ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ್‌ ಎಂಬ ಕನಸುಗಾರ...

ರಣಜಿಯಲ್ಲಿ ರಾಜ್ಯದ ಯಶಸ್ಸು
Last Updated 18 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ಹನ್ನೆರಡು ವರ್ಷಗಳಿಂದ ರಾಜ್ಯ ಕ್ರಿಕೆಟ್‌ ತಂಡದ ಪ್ರಮುಖ ಭಾಗವಾಗಿರುವ ಆರ್‌. ವಿನಯ್‌ ಕುಮಾರ್‌ ಹಲವು ಏಳುಬೀಳು ಕಂಡಿದ್ದಾರೆ. ಅವರ ಸಾರಥ್ಯದಲ್ಲಿಯೇ ತಂಡ ಸತತ ಎರಡು ಬಾರಿ ರಣಜಿ ಹಾಗೂ ಎರಡು ಬಾರಿ ಇರಾನಿ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದೆ. ಈ ಮೂಲಕ ರಾಜ್ಯ ಕಂಡ ಯಶಸ್ವಿ ನಾಯಕ ಎಂಬ ಪಟ್ಟ ಅವರಿಗೆ ಲಭಿಸಿದೆ.

‘15 ವರ್ಷಗಳಲ್ಲಿ ಹೆಚ್ಚಿನ ಅವಧಿ ನಾನು ಕೂಡ ತಂಡದಲ್ಲಿ ಆಡಿದ್ದೇನೆ. ‘ಗುಂಡಿಗೆ ಬಿದ್ದ ತೋಳಕ್ಕೆ ಆಳಿಗೊಂದು ಕಲ್ಲು’ ಎಂಬಂತೆ ಟೀಕೆಗಳ ಸುರಿಮಳೆಯನ್ನೇ ಎದುರಿಸಿದ್ದೇವೆ. ಹಾಗಂತ ತಂಡವೇನು ದುರ್ಬಲವಾಗಿರಲಿಲ್ಲ.

ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಸಾಮರ್ಥ್ಯವಿರುವ ಆಟಗಾರರೇ ಇದ್ದರು. ಆದರೆ, ಅದೃಷ್ಟವೇಕೊ ನಮ್ಮ ಬಳಿ ಇರಲಿಲ್ಲ. ಅದೆಷ್ಟೊ ಬಾರಿ ಸೆಮಿಫೈನಲ್‌ನಲ್ಲಿ ಎಡವಿದ್ದೂ ಇದೆ. ನಿಮಗೆ ಗೊತ್ತೇ ಇದೆ ಮೈಸೂರಿನಲ್ಲಿ ಮುಂಬೈ ಎದುರು 2010ರಲ್ಲಿ ನಡೆದ ಫೈನಲ್‌ನಲ್ಲಿ ಕೇವಲ 6 ರನ್‌ಗಳಿಂದ ಸೋತಿದ್ದೆವು. ಹೊಂದಾಣಿಕೆ ಆಟದಲ್ಲಿ ಎಲ್ಲೋ ಸಮಸ್ಯೆ ಇತ್ತು ಅನಿಸುತ್ತದೆ. ಸ್ಫೂರ್ತಿ ಹಾಗೂ ಪ್ರೋತ್ಸಾಹದ ಕೊರತೆ ಇತ್ತು’ ಎಂದು ವಿನಯ್‌ ವಿಶ್ಲೇಷಿಸುತ್ತಾರೆ.

ಪ್ರಶಸ್ತಿ ಬರ ಅನುಭವಿಸಿದ್ದ ಆ ವರ್ಷಗಳಲ್ಲಿಯೇ ಯಶಸ್ಸು ಅಡಗಿದೆ ಎಂಬುದು ವಿನಯ್‌ ಅವರ ಅಭಿಪ್ರಾಯ. ಏಕೆಂದರೆ ಈಗ ಪ್ರಶಸ್ತಿ ಗೆಲ್ಲುತ್ತಿರುವ ತಂಡ ಒಂದೆರಡು ವರ್ಷಗಳಲ್ಲಿ ಕಟ್ಟಿದ್ದಲ್ಲ. ಪ್ರತಿ ಸೋಲಿನೊಂದಿಗೆ ಆಟಗಾರರು ಅನೇಕ ಹೊಸ ವಿಚಾರ ಕಲಿತಿದ್ದಾರೆ. ವಿನಯ್‌, ಉತ್ತಪ್ಪ ಹಾಗೂ ಸ್ಟುವರ್ಟ್ ಬಿನ್ನಿ ಹೊರತುಪಡಿಸಿದರೆ ಈಗ ಹೆಚ್ಚಿನ ಆಟಗಾರರು ಹೊಸಬರು. ಆದರೆ, ಇದು ಇಷ್ಟು ವರ್ಷ ಕಾಲ ತಂಡ ಕಟ್ಟುವ ಪ್ರಯತ್ನಕ್ಕೆ ಸಿಕ್ಕ ಫಲ ಅಷ್ಟೆ. ಆಗ ನೆಟ್ಟ ಮರ ಈಗ ಹಣ್ಣು ಬಿಡುತ್ತಿದೆ.

‘ಪ್ರಯತ್ನಕ್ಕೆ ಯಶಸ್ಸು ಸಿಗದಿದ್ದಾಗ ನಿರಾಸೆಯಾಗುತ್ತದೆ, ಬೇಸರ ಉಂಟಾಗುತ್ತದೆ. ರಣಜಿ ಟ್ರೋಫಿ ಗೆಲ್ಲಬೇಕು, ಆ ಮೂಲಕ ರಾಷ್ಟ್ರೀಯ ತಂಡದ ಗಮನ ಸೆಳೆಯಬೇಕು ಎಂಬುದು ಪ್ರತಿ ಆಟಗಾರನ ಕನಸು. ರಣಜಿ ಆಡಲೆಂದು ದಾವಣಗೆರೆಯಿಂದ ಬೆಂಗಳೂರು ಬಸ್ಸು ಹತ್ತಿದ್ದ ನನ್ನ ಕನಸೂ ಅದೇ ಆಗಿತ್ತು. ವೈಯಕ್ತಿಕವಾಗಿ ಆರೇಳು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡಿದ್ದೇನೆ. ಆದರೆ, ಟ್ರೋಫಿ ಗೆಲ್ಲುವ ಕನಸು ಇತ್ತೀಚೆಗಷ್ಟೇ ನನಸಾಗಿದೆ’ ಎಂದು ನಡೆದು ಬಂದ ಹಾದಿಯತ್ತ ವಿನಯ್‌ ಮತ್ತೆ ದೃಷ್ಟಿ ಹಾಯಿಸುತ್ತಾರೆ.

ಲೇಡಿ ಲಕ್‌...
ವಿನಯ್‌ ಕುಮಾರ್‌ ಅವರ ಯಶಸ್ಸಿನಲ್ಲಿ ‘ಲೇಡಿ ಲಕ್‌’ನ ಪಾತ್ರವೂ ಇದೆ. ನವದೆಹಲಿ ಮೂಲದ ರಿಚಾ ಸಿಂಗ್‌ ಅವರನ್ನು ವಿವಾಹ ವಾದ ಬಳಿಕ 10 ಪ್ರಶಸ್ತಿಗಳು ವಿನಯ್‌ ಮಡಿಲು ಸೇರಿವೆ.

‘ಈ ಯಶಸ್ಸಿಗೆ ‘ಲೇಡಿ ಲಕ್‌’ ಪ್ರಮುಖ ಕಾರಣ ಎಂಬುದು ನನ್ನ ಭಾವನೆ. ಪತ್ನಿಯೇ ನನಗೆ ಸ್ಫೂರ್ತಿ. ವಿವಾಹವಾಗಿ ಕೆಲವೇ ದಿನಗ ಳಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದೆ. ಐಪಿಎಲ್‌ನಲ್ಲಿ ನಾನು ಆಡಿದ ಮುಂಬೈ ಇಂಡಿಯನ್ಸ್‌ ಚಾಂಪಿಯನ್‌ ಆಯಿತು. ಅಲ್ಲದೇ, ಬಿಸಿಸಿಐ ನೀಡುವ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಲಭಿಸಿತು. ಇದಕ್ಕೆ ಬೇರೆಯವರು ನಾನಾ ಅರ್ಥ ಕಲ್ಪಿಸಬಹುದು. ಆದರೆ, ನನ್ನ ಪಾಲಿಗೆ ಆಕೆ ಅದೃಷ್ಟ ದೇವತೆ. ಥ್ಯಾಂಕ್ಯೂ ರಿಚಾ’ ಎಂದು ವಿನಯ್‌ ಹೇಳುತ್ತಾರೆ.

‘ಈ ಯಶಸ್ಸಿನ ಪಯಣದಲ್ಲಿ ಪೋಷಕರ ಶ್ರಮವೂ ಇದೆ. ಪರಿಶ್ರಮದಿಂದ ನನ್ನನ್ನು ಬೆಳೆಸಿದ ರೀತಿಯನ್ನು ಪ್ರತಿ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ನೆನಪಿಸಿಕೊಳ್ಳುತ್ತೇನೆ. ಸೋತಾಗಲೂ ಬೆನ್ನು ತಟ್ಟಿ ಸ್ಫೂರ್ತಿ ತುಂಬಿದ್ದಾರೆ’ ಎಂದು ಹೇಳಲು ಅವರು ಮರೆಯಲಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT