ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಡಂ ಎಂಬ ಅಮ್ಮ

Last Updated 11 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಅದೊಂದು ನರ್ಸರಿ ಶಾಲೆ. ಮನೆಯೆಂಬ ಬೆಚ್ಚನೆಯ ಗೂಡಿನಲ್ಲಿ ಅಮ್ಮನ ಮಡಿಲಲ್ಲಿ ಆಟವಾಡಿಕೊಂಡಿದ್ದ ಮಗು ಆಗ ತಾನೇ ಶಾಲೆಯೆಂಬ ಪರಿಸರಕ್ಕೆ ಕಾಲಿಟ್ಟಿತ್ತು. ಆ ಪ್ರಪಂಚ ಅದಕ್ಕೆ ತೀರಾ ಹೊಸದು. ಹೊಸ ಪ್ರದೇಶ, ಹೊಸ ಮುಖಗಳನ್ನು ಕಂಡ ಮಗು ಬೆಚ್ಚಿ ಒಂದೇ ಸಮನೆ ಅಳಲು ಆರಂಭಿಸಿತು.

ಅಮ್ಮ ಮಾತ್ರ ಗಟ್ಟಿ ಮನಸ್ಸು ಮಾಡಿ ಮಗುವನ್ನು ಶಾಲೆಯಲ್ಲಿ ಬಿಟ್ಟು ಬಂದಿದ್ದರು. ಕೂಡಲೇ ಮಗುವನ್ನು ಎತ್ತಿಕೊಂಡ ಶಿಕ್ಷಕಿ ಮುದ್ದು ಮಾಡಿ ನಯವಾಗಿ ಮಾತನಾಡಿಸತೊಡಗಿದರು. ಸ್ವಲ್ಪ ಹೊತ್ತಿನಲ್ಲೇ ಅಳು ನಿಂತಿತು. ಕೆಲವೇ ದಿನಗಳಲ್ಲಿ ಎರಡೂವರೆ ವರ್ಷದ ಆ ಮಗು ಶಾಲೆಯನ್ನು, ಟೀಚರ್‌ನ್ನು ಪ್ರೀತಿಸತೊಡಗಿತು.

`ನಾನು ಶಾಲೆಗೆ ಹೋಗಬೇಕು, ಮೇಡಂ ಹಾಡು ಹಾಡಿಸ್ತಾರೆ, ಆಟ ಆಡಿಸ್ತಾರೆ, ಡ್ಯಾನ್ಸ್ ಮಾಡಿಸ್ತಾರೆ, ಆಡಲು ಫ್ರೆಂಡ್ಸ್ ಸಿಗುತ್ತಾರೆ~ ಎಂದು ಅಮ್ಮನ ಬಳಿ ಹೇಳುತ್ತಿತ್ತು.
ಇನ್ನೊಂದು ಮನೆಯಲ್ಲಿ ಎಲ್‌ಕೆಜಿ ಓದುತ್ತಿರುವ ಮಗುವಿನ ಅಮ್ಮನದ್ದು ಒಂದೇ ದೂರು. `ಮಗ ಮನೆಯಲ್ಲಿ ನಾನು ಹೇಳಿದ ಮಾತನ್ನು ಸ್ವಲ್ಪವೂ  ಕೇಳುವುದಿಲ್ಲ.
 
ಆದರೆ ಶಾಲೆಯಲ್ಲಿ ಟೀಚರ್ ಹೇಳಿದ್ದನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾನೆ. ನಾನು ಏನೇ ಹೇಳಿದರೂ ಅದು ಹಾಗಲ್ಲಮ್ಮ. ನಮ್ಮ ಮ್ಯೋಮ್ ಹೀಗೆ ಹೇಳಿಕೊಟ್ಟಿದ್ದಾರೆ. ನೀನು ಹೇಳ್ತಾ ಇರೋದು ತಪ್ಪು ಅಂತಾನೆ~ ಅನ್ನೋದು ಅವರ ಅಳಲು.

ಮತ್ತೊಬ್ಬ ತಾಯಿ ಹೇಳುವುದು ಹೀಗೆ `ನಮ್ಮ ಮಗಳು ಮೂರು ಹೊತ್ತೂ ಅವಳ ಟೀಚರ್ ಸುದ್ದಿಯನ್ನೇ ಹೇಳ್ತಿರ‌್ತಾಳೆ. ಅವಳ ಮೇಡಮ್ ಕ್ಲಾಸಲ್ಲಿ ಏನು ಮಾಡ್ತಾರೋ ಅದನ್ನೇ ಮನೇಲಿ ಬಂದು ರಿಪೀಟ್ ಮಾಡ್ತಾಳೆ. ಟೀಚರ್ ತರಗತಿಯಲ್ಲಿ ನಿಲ್ಲುವುದನ್ನು, ನಡೆಯುವುದನ್ನು, ಮಾತನಾಡುವುದನ್ನು, ತಲೆಕೂದಲು ಕಟ್ಟುವುದನ್ನು ಎಲ್ಲವನ್ನೂ ಅನುಕರಿಸ್ತಾಳೆ. ನಾನೂ ಮೇಡಂ ಥರಾನೇ ಆಗ್ಬೇಕು ಅಂತಾಳೆ~ ಎನ್ನುತ್ತಾರೆ.

ಹೀಗೆ ತಮ್ಮ ಪುಟ್ಟ ಮಕ್ಕಳ ಬಗ್ಗೆ ತಾಯಂದಿರು ಮಾತನಾಡುವುದನ್ನು ನೀವು ಕೇಳಿರಬಹುದು. ಎರಡರಿಂದ ಆರು ವರ್ಷದವರೆಗಿನ ಮಕ್ಕಳ ಮೇಲೆ ಇಂದಿನ ದಿನಗಳಲ್ಲಿ ಶಿಕ್ಷಕಿಯರು ಹೆಚ್ಚು ಪ್ರಭಾವ ಬೀರುತ್ತಿದ್ದಾರೆ. ಮನೆಯಲ್ಲಿ ಪೋಷಕರ ಮಾತನ್ನು ಕಡೆಗಣಿಸುವ ಬಹುತೇಕ ಮಕ್ಕಳು, ಶಿಕ್ಷಕಿಯರು ಹೇಳಿದರೆ ಅಚ್ಚುಕಟ್ಟಾಗಿ ಪಾಲಿಸುತ್ತಾರೆ. ಇನ್ನು ಮಗುವಿನ ತಾಯಿ ಉದ್ಯೋಗಸ್ಥಳಾಗಿದ್ದರಂತೂ ಕೇಳುವುದೇ ಬೇಡ.

ಪ್ಲೇ ಹೋಂ, ಡೇ ಕೇರ್, ನರ್ಸರಿ ಶಾಲೆಗಳಿಗೆ ಹೋಗುವ ಮಗು ಅಲ್ಲಿರುವಷ್ಟು ಹೊತ್ತು ಚೆನ್ನಾಗಿ ಇರುತ್ತದೆ. ಮನೆಗೆ ಬಂದ ತಕ್ಷಣ ತಾಯಿಯ ಜೊತೆ ಹಠ ಶುರು. ಅಂದರೆ ಮಕ್ಕಳ ಬಾಲ್ಯದಲ್ಲಿ ಇಂದು ತಾಯಿಗಿಂತ ಶಿಕ್ಷಕಿಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ!
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಅಥವಾ ನರ್ಸರಿ ಹಂತದ ವಿದ್ಯಾಭ್ಯಾಸಕ್ಕೆ ವಿಶೇಷವಾದ ಪ್ರಾಮುಖ್ಯತೆ ಇದೆ.
 
ಪೂರ್ವ ಪ್ರಾಥಮಿಕ ಹಂತ ಮಕ್ಕಳ ಭವಿಷ್ಯಕ್ಕೆ ಅಡಿಪಾಯ. ಹಿಂದೆ ಐದೂವರೆ-ಆರು ವರ್ಷದವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಅಷ್ಟೂ ಸಮಯ ಮನೆಯಲ್ಲಿ ಅಮ್ಮನ ಆಶ್ರಯದಲ್ಲೇ ಮಕ್ಕಳು ಬೆಳೆಯುತ್ತಿದ್ದರು. ಆದರೆ ಇಂದು ಎರಡು- ಮೂರನೇ ವಯಸ್ಸಿಗೇ ಅಮ್ಮನಿಂದ ದೂರವಾಗಿ ಬೇಬಿ     ಸಿಟ್ಟಿಂಗ್, ಡೇ ಕೇರ್, ಪ್ಲೇ ಹೋಂ ಅಥವಾ ನರ್ಸರಿ, ಅಂಗನವಾಡಿ ಶಾಲೆಗಳಿಗೆ ಮಕ್ಕಳು ಹೋಗುತ್ತಾರೆ.

ಆದರೆ ಪುಟ್ಟ ಮಕ್ಕಳಿಗೆ ಶಿಕ್ಷಕಿಯರಾಗುವುದು ಸುಲಭದ ಮಾತೇನಲ್ಲ. ಅವರಿಗೆ ವಿಶೇಷ ಗುಣಗಳು ಬೇಕಾಗುತ್ತವೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ, ಅವರನ್ನು ಪ್ರೀತಿಯಿಂದ, ಸಮಾನತೆಯಿಂದ ಕಾಣುವ ಗುಣ, ಅನೇಕ ಕರಕುಶಲ, ಕುಶಲ ಕಲೆ, ವೈವಿಧ್ಯಮಯ ಚಟುವಟಿಕೆಗಳಲ್ಲಿ ಆಸಕ್ತಿ ಇರಬೇಕಾಗುತ್ತದೆ.
 
ಎಲ್ಲಕ್ಕಿಂತ ಹೆಚ್ಚಾಗಿ ತಾಳ್ಮೆ, ಸಹನೆ, ಬದ್ಧತೆ ಬೇಕು. ಅದಕ್ಕೇ ಇರಬಹುದೇನೋ ಪೂರ್ವ ಪ್ರಾಥಮಿಕ ಹಂತದಲ್ಲಿ ಸಾಮಾನ್ಯವಾಗಿ ಯಾವ ಶಾಲೆಗಳಲ್ಲೂ ಪುರುಷ ಶಿಕ್ಷಕರು ಇರುವುದಿಲ್ಲ, ಶಿಕ್ಷಕಿಯರೇ ಇರುತ್ತಾರೆ. ತಮಗೆ ಪ್ರೀತಿ, ಕಾಳಜಿ ಸಿಗುವುದಿಲ್ಲ ಎಂದಾದಲ್ಲಿ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. 

ನರ್ಸರಿ ಶಿಕ್ಷಕಿಯರು ಮತ್ತು ಮಕ್ಕಳ ಬಗೆಗಿನ ತಮ್ಮ ಅನುಭವವನ್ನು ಬೆಂಗಳೂರಿನ ವಿಡಿಯಾ ಪೂರ್ಣಪ್ರಜ್ಞ ಶಾಲೆಯ ನರ್ಸರಿ ವಿಭಾಗದ ಪ್ರಾಂಶುಪಾಲೆ ಎಚ್.ಕೆ.ಪುಷ್ಪಲತಾ ಹೀಗೆ ವಿವರಿಸುತ್ತಾರೆ `ನರ್ಸರಿ ಶಾಲೆಯಲ್ಲಿ ಕಲಿಸಿದ ಶಿಕ್ಷಕಿಯರನ್ನು ಮಕ್ಕಳು ಕೊನೆಯವರೆಗೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.

ಪುಟ್ಟ ಮಕ್ಕಳಿಗೆ ಶಿಕ್ಷಕಿಯರೇ ರೋಲ್ ಮಾಡೆಲ್. ಆದ್ದರಿಂದ ಇಲ್ಲಿ ಶಿಕ್ಷಕಿಯರು ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ತಮ್ಮ ನಡೆ-ನುಡಿ, ದೈಹಿಕ ಭಾಷೆಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಇಲ್ಲಿ ಪ್ರತಿ ಮಗುವೂ ಮುಖ್ಯ. ಒಬ್ಬೊಬ್ಬ ಮಗುವಿನಲ್ಲೂ ಒಂದೊಂದು ವಿಶೇಷ ಗುಣ ಇರುತ್ತದೆ. ಆ ವಿಶಿಷ್ಟ ಗುಣವನ್ನು ಗುರುತಿಸಿ ಬೆಳೆಸುವ ಕೆಲಸವನ್ನು ಶಿಕ್ಷಕಿಯರು ಮಾಡಬೇಕಾಗುತ್ತದೆ~.

ಪೋಷಕರ ಮಾತು ಕೇಳದ ಮಕ್ಕಳು ಅದೇ ಶಿಕ್ಷಕಿಯರು ಹೇಳಿದರೆ ಕೂಡಲೇ ಕೇಳುತ್ತಾರೆ ಎಂಬ ಅಭಿಪ್ರಾಯಗಳಿಗೆ ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞ ಶಾಲೆಯ ನರ್ಸರಿ ವಿಭಾಗದ ಪ್ರಾಂಶುಪಾಲೆ ಇಂದು ಭಾಷ್ಯಂ ವ್ಯಾಖ್ಯಾನ ಕೊಡುವುದು ಹೀಗೆ- `ಮಕ್ಕಳಿಗೆ ಹೊಡೆದು, ಬೈದು ಮಾಡಿದರೆ ಅವರು ನಮ್ಮ ಮಾತನ್ನು ಕೇಳುವುದಿಲ್ಲ.

ಪ್ರೀತಿಯಿಂದ, ನಯವಾಗಿ ವಿಷಯವನ್ನು ತಿಳಿಸಿ ಹೇಳಬೇಕು. ಮಕ್ಕಳು ಬಯಸುವುದು ಪ್ರೀತಿಯನ್ನು. ಅದು ಶಿಕ್ಷಕಿಯರಿಂದ ಸಿಕ್ಕಿದರೆ ಅವರ ಮಾತನ್ನು ಕೇಳುತ್ತಾರೆ. ಅವರಿಗೆ ವಿವಿಧ ಚಟುವಟಿಕೆಗಳನ್ನು ಮಾಡಿಸುತ್ತೇವೆ. ಶಾಲೆಯಲ್ಲಿ ಸ್ನೇಹಿತರು ಸಿಗುತ್ತಾರೆ. ಶಿಕ್ಷಕಿಯರು ಮಾಡಿಸುವ ಚಟುವಟಿಕೆಗಳು, ಅದಕ್ಕೆ ನೀಡುವ ಪ್ರೋತ್ಸಾಹಗಳಿಂದಾಗಿ ನಮ್ಮ ಮಾತುಗಳನ್ನು ಬಹಳ ಬೇಗನೆ ಕೇಳುತ್ತಾರೆ~.

`ಚಂಚಲ ಮನಸ್ಸು ಹೊಂದಿರುವ ಹೂವಿನಂಥ ಪುಟ್ಟ ಮಕ್ಕಳ ವ್ಯಕ್ತಿತ್ವಕ್ಕೆ ಶಿಕ್ಷಕಿಯರು ಸರಿಯಾದ ರೂಪ ಕೊಡುತ್ತಾರೆ. ಶಾಲೆಯಲ್ಲಿ ಅವರು ಎಷ್ಟು ಹೊತ್ತು ನಮ್ಮ ಆಶ್ರಯದಲ್ಲಿ ಇರುತ್ತಾರೋ ಅಷ್ಟೂ ಹೊತ್ತು ನಾವು ಸಹ ಚೈತನ್ಯದಿಂದ, ಉತ್ಸಾಹದಿಂದ ಇರಬೇಕಾಗುತ್ತದೆ. ನಾವು ಆಸಕ್ತಿ ಕಳೆದುಕೊಂಡರೆ ಮಕ್ಕಳೂ ನೀರಸ ಪ್ರತಿಕ್ರಿಯೆ ನೀಡುತ್ತಾರೆ. ಶಿಕ್ಷಕಿಯರು ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕಾಗುತ್ತದೆ.
 
ಮಕ್ಕಳ ಮಾನಸಿಕ ಬೆಳವಣಿಗೆ ಜೊತೆಗೆ ಅವರ ಆರೋಗ್ಯ, ದೈಹಿಕ ಸ್ವಚ್ಛತೆಗೂ ನಾವು ಆದ್ಯತೆ ನೀಡುತ್ತೇವೆ. ಮಕ್ಕಳು ಓಡಾಡುವಾಗ ಮೈಕೈಗೆ ಪೆಟ್ಟಾಗದಂತೆ ನೋಡಿಕೊಳ್ಳಬೇಕು~ ಎನ್ನುತ್ತಾರೆ ನರ್ಸರಿ ವಿಭಾಗದ ಮುಖ್ಯ ಶಿಕ್ಷಕಿಯರಾದ ಜಯಶೀಲಾ, ದೀಪಿಕಾ, ಶಿಕ್ಷಕಿಯರಾದ ವಾಣಿಶ್ರೀ, ನಿರ್ಮಲಾ ಮೊದಲಾದವರು.

`ಪೂರ್ವ ಪ್ರಾಥಮಿಕ ಶಾಲೆ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸರ್ಕಾರಿ ಶಾಲೆ ಎಂದು ಶಿಕ್ಷಕಿಯರು ಬೇಜವಾಬ್ದಾರಿಯಿಂದ ವರ್ತಿಸಬಾರದು. ಪೋಷಕರು ಮಕ್ಕಳನ್ನು ನಿರ್ಲಕ್ಷಿಸಬಾರದು. ಸರ್ಕಾರ ಅಂಗನವಾಡಿ ಕೇಂದ್ರಗಳ ಗುಣಮಟ್ಟವನ್ನು, ಶಿಕ್ಷಕಿಯರ ವೇತನವನ್ನು ಹೆಚ್ಚಿಸಿದರೆ ಇಂಗ್ಲಿಷ್ ಮಾಧ್ಯಮ ಶಾಲೆಗಳಂತೆಯೇ ಗುಣಮಟ್ಟದ ಶಿಕ್ಷಣವನ್ನು ನಾವೂ ನೀಡಲು ಸಾಧ್ಯ. ಹಲವಾರು ಕಾರ್ಯಕ್ರಮಗಳ ಮೂಲಕ ಅಂಗನವಾಡಿ ಕೇಂದ್ರಗಳನ್ನು ಮುಖ್ಯವಾಹಿನಿಗೆ ತರಲು ಯತ್ನಿಸುತ್ತಿದ್ದೇವೆ~ ಎನ್ನುತ್ತಾರೆ ಅಂಗನವಾಡಿ ಕೇಂದ್ರವೊಂದರ ಶಿಕ್ಷಕಿ ಸುಜಾತಾ.

ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅನೇಕ ಪೋಷಕರು ಎಡವುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ, ಶಿಕ್ಷಕಿಯರ ಈ ಅನುಭವದ ಮಾತುಗಳು ಹೆತ್ತವರಿಗೆ ದಾರಿದೀಪ ಆಗಬಹುದು. ಹೊಸದಾಗಿ ನರ್ಸರಿ ಶಿಕ್ಷಕಿಯರಾಗ ಬಯಸುವವರಿಗೂ ಅನುಕರಣೀಯ ಎನಿಸಬಹುದು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT