ಗುರುವಾರ , ಆಗಸ್ಟ್ 11, 2022
26 °C

ಜಟ್ಟಿಗಳ ನೆಲದ ಗಟ್ಟಿಗಿತ್ತಿ ಅನ್ಶು

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

Prajavani

ಪಂಜಾಬ್‌, ಹರಿಯಾಣ ರಾಜ್ಯಗಳು ದೇಶದ ಕುಸ್ತಿಯ ಕಣಜಗಳು. ಇಲ್ಲಿ ಬೆಳೆದ ಹಲವು ಪ್ರತಿಭೆಗಳು ವಿಶ್ವಮಟ್ಟದಲ್ಲಿ ಹೆಸರು ಮಾಡಿವೆ. ಯೋಗೇಶ್ವರ್‌ ದತ್ತ, ಪೋಗಟ್‌ ಸಹೋದರಿಯರು, ಬಜರಂಗ್ ಪುನಿಯಾ ಮತ್ತು ದೀಪಕ್ ಪುನಿಯಾ ಇದರಲ್ಲಿ ಪ್ರಮುಖರು. ಅದೇ ಹರಿಯಾಣದಿಂದ ಬಂದ ಅನ್ಶು ಮಲಿಕ್‌ ಈಗ ಪ್ರಮುಖ ಶ್ರೇಯವೊಂದಕ್ಕೆ ಭಾಜನರಾಗಿದ್ದಾರೆ. ವೈಯಕ್ತಿಕ ವಿಶ್ವಕಪ್ ಕುಸ್ತಿಯಲ್ಲಿ ಪದಕವೊಂದನ್ನು ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ.

ಅನ್ಶು ಇತ್ತೀಚೆಗೆ ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆದ ವೈಯಕ್ತಿಕ ವಿಶ್ವಕಪ್‌ ಕುಸ್ತಿಯ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಫೈನಲ್ ಹಣಾಹಣಿಯಲ್ಲಿ 19 ವರ್ಷದ ಅನ್ಶು, ಮೊಲ್ಡೊವಾದ ಅನಸ್ತೇಸಿಯಾ ನಿಚಿತಾ ಎದುರು ಎಡವಿ ಚಿನ್ನದ ಪದಕದಿಂದ ವಂಚಿತರಾಗಿದ್ದರು.

ಅನ್ಶು ಜನಿಸಿದ್ದು ಹರಿಯಾಣದ ಜಿಂದ್‌ ಜಿಲ್ಲೆಯ ನಿದಾನಿಯಲ್ಲಿ. ತಂದೆ ಧರ್ಮವೀರ 1990ರ ದಶಕದಲ್ಲಿ ಅಂತರರಾಷ್ಟ್ರೀಯ ಕುಸ್ತಿ ಜೂನಿಯರ್ ವಿಭಾಗದ ಸ್ಪರ್ಧೆಗಳಿಗೆ ಭಾರತ ತಂಡಕ್ಕೆ ನಿರಂತರವಾಗಿ ಆಯ್ಕೆಯಾಗುತ್ತಿದ್ದ ಕುಸ್ತಿಪಟು. ಅಲ್ಲದೆ ಚಿಕ್ಕಪ್ಪ ಪವನ್ ಕೂಡ ಇದೇ ಕ್ರೀಡೆಯಲ್ಲಿ ಬೆಳಗಿದವರು. ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕವನ್ನು ಗೆದ್ದಿದ್ದರು. 12 ವರ್ಷದವರಿದ್ದಾಗ ಅಣ್ಣ ಕುಸ್ತಿ ತಾಲೀಮು ನಡೆಸುವುದನ್ನು ನೋಡಿ ಆಸಕ್ತಿ ಬೆಳೆಸಿಕೊಂಡ ಅನ್ಶು, ಸದ್ಯ ರೋಹ್ಟಕ್‌ನಲ್ಲಿ ಬಿಎ ಪದವಿ ಅಧ್ಯಯನ ಮಾಡುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅನ್ಶು ಅವರಿಗೆ ಕಂಚಿನ ಪದಕ ಒಲಿದಿತ್ತು. 57 ಕೆಜಿ ವಿಭಾಗದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಅವರು, ಇದೇ ವಿಭಾಗದಲ್ಲಿ ಕಣಕ್ಕಿಳಿಯುವ ಅನುಭವಿ ಪಟುಗಳಾದ  ಪೂಜಾ ಧಂಡಾ ಹಾಗೂ ಸರಿತಾ ಮೊರ್ ಅವರಿಗೆ ತೀವ್ರ ಸ್ಪರ್ಧೆ ಒಡ್ಡುತ್ತಿದ್ದಾರೆ.

ಪದಕಗಳ ಬೇಟೆ: 2016ರಲ್ಲಿ ರಾಷ್ಟ್ರೀಯ ಸ್ಕೂಲ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಪದಕದ ಬೇಟೆ ಆರಂಭಿಸಿದ ಅನ್ಶು, 2016ರಿಂದ 18ರವರೆಗೆ ಸತತ ಮೂರು ವರ್ಷಗಳ ಕಾಲ ರಾಷ್ಟ್ರೀಯ ಕೆಡೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನ ತಮ್ಮದಾಗಿಸಿಕೊಂಡಿದ್ದರು. 2017ರ ವಿಶ್ವ ಕೆಡೆಟ್‌ ಚಾಂಪಿಯನ್‌ಷಿಪ್‌ನಲ್ಲಿ (ಅಥೆನ್ಸ್‌) ಚಿನ್ನ, 2018ರಲ್ಲಿ ಕ್ರೊವೇಷ್ಯಾದಲ್ಲಿ ನಡೆದ ವಿಶ್ವ ಕೆಡೆಟ್‌ ಕೂಟದಲ್ಲಿ ಕಂಚು ಅವರ ಕೊರಳಿಗೇರಿವೆ. 2019ರಲ್ಲಿ ಸೀನಿಯರ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಅವರು, 2020ರ ಜನವರಿಯಲ್ಲಿ ಇಟಲಿಯ ರೋಮ್‌ನಲ್ಲಿ ನಡೆದ ರ‍್ಯಾಂಕಿಂಗ್ ಸಿರೀಸ್‌ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು