ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬರಹಕ್ಕೂ ಇದೆ ಸಂಸ್ಥೆ

ಕೈ ಬರಹ -ಕೈಪಿಡಿ ಭಾಗ 24
Last Updated 19 ಮೇ 2013, 19:59 IST
ಅಕ್ಷರ ಗಾತ್ರ

ಕೈಬರಹವನ್ನು ಕಲಿಯುವುದೇನಿದೆ ಎಂದು ಅನೇಕರು ಮೂಗು ಮುರಿಯುತ್ತಾರೆ. ಅಂಥವರಿಗೆ `ಕೈಬರಹ'ವನ್ನು ಅಧಿಕೃತವಾಗಿ ಕಲಿಸಲೆಂದು ಶಿಕ್ಷಣ ಸಂಸ್ಥೆಗಳೇ ಇವೆ ಎಂದು ತಿಳಿದರೆ ಹೃದಯಾಘಾತ ಆಗಬಹುದೇನೋ! ಪಾಲಕರು ಅಥವಾ ಶಿಕ್ಷಕರು ತಮಗೆ ಗೊತ್ತಿರುವ ಅಲ್ಪಸ್ವಲ್ಪ ವಿಷಯವನ್ನು ಮಕ್ಕಳಿಗೆ ಹೇಳಿಕೊಟ್ಟರೆ ಸಾಕು ಎಂಬ ಭಾವನೆಯೂ ಅನೇಕರಲ್ಲಿದೆ.

ಗ್ರೇಟ್ ಬ್ರಿಟನ್‌ನ ಹಲವೆಡೆ `ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹ್ಯಾಂಡ್‌ರೈಟಿಂಗ್' ಎಂಬ ಸಂಸ್ಥೆಯ ಶಾಖೆಗಳಿವೆ. ಲಂಡನ್ನಿನಲ್ಲಿ `ಸೊಸೈಟಿ ಆಫ್ ಇಟಾಲಿಕ್ ಹ್ಯಾಂಡ್‌ರೈಟಿಂಗ್' ಎಂಬ ಇನ್ನೊಂದು ಸಂಸ್ಥೆಯೂ ಇದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲೂ ಕ್ಯಾಲಿಗ್ರಫಿ  ತರಗತಿಗಳು ನಡೆಯುತ್ತವೆ.

ಬೆಂಗಳೂರಿನಲ್ಲಿ `ಗೋಲ್ಡನ್ ಹ್ಯಾಂಡ್' ಎಂಬ ಸಂಸ್ಥೆಯಿದೆ. ಕೆ.ಸಿ.ಜನಾರ್ದನ್ ಅದರ ಮುಖ್ಯಸ್ಥರು. ಅವರನ್ನು `ಪ್ರೊಫೆಸರ್ ಆಫ್ ಪೆನ್‌ಮನ್‌ಷಿಪ್ ಅಂಡ್ ಕ್ಯಾಲಿಗ್ರಫಿ' ಎಂದು ಕರೆಯುತ್ತಾರೆ. ವಿದೇಶಗಳಿಗೂ ಹೋಗಿ ಅವರು ಕೈಬರಹ ಕಲಿಸುತ್ತಾರೆ. `ದ ಹ್ಯಾಂಡ್‌ರೈಟಿಂಗ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ' ಎಂಬ ಸಂಸ್ಥೆಯು ಹಲವಾರು ಪ್ರಮುಖ ಮಹಾನಗರಗಳಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಬೆಂಗಳೂರಿನಲ್ಲೂ ಅದರ ಶಾಖೆಯಿದೆ.

ಹುಬ್ಬಳ್ಳಿಯಲ್ಲಿ `ಹ್ಯಾಂಡ್‌ರೈಟಿಂಗ್ ಇಂಪ್ರೂವ್‌ಮೆಂಟ್ ಟ್ರೈನಿಂಗ್ ಸೆಂಟರ್' ಮತ್ತು `ಅಕಾಡೆಮಿ ಆಫ್ ಕ್ಯಾಲಿಗ್ರಫಿ ಸ್ಟಡೀಸ್' ಎಂಬ ಕೇಂದ್ರಗಳಿವೆ. ಕೈಬರಹ ಉತ್ತಮಪಡಿಸಿಕೊಳ್ಳಲು ಅಂತರ್ಜಾಲದಲ್ಲೂ ಸಾಕಷ್ಟು ಮಾಹಿತಿ ಸಿಗುತ್ತದೆ. ಆದರೆ ಇವೆಲ್ಲವೂ ಇಂಗ್ಲಿಷ್ ಕೈಬರಹವನ್ನು ಮುಖ್ಯವಾಗಿ ಕಲಿಸುತ್ತವೆ. ಕನ್ನಡದ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಕೈಬರಹ ಕಲಿಸುವ ಸಂಸ್ಥೆ ಯಾವುದಾದರೂ ಇದೆಯೇ ಎಂಬುದು ನನಗೆ ತಿಳಿದಿಲ್ಲ.

37 ವರ್ಷಗಳಿಂದ ಶಿಕ್ಷಕನಾಗಿರುವ ನಾನು ಅನುಭವದಿಂದಾಗಿ ಕೈಬರಹವನ್ನು ಸುಧಾರಿಸುವ ಮಾರ್ಗವನ್ನು ಕಂಡುಕೊಂಡಿದ್ದೇನೆ. 10 ವರ್ಷ (5ನೇ ತರಗತಿ) ಮೇಲ್ಪಟ್ಟ ಮಕ್ಕಳಿಗೆ ಹಾಗೂ ದೊಡ್ಡವರಿಗೂ ಆರೇಳು ವರ್ಷಗಳಿಂದ ಶಿಬಿರಗಳು ಹಾಗೂ ಕಾರ್ಯಾಗಾರಗಳನ್ನು ನಡೆಸುತ್ತಾ ಬಂದಿದ್ದೇನೆ. ಇಂತಹ ಶಿಬಿರ ಅಥವಾ ಕಾರ್ಯಾಗಾರಗಳು ನಮ್ಮ ರಾಜ್ಯದ ಹಲವೆಡೆ ನಡೆಯಲಿ, ಎಲ್ಲರ ಕೈಬರಹ ಸುಧಾರಿಸಲಿ ಎಂಬ ಉದ್ದೇಶದಿಂದ ಅದರ ಸ್ವರೂಪವನ್ನು ಈ ಲೇಖನದಲ್ಲಿ ವಿವರಿಸಿದ್ದೇನೆ.

ಶಿಬಿರ ಅಥವಾ ಸಪ್ತಾಹವೆಂದರೆ ಒಂದು ವಾರ ದಿನಕ್ಕೆ ಒಂದು ಅಥವಾ ಒಂದೂವರೆ ತಾಸಿನಂತೆ ನಡೆಯುತ್ತದೆ. ಕಾರ್ಯಾಗಾರ ಎಂದರೆ ಒಂದೇ ದಿನ ಆರು ತಾಸು- ಊಟಕ್ಕೆ ಮೊದಲು ಮೂರು ಮತ್ತು ಅನಂತರ ಮೂರು ತಾಸು ನಡೆಯುತ್ತದೆ. ಶಿಬಿರವಾದರೆ ಕನ್ನಡ ಹಾಗೂ ಇಂಗ್ಲಿಷ್ ಎರಡರ ಕೈಬರಹವನ್ನೂ ಕಲಿಸಬಹುದು. ಕಾರ್ಯಾಗಾರವಾದರೆ ಯಾವುದಾದರೂ ಒಂದು ಮಾತ್ರ ಆಗುತ್ತದೆ.

ಪ್ರಾರಂಭದಲ್ಲಿ ತರಬೇತಿಗೆ ಬಂದ ಅಭ್ಯರ್ಥಿಗಳಿಂದ ಈಗಿರುವ ಅವರ ಕೈಬರಹದಲ್ಲಿ ಕೆಲವು ವಾಕ್ಯಗಳನ್ನು ಬರೆಸಬೇಕು. ತರಬೇತಿಯ ನಂತರ ಅದೇ

ವಾಕ್ಯಗಳನ್ನು ಅವರಿಂದ ಬರೆಸಬೇಕು. ಇದರಿಂದ ಸುಧಾರಣೆ ಆಗಿರುವುದು ಅವರ ಅನುಭವಕ್ಕೆ ಬರುತ್ತದೆ (ದೃಷ್ಟಾಂತ ನೋಡಿ). ಅವರಲ್ಲಿ `ಆತ್ಮವಿಶ್ವಾಸ' ಮೂಡುತ್ತದೆ. ಆದ್ದರಿಂದ ಇದು ಅತಿ ಮುಖ್ಯ.

ಇಂತಹ ಶಿಬಿರ ಅಥವಾ ಕಾರ್ಯಾಗಾರಗಳಲ್ಲಿ ಬರೆಯುವಾಗ ಕೈಯನ್ನು ಮನಸ್ಸು ಹಾಗೂ ಬುದ್ಧಿಗಳು ನಿರ್ದೇಶಿಸುತ್ತವೆ ಎಂಬುದನ್ನು ಅಭ್ಯರ್ಥಿಗಳಿಗೆ ಮನವರಿಕೆ ಮಾಡಿಸಬೇಕು. ಬರವಣಿಗೆಯ `ಗುರಿ' ನಮ್ಮ ವ್ಯಕ್ತಿತ್ವದ ಪ್ರಕಟಣೆ ಮತ್ತು ಓದುಗರ ಮನ ಗೆಲ್ಲುವುದು ಎಂದು ಸ್ಪಷ್ಟಪಡಿಸಬೇಕು. ಆನಂತರ ಬರೆಯುವಾಗಿನ ತಾಂತ್ರಿಕ ಅಂಶಗಳಾದ ಪೆನ್ ಹಿಡಿದುಕೊಳ್ಳುವುದು, ಪುಸ್ತಕ ಮತ್ತು ಕಣ್ಣಿನ ನಡುವಿನ ಅಂತರ ಮುಂತಾದವುಗಳನ್ನು ಸರಿಪಡಿಸಬೇಕು.

ಒಂದೊಂದೇ ಅಕ್ಷರಗಳನ್ನು ಕೆಟ್ಟದಾಗಿ ಹೇಗೆ ಬರೆಯಬಹುದು, ಸುಂದರವಾಗಿಯೂ ಬರೆಯಬಹುದು ಎಂದು ಉದಾಹರಣೆ ಮೂಲಕ ತಿಳಿಸಿ, ಹತ್ತಿಪ್ಪತ್ತು ಬಾರಿ ಬರೆಸಿ ಅಭ್ಯಾಸ ಮಾಡಿಸಬೇಕು. ಇದನ್ನು ಕನ್ನಡವಾದರೆ ಎರಡು ಗೆರೆಯ ಪುಸ್ತಕದಲ್ಲಿ ಹಾಗೂ ಇಂಗ್ಲಿಷ್ ಆದರೆ ನಾಲ್ಕು ಗೆರೆಯ ಪುಸ್ತಕದಲ್ಲಿ ಮಾಡಿಸಬೇಕು. ಇಂಗ್ಲಿಷ್ ಆದರೆ ದೊಡ್ಡಕ್ಷರ, ಚಿಕ್ಕಕ್ಷರ ಎರಡನ್ನೂ ಕಲಿಸಬೇಕು. ಕನ್ನಡ ಆದರೆ ಅಕ್ಷರಗಳಲ್ಲದೆ ಕಾಗುಣಿತ ಮತ್ತು ಒತ್ತಕ್ಷರಗಳನ್ನು ಕಲಿಸಬೇಕಾಗುತ್ತದೆ.

ಬಿಡಿಯಾಗಿ ಅಕ್ಷರಗಳನ್ನು ಕಲಿಸಿದ ಮುಂದಿನ ಹಂತ ಪದಗಳನ್ನು ಕಲಿಸುವುದು. ಇಂಗ್ಲಿಷ್ ಆದರೆ ಅಕ್ಷರಗಳ ಜೋಡಣೆಯನ್ನೂ ಕಲಿಸಬೇಕು. ಪದಗಳ ನಂತರ ವಾಕ್ಯಗಳು ಹಾಗೂ ಪ್ಯಾರಾ ಬರೆಸಬೇಕು. ಈ ಹಂತದಲ್ಲಿ ಪದಗಳ ನಡುವಿನ ಅಂತರಕ್ಕೆ ಗಮನ ನೀಡಬೇಕು.

ಅಂತಿಮವಾಗಿ ಮಕ್ಕಳು ಸಿಂಗಲ್ ಲೈನ್ ಪುಸ್ತಕದಲ್ಲಿ ಬರೆಯಬೇಕಾಗಿರುವುದರಿಂದ ಅಂತಹ ಪುಸ್ತಕದಲ್ಲೂ ಮೇಲಿನ ಕ್ರಮದಲ್ಲೇ ಕಲಿಸಬೇಕು. ಎರಡು ಮುದ್ರಿತ ಗೆರೆಗಳ ನಡುವೆ ಪೆನ್ಸಿಲ್‌ನಿಂದ ಎರಡು ಗೆರೆ ಎಳೆದು ಅಭ್ಯಾಸ ಮಾಡಿಸುವುದು ಉತ್ತಮ. ಸಿಂಗಲ್ ಲೈನ್‌ನಲ್ಲಿ ಬರೆಯುವಾಗ ಗಾತ್ರ ಎಷ್ಟಿರಬೇಕು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ತರಬೇತಿ ಮುಗಿದ ನಂತರ ಅಭ್ಯರ್ಥಿಗಳು ತರಬೇತಿಯ ಪ್ರಾರಂಭದಲ್ಲಿ ಬರೆದ ಅದೇ ವಾಕ್ಯಗಳನ್ನು ಮತ್ತೆ ಬರೆಯಲು ಹೇಳಬೇಕು. ನಾನು ನಡೆಸಿಕೊಂಡು ಬಂದಿರುವ ಇಂತಹ ಶಿಬಿರ ಅಥವಾ ಕಾರ್ಯಾಗಾರಗಳ ಕಡೆಯಲ್ಲಿ ಈ ಕೈಬರಹ `ಪ್ರದರ್ಶನ' ಇರುತ್ತದೆ.

ಮುಂದಿನ ವಾರ: ಪ್ರತಿಕ್ರಿಯೆಗಳು ಹಾಗೂ ಅನುಭವ-ಜಿ.ಕೆ.ವೆಂಕಟೇಶಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT