ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ - ಉತ್ತರ

Last Updated 8 ಜೂನ್ 2014, 19:30 IST
ಅಕ್ಷರ ಗಾತ್ರ

ಹರೀಶ್‌ಗೌಡ, ತುಮಕೂರು ಜಿಲ್ಲೆ
ನಾನು ಬಿ.ಎಸ್ಸಿ. ಪದವೀಧರ. ಪರಿಸರ ಅಧ್ಯಯನ ವಿಚಾರದಲ್ಲಿ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಗಳಿಸಬೇಕೆಂಬ ಅಭಿಲಾಷೆ ಇದೆ. ಇದು ಸರಿಯೇ? ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಇದಕ್ಕಿರುವ ಮಾನ್ಯತೆ ಮತ್ತು ಉದ್ಯೋಗಾವಶಾಶಗಳ ಬಗ್ಗೆ ತಿಳಿಸಿ.
–ಪರಿಸರ ಮಾಲಿನ್ಯದ ಅಧ್ಯಯನ ಮತ್ತು ಅದರ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಇಂದು ಅತ್ಯಂತ ಗಂಭೀರ ವಿಷಯಗಳಾಗಿ ಹೊರಹೊಮ್ಮುತ್ತಿವೆ. ಆದ್ದರಿಂದ ಪರಿಸರ ವಿಜ್ಞಾನದ ಪದವಿಧರರಿಗೆ  ಉತ್ತಮ ಭವಿಷ್ಯ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಬರುವ ಪರಿಸರ ನಿಯಂತ್ರಣ ಮಂಡಲಿಗಳಲ್ಲಿ, ಸರ್ಕಾರಿ ಸೌಮ್ಯದ ಕೈಗಾರಿಕಾ ಸಂಸ್ಥೆಗಳಲ್ಲಿ ಮತ್ತು ಖಾಸಗಿ ವಲಯದಲ್ಲಿ ಇರುವ ಕೈಗಾರಿಕಾ ಸಂಸ್ಥೆಗಳಲ್ಲಿ ಉದ್ಯೋಗವಕಾಶಗಳು ಇರುತ್ತವೆ.

ಪುಟ್ಟಸ್ವಾಮಿ, ಹೊಂಗನೂರು, ರಾಮನಗರ ಜಿಲ್ಲೆ
ರಷ್ಯಾ ದೇಶದಲ್ಲಿ ಎಂ.ಬಿ.ಬಿ.ಎಸ್. ಮಾಡಬಹುದೇ? ಇದಕ್ಕೆ ಭಾರತದಲ್ಲಿ ಮಾನ್ಯತೆ ಇದೆಯೇ? ಇದನ್ನು ಮಾಡಲು ಎಷ್ಟು ವರ್ಷಗಳು ಬೇಕಾಗುತ್ತದೆ? ಎಷ್ಟು ಹಣ ಖರ್ಚಾಗುತ್ತದೆ? ಇದಕ್ಕಾಗಿ ನಾನು ಯಾರನ್ನು ಸಂಪರ್ಕಿಸಬೇಕು? ಇದನ್ನು ಮುಗಿಸಿದ ಮೇಲೆ ಭಾರತದಲ್ಲಿ ಸೇವೆ ಸಲ್ಲಿಸಬಹುದೇ? ದಯಮಾಡಿ ಈ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ಒದಗಿಸಿ.

– ಮಾನ್ಯತೆ ಪಡೆದ ಯಾವುದೇ ವಿಶ್ವ ವಿದ್ಯಾಲಯದಿಂದ ಪಡೆದ ವೈದ್ಯಕೀಯ ಪದವಿಗೆ ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ಉದ್ಯೋಗವಕಾಶಗಳು ಇರುತ್ತವೆ. ಆದ್ದರಿಂದ ಈ ಪದವಿಯ ನಂತರ ನೀವು ಭಾರತದಲ್ಲಿಯೂ ಸೇವೆ ಸಲ್ಲಿಸಬಹುದು. ಈ ಪದವಿಯನ್ನು ಪಡೆಯಲು ಬೇಕಾದ ಸಮಯ ಮತ್ತು ಹಣದ ಮೊತ್ತ ನೀವು ಆಯ್ಕೆ ಮಾಡಿಕೊಳ್ಳುವ ವಿಶ್ವವಿದ್ಯಾಲಯವನ್ನು ಅವಲಂಬಿಸಿರುತ್ತವೆ. ಈ ವಿವರಗಳನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ ಪಡೆಯಬಹುದು.

ಶೃತಿ, ಹಾವೇರಿ
ನಾನು ಬಿ.ಎಸ್ಸಿ. ಸಿ.ಬಿ.ಝೆಡ್. ಓದುತ್ತಿದ್ದೇನೆ. ನನಗೆ ಮುಂದೆ ಬೋಧನಾ ವೃತ್ತಿ ಇಷ್ಟವಿಲ್ಲ. ಆದ್ದರಿಂದ ಬೇರೆ ಉದ್ಯೋಗಕ್ಕೆ ಹೋಗಬೇಕೆಂದಿದ್ದೇನೆ. ಆದರೆ ಯಾವ ವಿಷಯದಲ್ಲಿ ಎಂ.ಎಸ್ಸಿ. ಮಾಡಿದರೆ ಬೋಧನಾ ವೃತ್ತಿ ಹೊರತುಪಡಿಸಿ ಬೇರೆ ವೃತ್ತಿ ಆಯ್ದುಕೊಳ್ಳಬಹುದು? ಅಲ್ಲದೆ ಬಿ.ಎಸ್ಸಿ. ಆಧಾರದ ಮೇಲೆ ಎಂ.ಎಸ್ಸಿ. ಅಗ್ರಿಕಲ್ಚರ್ ಅಥವಾ ಬಿ.ಎ.ಎಂ.ಎಸ್. ಮಾಡಬಹುದು ಎನ್ನುತ್ತಾರೆ. ಇದು ನಿಜವೇ? ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ.

– ಉದ್ಯೋಗವಕಾಶಗಳ ದೃಷ್ಟಿಯಿಂದ ರಸಾಯನಶಾಸ್ತ್ರ ಸೂಕ್ತ ಆಯ್ಕೆ. ರಸಾಯನಶಾಸ್ತ್ರದ ಸ್ನಾತಕೋತ್ತರ ಪದವಿಯ ಆಧಾರದ ಮೇಲೆ ರಸಾಯನಿಕ ವಸ್ತುಗಳ ತಯಾರಿಕೆ, ಔಷಧಗಳ ತಯಾರಿಕೆ, ರಸಗೊಬ್ಬರಗಳ ತಯಾರಿಕೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಉದ್ಯೋಗವಕಾಶಗಳು ಇರುತ್ತವೆ. ಬಿ.ಎಸ್ಸಿ ಆಧಾರದ ಮೇಲೆ ಎಂ.ಎಸ್ಸಿ ಅಗ್ರಿಕಲ್ಚರ್ ಅಥವಾ ಬಿ.ಎ.ಎಂ.ಎಸ್ ಮಾಡಲು ಅವಕಾಶ ಇರುವುದಿಲ್ಲ.

ದಿವ್ಯಾ, ವಿರಾಜಪೇಟೆ
ನಾನು ಬಿ.ಇ. ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಓದುತ್ತಿದ್ದೇನೆ. ಇದರ ನಂತರ ಹೆಣ್ಣು ಮಕ್ಕಳು ಆರ್ಮಿ/ವಾಯು/ನೌಕಾಸೇನೆ ಸೇರಲು ಯಾವ ಯಾವ ಪರೀಕ್ಷೆ ಎದುರಿಸಬೇಕು? ಅದಕ್ಕೆ ತಯಾರಿ ಹೇಗೆ? ಇದಕ್ಕೆ ಪುಸ್ತಗಳು ದೊರೆಯುತ್ತವೆಯೇ? ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ.

– ಬಿ.ಇ ಪದವಿಯ ನಂತರ ರಕ್ಷಣಾ ವಲಯದಲ್ಲಿ ಭೂಸೇನೆ, ನೌಕಾ ಸೇನೆ ಅಥವಾ ವಾಯು ಸೇನೆಗೆ ಸೇರಲು ಬೇಕಾದ ಅರ್ಹತೆ ಮತ್ತು ತೆಗೆದುಕೊಳ್ಳಬೇಕಾದ ಪರೀಕ್ಷೆ ವಿವರಗಳನ್ನು ಸಂಬಂಧಪಟ್ಟ ಸೇನಾ ವಿಭಾಗದ ಅಂತರ್ಜಾಲದಲ್ಲಿ ಪಡೆಯಬಹದುದು.

ಅನೂಪ್, ಗುಲ್ಬರ್ಗ
ನಾನು ಈಗ ಬಿ.ಎಸ್ಸಿ. ೨ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ನನಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂದುವರೆಯಬೇಕೆಂಬ ಬಹಳ ಆಸೆ ಇದೆ. ಆದರೆ ಪಿ.ಯು.ಸಿ.ಯಲ್ಲಿ ಕಡಿಮ ಅಂಕಗಳು ಬಂದಿದೆ. ಈಗ ನಾನು ಮತ್ತು ಪಿ.ಯು.ಸಿ. ಪರೀಕ್ಷೆ ಬರೆಯಬಹುದೇ? ನನಗೆ ಗಣಿತ ಕಷ್ಟವೆನಿಸುತ್ತದೆ. ಮುಂದೆ ಏನು ಮಾಡಬೇಕೋ ತೋಚುತ್ತಿಲ್ಲ. ದಯಮಾಡಿ ಸಊಕ್ತ ಲಸಹೆ ಮತತು ಮಾರ್ಗದರ್ಶನ ಕೊಡಿ.

– ಬಿ.ಎಸ್ಸಿ. ಪದವಿಯ ನಂತರ ಬ್ಯಾಂಕಿಂಗ್ ಸಂಸ್ಥೆಗಳಿಗೆ ಸೇವೆ ಸಲ್ಲಿಸಲು ಇಚ್ಚಿಸುವವರು ಇದಕ್ಕೆ ಸಂಬಂಧಪಟ್ಟ ಬ್ಯಾಂಕ್ ನೇಮಕಾತಿ ಮಂಡಳಿಯು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಬರುವ ಜೇಷ್ಠತಾ ಪಟ್ಟಿಗೆ ಅನುಗುಣವಾಗಿ ನಿಮಗೆ ಉದ್ಯೋಗ ದೊರೆಯುತ್ತದೆ. ಆದರೆ ನೀವು ಪದವಿ ಪೂರ್ವ ಶಿಕ್ಷಣದಲ್ಲಿ ಪಡೆದ ಅಂಕಗಳು ಈ ಆಯ್ಕೆಗೆ ಯಾವ ರೀತಿಯಲ್ಲಿಯೂ ಅಡ್ಡಿಯಾಗುವುದಿಲ್ಲ. ಗಣಿತವನ್ನು ಕ್ರಮವಾಗಿ ಕಲಿಯಲು, ತರಗತಿಯಲ್ಲಿ ಅಧ್ಯಾಪಕರು ಬಿಡಿಸುವ ಲೆಕ್ಕಗಳು ಮತ್ತು ಅದೇ ರೀತಿಯ ಮತ್ತಷ್ಟು ಲೆಕ್ಕಗಳನ್ನು ನೀವು ಮನೆಯಲ್ಲಿ ಸ್ವತಂತ್ರವಾಗಿ ಬಿಡಿಸಿ ಅಭ್ಯಾಸ ಮಾಡಬೇಕು. ಈ ಲೆಕ್ಕಗಳನ್ನು ಬಿಡಿಸುವಾಗ ನಿಮಗೆ ಬರುವ ಅನುಮಾನಗಳನ್ನು ಅಧ್ಯಾಪಕರಿಂದ ಬಗೆಹರಿಸಿ ಕೊಳ್ಳಬೇಕು.

ಭರತ್‌ಕುಮಾರ್, ತೀರ್ಥಹಳ್ಳಿ
ನಾನು ಮೊದಲನೇ ವರ್ಷದ ಪಿ.ಯು. ಮುಗಿಸಿದ್ದೇನೆ. ಮುಂದೆ ಪಶು ವೈದ್ಯಕೀಯ ಪದವಿ ಪಡೆಯಬೇಕೆಂದು ಕೊಂಡಿದ್ದೇನೆ. ಇದಕ್ಕೆ ಸಿ.ಇ.ಟಿ. ಎಷ್ಟನೇ ರ್‌್ಯಾಂಕ್ ಇರಬೇಕು? ದಯಮಾಡಿ ತಿಳಿಸಿಕೊಡಿ. ಅಂತೆಯೇ ಉತ್ತಮ ಕಾಲೇಜುಗಳ ಬಗ್ಗೆಯೂ ಮಾಹಿತಿ ಒದಗಿಸಿಕೊಡಿ.,

–ಪಶು ವೈದ್ಯಕೀಯ ಪ್ರವೇಶಕ್ಕೆ ಇಂತಿಷ್ಟೇ ರ್‌್ಯಾಂಕ್ ಪಡೆದಿರಬೇಕೆಂಬ ನಿಯಮ ಇಲ್ಲ. ನೀವು ಯಾವ ವರ್ಗದಲ್ಲಿ (ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಇತ್ಯಾದಿ) ಪ್ರವೇಶ ಪಡೆಯಲು ಅರ್ಹರಾಗುವಿರಿ. ಪ್ರಸ್ತುತ ಶಿಕ್ಷಣ ವರ್ಷದಲ್ಲಿ ಆ ವರ್ಗದಲ್ಲಿ ಎಷ್ಟು ಮಂದಿ ವಿದ್ಯಾರ್ಥಿಗಳು ಆಯ್ಕೆ ಬಯಸಿದ್ದಾರೆ ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ. ಸದ್ಯಕ್ಕೆ ಪಶುವೈದ್ಯಕೀಯ ಕಾಲೇಜುಗಳು ಬೆಂಗಳೂರು ಬೀದರ್ ಮತ್ತು ಶಿವಮೊಗ್ಗ ನಗರಗಳಲ್ಲಿ ಇವೆ.

ಬಸವರಾಜ, ಹೇಮನೂರು
ನಾನು ಬಿ.ಎಸ್ಸಿ (ಪಿ.ಸಿ.ಎಂ) ಮುಗಿಸಿದ್ದೇನೆ. ಮುಂದೆ ದೂರಶಿಕ್ಷಣದ ಮುಖಾಂತರ ಫೋರೆನ್ಸಿಕ್ ಸೈನ್ಸ್ ಮಾಡಬೇಕೆಂದಿದ್ದೇನೆ. ಈ ಕೋರ್ಸ್ ಮಾಡುವುದರಿಂದ ಮುಂದಿನ ಭವಿಷ್ಯಕ್ಕೆ ಉತ್ತಮ ಸ್ಕೋಪ್ ಇದೆಯೇ? ಹೇಗೆ? ಮಾನ್ಯತೆ ಪಡೆದ ಯಾವ ಮುಕ್ತ ವಿಶ್ವವಿದ್ಯಾಲಯದಲ್ಲಿ ಇದು ಲಭ್ಯವಿದೆ ಮತ್ತು ಕರ್ನಾಟಕದಲ್ಲಿ ಇದೆಯೇ? ದಯಮಾಡಿ ಸೂಕ್ತ ಸಲಹೆ ಕೊಡಿ

–ಯಾವುದೇ ಪದವಿಯಿಂದ ಉತ್ತಮ ಭವಿಷ್ಯ, ನೀವು ಪಡೆಯುವ ಪದವಿಯ ಗುಣಮಟ್ಟವನ್ನು ಅವಲಂಬಿಸಿರುತ್ತವೆ. ಅಪರಾಧ ವಿಶ್ಲೇಷಣ ವಿಜ್ಞಾನದಲ್ಲಿ ಪಡೆಯುವ ಪದವಿಗೆ ಉತ್ತಮ ಭವಿಷ್ಯ ಇದೆ. ಈ ಪದವಿಗಾಗಿ ನೀವು ಇಂದಿರಾಗಾಂಧಿ ಮತ್ತು ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಂಜೀವ್ ಪಾಟೀಲ್
ನಾನು ಈಗ ಎಂ.ಸಿ.ಎ. ಓದುತ್ತಿದ್ದೇನೆ. ಬಿ.ಸಿ.ಎ ಪದವಿಯ ಮೇಲೆ ಲಭ್ಯವಿರುವ ಸರ್ಕಾರಿ ಉದ್ಯೋಗಗಳ ಕುರಿತು ಮಾಹಿತಿ ಒದಗಿಸಿಕೊಡಿ ಮತ್ತು ಸೂಕ್ತ ಮಾರ್ಗದರ್ಶನ ಕೊಡಿ.

– ಬಿ.ಸಿ.ಎ ಪದವಿಯ ಆಧಾರದ ಮೇಲೆ ಸರ್ಕಾರೀ ಸಂಸ್ಥೆಗಳಲ್ಲಿ ಇರುವ ಉದ್ಯೋಗವಕಾಶಗಳಿಗಿಂತಲೂ, ಖಾಸಗಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಅವಕಾಶ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT