತಪಡಿಸಲಿಲ್ಲ. ಏಕೆಂದರೆ ನಿಮಗೆ ಸ್ಪರ್ಧೆಯಲ್ಲಿ ಗೆಲ್ಲಬೇಕಾಗಿತ್ತು ಅಷ್ಟೇ. ಆ ಪದ ಕೇವಲ ನನ್ನ ಸೇಹಿತರ ಹೆಸರುಗಳು ಮಾತ್ರ' ಎಂದಾಗ ಎಲ್ಲರೂ ಪೆಚ್ಚಾಗುತ್ತಾರೆ.

ಪರೀಕ್ಷೆಗೆಂದೇ ಕಲಿಯುವ ಶಿಕ್ಷಣ ಮಾಡಿರುವ ಅವಾಂತರಗಳನ್ನು ಚೆನ್ನಾಗಿ ಬಿಚ್ಚಿಡುವ ದೃಶ್ಯ ಇದು. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಅಥವಾ ಪಿ.ಯು.ಸಿ. ಫಲಿತಾಂಶ ಪ್ರಕಟವಾದ ಮುಂದಿನ ಕೆಲ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ವರದಿ ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತದೆ. ವಾರ್ಷಿಕ ಪರೀಕ್ಷೆಗಳಿರಲಿ,  ಕೇವಲ ಯೂನಿಟ್ ಟೆಸ್ಟ್‌ಗಳಲ್ಲಿ ಮಾರ್ಕ್ಸ್ ಕಡಿಮೆಯಾಗಿದ್ದಕ್ಕೇ ಜೀವ ಕಳೆದು ಕೊಂಡವರಿದ್ದಾರೆ. ಕೆಲವು ವಿದ್ಯಾರ್ಥಿಗಳಂತೂ ಪರೀಕ್ಷೆಗೆ ಮೊದಲೇ ಸೋಲಿನ ಭೀತಿಯಿಂದ ಆತ್ಮಹತ್ಯೆಗೆ ಶರಣಾಗುತ್ತಾರೆ. ದೇಶದ ಆಸ್ತಿಯಾಗಿ ಅರಳಬೇಕಾದ ಜೀವಗಳು ಮುದುಡಿ ಬೀಳುತ್ತವೆ.

ಉನ್ನತ ಶಿಕ್ಷಣದಲ್ಲೂ ಈ ಪರಿಸ್ಥಿತಿ ತೀವ್ರವಾಗಿದೆ. ಎಂ.ಬಿ.ಬಿ.ಎಸ್. ಮುಗಿಸಿದ ಬೆಂಗಳೂರಿನ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಸ್ನಾತಕೋತ್ತರ ಶಿಕ್ಷಣ ಪ್ರವೇಶದ ಕೌನ್ಸೆಲಿಂಗ್‌ನಲ್ಲಿ ತನ್ನ ಆಯ್ಕೆಯ ವಿಷಯ ಸಿಗಲಿಲ್ಲವೆಂದು ಬೇಸರಗೊಂಡು ಸೀದಾ ಮನೆಗೆ ಬಂದು ನೇಣು ಹಾಕಿಕೊಂಡಳು. ಜೀವನೋತ್ಸಾಹ ಮೂಡಿಸದ ನಮ್ಮ ಶಿಕ್ಷಣವು ಪೈಪೋಟಿ ಹಾಗೂ ಮೇಲುಗೈ ಸಾಧನೆಗೆ ಒತ್ತು ಕೊಡುತ್ತಿರುವುದರ ಪರಿಣಾಮ ಇದು.

ಇನ್ನೊಂದು ಕಡೆ ಶಾಲೆಗೆ ಹೋಗದ ಒಬ್ಬ ಮನುಷ್ಯ, ರೈಲು ಪ್ರಯಾಣಿಕರು ಊಟ ಮಾಡಿ ಎಸೆದ ಅಲ್ಯೂಮಿನಿಯಂ ಡಬ್ಬಿಗಳನ್ನು ಸಂಗ್ರಹಿಸಿ ಮಾರಿ ಜೀವನ ನಡೆಸುತ್ತಿದ್ದಾನೆ. ತನ್ನ ಸಾಲವನ್ನೆಲ್ಲ ತೀರಿಸಿ, ಮಗಳ ಮದುವೆಯನ್ನೂ ಮಾಡಿರುವುದಾಗಿ ಹೆಮ್ಮೆಯಿಂದ ಹೇಳುತ್ತಾನೆ!

ಪರೀಕ್ಷೆ ಮತ್ತು ಪಠ್ಯಕ್ರಮ ಎಂದು ನಾವು ಶಿಕ್ಷಣದಲ್ಲಿ ಅಳವಡಿಸಿದ ಮೇಲೆ, ಕೇವಲ ಪಠ್ಯಪುಸ್ತಕದಲ್ಲಿ ಇರುವುದನ್ನು ಪರೀಕ್ಷೆಗೆಂದೇ ಕಲಿಯುವುದು `ಶಿಕ್ಷಣ' ಆಗಿಬಿಟ್ಟಿದೆ. ಈಗಿನ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಬಿಟ್ಟು ಬೇರೆ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಕೆಲವು ಪ್ರಭೃತಿಗಳಂತೂ ಪಠ್ಯಪುಸ್ತಕವನ್ನೂ ಓದದೆ ಕೇವಲ ನೋಟ್ಸ್ ಹಾಗೂ ಗೈಡ್ಸ್‌ಗಳನ್ನೇ ಅವಲಂಬಿಸಿರುತ್ತಾರೆ!

ಹೋಂ ವರ್ಕ್, ಟೆಸ್ಟ್‌ಗಳ ಪ್ರವಾಹದಲ್ಲಿ ಮುಳುಗಿರುವ ನಮ್ಮ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಇತರ ಪುಸ್ತಕಗಳನ್ನು ಓದುವ ವ್ಯವಧಾನವೂ ಇಲ್ಲ, ಸಮಯವೂ ಇಲ್ಲ. ಪರೀಕ್ಷೆ, ಅಂಕ, ರ್‍ಯಾಂಕು, ಉದ್ಯೋಗಾವಕಾಶ ಇವುಗಳನ್ನು ಮುಂದಿಟ್ಟು ಪಾಲಕರು ಮಕ್ಕಳ ಮೇಲೆ ಮಾನಸಿಕ ಒತ್ತಡ ಹಾಕುತ್ತಾರೆ.

ನಿರ್ದಿಷ್ಟ ಉದ್ಯೋಗ ಪಡೆಯುವ ಉದ್ದೇಶದಿಂದಲೇ ಓದುವುದರಿಂದ ಆ ಉದ್ಯೋಗ ಸಿಗದಿದ್ದರೆ ಹತಾಶೆಯಾಗುವುದು ಸ್ವಾಭಾವಿಕ. ಪದವೀಧರರು ತಯಾರಾಗುತ್ತಿರುವ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಆದ್ದರಿಂದ ಶಿಕ್ಷಣ ಸಂಸ್ಥೆಗಳೆಂದರೆ ನಿರುದ್ಯೋಗಿಗಳನ್ನು ತಯಾರಿಸುವ ಕಾರ್ಖಾನೆಗಳಾಗಿ  ಬಿಟ್ಟಿವೆ. ಮೈಕೈ ನೋಯದೆ, ಬಟ್ಟೆ ಕೊಳೆಯಾಗದೆ, ಹಗುರವಾಗಿ ಮಾಡಬಹುದಾದ ಕೆಲಸವನ್ನು ಮಾತ್ರ ನಮ್ಮ ಯುವಕರು ಮಾಡಬಲ್ಲರು. ಬೇರೆ ಯಾವ ಕೆಲಸವನ್ನು ಮಾಡಲೂ ಅವರಿಗೆ ಬರುವುದಿಲ್ಲ.

ನಿರುದ್ಯೋಗದಿಂದ ಆಗುವ ಹತಾಶೆಯಿಂದಲೇ ಯುವಜನರು ಸಮಾಜಘಾತುಕ ಶಕ್ತಿಗಳೋ ಅಥವಾ ನಕ್ಸಲೀಯರೋ ಆಗುತ್ತಿದ್ದಾರೆ. ದುರ್ಬಲ ಮನಸ್ಸಿನವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಒಂದು ಸಂಸ್ಥೆಯಲ್ಲಿ 50 ಕೆಲಸಗಳು ಖಾಲಿ ಇದ್ದರೆ ಅದಕ್ಕೆ 50 ಸಾವಿರ ಅರ್ಜಿಗಳು ಬರುತ್ತವೆ. (ಅರ್ಜಿ ಶುಲ್ಕದಿಂದಲೇ ಕೆಲವು ಕಂಪೆನಿಗಳು ತಮ್ಮ ಬೊಕ್ಕಸ ತುಂಬಿಸಿಕೊಳ್ಳುತ್ತಿವೆ!)

ಪರೀಕ್ಷೆಯಲ್ಲಿ ಮರೆತು ಹೋದರೆ ಎಂಬ ಭಯ ಹಾಗೂ ಆತಂಕದಿಂದಲೇ ಕಲಿಯುವುದರಿಂದ ವಿಷಯಗಳು ಮರೆತೇ ಹೋಗುತ್ತವೆ. ಆ ರೀತಿಯ ಒತ್ತಡ ಇಲ್ಲದೆ ಸಂತೋಷದಿಂದ ನೋಡುವ ಅಥವಾ ಕೇಳುವ ಚಲನಚಿತ್ರದ ವಿಷಯಗಳು ಅದ್ಭುತವಾಗಿ ನೆನಪಿರುವುದಿಲ್ಲವೇ? ಗಾಡಿಗೆ ಕಟ್ಟಿರುವ ಕುದುರೆಗೆ ದಾರಿ ಮಾತ್ರ ಕಾಣುವಂತೆ ಕಣ್ಕಟ್ಟು ಹಾಕಿರುವುದಿಲ್ಲವೇ? ಅದೇ ರೀತಿ ಪರೀಕ್ಷೆಗೆಂದೇ ಓದುವ ವಿದ್ಯಾರ್ಥಿಗಳು ಅತ್ತಿತ್ತ ನೋಡದೆ ಒಂದೇ ದಾರಿಯಲ್ಲಿ ಸುಮ್ಮನೆ ಸಾಗುತ್ತಿರುತ್ತಾರೆ. ಪರೀಕ್ಷೆಯಿಂದಾಚೆಗಿನ ಪ್ರಪಂಚದ ಬಗ್ಗೆ ಅವರು ಯೋಚಿಸುವುದೇ ಇಲ್ಲ.

ಮಾನಸಿಕ ಒತ್ತಡದಿಂದ ಉಂಟಾಗುವ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ದೌರ್ಬಲ್ಯದಂತಹ ರೋಗಗಳನ್ನು ಪರೀಕ್ಷೆಯ ಒತ್ತಡದಿಂದಾಗಿ ಚಿಕ್ಕಂದಿನಲ್ಲೇ ಆಹ್ವಾನಿಸಿದಂತಾಗುತ್ತದೆ. ಮುಂದೆ ದೊಡ್ಡವರಾದ ಮೇಲೆ ಹೇಗಿದ್ದರೂ ಯೋಗ, ಪ್ರಾಣಾಯಾಮ ಮಾಡುವುದು ಇದ್ದೇ ಇರುತ್ತದಲ್ಲ! ಹಳೆಯ ಗಾದೆ ಸ್ವಲ್ಪ ತಿರುವುಮುರುವಾಗಿCure is better than prevention ಎಂಬಂತೆ ಆಗಿದೆ. ಮಕ್ಕಳಿಗಿಂತ ಹೆಚ್ಚಾಗಿ ಪಾಲಕರೇ ಪರೀಕ್ಷಾ ಒತ್ತಡದಿಂದ ನರಳಿ ತಮ್ಮ ಆಯುಷ್ಯದ 8-10 ವರ್ಷಗಳನ್ನು ತಮ್ಮ ಕೈಯಾರ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಪರೀಕ್ಷೆ ಮುಗಿದ ಮಾರನೇ ದಿನ, ನೀವು ಯಾರಾದರೂ ವಿದ್ಯಾರ್ಥಿಗಳನ್ನು ಮಾತನಾಡಿಸಿ ನೋಡಿ, ಅವರ ಮನಸ್ಸೆಷ್ಟು ನಿರಾಳವಾಗಿರುತ್ತದೆ! `ಸದ್ಯ ತೊಲಗಿತಲ್ಲ ಶನಿ' (ಪರೀಕ್ಷೆ) ಎಂಬಂತೆ ಇರುತ್ತಾರೆ. ಆಗ ಪಾಠದ ವಿಷಯ ಏನಾದರೂ ಕೇಳಿದರೆ `ಏನೂ ನೆನಪಿಲ್ಲ' ಎನ್ನುತ್ತಾರೆ. ಕೇವಲ ಪರೀಕ್ಷೆಗೆಂದೇ ಓದುವುದರಿಂದ ಪರೀಕ್ಷೆ ಮುಗಿದ ಮೇಲೆ ಅದನ್ನು ನೆನಪಿಟ್ಟುಕೊಳ್ಳುವ ಅಗತ್ಯವಾದರೂ ಎಲ್ಲಿದೆ?
.....

ಆದಾಯವೇ ಗುರಿ
ಪ್ರತಿ ವರ್ಷ ನಡೆಯುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಅಧಿವೇಶನದಲ್ಲಿ ಮುಖ್ಯವಾಗಿ ಚರ್ಚೆಯಾಗುವ ವಿಷಯ `ಮೂಲ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಹೇಗೆ?' ಎಂಬುದು. ವಿಶ್ವದಲ್ಲೇ ಅತಿ ಹೆಚ್ಚು ವಿದ್ಯಾರ್ಥಿ- ಯುವ ಪಡೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಸಂಶೋಧಕರಿಗೆ ಕೊರತೆ! ಈಗ ಪ್ರತಿಭಾವಂತ ವಿದ್ಯಾರ್ಥಿಗಳ ಮನಸ್ಸಿನಲ್ಲಿರುವ ಒಂದೇ ಗುರಿ- ಒಳ್ಳೆಯ ರ್‍ಯಾಂಕ್ ಗಳಿಸಿ, ಅತಿ ಹೆಚ್ಚು ಆದಾಯದ ಕೆಲಸಕ್ಕೆ ಸೇರಬೇಕು.

ಶಿಕ್ಷಣದ ಉದ್ದೇಶವೆಂದರೆ ಉದ್ಯೋಗ ಸಂಪಾದನೆ ಎಂಬಂತೆ ಆಗಿಬಿಟ್ಟಿದೆ. ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನನಗೆ ಹೇಳಿದರು. `ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸುವಂತೆ ಮಾಡುವುದಾದರೆ ಪೋಷಕರು ಎಷ್ಟು ಬೇಕಾದರೂ ಫೀಜು ಕೊಡಲು ಸಿದ್ಧರಿದ್ದಾರೆ. ಏಕೆಂದರೆ ಈಗ ಕೊಡುವ ಫೀಜನ್ನು ಅವರು ಬಂಡವಾಳ ಹೂಡಿಕೆ ಎಂದು ತಿಳಿಯುತ್ತಾರೆ. ಮುಂದೆ ಹೇಗಿದ್ದರೂ ಮಕ್ಕಳು ಚಕ್ರಬಡ್ಡಿ ಸಹಿತ ಹಿಂಪಡೆಯುವಂತೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರಲ್ಲ ಎಂಬುದೇ ಅವರ ಧೋರಣೆ'. ಶಿಕ್ಷಣದ ವಾಣಿಜ್ಯೀಕರಣ ಎಂದರೆ ಇದೇ ಅಲ್ಲವೇ?

ಪರೀಕ್ಷೆಯ ಒತ್ತಡ ಮಕ್ಕಳ ಮೇಲೆ ಎಷ್ಟಿರುತ್ತದೆಂದರೆ, ಪರೀಕ್ಷೆ ಸಮೀಪಿಸಿದಾಗ ಎಷ್ಟೋ ವಿದ್ಯಾರ್ಥಿಗಳು ಸರಿಯಾಗಿ ಊಟ ನಿದ್ದೆ ಮಾಡುವುದಿಲ್ಲ. ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ. ಪರೀಕ್ಷೆ ನಡೆಸಲೆಂದೇ ಸಾವಿರಾರು ಸಿಬ್ಬಂದಿ ಇರುವ, ಕೋಟ್ಯಂತರ ರೂಪಾಯಿ ವ್ಯವಹಾರದ ಮಂಡಳಿಗಳೇ ಇವೆ ಎಂದರೆ ಪರೀಕ್ಷೆಗಾಗಿ ನಾವು ನೀಡುತ್ತಿರುವ ಪ್ರಾಮುಖ್ಯತೆ ಎಷ್ಟು ನೋಡಿ! ಪರೀಕ್ಷೆಯ ಜೊತೆಗೆ ಪರೀಕ್ಷಾ ಅವ್ಯವಹಾರಗಳೂ ಶುರುವಾಗಿವೆ.

ಅದರ ತಡೆಗೇ ಪ್ರತ್ಯೇಕ ವ್ಯವಸ್ಥೆ ಇದೆ. ಬಹುಶಃ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಇಟ್ಟರೂ ನಕಲು ಮಾಡುವುದನ್ನು ತಪ್ಪಿಸಲು ಸಾಧ್ಯವಾಗಲಾರದು. ಅಂದರೆ ವಿದ್ಯಾರ್ಥಿಗಳನ್ನು ಶಂಕೆ, ಅಪನಂಬಿಕೆಯಿಂದಲೇ ಕಂಡು ಪರೀಕ್ಷೆ ನಡೆಯುತ್ತದೆ. ಹಾಗೆ ನೋಡಿದರೆ ವಿದ್ಯಾರ್ಥಿಗಳು ಪ್ರಾಮಾಣಿಕರಾಗಿದ್ದರೆ ಮೇಲ್ವಿಚಾರಣೆಯೇ ಅಗತ್ಯವಿಲ್ಲ. ಆದರೆ ಪರಿಸ್ಥಿತಿ ಹಾಗಿಲ್ಲ.

ಕುತೂಹಲ, ಜ್ಞಾನದಾಹ, ಅಧ್ಯಯನಾಸಕ್ತಿ, ಚಾರಿತ್ರ್ಯ ನಿರ್ಮಾಣ ಮಾಡುವುದೇ ಶಿಕ್ಷಣದ ಗುರಿ ಎಂದು ನೀವು ವಾದಿಸಿದರೆ, ಎಲ್ಲರೂ ನಿಮ್ಮನ್ನು ಅನ್ಯಗ್ರಹ ಜೀವಿಯಂತೆ ಬೆರಗುಗಣ್ಣಿನಿಂದ ನೋಡುತ್ತಾರೆ! ಬೆತ್ತಲೆಯವರ ಜಗತ್ತಿನಲ್ಲಿ ಬಟ್ಟೆ ಧರಿಸಿರುವವರೇ ಮೂರ್ಖರು ಅಲ್ಲವೇ?

ಗ್ರಾಮಾಂತರ ಪ್ರದೇಶದ ಅನುಕೂಲಸ್ಥರ ಮಕ್ಕಳು ದಿನವೂ 20-30 ಕಿ.ಮೀ. ಪ್ರಯಾಣ ಮಾಡಿ, ಸಮೀಪದ ನಗರಗಳ ಇಂಗ್ಲಿಷ್ ಮಾಧ್ಯಮ ಕಾನ್ವೆಂಟ್‌ಗಳಿಗೆ ಒಂದನೇ ತರಗತಿಯಿಂದಲೇ ಬರುತ್ತಾರೆ. ಅವರ ಪೋಷಕರ ಮನಸ್ಸಿನಲ್ಲಿ `ನಮ್ಮ ಮಕ್ಕಳು ಚೆನ್ನಾಗಿ ಓದಿ ಎಂಜಿನಿಯರೋ, ಡಾಕ್ಟರೋ ಆಗಲಿ. ನಾವು ಪಡುತ್ತಿರುವ ಕಷ್ಟ ಅವರು ಅನುಭವಿಸುವುದು ಬೇಡ' ಎಂಬ ಭಾವನೆ ಇರುತ್ತದೆ. ಅದಕ್ಕಾಗಿ ಅವರು ಹೊಟ್ಟೆಬಟ್ಟೆ ಕಟ್ಟಿ ಮಕ್ಕಳನ್ನು ನಗರಗಳಿಗೆ ಕಳುಹಿಸುತ್ತಾರೆ.

ಆದರೆ ಮುಂದೆ ಅದೇ ಮಕ್ಕಳು ನಗರ ಜೀವನದ ಆಕರ್ಷಣೆಗೆ ಒಳಗಾಗುತ್ತಾರೆ. ಹಳ್ಳಿಯ ಜೀವನ ಅವರಿಗೆ ಅನಾಕರ್ಷಕ ಆಗುತ್ತದೆ. `ಹಳ್ಳಿ ಗಮಾರರು' ಎಂದು ತಮ್ಮ ಪೋಷಕರನ್ನೇ ಮೂದಲಿಸದಿದ್ದರೆ ಅದು ಪೋಷಕರ ಪುಣ್ಯ! `ಬೇವ'ನ್ನು ಬಿತ್ತಿ `ಮಾವ'ನ್ನು ಅಪೇಕ್ಷಿಸಿದಂತೆ ಆಗುತ್ತದೆ ಪೋಷಕರ ಸ್ಥಿತಿ. ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಶಿಕ್ಷಣದ ದಿಕ್ಕು ತಪ್ಪಿಸುವ ಸೂಚನೆಯಲ್ಲವೇ ಇದು?

ಗ್ರಾಮಗಳನ್ನು ಸಬಲಗೊಳಿಸಿ, ಸ್ವಾವಲಂಬಿಯನ್ನಾಗಿ ಮಾಡಬೇಕೆಂಬುದು ಗಾಂಧೀಜಿಯವರ ಕನಸಾಗಿತ್ತು. ಅವರು `ಗ್ರಾಮಗಳಿಗೆ ಹಿಂತಿರುಗಿ' ಎಂದು ಯುವಜನರಿಗೆ ಕರೆ ನೀಡುತ್ತಿದ್ದರು. ಆದರೆ ಈಗಿನ ಯುವಜನ ನಗರಗಳತ್ತ ಮುಖ ಮಾಡಿದ್ದಾರೆ.

ಈಗ ಎಷ್ಟೋ ಗ್ರಾಮಗಳಲ್ಲಿ ಉಳಿದಿರುವವರು ಕೈಲಾಗದ ಮತ್ತು ಹಳ್ಳಿ ಬಿಡಲು ಮನಸ್ಸಿಲ್ಲದ ವಯಸ್ಕರು ಅಷ್ಟೆ. ಅಲ್ಲೇ ಉಳಿದಿರುವ ಕೆಲವೇ ಅನುಕೂಲಸ್ಥ ಯುವಕರನ್ನು ಮದುವೆಯಾಗಲು ಯುವತಿಯರು ತಯಾರಿಲ್ಲ. ಅವರಿಗೆ ನಗರ ಪ್ರದೇಶದ ಸಾಧಾರಣ ಕ್ಲರ್ಕ್ ಆದರೂ ವರಿಸಲು ಯೋಗ್ಯ. ಇದನ್ನೆಲ್ಲ ಕಂಡಾಗ, ಶಿಕ್ಷಣವೆಂಬ ಗಿಡವನ್ನು ತಲೆಕೆಳಗಾಗಿ ನೆಟ್ಟು ನೀರೆರೆಯುತ್ತಿದ್ದೇವೆ ಎಂದು ನಿಮಗೆ ಅನ್ನಿಸುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT