ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರತಿಭೆಯ ಸೈಕ್ಲಿಂಗ್‌ ಯಾನ...

Last Updated 6 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬಡತನ ಮತ್ತು ಛಲ ಎಲ್ಲವನ್ನೂ ಕಲಿಸುತ್ತದೆ ಎನ್ನುವುದು ಇದೇ ಕಾರಣಕ್ಕೆ ಇರಬಹುದೇನೋ?

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕುಲ್ಲಳ್ಳಿ ಗ್ರಾಮದ ಮೇಘಾ ಗೂಗಾಡ ಐದಾರು ವರ್ಷಗಳ ಹಿಂದೆ ಯಾರಿಗೂ ಗೊತ್ತಿಲ್ಲದ ಪ್ರತಿಭೆ. ಈಗ ಸೈಕ್ಲಿಂಗ್‌ನಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಭರವಸೆಯಾಗಿ ಹೊರಹೊಮ್ಮಿದ್ದಾರೆ. ಹೋದ ತಿಂಗಳು ಬಹಮಾಸ್‌ನಲ್ಲಿ ನಡೆದ ಆರನೇ ಯೂತ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅವರು ದೇಶವನ್ನು ಪ್ರತಿನಿಧಿಸಿದ್ದರು. ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ವೈಷ್ಣವಿ, ಒಡಿಶಾದ ದಿನೇಶ ಕುಮಾರ್‌, ಹರಿಯಾಣದ ಅನಿಲ್‌ ಮತ್ತು ಕರ್ನಾಟಕದ ಮೇಘಾ ಪಾಲ್ಗೊಂಡಿದ್ದರು.

ನಾಸು ನಗರದಲ್ಲಿ ನಡೆದ ಕಾಮನ್‌ವೆಲ್ತ್‌ ಕೂಟದಲ್ಲಿ 64 ರಾಷ್ಟ್ರಗಳ 1034 ಸ್ಪರ್ಧಿಗಳು ಭಾಗವಹಿಸಿದ್ದರು. 96 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಭಾರತ ಆರು ಪದಕಗಳನ್ನು ಜಯಿಸಿ ಒಟ್ಟಾರೆಯಾಗಿ ಏಳನೇ ಸ್ಥಾನ ಸಂಪಾದಿಸಿತು. ಸೈಕ್ಲಿಸ್ಟ್‌ಗಳು ಪದಕ ಗೆಲ್ಲಲಿಲ್ಲವಾದರೂ ಮುಂದೆ ಉತ್ತಮ ಸಾಮರ್ಥ್ಯ ತೋರಿಸುವ ಭರವಸೆ ಮೂಡಿಸಿದರು. ಟೈಮ್‌ ಟ್ರಯಲ್‌ ವಿಭಾಗದಲ್ಲಿ ಮೇಘಾ ಎಂಟನೇ ಸ್ಥಾನ ಪಡೆದರು. ನವದೆಹಲಿಯಲ್ಲಿ ನಡೆದಿದ್ದ ಏಷ್ಯನ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಪಾಯಿಂಟ್‌ ವಿಭಾಗದಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು. ಒಂದು ಪಾಯಿಂಟ್‌ ಅಂತರದಿಂದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರು.

2012ರಲ್ಲಿ ಪಟಿಯಾಲದಲ್ಲಿ ನಡೆದ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೇಘಾ ಮೊದಲ ಬಾರಿಗೆ ಪದಕ ಜಯಿಸಿದ್ದರು. ರಾಷ್ಟ್ರೀಯ ಕೂಟದಲ್ಲಿ ಇದುವರೆಗೆ ಆರು ಚಿನ್ನ, ಐದು ಬೆಳ್ಳಿ ಮತ್ತು ಆರು ಕಂಚಿನ ಪದಕಗಳಿಗೆ ಮುತ್ತಿಕ್ಕಿದ್ದಾರೆ. ಬಾಗಲಕೋಟೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದಲ್ಲಿ ಸೈಕ್ಲಿಂಗ್ ಅಭ್ಯಾಸ ಆರಂಭಿಸಿದ ಮೇಘಾ ಕಡಿಮೆ ಸಮಯದಲ್ಲಿ ಸೈಕ್ಲಿಂಗ್‌ ಕೌಶಲಗಳನ್ನು ಕಲಿತವರು. ನಂತರ ವಿಜಯಪುರದ ವಸತಿ ನಿಲಯದಲ್ಲಿ ತರಬೇತಿ ಮುಂದುವರಿಸಿದರು. ಮೇಘಾ ಅವರದ್ದು ಕ್ರೀಡಾ ಕುಟುಂಬ. ಅವರ ತಂದೆ ಕಬಡ್ಡಿ ಆಟಗಾರ, ದೊಡ್ಡಪ್ಪ ಕುಸ್ತಿ ಪಟು. ಹೀಗಾಗಿ ಕ್ರೀಡೆಯ ಬಗ್ಗೆ ಮೊದಲಿನಿಂದಲೂ ಒಲವು ಇದೆ.

‘ನಗರ ಪ್ರದೇಶದ ಜನರಿಗೆ ಇರುವಷ್ಟು ಸೌಲಭ್ಯಗಳು ಈ ಭಾಗದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇರುವುದಿಲ್ಲ. ಆದರೆ ದೈಹಿಕವಾಗಿ ಬಲಿಷ್ಠರಾಗಿರುತ್ತಾರೆ. ಬೆಳಗಿನ ಜಾವವೇ ಎದ್ದು ಹೊಲದಲ್ಲಿ ಕೆಲಸ ಮಾಡಿ ಶಾಲೆಗೆ ಹೋಗುತ್ತಾರೆ. ಸಂಜೆ ಮನೆಕೆಲಸ ಮಾಡುವ ಜೊತೆಗೆ ಓದಿಗೂ ಮಹತ್ವ ಕೊಡುತ್ತಾರೆ. ನಿತ್ಯ ಈ ಎಲ್ಲಾ ದಿನಚರಿಯ ನಡುವೆಯೂ ಎತ್ತರದ ಸಾಧನೆ ಮಾಡಬೇಕು ಎನ್ನುವ ಛಲ ಇಲ್ಲಿನ ಮಕ್ಕಳಲ್ಲಿದೆ. ಆದ್ದರಿಂದ ಗ್ರಾಮೀಣ ಪ್ರದೇಶದಿಂದ ಬಂದ ಮೇಘಾ ಈಗ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಗಮನ ಸೆಳೆಯುತ್ತಿದ್ದಾರೆ’ ಎಂದು ಬಾಗಲಕೋಟೆ ಡಿ.ವೈ.ಇ.ಎಸ್‌. ಸೈಕ್ಲಿಂಗ್‌ ಕೋಚ್‌ ಅನಿತಾ ನಿಂಬರಗಿ ಹೇಳುತ್ತಾರೆ. ಮೇಘಾಗೆ ದುಂಡಪ್ಪ ಅಥಣಿ ಅವರೂ ತರಬೇತಿ ನೀಡಿದ್ದಾರೆ.

‘ಯೂತ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಾವು ಉತ್ತಮ ಸಾಮರ್ಥ್ಯವನ್ನೇ ನೀಡಿದೆವು. ವಿದೇಶಿ ಸ್ಪರ್ಧಿಗಳೂ ಕಠಿಣ ಪೈಪೋಟಿ ಒಡ್ಡಿದರು. ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಸೈಕ್ಲಿಸ್ಟ್‌ಗಳ ಸಾಹಸ ಗಮನ ಸೆಳೆಯಿತು. ನಮಗಿಂತಲೂ ಮುಂದಿರುವ ದೇಶದ ಸ್ಪರ್ಧಿಗಳ ಜೊತೆ ಸ್ಪರ್ಧಿಸಿದ್ದರಿಂದ ನಮ್ಮಲ್ಲಿನ ವಿಶ್ವಾಸವೂ ಹೆಚ್ಚಾಯಿತು. ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು’ ಎಂದು ಮೇಘಾ ಕಾಮನ್‌ವೆಲ್ತ್‌ ಕೂಟದ ಅನುಭವಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಫಿಟ್‌ನೆಸ್‌, ಅಭ್ಯಾಸ ಮಾಡುವ ಕ್ರಮ ಇವುಗಳಲ್ಲಿ ನಮಗೂ ಮತ್ತು ವಿದೇಶಿ ಸೈಕ್ಲಿಸ್ಟ್‌ಗಳಿಗೆ ಹೆಚ್ಚು ವ್ಯತ್ಯಾಸವೇನಿಲ್ಲ. ಆದರೆ ಅವರು ತಾಂತ್ರಿಕವಾಗಿ ಮುಂದಿದ್ದಾರೆ. ಗುಣಮಟ್ಟದ ಸೈಕಲ್‌ಗಳನ್ನು ಬಳಸುತ್ತಾರೆ. ಮುಂಬರುವ ಏಷ್ಯಾ ಕಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಹಿಂದಿನ ಅನುಭವ ನೆರವಾಗಲಿದೆ’ ಎಂದು ಪಟಿಯಾಲದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್‌ ಸ್ಪೋರ್ಟ್ಸ್‌ನಲ್ಲಿ ತರಬೇತಿ ಪಡೆಯುತ್ತಿರುವ ಮೇಘಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT