ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಅಧ್ಯಯನ ಸ್ವರೂಪ ಬದಲಾಗಲಿ

Last Updated 9 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಮಹಿಳಾ ಅಧ್ಯಯನಗಳು ಆರಂಭಗೊಳ್ಳುತ್ತಿದ್ದಾಗ ಅದಕ್ಕೆ  ಮಹಿಳಾ ವಿಮೋಚನಾ ಚಳವಳಿಯ ರಾಜಕೀಯದ ಲಕ್ಷಣ ಇಲ್ಲದ ರೀತಿಯಲ್ಲಿ ವಿಶ್ವವಿದ್ಯಾಲಯದ  ಶೈಕ್ಷಣಿಕ ಶಿಸ್ತಿನ ಚೌಕಟ್ಟನ್ನು ಒದಗಿಸಲು ಯು.ಜಿ.ಸಿ ಯತ್ನಿಸಿತ್ತು. ಎಷ್ಟರಮಟ್ಟಿಗೆ ಎಂದರೆ ಯಾವುದೇ ಮಾನವಿಕ ವಿಭಾಗದ ತಜ್ಞರಾದರೂ ಮಹಿಳಾ ಅಧ್ಯಯನದ ವಿಷಯಗಳನ್ನು ಬೋಧಿಸಲು ಅವಕಾಶ ಕಲ್ಪಿಸಲಾಯಿತು.

ಅಂದರೆ ಅರ್ಥ ಶಾಸ್ತ್ರ, ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ ಅಥವಾ ಇಂಗ್ಲಿಷ್, ಕನ್ನಡ ವಿಭಾಗಗಳ ಅಧ್ಯಾಪಕಿಯರನ್ನೇ ಮಹಿಳಾ ಅಧ್ಯಯನದ ವಿಭಾಗಕ್ಕೆ ಡೆಪ್ಯೂಟ್ ಮಾಡುವುದು ಇಲ್ಲವೇ ಅವರನ್ನೇ ಈ ವಿಭಾಗಕ್ಕೆ ನೇಮಕ ಮಾಡುವುದು ಬಹುಕಾಲ ನಡೆಯಿತು.

ಈಗಲೂ ಈ ಸ್ಥಿತಿ ತುಂಬಾ ಬದಲಾಗಿಲ್ಲ. ಅಂದರೆ ಮೂಲಭೂತವಾಗಿ ಮಹಿಳಾ ಕಳಕಳಿಯಾಗಲೀ ಅಥವಾ ಸ್ತ್ರೀವಾದದ ಓರಿಯೆಂಟೇಷನ್ ಆಗಲೀ ಇಲ್ಲದಿದ್ದರೂ ಸ್ಥೂಲವಾಗಿ ಸಾಮಾಜಶಾಸ್ತ್ರದ ಅರಿವಿದ್ದರೆ ಅಷ್ಟೇ ಸಾಕು ಈ ವಿಷಯವನ್ನು ಅಂಥವರು ನಿಭಾಯಿಸಬಲ್ಲರು ಎಂಬ ವಿಚಿತ್ರ ರಿಯಾಯಿತಿಯಲ್ಲಿ ಮಹಿಳಾ ಅಧ್ಯಯನ ವಿಭಾಗಗಳು ಕೆಲಸ ಮಾಡಲು ಶುರುಮಾಡಿದವು.

ಇದೇನೆ ಇದ್ದರೂ ಈಗ ಸಾಕಷ್ಟು ಜನ ಮಹಿಳಾ ಅಧ್ಯಯನದಲ್ಲೇ ಡಿಪ್ಲೋಮಾ, ಸ್ನಾತಕೋತ್ತರ ಪದವಿಗಳನ್ನು ಹೊಂದುತ್ತಿದ್ದಾರೆ. ಅಂಥವರಿಗೆ ವ್ಯಾಪಕ ಪ್ರಮಾಣದಲ್ಲಿ ಇಂಥ ಅಧ್ಯಯನದ ಕ್ಷೇತ್ರದ ಅಧಿಕಾರ ಮತ್ತು ಜವಾಬ್ದಾರಿಗಳನ್ನು ವಹಿಸಲು ಈಗ ಅತ್ಯಂತ ಸೂಕ್ತ ಕಾಲವಾಗಿದೆ.

ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಈ ವಿಷಯವಾಗಿ ಸರಿಯಾದ ನಿಯಮಗಳನ್ನು  ತುರ್ತಾಗಿ ರೂಪಿಸಲೇ ಬೇಕಿದೆ.
ಮಹಿಳೆಯರು ತಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ಹಕ್ಕುಗಳನ್ನು ಪಡೆಯಲು ಸಂಘಟಿತವಾಗಿ ಹೋರಾಟ ನಡೆಸುತ್ತಾ ಬಂದಿದ್ದರಿಂದಾಗಿಯೇ ಕೆಲಮಟ್ಟಿನ ಕಾನೂನು ಸುಧಾರಣೆ, ಹೊಸ ಕನೂನು ರಚನೆಯೂ ಸಾಧ್ಯವಾಯಿತು.

ಆದರೆ ಈ ಹೋರಾಟದ ಪ್ರಕ್ರಿಯೆಯ ಮತ್ತು ಅದರ ಪರಿಣಾಮಗಳ ಚಾರಿತ್ರಿಕ ಮಹತ್ವವನ್ನು ಮಹಿಳಾ ಅಧ್ಯಯನದ ಕಲಿಕೆಯ ಒಳಗಿನ ಅಂಶವಾಗಿ ಹೊಸ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಮತ್ತು ಸುತ್ತಲಿನ ಸಮಾಜದಲ್ಲಿನ ಮಹಿಳೆಯರು ಇಂದು ಎದುರಿಸುತ್ತಿರುವ ಸಮಸ್ಯೆಗಳ ಜೊತೆ ವಿಶ್ವ ವಿದ್ಯಾಲಯದ ಈ ವಿಭಾಗಗಳು ನಿರ್ಲಿಪ್ತವಾಗಿ ಉಳಿಯದೆ ಸಕ್ರಿಯವಾಗಿ  ಅಥವಾ ನೈತಿಕವಾಗಿ ಬೆಂಬಲ ಸೂಚಿಸಲು ಅವಕಾಶವನ್ನು ಹೊಂದಿರಬೇಕಾದ್ದು ಅವಶ್ಯಕ.

ಹಾಗಾದಾಗ ಮಾತ್ರವೇ ಬದಲಾಗುತ್ತಿರುವ ಮಹಿಳಾ ಸಮಸ್ಯೆಗಳನ್ನು ಒಳಗಿನಿಂದ ಅರಿಯಲು ಮತ್ತು ಆ ಬಗ್ಗೆ ಸಂಶೋಧನೆಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಉತ್ತರಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹದ ಸಂದರ್ಭದಲ್ಲಿ ಕೈಗೊಂಡ ಅಧ್ಯಯನ ಮತ್ತು ಸಲ್ಲಿಸಿದ ವರದಿ ಒಂದು ಇಂಥ ಉತ್ತಮ ಯತ್ನ. ಇದರಲ್ಲಿ ಬುಧ್ಧಿಜೀವಿಗಳು, ಸಾಮಾಜಿಕ ಸೇವೆ ಮತ್ತು ಅಧ್ಯಯನ ಎಲ್ಲವೂ ಒಗ್ಗೂಡಿದ್ದವು.
ಆರ್ಥಿಕ ಉದಾರೀಕೃತ ನೀತಿಯ ಫಲವಾಗಿ ಖಾಸಗಿ ವಲಯವು ಇಂದು ಅತ್ಯಂತ ಪ್ರಾಬಲ್ಯಕ್ಕೆ ಬಂದಿದೆ.

ಈ ಹಿಂದಿದ್ದ ಸಮಾಜವಾದಿ ಪ್ರಜಾ ಪ್ರಭುತ್ವವು ಇಟ್ಟುಕೊಂಡಿದ್ದ ಅನೇಕ ಪ್ರಗತಿಪರ ದೃಷ್ಟಿಯ ಗೊತ್ತುಗುರಿಗಳು ಇದರಿಂದಾಗಿ ಕೊಚ್ಚಿಹೋಗಿವೆ. ಮೀಸಲಾತಿ, ಸಮಾಜಿಕ ನ್ಯಾಯ, ಮಹಿಳಾ ಹಕ್ಕುಗಳು ಮುಂತಾದುವು ಒಂದುಕಡೆ ಜನತೆಯ ಅಸ್ಮಿತಾ ರಾಜಿಕೀಯಕ್ಕೆ ಮಾತ್ರ ಮುನ್ನೆಲೆಗೆ ಬರುತ್ತಿದ್ದರೆ ಮತ್ತೊಂದೆಡೆ ಇಂಥ ಕೂಗುಗಳು  ಜನತಾಂತ್ರಿಕ ಸಾಮಾಜಿಕ ಅರಿವಿನ ಪ್ರಬುದ್ಧತೆಯ ಲಕ್ಷಣವಾಗಿ ಬೆಳೆಯಬೇಕಾದದ್ದು ಕಾಣೆಯಾಗಿದೆ.

ಉದಾಹರಣೆಗೆ, ಕೋಮುವಾದವು ಇಂದು ಎಲ್ಲಾ ಅಸಮಾನತೆಗಳನ್ನು ಪಕ್ಷಪಾತವಿಲ್ಲದಂತೆ ನೋಡಬಹುದಾದ ಸಾಧ್ಯತೆಯನ್ನೇ ಹೊಸಕಿ ಹಾಕುತ್ತಿದ್ದು ಧಾರ್ಮಿಕ ಮೂಲಭೂತವಾದಿ ಚಿಂತನೆಗಳೇ ಅನ್ಯಾಯಗಳಿಗೆ ಪರಿಹಾರವೊದಗಿಸಲು ಹೊರಟು ಮಹಿಳೆಯರ ನಿಜವಾದ ಪ್ರಗತಿಗೆ ಅಡ್ಡಿತರುತ್ತಿರುವುದು ಮಹಿಳಾ ಅಧ್ಯಯನದ ಸ್ವರೂಪದ ಮೇಲೂ ಪರಿಣಾಮ ಬೀರತೊಡಗಿದೆ.

ಹೀಗೆ ಬದಲಾದ ಸಾಮಾಜಿಕ ಸಂದರ್ಭಕ್ಕೆ ತಕ್ಕ ಹಾಗೆ ಮಹಿಳಾ ಅಧ್ಯಯನದ ರಾಚನಿಕ ಸ್ವರೂಪ ಮತ್ತು ಅದನ್ನು ಸರಿಯಾಗಿ ಮುಂದಕ್ಕೆ ಕೊಂಡೊಯ್ಯಬೇಕಾದ ಸಿಬ್ಬಂದಿ ಮಂದಿ ಎಲ್ಲವೂ ಪುನಃ ಪರೀಕ್ಷೆಗೆ ಒಳಗಾಗುವ ಅವಶ್ಯಕತೆ ತುಂಬಾ ಇದೆ. ಈ ಕ್ಷೇತ್ರದಲ್ಲಿ ಪದವಿಗಳನ್ನು ಪಡೆದಿರುವವರಿಗೆ ಈ ನಿಟ್ಟಿನಲ್ಲೇ ಸಂಶೋಧನೆಗಳನ್ನು ಕೈಗೊಳ್ಳಲಿಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಬೇಕಿದೆ.

ಉದ್ಯೋಗದ ಭರವಸೆಯೇ ಇಲ್ಲದೆ ಇಂಥ ಅಧ್ಯಯನಗಳು ಕೇವಲ ಹವಾ ಕುಡಿದು ನಡೆಸುವ ತ್ಯಾಗದ ದುಡಿಮೆ ಆಗಬಾರದು.
ಬಲವಾದ ಆರ್ಥಿಕ ಯೋಜನೆಗಳ ಕನಸುಗಳನ್ನು ಜನರೆದುರು ಪ್ರತಿ ಚುನಾವಣೆಯ ಮುನ್ನ ಕಟ್ಟಿಕೊಡುವ ಸರಕಾರಗಳು ಮತ್ತು ಇಂದು ಜನಸೇವೆಯ ಹೆಸರಲ್ಲೂ ಲಾಭವನ್ನೇ ಗುರಿಯಾಗಿಸಿಕೊಳ್ಳುತ್ತಿರುವ ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮ ಕಣ್ಣನ್ನು ತೆರೆದುಕೊಳ್ಳಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT