ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗ್ಗು ತಾನಾಗೇ ಬಿರಿಯಲಿ

Last Updated 17 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಪರೀಕ್ಷೆಯ ಅಂಕಗಳು ಜೀವನಕ್ಕೆ ಆಧಾರವೇ ಹೊರತು ಬದುಕಿನಲ್ಲಿ ಅವೇ ಎಲ್ಲವೂ ಅಲ್ಲ. ಮಕ್ಕಳ ಬಾಲ್ಯ ಸಹಜ ಆಟೋಟಗಳನ್ನು ಹತ್ತಿಕ್ಕುತ್ತಾ, ಬರೀ ಓದುವುದೊಂದೇ ಬದುಕಿನ ಪರಮ ಗುರಿ ಎಂಬಂತೆ ಬೆಳೆಸಲು ಮುಂದಾದರೆ ಅವರಲ್ಲಿನ ಕ್ರಿಯಾಶೀಲತೆ, ಸೃಜನಶೀಲತೆ ಮುರುಟಿಹೋಗುತ್ತದೆ.

ಅಶ್ವಿನಿ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲೆ. ಸಂಗೀತ, ನೃತ್ಯ, ಆಟೋಟಗಳಲ್ಲಿ ಸಮಾನ ಆಸಕ್ತಿ. ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸಬೇಕೆಂಬ ಹಂಬಲ. ಆದರೆ ಅವಳ ತಂದೆ-ತಾಯಿಗೆ ತಮ್ಮ ಒಬ್ಬಳೇ ಮಗಳು ಚೆನ್ನಾಗಿ ಓದಬೇಕೆಂಬ ಆಸೆ. ಓದಿನ ಮುಂದೆ ಉಳಿದೆಲ್ಲ ಚಟುವಟಿಕೆಗಳೂ ನಿಷ್ಪ್ರಯೋಜಕ ಎಂಬ ಅಭಿಪ್ರಾಯ ಅವರದು.

ಮಾಸಿಕ ಪರೀಕ್ಷೆಗಳಲ್ಲಿ ಅವಳು ಯಾವುದಾದರೂ ಒಂದು ವಿಷಯದಲ್ಲಿ ಅರ್ಧ ಅಂಕ ಕಡಿಮೆ ಪಡೆದರೂ ಸಹಿಸಲಾರರು. ಅಶ್ವಿನಿಯನ್ನು ಬೈದು, ಗದರುವುದೇ ಅಲ್ಲದೆ ಅವಳ ಶಿಕ್ಷಕರು ಹಾಗೂ ಕಡಿಮೆ ಅಂಕ ಗಳಿಸಿರುವ ವಿಷಯದ ಶಿಕ್ಷಕರು ಮಾತ್ರವಲ್ಲದೆ ಮುಖ್ಯ ಶಿಕ್ಷಕರ ಬಳಿಯೂ ಗೋಳು ತೋಡಿ­ಕೊಳ್ಳು­ತ್ತಾರೆ. `ನೋಡಿ ಮೇಡಂ, ಈ ಸಲ ಈ ಸಬ್ಜೆಕ್ಟ್‌ನಲ್ಲಿ ಅರ್ಧ ಅಂಕ ಕಡಿಮೆ ತಗೊಂಡು­ಬಿಟ್ಟಿದ್ದಾಳೆ' ಎಂದು ಅಲವತ್ತುಕೊಳ್ಳುತ್ತಾರೆ.

`ಇನ್ನೂ ಚಿಕ್ಕವಳಲ್ಲವೇ ಬಿಡಿ, ಮುಂದೆ ಸರಿಯಾಗುತ್ತೆ' ಎಂದು ಶಿಕ್ಷಕರು ಹೇಳಿದರೂ ಇವರಿಬ್ಬರಿಗೆ ಸಮಾಧಾನವಿಲ್ಲ. ಸರಿ ಮುಂದಿನ ಪರೀಕ್ಷೆಗೆ ಅಂದಿನಿಂದಲೇ ತಯಾರಿ ಶುರು. ಅಶ್ವಿನಿಯ ಆಟ, ಕುಣಿತ ಎಲ್ಲ ಬಂದ್. `ಮುಂದಿನ ಪರೀಕ್ಷೆಯಲ್ಲಿ ಈ ತರಹ ಆಗ್ಬಾರದು ನೋಡು' ಎಂದು ಎಚ್ಚರಿಸುತ್ತಾರೆ.

ಸರಿ ಅದರ ಪರಿಣಾಮ ಶುರು. ಚುರುಕಾಗಿದ್ದ ಪುಟಾಣಿ ಅಶ್ವಿನಿ ಈಗ ಎಲ್ಲ ವಿಚಾರಗಳಲ್ಲೂ ನಿರಾಸಕ್ತೆ. ಅವಳ ಅರಳು ಕಂಗಳಲ್ಲಿ ಶೂನ್ಯದ ಭಾವ. ಪುಸ್ತಕ ಕೈಯಲ್ಲಿದ್ದರೂ ದೃಷ್ಟಿ ಎತ್ತಲೋ. ಮುಂದಿನ ಪರೀಕ್ಷೆಯ ಫಲಿತಾಂಶ? ನೀವೇ ಊಹಿಸಿ...

ಒಬ್ಬಳೇ ಅಲ್ಲ
ಇದು ಒಬ್ಬಳು ಅಶ್ವಿನಿಯ ಸ್ಥಿತಿ ಅಲ್ಲ. ಒಂದು ವರ್ಗದ ಪೋಷಕರ ಕತೆ ಇದಾದರೆ, ಮತ್ತೊಂದು ವರ್ಗದ ಪೋಷಕರೂ ಇದ್ದಾರೆ. ಅವರಿಗೆ ತಮ್ಮ ಮಕ್ಕಳು ಓದಲಿ, ಬಿಡಲಿ ಅಂಕಗಳು ಮಾತ್ರ ಅತ್ಯುತ್ತಮವಾಗಿ ಬರಬೇಕು. ಇಲ್ಲವಾದರೆ ಅವರಿಗೆ ಕಲಿಸುವ ಆ ಟೀಚರ್, ಟೀಚರ್ರೇ ಅಲ್ಲ. ಜೊತೆಗೆ (ಇಂದಿನ ಶಿಕ್ಷಣ ವ್ಯವಸ್ಥೆಯಂತೆ) ಅಂಕ ಕಡಿಮೆ ಬಂದು ಅನುತ್ತೀರ್ಣರಾದರೂ ಅವರನ್ನು ಮುಂದಿನ ತರಗತಿಗೆ ಕಳುಹಿಸಬೇಕು. ತಮ್ಮ ಮಗ ಅಥವಾ ಮಗಳು ಅನುತ್ತೀರ್ಣರಾಗಿಬಿಟ್ಟರೆ ಸಂಬಂಧಿಕರು, ಸ್ನೇಹಿತರ ನಡುವೆ ಅವರ ಬೆಲೆ ಕಡಿಮೆಯಾಗಿ ಬಿಡುತ್ತದೆ ಎಂಬ ಚಿಂತೆ. ಮತ್ತೆ ಕೆಲವರಿಗೆ ಮಕ್ಕಳ ಸ್ನೇಹಿತರು ಮುಂದೆ ಹೋಗಿಬಿಡುತ್ತಾರೆ, ಆಗ ತಮ್ಮ ಮಕ್ಕಳಿಗೆ ಬೇಸರವಾಗುತ್ತದೆ. ಹೀಗಾಗಿ ಅವರಿಗೆ ಏನು ಬರಲಿ ಬಿಡಲಿ ಒಟ್ಟಾರೆ ಅವರು ಪಾಸಾಗಿ ಮುಂದಿನ ತರಗತಿಗೆ ಹೋಗಬೇಕು ಅಷ್ಟೆ.

ಇಂತಹ ಪೋಷಕರು ವರ್ಷವಿಡೀ ಮಕ್ಕಳನ್ನು ಹೇಗೆ ಗಮನಿಸುತ್ತಾರೆ? ಮಕ್ಕಳು ದಿನನಿತ್ಯ ಹೋಂವರ್ಕ್ ಮಾಡಿಕೊಂಡು ಹೋಗುತ್ತಿದ್ದಾರಾ,  ಅಂದಿನದನ್ನು ಅಂದೇ ಓದಿದ್ದಾರಾ ಅಥವಾ ಓದುವ ಸೋಗಿನಲ್ಲಿ ಕಾಲ ಕಳೆಯುತ್ತಿದ್ದಾರಾ ಯಾವುದನ್ನೂ ಗಮನಿಸುವುದಿಲ್ಲ. ಬದಲಿಗೆ ಪರೀಕ್ಷೆ ಹತ್ತಿರ ಬಂದಾಗ, ಎರಡು ಮೂರು ದಿನ ಪಟ್ಟಾಗಿ ಕೂರಿಸಿ, ಹಗಲಿಡೀ ಬೈದು-, ಹೊಡೆದು ಓದಿಸುತ್ತಾರೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ! ಆಗ ತಿಳಿಯುತ್ತಾ ಹೋಗುತ್ತದೆ ತಮ್ಮ ಮಕ್ಕಳು ವರ್ಷವಿಡೀ ಏನು ಮಾಡುತ್ತಿದ್ದರು ಎಂಬುದು.

ಅಧಿಕ ಸಂಖ್ಯೆಯ ಪೋಷಕರು, ಟಿ.ವಿ. ಮೆಗಾ ಧಾರಾವಾಹಿಗಳ ದಾಸಾನುದಾಸರಾಗಿ, ಶಾಪಿಂಗ್, ಹರಟೆಯಂತಹ ಕಾರ್ಯಗಳಲ್ಲಿ  ತೊಡಗಿಕೊಂಡು, ಶಾಲೆಯಿಂದ ಬಂದ ಮಕ್ಕಳನ್ನು ತಮ್ಮ ಬಿಡುಗಡೆಯ ನೆಪದಲ್ಲಿ ಮನೆಪಾಠಕ್ಕೆ ಕಳುಹಿಸಿಬಿಡುತ್ತಾರೆ. ಅಲ್ಲಿ ನಿಜವಾಗಿಯೂ ಏನು ಹೇಳಿ ಕೊಡುತ್ತಾರೆ, ತಮ್ಮ ಮಕ್ಕಳು ಅಲ್ಲಿ ಹರಟೆ ಹೊಡೆದು ಬರುತ್ತಾರೋ, ಗುಂಪಿನಲ್ಲಿ ಗೋವಿಂದ ಎಂದು ಬರೀ ಕಂಠಪಾಠ ಮಾಡಿ ಬರುವರೋ ಉಹುಂ... ಈ ಯಾವ ವಿಚಾರಗಳೂ ಇಂತಹ ಪೋಷಕರಿಗೆ ಅಗತ್ಯ ಎನಿಸುವುದೇ ಇಲ್ಲ. ಬದಲಿಗೆ ಟ್ಯೂಷನ್‌ಗೆ ಹೋಗಿದ್ದಕ್ಕೆ ಅವರಿಗೆ ಒಳ್ಳೆಯ ಅಂಕಗಳು ಬಂದು ಉತ್ತೀರ್ಣರಾದರೆ ಸಾಕು, ಉಳಿದದ್ದೆಲ್ಲ ಗೌಣ.

ಮಕ್ಕಳ ಸಾಮಾನ್ಯ ಜ್ಞಾನ, ಬುದ್ಧಿಮತ್ತೆ ಎಲ್ಲವನ್ನೂ ಮೀರಿ ಅಂಕಗಳ ಹಿಂದೆ ಬೀಳುವ ಪೋಷಕರಂತೆ ಅದೆಷ್ಟೋ ಶಿಕ್ಷಕರೂ ಇದ್ದಾರೆ. ತಾವು ಬೋಧಿಸುವ ವಿಷಯದಲ್ಲೇ ಮಗು ಹೆಚ್ಚು ಅಂಕ ಗಳಿಸಬೇಕೆಂಬ ಆಕಾಂಕ್ಷೆ ಅವರದು. ಅದಕ್ಕೆಂದು ವಿಧವಿಧದ ಶಿಕ್ಷೆ ನೀಡಿ, ದಂಡಿಸಿ, ಉರು ಹೊಡೆಸಿ, ಹೆಚ್ಚು ಅಂಕ ಗಳಿಸುವಂತೆ ಮಾಡುವ ಮೂಲಕ ತಾವೇ ಎಲ್ಲವನ್ನೂ ಕಲಿಸಿದ, ಹೆಚ್ಚು ಫಲಿತಾಂಶ ನೀಡಿದ ಅತ್ಯುತ್ತಮ ಶಿಕ್ಷಕ/ಕಿ ಎಂದು ಬೀಗುವುದುಂಟು.

ಶಾಲಾ ಕಾಲೇಜು ಪರೀಕ್ಷೆಯ ಅಂಕಗಳು ಜೀವನಕ್ಕೆ ಆಧಾರವೇ ಹೊರತು, ಅವೇ ವಿದ್ಯಾರ್ಥಿ ಜೀವನದ ಉಸಿರಲ್ಲ. ಹೀಗಾಗಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿ, ಅಂಕ ಗಳಿಸುವಂತೆ ಮಾಡುವುದು ಖಂಡಿತಾ ಸರಿಯಲ್ಲ. ಎಲ್ಲ ಸಾಧನೆಗಳಿಗೂ ಕೇವಲ ಅಂಕಗಳಷ್ಟೇ ಆಧಾರವೂ ಅಲ್ಲ. ಬಾಲ್ಯದ ಪ್ರತಿ ಸಂತೋಷದ ಕ್ಷಣವೂ ಮಗುವಿನ ಅಮೂಲ್ಯ ಆಸ್ತಿ. ಅದು ಆಡಿ, ಕುಣಿದು, ನಲಿಯುತ್ತಾ ಕಲಿತರೆ ಚೆನ್ನ. ಹೀಗಾಗಿ ಆ ಕ್ಷಣಗಳನ್ನು ಕಸಿಯುವ ಪ್ರಯತ್ನ ಬೇಡ. ಮಗುವಿನ ಉಳಿದೆಲ್ಲ ಕ್ರಿಯಾಶೀಲ, ಸೃಜನಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ಇರಲಿ.

ನಿಮ್ಮ ಮಗುವಿಗಾಗಿ ಸಮಯವನ್ನು ಮೀಸಲಿಟ್ಟು ಮನೆಯಲ್ಲಿ ನೀವೇ ಕಲಿಸುವ ಪ್ರಯತ್ನ ಮಾಡಿ. ಇದರಿಂದ ಮುಂದೆ ನೀವು ಪಶ್ಚಾತ್ತಾಪ ಪಡಬೇಕಾದ ಅದೆಷ್ಟೋ ಸಂದರ್ಭಗಳಿಂದ ಬಿಡುಗಡೆ ಹೊಂದಬಲ್ಲಿರಿ. ಅಂಕಗಳಷ್ಟೇ ಅಲ್ಲದೆ ಮೌಲ್ಯಯುತ ಚಟುವಟಿಕೆ­ಗಳಿಗೆ ನೀವು ನೀಡುವ ಉತ್ತೇಜನದಿಂದ ಮಕ್ಕಳಲ್ಲಿ ನಾಯಕತ್ವದ ಗುಣ ವಿಕಸಿಸುತ್ತಾ, ತಾವಾಗಿಯೇ ಓದುವಿಕೆಯ ಹವ್ಯಾಸದಲ್ಲಿ ನಿರತರಾಗಿ ಬಿಡುತ್ತಾರೆ. ಇದರ ಪರಿಣಾಮವಾಗಿ ಅಂಕಗಳು ತಾವಾಗಿಯೇ ಬರುತ್ತವೆ.

ಮೊಗ್ಗಿನಂತೆ ಇರುವ ಮಕ್ಕಳ ಮನಸ್ಸು ಸಹಜವಾಗಿಯೇ ಅರಳಲಿ. ಬಲವಂತವಾಗಿ ಎಸಳುಗಳನ್ನು ಎಳೆದು ಹಿಂಜಿ, ಹೂವಾಗಿಸುವುದು ಬೇಡ. ಏನಂತೀರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT