ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟ ಸೈನಾ ನೆಹ್ವಾಲ್‌

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಶ್ರೀಕಾಂತ್‌ಗೆ ಜಯ: ಸಮೀರ್‌, ಪ್ರಣೀತ್‌ಗೆ ಆರಂಭಿಕ ಸುತ್ತಿನಲ್ಲೇ ಸೋಲು
Last Updated 7 ಮಾರ್ಚ್ 2019, 18:11 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌ : ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸೈನಾ ನೆಹ್ವಾಲ್‌ ಈ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಆಟಗಾರ್ತಿ, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೈನಾ 8–21, 21–16, 21–13ರಲ್ಲಿ ಡೆನ್ಮಾರ್ಕ್‌ನ ಲಿನೆ ಹೊಜ್‌ಮಾರ್ಕ್‌ ಜಾಯೆರ್ಸ್‌ಫೆಡ್ತ್‌ ಎದುರು ಗೆದ್ದರು. ಈ ಹೋರಾಟ 51 ನಿಮಿಷ ನಡೆಯಿತು.

ಎಂಟನೇ ಶ್ರೇಯಾಂಕದ ಆಟಗಾರ್ತಿ ಸೈನಾ, ಬುಧವಾರ ರಾತ್ರಿ ನಡೆದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ 21–17, 21–18 ನೇರ ಗೇಮ್‌ಗಳಿಂದ ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್‌ಮೌರ್‌ ಅವರನ್ನು ಮಣಿಸಿದ್ದರು. ಭಾರತದ ಆಟಗಾರ್ತಿ ಕೇವಲ 35 ನಿಮಿಷಗಳಲ್ಲಿ ಗೆಲುವಿನ ತೋರಣ ಕಟ್ಟಿದ್ದರು.

ಎಂಟರ ಘಟ್ಟದ ಪೈಪೋಟಿಯಲ್ಲಿ ಸೈನಾಗೆ, ಚೀನಾ ತೈಪೆಯ ತೈ ಜು ಯಿಂಗ್‌ ಸವಾಲು ಎದುರಾಗುವ ನಿರೀಕ್ಷೆ ಇದೆ.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಕಿದಂಬಿ ಶ್ರೀಕಾಂತ್‌ 21–13, 21–11ರಲ್ಲಿ ಫ್ರಾನ್ಸ್‌ನ ಬ್ರೈಸ್‌ ಲೆವರ್‌ಡೆಜ್‌ ಅವರನ್ನು ಮಣಿಸಿದರು.

ಮುಂದಿನ ಸುತ್ತಿನಲ್ಲಿ ಶ್ರೀಕಾಂತ್‌, ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿರುವ ಜೊನಾಥನ್‌ ಕ್ರಿಸ್ಟಿ ಎದುರು ಸೆಣಸಲಿದ್ದಾರೆ.

ಸಮೀರ್‌ಗೆ ನಿರಾಸೆ: ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ಸಮೀರ್‌ ವರ್ಮಾ, ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು.

ಸಮೀರ್‌ 21–16, 18–21, 14–21ರಲ್ಲಿ ಡೆನ್ಮಾರ್ಕ್‌ನ ಆಟಗಾರ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ವಿಕ್ಟರ್‌ ಆ್ಯಕ್ಸಲ್‌ಸನ್‌ ಎದುರು ಸೋತರು.

ಬಿ.ಸಾಯಿ ಪ್ರಣೀತ್‌, ಹದಿನಾರರ ಘಟ್ಟದಲ್ಲಿ ಎಡವಿದರು. ಅವರು 12–21, 17–21 ರಲ್ಲಿ ಹಾಂಕಾಂಗ್‌ನ ಕಾ ಲಾಂಗ್‌ ಆ್ಯಂಗಸ್‌ಗೆ ಶರಣಾದರು.

ಮಹಿಳೆಯರ ಡಬಲ್ಸ್‌ನಲ್ಲಿ ಕಣದಲ್ಲಿದ್ದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಕೂಡಾ ಆರಂಭಿಕ ಸುತ್ತಿನಲ್ಲೇ ನಿರಾಸೆ ಕಂಡರು.

ಅಶ್ವಿನಿ ಮತ್ತು ಸಿಕ್ಕಿ 21–16, 26–28, 16–21ರಲ್ಲಿ ಜಪಾನ್‌ನ ಶಿಹೊ ತನಾಕ ಮತ್ತು ಕೊಹಾರು ಯೊನೆಮೊಟೊ ಎದುರು ಮಣಿದರು.

ಮಿಶ್ರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಸಿಕ್ಕಿ ರೆಡ್ಡಿ ಮತ್ತು ಪ್ರಣವ್‌ ಜೆರಿ ಚೋಪ್ರಾ 21–23, 17–21ರಲ್ಲಿ ಹಾಂಕಾಂಗ್‌ನ ಚಾಂಗ್‌ ತಾಕ್‌ ಚಿಂಗ್‌ ಮತ್ತು ವಿಂಗ್‌ ಯಂಗ್‌ ಎದುರು ಪರಾಭವಗೊಂಡರು.

ಪುರುಷರ ಡಬಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ 19–21, 21–16, 14–21ರಲ್ಲಿ ಚೀನಾದ ಒವು ಕ್ಸುವಾನ್ಯಿ ಮತ್ತು ರೆನ್‌ ಕ್ಸಿಯಾಂಗ್ಯು ಎದುರು ಸೋತರು.

ಚೀನಾದ ಲಿನ್‌ ಡಾನ್‌, ಜಪಾನ್‌ನ ಕಂಟಾ ಸುನೆಯಾಮ ಎದುರು ಸೋತು ಕೂಟದಿಂದ ಹೊರಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT