ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪೀಳಿಗೆಯ ಮನ್ವಂತರ...

Last Updated 30 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ವಿವಿಧ ವಯೋಮಿತಿಯೊಳಗಿನ ಕ್ರಿಕೆಟ್‌ ಟೂರ್ನಿಗಳು  ಸಾಕಷ್ಟು ನಡೆಯುತ್ತಿವೆ. ಆದ್ದರಿಂದ ಯುವ ಆಟಗಾರರು ಹೆಚ್ಚು ಬೆಳಕಿಗೆ ಬರುತ್ತಿದ್ದಾರೆ. ಈ ಬಗ್ಗೆ ಪ್ರಮೋದ್‌ ಜಿ.ಕೆ. ವಿಶ್ಲೇಷಿಸಿದ್ದಾರೆ.

‘ಸುಂದರ ಮನೆ ಕಟ್ಟುವ ಆಸೆ ಹೊಂದಿ ರುವವರು ಮೊದಲು ಗಟ್ಟಿ ಬುನಾದಿ ನಿರ್ಮಿಸಬೇಕಾಗುತ್ತದೆ. ಅದೇ ರೀತಿ ಬಲಿಷ್ಠ ತಂಡ ಕಟ್ಟಬೇಕಾದರೆ ಎಳವೆಯಿಂದಲೇ ಸೂಕ್ತ ತರಬೇತಿ ಕೊಡಬೇಕಾ ಗುತ್ತದೆ. ಈ ವ್ಯವಸ್ಥೆ ನಮ್ಮಲ್ಲಿ ಇರುವುದರಿಂದಲೇ ಕರ್ನಾಟಕದ ಆಟಗಾರರ ಸಾಮರ್ಥ್ಯ ಏನೆಂಬುದು ಇಡೀ ದೇಶಕ್ಕೆ ಗೊತ್ತಾಗುತ್ತಿದೆ...’

-ಹೀಗೆ ಮಾತು ಆರಂಭಿಸಿದ್ದು ಎಚ್‌. ಸುರೇಂದ್ರ. 14 ವರ್ಷದ ಒಳಗಿನವರ ರಾಜ್ಯ ತಂಡದ ಕೋಚ್‌ ಆಗಿರುವ ಅವರು ರಾಜ್ಯದ ಕ್ರಿಕೆಟಿಗರಿಗೆ ಎಲ್ಲಾ ಟೂರ್ನಿಗಳಲ್ಲಿ ಹೆಚ್ಚು ಅವಕಾಶ ಲಭಿಸುತ್ತಿರುವುದರ ಕಾರಣವೇನು ಎಂಬುದನ್ನು ವಿವರಿಸಿದರು.

ಬಿಸಿಸಿಐ ಆಯೋಜಿಸುವ ದೇವಧರ್‌ ಟ್ರೋಫಿ ಹಾಗೂ ದುಲೀಪ್‌ ಟ್ರೋಫಿ ಟೂರ್ನಿಗಳಲ್ಲಿ ರಾಜ್ಯದ ಆಟಗಾರರೇ ಹೆಚ್ಚಾಗಿರುತ್ತಾರೆ. ಎರಡು ವರ್ಷಗಳ ಅವಧಿಯಲ್ಲಿ ರಾಜ್ಯ ಕ್ರಿಕೆಟ್ ತಂಡ ಎರಡು ರಣಜಿ, ಎರಡು ಇರಾನಿ ಮತ್ತು ಎರಡು ಸಲ ವಿಜಯ್‌ ಹಜಾರೆ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ.

ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ವಿಜೃಂಭಿಸಿದ ಕೆಲ ಆಟಗಾರರು ಈಗ ರಾಜ್ಯ ತಂಡದಲ್ಲಿ ಆಡಲು ಕಾಯುತ್ತಿದ್ದಾರೆ. ಅದಕ್ಕೆ ಬೇಕಾದ ಸಾಮರ್ಥ್ಯವೂ ಅವರಲ್ಲಿದೆ. ಪ್ರತಿಭೆಗಳ ಕಣಜ ಎನಿಸಿರುವ ಕರ್ನಾಟಕ ದಲ್ಲಿ ತಂಡಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದೇ ಆಯ್ಕೆ ಸಮಿತಿಗೆ ಸವಾಲಾಗಿ ಪರಿಣಮಿಸಿದೆ. ಇದರ ಹಿಂದೆ ‘ಗಟ್ಟಿ ಬುನಾದಿ’ ಎನ್ನುವ ಯಶಸ್ವಿನ ಮಂತ್ರವಿದೆ.

ಬೇರೆಲ್ಲಾ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ವಿವಿಧ ವಯೋಮಾನದ ಟೂರ್ನಿಗಳು ಹೆಚ್ಚು ನಡೆಯುತ್ತವೆ. ಬೆಂಗಳೂರು ಒಂದರಲ್ಲೇ ವರ್ಷಕ್ಕೆ 1800 ಪಂದ್ಯಗಳು ಆಯೋಜನೆಯಾಗು ತ್ತವೆ! 14, 16 19 ಮತ್ತು 23 ವರ್ಷದ ಒಳಗಿನವರಿಗೆ ನಡೆಯುವ ಟೂರ್ನಿಗಳಲ್ಲಿಯೇ ವರ್ಷಕ್ಕೆ ಒಂದು ಸಾವಿರ ಪಂದ್ಯಗಳು ಜರುಗುತ್ತವೆ. ಹೀಗೆ ಬುನಾದಿ ಗಟ್ಟಿ ಇರುವುದರಿಂದಲೇ ರಾಜ್ಯ ದಲ್ಲಿ ಪ್ರತಿಭಾನ್ವಿತ ಆಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ವೃತ್ತಿಪರತೆಯೂ ಬೆಳೆಯುತ್ತಿದೆ.

ಎರಡು ವರ್ಷಗಳ ಹಿಂದೆಯಷ್ಟೇ ರಾಜ್ಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಶ್ರೇಯಸ್ ಗೋಪಾಲ್‌, ಆರ್‌. ಸಮರ್ಥ್‌, ರೋನಿತ್‌ ಮೋರೆ ರಾಷ್ಟ್ರೀಯ ತಂಡದಲ್ಲೂ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಇವರ ಹಿಂದಿರುವ  ಪ್ರತಿಭಾನ್ವಿತ ಆಟಗಾರರೂ ಭರವಸೆ ಮೂಡಿಸುತ್ತಿದ್ದಾರೆ. ಮುಂದೊಂದು ದಿನ ರಾಷ್ಟ್ರೀಯ ತಂಡದಲ್ಲೂ ಆಡಬಲ್ಲ ಪ್ರತಿಭೆ ಅವರಲ್ಲಿದೆ.  ಅಭಿಷೇಕ್‌ ರೆಡ್ಡಿ, ಎಡಗೈ ಸ್ಪಿನ್ನರ್‌ ಶುಭಾಂಗ್‌ ಹೆಗ್ಡೆ, ಆಫ್‌ ಸ್ಪಿನ್ನರ್‌ ವಿನಯ್‌, ಆಯುಷ್‌ ಶೆಟ್ಟಿ, ಜಸ್ವಂತ್ ಆಚಾರ್ಯ, ದೇವದತ್‌ ಪಡಿಕಲ್‌, ನಿಕಿನ್ ಜೋಸ್ ಹಾಗೂ ಬಿ.ಎಂ. ಶ್ರೇಯಸ್ ಅವರಂಥ ಪ್ರತಿಭೆ ಗಳು ‘ಹಿರಿಯರ’ನ್ನೂ ಮೀರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಸರ್‌ ಮಿರ್ಜಾ ಶೀಲ್ಡ್‌ಗಾಗಿ ನಡೆದ ಡಿವಿಷನ್‌ ಒಂದರ ಟೂರ್ನಿಯಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ ಗೌರವ ಪಡೆದಿರುವ ಅಭಿಷೇಕ್‌ ರೆಡ್ಡಿ  ಇರಾನಿ ಟ್ರೋಫಿಯಲ್ಲೂ ಆಡಿದ್ದರು. ಅಭಿಷೇಕ್‌ ಹಿಂದಿನ 32 ಇನಿಂಗ್ಸ್‌ಗಳಿಂದ ಹತ್ತು ಶತಕ ಸೇರಿದಂತೆ ಒಟ್ಟು 2050 ರನ್‌ ಗಳಿಸಿದ್ದಾರೆ.

ಜವಾಹರ ಕ್ಲಬ್‌ ಪ್ರತಿನಿಧಿಸುವ ರೋಹಿತ್‌ ಸುಂದರ್‌, ಕೌನೇನ್‌ ಅಬ್ಬಾಸ್‌, ಕೆ.ಎಸ್‌. ಚಂದ್ರಶೇಖರ್‌ ಮೂರ್ತಿ, ಮಲ್ಲೇಶ್ವರಂ ಜಿಮ್ಖಾನ ಕ್ಲಬ್‌ನಲ್ಲಿ ಆಡುವ ಎಂ. ಕ್ರಾಂತಿ ಕುಮಾರ್ ಭರವಸೆಯ ಆಟಗಾರರೆ ನಿಸಿದ್ದಾರೆ. ಜವಾಹರ ಕ್ಲಬ್‌ನಲ್ಲಿ ಆಡುವ 20 ವರ್ಷದ ನಿಶ್ಚಲ್‌ ಬ್ಯಾಟಿಂಗ್‌ ವಿಭಾಗದ ಹೊಸ ಮಿಂಚು. ಬಲಗೈ ಬ್ಯಾಟ್ಸ್‌ಮನ್‌ ನಿಶ್ಚಲ್‌ ಟ್ವೆಂಟಿ –20 ಟೂರ್ನಿಯ ವಿಭಾಗದಲ್ಲಿ  ಅತ್ಯುತ್ತಮ ಬ್ಯಾಟ್ಸ್‌ಮನ್‌ ಗೌರವ ಪಡೆದಿದ್ದಾರೆ.

ಕರ್ನಾಟಕದಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಹೆಚ್ಚಾಗಿ ರಲು ರಾಜ್ಯ ಕ್ರಿಕೆಟ್‌ ಸಂಸ್ಥೆ ರೂಪಿಸಿದ ಯೋಜನೆಗಳು ಪ್ರಮುಖ ಕಾರಣವಾಗಿವೆ. ರಾಜ್ಯಾದ್ಯಂತ ವರ್ಷಪೂರ್ತಿ ಟೂರ್ನಿಗಳು ನಡೆಯುತ್ತಲೇ ಇರುತ್ತವೆ.

ಎರಡು ದಿನ ನಡೆಯುವ ಮೊದಲ ಡಿವಿಷನ್‌ ಟೂರ್ನಿಯಲ್ಲಿ 66 ಪಂದ್ಯಗಳು ನಡೆಯುತ್ತವೆ. ಗುಂಪು 1ರಲ್ಲಿ ಒಂದರಿಂದ ಐದು ಡಿವಿಷನ್ ಹಂತದ ಪಂದ್ಯಗಳು, 137 ಪಂದ್ಯಗಳು ನಡೆಯವ ವೈಎಸ್‌ಆರ್‌ ಟೂರ್ನಿ, 16 ಮತ್ತು 18 ವರ್ಷದ ಒಳಗಿನವರಿಗೆ ಅಂತರ ವಲಯ ಟೂರ್ನಿಗಳು, ಸೂಪರ್‌ ಲೀಗ್ ಹೀಗೆ ಹಲವಾರು ಟೂರ್ನಿಗಳನ್ನು ಕೆಎಸ್‌ಸಿಎ ನಡೆಸುತ್ತಿದೆ. ಆದ್ದರಿಂದ ಎಳವೆಯಲ್ಲಿಯೇ ಆಟಗಾರರಲ್ಲಿನ ಪ್ರತಿಭೆಗೆ ಸೂಕ್ತ ವೇದಿಕೆ ಲಭಿಸುತ್ತಿದೆ.

ಇವುಗಳ ಜೊತೆಗೆ ಅಂತರ ಶಾಲಾ ಟೂರ್ನಿಗಳೂ ನಡೆಯುತ್ತವೆ. ಶಾಲಾ ಟೂರ್ನಿಗಳಲ್ಲಿ ಮೂರು ಹಂತದ ಡಿವಿಷನ್‌ ಪಂದ್ಯಗಳು ಜರುಗುತ್ತವೆ. ಬಿ.ಟಿ. ರಾಮಯ್ಯ ಟ್ರೋಫಿಗಾಗಿ ನಡೆಯುವ ಟೂರ್ನಿಯಲ್ಲಿ 140 ಕ್ಲಬ್‌ಗಳು ಪಾಲ್ಗೊಳ್ಳುತ್ತವೆ! 19 ವರ್ಷದ ಒಳಗಿನವರಿಗೆ ವಲಯ ಮಟ್ಟದ ಪಂದ್ಯಗಳು, ಶಫಿ ದಾರಾಶಾ, ತಿಮ್ಮಪ್ಪಯ್ಯ ಸ್ಮಾರಕ, ಎಸ್‌.ಎ. ಶ್ರೀನಿವಾಸನ್ ಸ್ಮಾರಕ ಪಂದ್ಯಗಳು ಹೀಗೆ ಪ್ರತಿ ಟೂರ್ನಿಗಳು ಆಟಗಾರರ ಏಳಿಗೆಗೆ ಕಾರಣವಾಗು ತ್ತಿವೆ. ಜೊತೆಗೆ ಹೋದ ವರ್ಷ ಮತ್ತೆ ಆರಂಭವಾಗಿರುವ ಕೆಪಿಎಲ್ ಹೊಸ ಅವಕಾಶ ಕೊಟ್ಟಿದೆ.

ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ಕೆಎಸ್‌ಸಿಎ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿರುವ ಕಾರಣ ಆಟಗಾರರಲ್ಲಿ ಆರಂಭದಿಂದಲೇ ವೃತ್ತಿಪರತೆ ಮೂಡಲು ಸಾಧ್ಯವಾಗುತ್ತಿದೆ. ಬೌಲಿಂಗ್‌ ಮಿಷನ್‌ ಬೌಲರ್‌ನ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತದೆ. 

ಆಟಗಾರರು ಎಲ್ಲಿಯೇ ಅಭ್ಯಾಸ ನಡೆಸಲಿ ಅದನ್ನು ಕೆಎಸ್‌ಸಿಎ ಅಧಿಕಾರಿಗಳು ತಮ್ಮ ಕೊಠಡಿಯಲ್ಲಿಯೇ ಕುಳಿತು ವೀಕ್ಷಿಸಲು ಸಾಧ್ಯವಿದೆ. ಪಂದ್ಯ ನಡೆಯುವಾಗ ಸ್ಕೋರರ್‌ ಐ ಪಾಡ್‌ ಮೂಲಕ ಪ್ರತಿ ಆಟಗಾರನ ಬ್ಯಾಟಿಂಗ್ ಮತ್ತು ಬೌಲಿಂಗ್‌ ಶೈಲಿಯನ್ನು ವಿಡಿಯೊ ಮಾಡಿಕೊಳ್ಳುತ್ತಾರೆ. ಇದನ್ನು ನೇರ ಪ್ರಸಾರದಲ್ಲಿ ನೋಡಲು ಸಾಧ್ಯವಿದೆ. ಈ ಸೌಲಭ್ಯವನ್ನು ಕೆಎಸ್‌ಸಿಎ ಅಳವಡಿಸಿಕೊಂಡಿದೆ.

ಸ್ಪಿನ್‌ ಬೌಲರ್‌ಗಳಿಗೆ ವಿಶೇಷ ತರಬೇತಿ ಲಭಿಸುತ್ತದೆ. 14 ವರ್ಷದ ಒಳಗಿನ ತಂಡಕ್ಕೆ  ಮೂರು ದಿನ ಸ್ಪಿನ್‌ ತರಬೇತಿ ಎರಡು ದಿನ ಫಿಟ್‌ನೆಸ್‌ ಅಭ್ಯಾಸಕ್ಕೆ ಕೆಎಸ್‌ಸಿಎ ಒತ್ತು ಕೊಡುತ್ತಿದೆ. ಖ್ಯಾತ ಸ್ಪಿನ್ನರ್‌ ಇಎಎಸ್‌ ಪ್ರಸನ್ನ ಅವರು ಸ್ಪಿನ್‌ ಕೌಶಲ ಹೇಳಿಕೊಡುತ್ತಾರೆ. ಜೊತೆಗೆ ಜೂನಿಯರ್ ತಂಡಗಳ ಕೋಚ್‌ಗಳಾದ ಸುರೇಂದ್ರ, ಜಿ.ಕೆ. ಅನಿಲ್‌ ಕುಮಾರ್‌ ಮತ್ತು ಕೆ.ಟಿ. ಯರೇಗೌಡ ಅವರ ಶ್ರಮವೂ ಇದೆ.

‘ಆರಂಭದಿಂದಲೇ ಉತ್ತಮ ಸಾಮರ್ಥ್ಯ ಮತ್ತು ವೃತ್ತಿಪರತೆ ಮೈಗೂಡಿಸಿಕೊಂಡು ಮುನ್ನಡೆದರೆ ಪ್ರತಿಯೊಬ್ಬರಿಗೂ ರಾಷ್ಟ್ರೀಯ ತಂಡದಲ್ಲಿ ಆಡಲು ಸಾಧ್ಯ’ ಎಂದು 23 ವರ್ಷದ ಒಳಗಿನವರ ತಂಡದ ಬ್ಯಾಟಿಂಗ್‌ ಕೋಚ್‌ ಜೆ.ಕೆ. ಅನಿಲ್‌ ಕುಮಾರ್‌ ಹೇಳುತ್ತಾರೆ. ‘13 ವರ್ಷದ ಒಳಗಿನವರ ತಂಡದಲ್ಲಿದ್ದಾಗ ಕೆ.ಎಲ್‌. ರಾಹುಲ್‌ ಮತ್ತು ಕರುಣ್‌ ನಾಯರ್‌ ತುಂಬಾ ಶ್ರಮ ಪಡುತ್ತಿದ್ದರು. ಆರಂಭಿಕ ಬುನಾದಿಯೇ ಅವರನ್ನು ಈಗ ರಾಷ್ಟ್ರೀಯ ತಂಡದವರೆಗೆ ಕರೆದೊಯ್ದಿದೆ’ ಎಂದು ಅನಿಲ್‌ ಹೇಳುತ್ತಾರೆ. ರಾಹುಲ್ ಮತ್ತು ಕರುಣ್‌ 13 ವರ್ಷದ ಒಳಗಿನ ತಂಡಕ್ಕೆ ಆಯ್ಕೆಯಾದಾಗ ಅನಿಲ್ ಅವರು ಕೋಚ್‌ ಆಗಿದ್ದರಲ್ಲದೆ, ಆಯ್ಕೆ ಸಮಿತಿಯ ಮುಖ್ಯಸ್ಥರೂ ಆಗಿದ್ದರು. 

* 1800-ಪಂದ್ಯಗಳು ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ ನಡೆಯುತ್ತವೆ.
* 301-ಕ್ಲಬ್‌ಗಳು ರಾಜ್ಯದಲ್ಲಿ ಕೆಎಸ್‌ಸಿಎ ಮಾನ್ಯತೆ ಪಡೆದಿವೆ.
* 228-ಕ್ರಿಕೆಟ್‌ ಕ್ಲಬ್‌ಗಳು ಬೆಂಗಳೂರಿನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT