ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ- ಉತ್ತರ

Last Updated 24 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಅನುಶ್ರೀ, ಬೆಂಗಳೂರು
ನಾನು ಮೂರನೇ ಬಿ.ಕಾಂ. ಕಲಿಯುತ್ತಿದ್ದೇನೆ. ಮೊದಲು ಸಿ.ಎ. ಮಾಡಲು ನಿರ್ಧರಿಸಿದ್ದೆ. ಆದರೆ ಕೆಲವರು ಇಂಟರ್‌ನ್ಯಾಷನಲ್ ಫೈನಾನ್ಸ್ ನಲ್ಲಿ  ಐ.ಎಫ್.ಆರ್.ಎಸ್. ಮಾಡಲು ಹೇಳುತ್ತಿದ್ದಾರೆ. ಇದು ನನ್ನ ಭವಿಷ್ಯಕ್ಕೆ ಉತ್ತಮವೇ. ಅದಕ್ಕೆ ಸಂಬಂಧಿಸಿದಂತೆ ಹೇಗೆ ಮುಂದುವರಿಯಬೇಕು?

–ಐ.ಎಫ್.ಆರ್.ಎಸ್. ವಿದೇಶಗಳಲ್ಲಿ ಪ್ರಚಲಿತವಿದ್ದು ಭಾರತದಲ್ಲಿ ಇನ್ನೂ ಎ.ಎಸ್. (ಅಕೌಂಟ್ಸ್ ಸ್ಟಾಂಡರ್ಡ್‌್್) ಬಳಕೆಯಲ್ಲಿದೆ. ನೀವು ಬಯಸಿದ ಕೋರ್ಸ್‌ನಲ್ಲಿ ಪರಿಣತಿ ಪಡೆಯಲು ಸಿ.ಸಿ.ಎ., ಸಿ.ಎಫ್.ಎ. ಮುಂತಾದವುಗಳಿಗೆ ಅನ್ವಯವಾಗುವಂತಹ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಬಗ್ಗೆ ಮಾಹಿತಿ ಹಾಗೂ ವಿವರಗಳನ್ನು ಇಂಟರ್‌ನೆಟ್‌ ಮೂಲಕ ಪಡೆದುಕೊಳ್ಳಬಹುದು.

ಜಗದೀಶ್ ಈಡಿಗ, ಕೊಪ್ಪಳ
ನಾನು ಪ್ರಾಥಮಿಕ ಶಾಲಾ ಶಿಕ್ಷಕ.  ಆರು ವರ್ಷ ಸೇವೆ ಸಲ್ಲಿಸಿದ್ದೇನೆ.  ಬಿ.ಎ. ಹಾಗೂ ಎಂ.ಎ.ಯನ್ನು ದೂರಶಿಕ್ಷಣದ ಮೂಲಕ ಮುಗಿಸಿ ಈಗ ಬಿ.ಇಡಿ. ಮಾಡ ಬಯಸಿದ್ದೇನೆ.  ಕೆ.ಎಸ್.ಒ.ಯು. ನಡೆಸುವ ಪರೀಕ್ಷೆಗಳಲ್ಲಿ ಇನ್ನೂ ಉತ್ತೀರ್ಣನಾಗಿಲ್ಲ.  ವೇತನ ರಹಿತ ರಜೆ ಪಡೆದು ಬಿ.ಇಡಿ. ಮಾಡುವುದೋ ಅಥವಾ ಮತ್ತೆ ದೂರ ಶಿಕ್ಷಣದಲ್ಲಿ ಪ್ರಯತ್ನಿಸುವುದು ಉತ್ತಮವೋ ತಿಳಿಸಿ. ವೇತನ ರಹಿತವಾಗಿ ಮಾಡಿದರೆ ಸಂಬಳ ಹಾಗೂ ಸೇವಾ ನಷ್ಟ ಉಂಟಾಗುತ್ತದೆ.  ಸಲಹೆ ನೀಡಿ.

– ನೀವು ಬಿ.ಇಡಿ. ಮಾಡುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ, ಅಂದರೆ ಸೇವೆಯಲ್ಲಿ ಪದೋನ್ನತಿ ಪಡೆಯಲು ಸಹಕಾರಿಯಾಗುತ್ತದೆ.  ನೀವು ಮತ್ತೊಮ್ಮೆ ಪರೀಕ್ಷೆಗೆ ಬೇಕಾದ ತಯಾರಿಯನ್ನು ಸರಿಯಾಗಿ ಮಾಡಿಕೊಂಡು ಪ್ರಯತ್ನಿಸಿ.  ಪ್ರಾಯಶಃ ಸೀಟುಗಳ ಸಂಖ್ಯೆ ಸೀಮಿತವಾದುದರಿಂದ ನಿಮಗೆ ಅವಕಾಶ ಸಿಕ್ಕದೆ ಇರಲೂಬಹುದು.  ಇಲ್ಲವಾದರೆ ಸಂಬಳ, ಸೇವಾವಧಿ ನಷ್ಟವಾದರೂ ವೇತನ ರಹಿತ ರಜೆ ಪಡೆದು ಮುಂದುವರಿಯರಿ.

ಚೇತನ್
ನಾನು ಬಿ.ಕಾಂ. ಓದುತ್ತಿದ್ದೇನೆ. ಇದರ ಜೊತೆಗೆ ದೈಹಿಕ ಶಿಕ್ಷಣದ ಕೋರ್ಸ್‌ ಮಾಡಬಹುದೇ ?

– ನೀವು ಈಗ ರೆಗ್ಯುಲರ್ ಆಗಿ ಬಿ.ಕಾಂ. ಓದುತ್ತಿದ್ದೀರಿ ಎಂದು ಭಾವಿಸಿದ್ದೇನೆ.  ದೈಹಿಕ ಶಿಕ್ಷಣ, ನೇರ ತರಬೇತಿ ಹಾಗೂ ಪ್ರಾಕ್ಟಿಕಲ್‌್ಸಗೆ ಹೆಚ್ಚಿನ ಒತ್ತು ಕೊಡುವ ಕೋರ್ಸ್‌  ಆಗಿದೆ.  ಆದ್ದರಿಂದ ನೀವು ಪದವಿ ಮುಗಿಸಿಕೊಂಡು ನಂತರ ಬಿ.ಪಿ.ಇಡಿ. ಮಾಡುವುದು ಉತ್ತಮ ಎಂಬುದು ನನ್ನ ಅನಿಸಿಕೆ.

ಮಧುಸೂದನ್, ಬೆಂಗಳೂರು
ಕಳೆದ ಎರಡು ವರ್ಷಗಳಿಂದಲೂ ನಮ್ಮ ಸಂಸ್ಥೆಯಲ್ಲಿ ಪರೀಕ್ಷೆ ನಡೆಯುವಾಗ ಚೀಟಿಗಳನ್ನು ವಿತರಿಸಿ ಪಾಸಾಗಲು ನೆರವಾಗುತ್ತಿದ್ದಾರೆ. ನವೆಂಬರ್‌ನಲ್ಲಿ ಮತ್ತೆ ಪರೀಕ್ಷೆ ಇದೆ. ಇದನ್ನು ತಡೆಗಟ್ಟಲು ಸಹಾಯ ಮಾಡಿ.

– ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಕಡೆ ಅವ್ಯವಹಾರ ನಡೆಯುತ್ತಿರುವುದು ನಿಜ. ಇದನ್ನು ತಡೆಯಲು ಸಂಬಂಧಿಸಿದ ವಿ.ವಿ. ಅಥವಾ ಬೋರ್ಡ್‌ಗಳು ಸಾಕಷ್ಟು ಮುಂಜಾಗ್ರತೆ ವಹಿಸುತ್ತಿವೆ.  ಆದರೆ ಬೇಲಿಯೇ ಎದ್ದು ಹೊಲ ಮೇಯ್ದರೆ ತಡೆಯುವುದು ಕಷ್ಟ. ನಿಮ್ಮಂತೆ ಸಮಾನಮನಸ್ಕ ವಿದ್ಯಾರ್ಥಿಗಳು ಒಟ್ಟಾಗಿ ಈ ಪರಿಸ್ಥಿತಿಯನ್ನು ಎದುರಿಸುವುದು ಒಳ್ಳೆಯದು.  ಅಂದರೆ ಮೇಲಧಿಕಾರಿಗಳಿಗೆ ವಿಷಯ ತಿಳಿಸುವುದು, ಮಾಧ್ಯಮದ ಮೂಲಕ ಅವ್ಯವಹಾರ ಬಯಲಿಗೆಳೆಯುವುದು ಇತ್ಯಾದಿ.

ಆದರೆ ವೈಯಕ್ತಿಕವಾಗಿ ಎದುರಿಸಬೇಕಾಗಿ ಬರಬಹುದಾದ ಅಪಾಯಗಳನ್ನು ಏಕೆ ಮೇಲೆ ಹಾಕಿಕೊಳ್ಳಬೇಕು ಎಂದು ಸುಮ್ಮನಿರುವವರೇ ಹೆಚ್ಚು. ಒಂದು ಮಾತು ನಿಜ. ಇಂದಿನ ಜಗತ್ತಿನಲ್ಲಿ ಸರ್ಟಿಫಿಕೇಟ್‌ನಲ್ಲಿ ನಮೂದಾದ ಅಂಕಗಳಿಗಿಂತ ಅಭ್ಯರ್ಥಿಯ  ಜ್ಞಾನದ ಮಟ್ಟವನ್ನು ಅಳೆಯುವ ಮೂಲಕ, ಕೆಲಸಕ್ಕೆ ಆಯ್ಕೆ ಮಾಡುವುದು ಕಂಡು ಬರುತ್ತಿದೆ.  ಆದ್ದರಿಂದ ಈಗಾಗಲೇ ಪ್ರಾರಂಭವಾಗಿರುವ ಪರೀಕ್ಷೆಯನ್ನು ನೀವು ಸ್ವಂತ ಶ್ರಮದಿಂದ ಎದುರಿಸಿ, ಉಳಿದವರಿಗೆ ನೈತಿಕ ಸ್ಥೈರ್ಯ ತುಂಬಿ.

ಮಂಜುಳಾ
ನಾನು ನನ್ನ ಬಿ.ಎಸ್ಸಿ. ಕೋರ್ಸನ್ನು ಪಿ.ಎಂ.ಸಿ. ವಿಷಯ ಆರಿಸಿಕೊಂಡು 2011ರಲ್ಲಿ ಮುಗಿಸಿದ್ದೇನೆ. ಅದೇ ವರ್ಷದಲ್ಲಿ ಎಂ.ಎಸ್ಸಿ. ಮ್ಯಾಥಮಾಟಿಕ್ಸ್ ಗೆ ಸೇರಿಕೊಂಡೆ. ಎರಡು ವರ್ಷ ಕಳೆದಿದ್ದು ಒಂದು ಸಬ್ಜೆಕ್ಟ್ ಬಾಕಿ ಉಳಿದಿದೆ. ನಾನು ರೆಗ್ಯುಲರ್ ಆಗಿ ಬಿ.ಇಡಿ.ಗೆ ಸೇರಬಹುದೇ? ಆಗುವುದಾದರೆ ಟ್ರಾನ್ಸ ಫರ್‌ ಸರ್ಟಿಫಿಕೇಟ್ ಎಲ್ಲಿಂದ ಪಡೆಯಬೇಕು?

– ನೀವು ಬಿ.ಎಸ್ಸಿ. ಆಧಾರದ ಮೇಲೆ ಬಿ.ಇಡಿ.ಗೆ ಸೇರಬಹುದು. ಯಾವ ಸಂಸ್ಥೆಯಲ್ಲಿ ತೀರಾ ಇತ್ತೀಚೆಗೆ ಕಲಿತಿದ್ದೀರೋ ಅಲ್ಲಿಂದ ಟಿ.ಸಿ. ಪಡೆಯುವುದು ವಾಡಿಕೆ. ವಿ.ವಿ. ಒಂದೇ ಆದರೆ ಹೆಚ್ಚಿನ ತೊಂದರೆ ಇಲ್ಲ. ಆದರೆ ಎಂ.ಎಸ್ಸಿ. ಮುಗಿಯುವವರೆಗೂ ಟಿ.ಸಿ. ಕೊಡುವುದಿಲ್ಲ ಎಂದಲ್ಲಿ ಬಿ.ಎಸ್ಸಿ. ಕಲಿತ ಕಾಲೇಜಿನಿಂದ ಡೂಪ್ಲಿಕೇಟ್ ಟಿ.ಸಿ. ಪಡೆಯಲು ಯತ್ನಿಸಬಹುದು. ಬಿ.ಇಡಿ.ಗೆ ಸೇರಿದ ನಂತರವೂ ಸರ್ಟಿಫಿಕೇಟ್‌ಗಳನ್ನು  ನೀಡಲು ಸಾಕಷ್ಟು ಸಮಯಾವಕಾಶ ಇರುತ್ತದೆ. ಸಾಧ್ಯವಾದರೆ ಎಂ.ಎಸ್ಸಿ.ಯನ್ನು ಜಾಗ್ರತೆ ಪೂರೈಸಿಕೊಳ್ಳಿ.

ಸುಧಾ ಎಂ. ರಾಜೇಶ್ವರ, ಬಸವಕಲ್ಯಾಣ
ನಾನು ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಿಂದ ಎಂ.ಕಾಂ. ಪರೀಕ್ಷೆಯನ್ನು ಶೇ 46 ಅಂಕಗಳೊಡನೆ ಮುಗಿಸಿದ್ದೇನೆ.  ಮತ್ತೆ ಅಂತಿಮ ಪರೀಕ್ಷೆ ಬರೆದು ನನ್ನ ಫಲಿತಾಂಶವನ್ನು ಉತ್ತಮಪಡಿಸಿಕೊಂಡು ಮುಂದೆ ನೆಟ್ ಹಾಗೂ ಪಿಎಚ್‌.ಡಿ.  ಮಾಡಬೇಕೆಂದಿದ್ದೇನೆ. ನಾನು ಪಿ.ಜಿ.ಯಲ್ಲಿ ಅಗತ್ಯ ಅಂಕಗಳನ್ನು ಪಡೆದರೆ ಇದು ಸಾಧ್ಯವಿದೆಯೇ?

–ನೀವು ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಅಂಕಗಳನ್ನು ಗಳಿಸಿಕೊಂಡಲ್ಲಿ, ಯಾವುದೇ ಅಡ್ಡಿ ಆತಂಕವಿಲ್ಲದೇ ಮುಂದುವರಿಯಬಹುದು. ಆದ್ದರಿಂದ ನಿಮ್ಮ ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳುವುದಕ್ಕೆ  ಹೆಚ್ಚಿನ ಗಮನ ನೀಡಿ ಯಶಸ್ವಿಯಾಗಿ.

ಅನುರಾಧ ಶಾಸ್ತ್ರಿ, ಬೆಂಗಳೂರು
ನಾನು 1989ರಲ್ಲಿ ಕಮರ್ಷಿಯಲ್‌ ಪ್ರಾಕ್ಟೀಸ್ ಮುಗಿಸಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಲಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ಕೆ.ಎಸ್.ಒ.ಯು.ದಿಂದ ಬಿ.ಕಾಂ. ಮುಗಿಸಿಕೊಂಡಿದ್ದೇನೆ. ನಾನು ಮೇಲ್ದರ್ಜೆಯ  ಆಡಳಿತಾತ್ಮಕ ಹುದ್ದೆಗೆ ಹೋಗಲು ಬಯಸುತ್ತಿದ್ದೇನೆ. ಈಗ ನನ್ನ ವಯಸ್ಸು 40. ಮುಂದಿನ ವಿದ್ಯಾರ್ಹತೆ ಉತ್ತಮ ಪಡಿಸಿಕೊಳ್ಳುವ ಬಗ್ಗೆ ತಿಳಿಸಿ.

–ನೀವು ಈಗಾಗಲೇ ಕೇಂದ್ರ ಆಡಳಿತ ಅರೆ ಸರ್ಕಾರಿ ಸಂಸ್ಥೆಯಲ್ಲಿ 16 ವರ್ಷಗಳಷ್ಟು ಕಾಲ ಕೆಲಸ ಮಾಡಿದ್ದೀರಿ. ನಿಮ್ಮ ಮಂಡಲಿಯಲ್ಲಿ ಬಡ್ತಿ ಪಡೆಯಲು ಇರುವ ಅವಕಾಶಗಳ ಬಗ್ಗೆ ನಿಮಗೆ ತಿಳಿದಿರುತ್ತದೆ. ನಿಮಗೆ ಕಂಪ್ಯೂಟರ್ ಜ್ಞಾನ ಇರುವುದರಿಂದ, ಈ ದಿಸೆಯಲ್ಲಿ ಟ್ಯಾಲಿ ಮುಂತಾದ ಕೋರ್ಸ್‌ಗಳನ್ನು ಮಾಡಿಕೊಳ್ಳಿ. ಇಲಾಖಾ ಪರೀಕ್ಷೆಗಳು ಇದ್ದಲ್ಲಿ ಅವನ್ನು ಮುಗಿಸಿಕೊಳ್ಳಿ. ಆಗ ಬಡ್ತಿ ಪಡೆಯುವುದು ಸುಲಭವಾಗುತ್ತದೆ. ಅವಕಾಶಗಳು ಸಿಕ್ಕಿದರೆ ಹಾಗೂ ಭವಿಷ್ಯ ಉತ್ತಮವಾಗಬಹುದು ಎನಿಸಿದರೆ ಖಾಸಗಿ ರಂಗದಲ್ಲೂ ಪ್ರಯತ್ನಿಸಬಹುದು.

ಸಾದಿಕ್ ಸದ್ದು
ನಾನು 2012ರಲ್ಲಿ ಎರಡನೇ ಪಿ.ಯು.ಸಿ. ಮುಗಿಸಿದ್ದೇನೆ. ಮುಂದೆ ಜರ್ನಲಿಸಂನಲ್ಲಿ ಪದವಿ ಗಳಿಸಬೇಕೆಂದಿದ್ದೇನೆ. ನಂತರ ರಿಪೋರ್ಟರ್ ಆಗುವ ಆಸೆ ಇದೆ. ಈ ಕೋರ್ಸ್‌ಗೆ ಅಡ್ಮಿಷನ್ ಯಾವಾಗ, ಅವಧಿ ಮತ್ತು ಮುಂದೆ ಕೋರ್ಸ್‌ ಮುಗಿದ ನಂತರ ಕೆಲಸಕ್ಕೆ ಎಲ್ಲಿ ಎಲ್ಲಿ ಹೋಗಬಹುದು ತಿಳಿಸಿ.

–ಜರ್ನಲಿಸಂ ಪದವಿ ಸಾಮಾನ್ಯವಾಗಿ ಮೂರು ವರ್ಷಗಳಾಗಿರುತ್ತದೆ.  ಇದರಲ್ಲಿ ಪದವಿ ನಂತರ ಎಂ.ಎ. ಜರ್ನಲಿಸಂ ಸಹ ಇರುತ್ತದೆ.  ರೆಗ್ಯುಲರ್ ತರಗತಿಗಳು ಈಗಾಗಲೇ ಪ್ರಾರಂಭವಾಗಿರಲಿಕ್ಕೂ ಸಾಕು.  ದೂರಶಿಕ್ಷಣದಲ್ಲೂ ಅವಕಾಶಗಳಿವೆ.  ಪದವಿ ಪಡೆದ ನಂತರ ನೀವು ಪತ್ರಿಕಾ ಮಾಧ್ಯಮ, ಟಿ.ವಿ., ರೇಡಿಯೊ ಮುಂತಾದ ಕಡೆ ಕೆಲಸಕ್ಕೆ ಪ್ರಯತ್ನಿಸಬಹುದು. 

ನಿಮ್ಮ ಕಾರ್ಯದಕ್ಷತೆ, ಕೆಲಸದಲ್ಲಿ ಆಸಕ್ತಿ ಎಷ್ಟಿದೆ ಎಂಬುದನ್ನು ಆಧರಿಸಿ, ಮುಂದೆ ಬರಲು ಸಾಕಷ್ಟು ಅವಕಾಶಗಳಿರುತ್ತವೆ.  ಅಪರೂಪಕ್ಕೆ ಸರ್ಕಾರಿ ರಂಗದಲ್ಲೂ ಅವಕಾಶ ಸಿಗಬಹುದು.  ಇವಲ್ಲದೆ ಪುಸ್ತಕ ಪ್ರಕಟಣೆ, ಬರವಣಿಗೆ, ಖಾಸಗಿ ರಂಗದ ಪ್ರಚಾರ ಕ್ಷೇತ್ರ ಮುಂತಾದ ಕಡೆ ಸಹ ಕೆಲಸ ಮಾಡಬಹುದು.

ಪ್ರಶ್ನೆ ಕ್ಪಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ. ರಸ್ತೆ,ಬೆಂಗಳೂರು 560 001
ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು:  shikshana@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT