ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ತಯಾರಿ: ಕಾಲ ಮಿಂಚಿಲ್ಲ

Last Updated 13 ಜನವರಿ 2013, 19:59 IST
ಅಕ್ಷರ ಗಾತ್ರ

ಹೊಸ ವರ್ಷ ಬಂತೆಂದರೆ ಎಲ್ಲರಿಗೂ ಸಂತೋಷ. ಆದರೆ ಮಕ್ಕಳಲ್ಲಿ ಮಾತ್ರ ತಳಮಳ, ಆತಂಕ ಕಂಡುಬರುತ್ತದೆ. ಇದಕ್ಕೆ ಕಾರಣ ಪರೀಕ್ಷೆಗಳ ಸೀಜನ್ ಶುರುವಾಗುವುದು. ಆಟಗಳು ಬಂದ್, ವ್ಯರ್ಥ ಕಾಲಹರಣಕ್ಕೆ ಫುಲ್ ಸ್ಟಾಪ್ ಹಾಕಿ ಪುಸ್ತಕಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಾರೆ.

ಹೀಗಾಗಿ ಹೊಸ ವರ್ಷಾಚರಣೆ ಕೆಲವು ಮಕ್ಕಳ ಪಾಲಿಗೆ ಸಂತೋಷದ ವಿಷಯವಾದರೆ, ಇನ್ನು ಕೆಲವರಿಗೆ ದುಃಖದ ಸಂಗತಿ. ಕಳೆದ ವರ್ಷ ಸಮಯಕ್ಕನುಸಾರವಾಗಿ ಚೆನ್ನಾಗಿ ಓದಿ ವರ್ಷಪೂರ್ತಿ ಸದುಪಯೊಗ ಪಡಿಸಿಕೊಂಡವರಿಗೆ ಮಾತ್ರ ಸಂತೋಷ. ಸುಮ್ಮನೆ ಕಾಲಹರಣ ಮಾಡಿದವರಿಗೆ ಇದು ದುಃಖದ ಸಂಗತಿಯೇ ಸರಿ.

ಆರಂಭದಿಂದಲೂ ಕ್ರಮಬದ್ಧವಾಗಿ ಓದಿಕೊಳ್ಳುವುದನ್ನು ರೂಢಿಸಿಕೊಂಡರೆ ಪರೀಕ್ಷೆಗಳು ಹತ್ತಿರವಾದಾಗ ಅನಗತ್ಯ ಒತ್ತಡಕ್ಕೆ ಒಳಗಾಗುವ ಪ್ರಮೇಯವೇ ಇರುವುದಿಲ್ಲ. ಈಗಲೂ ಕಾಲ ಮಿಂಚಿಲ್ಲ, ನಿಮಗಿರುವ ಸಮಯ, ಓದಬೇಕಾದ ವಿಷಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಒಂದು ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ. ಅದನ್ನು ನೀವು ಓದುವ ಸ್ಥಳದಲ್ಲಿ ಸದಾ ಕಾಣುವಂತೆ ನೇತುಹಾಕಿಕೊಳ್ಳಿ.
ಪರೀಕ್ಷಾ ಪೂರ್ವಸಿದ್ಧತೆ

ಪರೀಕ್ಷೆ ಎಂಬುದು ವಿದ್ಯಾರ್ಥಿಗಳಿಗಿಂತ ಅವರ ಪೋಷಕರಿಗೇ ದೊಡ್ಡ ಪರೀಕ್ಷೆಯಂತೆ ಇರುತ್ತದೆ. ಪರೀಕ್ಷಾ ತಯಾರಿಯಲ್ಲಿ ಆರೋಗ್ಯ ಮುಖ್ಯ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಕೆಲವು ಮಕ್ಕಳ ಆರೋಗ್ಯ ಸರಿಯಾಗಿರುವುದಿಲ್ಲ. ನಿದ್ದೆಗೆಟ್ಟು ನಿರಂತರವಾಗಿ ಓದುತ್ತಿದ್ದರೆ ಓದಿದ್ದು ಜೀರ್ಣವಾಗುವುದೇ ಇಲ್ಲ. ಪರೀಕ್ಷೆ ಸಮಯದಲ್ಲಿ ಈ ರೀತಿಯಾದರೆ ವರ್ಷವಿಡೀ ಮಾಡಿದ ಪ್ರಯತ್ನ ವ್ಯರ್ಥವಾದಂತೆ.

ದಿನಕ್ಕೆ ಕನಿಷ್ಠ 6 ಗಂಟೆಯಾದರೂ ನಿದ್ರೆ ಅವಶ್ಯಕ. ಇದರಿಂದ ಶರೀರ ಮತ್ತು ಮನಸ್ಸಿಗೆ ಅಗತ್ಯವಾದ ವಿಶ್ರಾಂತಿ ಸಿಗುತ್ತದೆ. ರಾತ್ರಿ ನಿದ್ದೆಗೆಟ್ಟು ಓದುವುದಕ್ಕಿಂತ ರಾತ್ರಿ ಬೇಗ ಮಲಗಿ ಬೆಳಗಿನ ಜಾವ 4 ಗಂಟೆಗೆ ಎದ್ದು ಓದಿದ್ದು ಚೆನ್ನಾಗಿ ನೆನಪಿನಲ್ಲಿ ಇರುತ್ತದೆ. ಎಷ್ಟೇ ಆದರೂ ರಾತ್ರಿ ಓದಿದ್ದು ನಿನ್ನೆ ಓದಿದಂತೆ, ಬೆಳಿಗ್ಗೆ ಓದಿದ್ದು ನಿಮ್ಮ ಪರೀಕ್ಷಾ ದಿನ, ಅಂದರೆ ಅದೇ ದಿನ ಓದಿದಂತೆ.

ಸೂಕ್ತ ಸಮಯದಲ್ಲಿ ಪೋಷಕಾಂಶಯುಕ್ತ ಆಹಾರ ತೆಗೆದುಕೊಳ್ಳಬೇಕು. ಆಹಾರ ಬಿಟ್ಟು ಓದಿದರೆ ಓದಿದ್ದು ತಲೆಗೆ ಹತ್ತುವುದಿಲ್ಲ. ರಾತ್ರಿ ಆಹಾರ ಮಿತವಾಗಿರಲಿ. ಹಣ್ಣು- ತರಕಾರಿ ಹೆಚ್ಚು ಬಳಸಿ. ಕೆಲವು ಮಕ್ಕಳು ರಾತ್ರಿ ನಿದ್ದೆ ಬರಬಾರದೆಂದು ಚಹಾ, ಕಾಫಿ, ಚ್ಯೂಯಿಂಗ್ ಗಮ್, ಅಡಿಕೆ ಪುಡಿ, ಗುಟಕಾ ಮತ್ತು ಧೂಮಪಾನಗಳ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇವು ಮುಂದೆ ಚಟವಾಗಿಯೂ ಪರಿಣಮಿಸಬಹುದು. ಆದ್ದರಿಂದ ಇವುಗಳಿಂದ ದೂರ ಇರಿ. ನಿದ್ರೆ ಪ್ರಕೃತಿಯ ಸಹಜ ಗುಣ. ಅದನ್ನು ತಡೆದರೆ ಕಣ್ಣುರಿ, ತೂಕಡಿಕೆ ಲಕ್ಷಣಗಳು ಕಂಡುಬರುತ್ತವೆ.

ಓದಲು ಸೂಕ್ತ ಸ್ಥಳ ಇರಬೇಕು, ಯಥೇಚ್ಛ ಬೆಳಕು- ಗಾಳಿ ಬರುತ್ತಿರಬೇಕು. ಯಾವುದೇ ಶಬ್ದಮಾಲಿನ್ಯದಂತಹ (ಟಿ.ವಿ) ಆಕರ್ಷಣೆಗಳು ಇರಬಾರದು. ರಾತ್ರಿ ಓದಲಿಕ್ಕೆ ಟೇಬಲ್ ಲ್ಯಾಂಪ್ ಬಳಸಿದರೆ ಉತ್ತಮ. ಇದರಿಂದ ಜೊತೆಯಲ್ಲಿರುವ ಇತರರಿಗೆ ತೊಂದರೆಆಗದು. ಲ್ಯಾಂಪ್ ಬೆಳಕು ನೇರವಾಗಿ ಕಣ್ಣಿಗೆ ಕುಕ್ಕುವಂತೆ ಅಥವಾ ಹಿಂಬದಿಯಿಂದ ಬರದೇ ಒಂದು ಬದಿಯಿಂದ ಬರುವಂತೆ ಇರಬೇಕು.
ಪಾಲಕರು ಮಕ್ಕಳ ಬಳಿಯೇ ಇದ್ದು ಏಕಾಗ್ರತೆಯಿಂದ ಓದಲು ಪ್ರೇರೇಪಿಸಬೇಕು. ಮೊದಲಿಗೆ ಪಠ್ಯವನ್ನು ಚೆನ್ನಾಗಿ ಓದಬೇಕು.

ಅದರಲ್ಲಿಯ ಮುಖ್ಯ ಹಾಗೂ ಗಮನಾರ್ಹ ಅಂಶಗಳನ್ನು ಪೆನ್ಸಿಲ್‌ನಿಂದ ಗುರುತು ಮಾಡಿ ಅಥವಾ ಇನ್ನೊಂದು ನೋಟ್ ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳಬೇಕು. ಪರೀಕ್ಷಾ ಸಮಯದಲ್ಲಿ ಈ ಮುಖ್ಯಾಂಶಗಳನ್ನು ಓದಲು ಸಹಾಯವಾಗುತ್ತದೆ. ನಂತರ ಅದರಲ್ಲಿ ಬರುವ ಚಿತ್ರಗಳು, ನಕಾಶೆಗಳು, ಸೂತ್ರಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದರಿಂದ ವಿಷಯ ಮರೆಯಲಾರದು. ಓದಿರುವ ಪಾಠದ ಬಗ್ಗೆ ಪಾಲಕರು ಪ್ರಶ್ನೆಗಳನ್ನು ಕೇಳುವ ಮೂಲಕ ಆ ವಿಷಯ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯುವಂತೆ ಮಾಡಬಹುದು.

ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ನಿತ್ಯವೂ ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ. ನಿರ್ದಿಷ್ಟ ಸಮಯದಲ್ಲಿ ಅವುಗಳನ್ನು ಪೂರ್ತಿ ಮಾಡಲು ಸಾಧ್ಯವಾಗುತ್ತದೆಯೇ ಎಂದು ಪ್ರತ್ನಿಸಿ. ಹತ್ತು ಬಾರಿ ಓದುವುದು ಒಂದು ಬಾರಿ ಬರೆಯುವುದಕ್ಕೆ ಸಮ ಎನ್ನುತ್ತಾರೆ. ಇದು ನಿಜವೂ ಹೌದು. ಬರೆಯುವಾಗ ನಿಮ್ಮ ಬಾಯಿ, ಕಣ್ಣು, ಕಿವಿ, ಮನಸ್ಸು ಎಲ್ಲವೂ ಕಾರ್ಯನಿರತವಾಗಿರುತ್ತವೆ. ನೆನಪಿರಲಿ, ಪರೀಕ್ಷೆಯಲ್ಲಿ ಓದುವುದಲ್ಲ ಬರೆಯುವುದಿರುತ್ತದೆ! ಇದರಿಂದ ನಿಮ್ಮ ಬರವಣಿಗೆಯೂ ಶುದ್ಧವಾಗುತ್ತದೆ ಮತ್ತು ವೇಗವಾಗಿ ಬರೆಯುವ ಅಭ್ಯಾಸವೂ ಆಗುತ್ತದೆ.ಆದ್ದರಿಂದ ನಿಮ್ಮ ತಯಾರಿಯಲ್ಲಿ ಓದುವುದಕ್ಕಿಂತ ಬರೆಯುವ ಅಭ್ಯಾಸವೇ ಅತಿ ಉಪಯುಕ್ತ ಎಂಬುದು ನನ್ನ ಸಲಹೆ.

ಗಂಟೆಗಟ್ಟಲೆ ಒಂದೇ ವಿಷಯ ಓದುತ್ತಾ ಕುಳಿತುಕೊಳ್ಳದೆ ಆಗಿಂದಾಗ್ಗೆ ಒಂದೊಂದು ವಿಷಯ ಬದಲಾಯಿಸಿ ಓದಬೇಕು. ಮಧ್ಯದಲ್ಲಿ 15 ನಿಮಿಷ ಸ್ವಲ್ಪ ತಿರುಗಾಡಿ ವಿಶ್ರಾಂತಿ ಪಡೆಯಿರಿ. ಪರೀಕ್ಷೆ 15-20 ದಿನಗಳಿರುವಾಗಲೇ ಓದು ಪೂರ್ತಿಯಾಗಿರಬೇಕು. ನಂತರ ಪುನರವಲೋಕನೆಯ ಸಮಯವಷ್ಟೇ. ಆಗ ಪೂರ್ತಿ ವಿಷಯ ಓದುವುದಕ್ಕಿಂತ ನೀವು ತಯಾರಿಸಿದ ಮುಖ್ಯ ವಿಷಯಗಳ ನೋಟ್ ಪುಸ್ತಕ ಸಹಾಯವಾಗುತ್ತದೆ. ಎಲ್ಲ ವಿಷಯಗಳನ್ನೂ ವಾರಕ್ಕೆ ಒಂದು ಸಲದಂತೆ ತಿಂಗಳಿಗೆ 4 ಬಾರಿ ಪುನರಾವರ್ತನೆ ಮಾಡಿದರೆ ಆ ವಿಷಯ ಮರೆಯಲು ಸಾಧ್ಯವೇ ಇಲ್ಲ.

ಪ್ರತಿ ರಾತ್ರಿ ನಾಳೆಯ ದಿನ ಏನೆಲ್ಲ ಓದಬೇಕೆಂದು ಪಟ್ಟಿ ತಯಾರಿಸಿಕೊಂಡು ಅದರಂತೆ ಓದುತ್ತಾ ಮುಗಿದ ವಿಷಯಗಳ ಮೇಲೆ ರೇಖೆ ಎಳೆಯುತ್ತಾ ಹೋದರೆ ಓದಿದ ಬಗ್ಗೆ ಸಂತೋಷ-ತೃಪ್ತಿ ಸಿಗುತ್ತದೆ ಮತ್ತು ಆ ದಿನ ಓದದೇ ಉಳಿದ ವಿಷಯಗಳ ಬಗ್ಗೆ ಅರಿಯಲೂ ಸಾಧ್ಯವಾಗುತ್ತದೆ.

ಸಾಧನ- ಸಲಕರಣೆ
ಪೆನ್ನು, ಪೆನ್ಸಿಲ್, ಪ್ರವೇಶಪತ್ರ ಮುಂತಾದವುಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಹೊಸ ಪೆನ್ನು-ಪೆನ್ಸಿಲ್ ಬಳಸದಿರುವುದೇ ಸೂಕ್ತ. ನೀವು ಮೊದಲು ಬಳಸಿದ ಇಂಕ್ ಇರುವ ಪೆನ್ನನ್ನೇ ಬಳಸಬೇಕು. ಏಕೆಂದರೆ ಹೊಸ ಪೆನ್ನು ಅಷ್ಟು ಬೇಗ ನಿಮ್ಮ ಬರವಣಿಗೆಗೆ ಹೊಂದಲಾರದು. ನಿಮಗೆ ಕೈಯ್ಯಲ್ಲಿ ಹಿಡಿತವಿರುವ ಮತ್ತು ಮೇಲಿಂದ ಮೇಲೆ ಬರೆದು ರೂಢಿಯಾಗಿರುವ ನಿಮ್ಮ ನೆಚ್ಚಿನ ಪೆನ್ನು-ಪೆನ್ಸಿಲ್ಲನ್ನೇ ಬಳಸಿ.

ಪರೀಕ್ಷಾ ಕೇಂದ್ರದಲ್ಲಿ
ಪರೀಕ್ಷೆಗೆ ಹೊರಡುವವರೆಗೂ ಓದುವಂತೆ ಒತ್ತಡ ಹೇರಬೇಡಿ. ಓದನ್ನು ಮನೆಯಲ್ಲೇ ಮುಗಿಸಿ ಅರ್ಧ ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೊಠಡಿ ಪ್ರವೇಶಿಸಿ ಶಾಂತಚಿತ್ತರಾಗಿ ಕುಳಿತುಕೊಳ್ಳಿ. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕ ತಕ್ಷಣ ಉತ್ತರ ಬರೆಯಲು ಆರಂಭಿಸಬೇಡಿ. ಮೊದಲು ಒಂದು ಬಾರಿ ಪೂರ್ತಿ ಪ್ರಶ್ನೆಪತ್ರಿಕೆ ಚೆನ್ನಾಗಿ ಓದಿ ನಂತರ ಜಾಗರೂಕತೆಯಿಂದ ನಿಮಗೆ ಚೆನ್ನಾಗಿ ಉತ್ತರ ಬರೆಯಲು ಸಾಧ್ಯವಾದ ಉತ್ತರಗಳನ್ನು ಮೊದಲು ಬರೆಯಿರಿ.

ವಿಷಯ ಚೆನ್ನಾಗಿ ಗೊತ್ತೆಂದು ಮಿತಿಮೀರಿ ಬರೆಯದಿರಿ. ಪ್ರಶ್ನೆಯ ಅಂಕಗಳಿಗೆ ತಕ್ಕಂತೆ ಸಮಯ ನಿರ್ಧರಿಸಿಕೊಂಡು ಉತ್ತರಿಸಬೇಕು. ಇದರಿಂದ ಎಲ್ಲ ಪ್ರಶ್ನೆಗಳನ್ನೂ ಸಮಯಕ್ಕನುಸಾರವಾಗಿ ಉತ್ತರಿಸಿದಂತೆ ಆಗುತ್ತದೆ. ನಿಮ್ಮ ಪಕ್ಕದವರು ಎಷ್ಟು ಹೆಚ್ಚುವರಿ ಪುಟಗಳನ್ನು (ಅಡಿಷನಲ್ ಶೀಟ್) ಕಟ್ಟುತ್ತಾರೆಂದು ಲೆಕ್ಕಾಚಾರ ಮಾಡುತ್ತಾ ಕೂಡಬೇಡಿ. ಎಷ್ಟು ಪುಟ ಬರೆದಿರುವಿರಿ ಎಂಬುದು ಮುಖ್ಯವಲ್ಲ, ಎಷ್ಟು ವಿಷಯ ಬರೆದಿದ್ದೀರಿ ಎಂಬುದೇ ಮುಖ್ಯ. ನೆನಪಿರಲಿ, ನಿಮ್ಮ ಉತ್ತರ ಪತ್ರಿಕೆಯಲ್ಲಿರುವ ಪುಟಗಳು ಸಮರ್ಪಕವಾಗಿರುತ್ತವೆ. ಆದ್ದರಿಂದ ಹೆಚ್ಚು ಪುಟಗಳನ್ನು ಬಳಸಲೇಬೇಕು ಎಂದೇನಿಲ್ಲ.

ಉದ್ದನೆಯ ವಾಕ್ಯ ಅಥವಾ ಪ್ಯಾರಾ ಬರೆಯುವುದಕ್ಕಿಂತ ಉಪ ಶೀರ್ಷಿಕೆ (ಸಬ್ ಹೆಡ್ಡಿಂಗ್) ಹಾಕಿ ಪಾಯಿಂಟ್ಸ್ ಬರೆಯಿರಿ. ಇದರಿಂದ ಮೌಲ್ಯಮಾಪಕರಿಗೆ ಓದಲು ಬೇಜಾರಾಗದು. ಅವರಿಗೆ ನೀವು ಬರೆದದ್ದನ್ನೆಲ್ಲ ಓದಲು ಸಮಯ ಇರುವುದಿಲ್ಲ ಅಥವಾ ಸಮಯ ಇದ್ದರೂ ಓದುವುದಿಲ್ಲ. ಆದ್ದರಿಂದ ನಿಮಗೆ ಚೆನ್ನಾಗಿ ಗೊತ್ತಿರುವ ಉತ್ತರಗಳನ್ನು ಮೊದಲು ಬರೆದು ಅವರ ಗಮನ ಸೆಳೆಯಿರಿ. ಸಾಧ್ಯವಾದಷ್ಟು ಮಟ್ಟಿಗೆ ಆಕೃತಿ, ನಕಾಶೆ, ರೇಖಾ ಚಿತ್ರಗಳನ್ನು ಬಳಸಿರಿ.

ಒಂದು ವಿಷಯದ ಪರೀಕ್ಷೆ ಮುಗಿದ ಮೇಲೆ ಅದರ ಬಗ್ಗೆ ಯೋಚಿಸಬೇಡಿ. ಆಗಿದ್ದು ಆಗಿ ಹೋಯಿತು ಮುಂದಿನ ವಿಷಯ ನಿಮ್ಮ ಕೈಯಲ್ಲಿದೆ. ಅದರ ಬಗ್ಗೆ ಗಮನ ಕೊಡಿ. ಬೇಕಾದರೆ ಎಲ್ಲ ಪರೀಕ್ಷೆಗಳೂ ಮುಗಿದ ನಂತರ ಪ್ರಶ್ನೆಪತ್ರಿಕೆ ತೆಗೆದು ಅಂಕ ಹಾಕಿ ನೋಡಿ, ನಿಮ್ಮ ಫಲಿತಾಂಶ ನಿಮ್ಮ ಮುಂದಿರುತ್ತದೆ.

ಪಾಲಕರ ಕರ್ತವ್ಯ
ಮಕ್ಕಳೊಂದಿಗೆ ಪಾಲಕರೂ ಸ್ವಲ್ಪ ಮಟ್ಟಿಗೆ ಓದಿನ ಬಗ್ಗೆ ಒಲವು ತೋರಿಸಬೇಕು. ವರ್ಷದ ಆರಂಭದಿಂದಲೇ ಪರೀಕ್ಷಾ ತಯಾರಿಗೆ ಗಮನಹರಿಸುವುದು ಸೂಕ್ತ. ಬೈಯುವುದು, ಹೊಡೆಯುವುದರಿಂದ ಲಾಭವಿಲ್ಲ. ಮಕ್ಕಳಿಗೆ ಮನವರಿಕೆ ಆಗುವಂತೆ ತಿಳಿಹೇಳಿ, ಅಭ್ಯಾಸದತ್ತ ಗಮನ ಸೆಳೆಯಲು ಪ್ರಯತ್ನಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT