ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಕಾರಣಕ್ಕೆ ಟೀಕಿಸುವುದು ಸರಿಯಲ್ಲ

ಬಿ.ಎಲ್‌. ಶಂಕರ್‌ಗೆ ಜಿಲ್ಲೆಯ ಬಗ್ಗೆ ದಿಢೀರ್‌ ಕಾಳಜಿ– ಪ್ರಾಣೇಶ್‌ ವ್ಯಂಗ್ಯ
Last Updated 25 ಏಪ್ರಿಲ್ 2018, 8:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಲ್‌.ಶಂಕರ್‌ ಅವರು ಜಿಲ್ಲೆಯ ಬಗ್ಗೆ ಈಗ ಏಕಾಏಕಿ ಕಾಳಜಿ ತೋರುತ್ತಿದ್ದಾರೆ. ಅಭ್ಯರ್ಥಿಯಾಗುವುದಕ್ಕೆ ಮುಂಚೆ ಅವರಿಗೆ ಯಾಕೆ ಈ ಕಾಳಜಿ ಇರಲಿಲ್ಲ’ ಎಂದು ಬಿಜೆಪಿ ಮುಖಂಡ ಎಂ.ಕೆ.ಪ್ರಾಣೇಶ್‌ ಇಲ್ಲಿ ಮಂಗಳವಾರ ಪ್ರಶ್ನಿಸಿದರು.

‘ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ, ಕ್ಷೇತ್ರ ಹಿಂದುಳಿದಿದೆ ಎಂದು ಶಂಕರ್‌ ಟೀಕಿಸಿದ್ದಾರೆ. ಇಲ್ಲಿ ಅವರು ಸಂಸದರಾಗಿದ್ದರು, ರಾಜ್ಯದಲ್ಲಿ ಸಚಿವರಾಗಿದ್ದರು. ಆಗ ಅಭಿವೃದ್ಧಿ ಮಾಡದಂಥವರು, ಈಗ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ನೈತಿಕತೆ ಬಿಟ್ಟು ಮಾತನಾಡುತ್ತಿರುವುದು ಸರಿಯಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಶಾಸಕ ಸಿ.ಟಿ.ರವಿ ಅವರು ಮೂರು ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಚಿಕ್ಕಮಗಳೂರು ಹಿಂದೆ ಯಾವ ಪರಿಸ್ಥಿತಿಯಲ್ಲಿ ಇತ್ತು, ಈಗ ಹೇಗಿದೆ ಎಂಬುದು ನೋಡಿದರೆ ಗೊತ್ತಾಗುತ್ತದೆ. ಕೇವಲ ರಾಜಕೀಯ ಕಾರಣಕ್ಕೆ ಟೀಕೆ ಮಾಡುವುದು ಶಂಕರ್‌ ಅವರಂಥವರ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ’ ಎಂದರು.

‘ಶಾಸಕ ರವಿ ಅವರ ಸಂಬಂಧಿಕರು ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಂಕರ್‌ ದೂಷಿಸಿದ್ದಾರೆ. ಈಗ ಶಂಕರ್‌ ಅವರ ಜತೆಗಿರುವ ಟಿಕೆಟ್‌ ಆಕಾಂಕ್ಷಿಯಾಗಿದ್ದವರು, ಹಿಂದೆ ಸ್ಪರ್ಧಿಸಿದ್ದವರು ಗುತ್ತಿಗೆದಾರರರಾಗಿಲ್ಲವೇ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುವ ವಿಶ್ವಾಸ ಇದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಆಧರಿಸಿ ಮತಯಾಚಿಸುತ್ತೇವೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುತ್ತೇವೆ. ಜನರು ಬಿಜೆಪಿ ಕಡೆಗೆ ಒಲವು ತೋರುತ್ತಿದ್ದಾರೆ’ ಎಂದು ಹೇಳಿದರು.

‘ಕರಗಡ ನೀರಾವರಿ ಯೋಜನೆಗೆ ₹ 20 ಕೋಟಿ ಹಣ ತಂದಿರುವುದಾಗಿ ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ. ಅಷ್ಟು ಅನುದಾನ ತಂದಿರುವುದನ್ನು ಅವರು ಸಾಬೀತುಪಡಿಸಿದರೆ ಚುನಾವಣಾ ಕಣದಿಂದ ಶಾಸಕ ಸಿ.ಟಿ.ರವಿ ಹಿಂದಕ್ಕೆ ಸರಿಯುತ್ತಾರೆ. ಸಾಬೀತು ಮಾಡದಿದ್ದರೆ ನೀವು ಹಿಂದೆ ಸರಿಯುತ್ತೀರಾ’ ಎಂದು ಸವಾಲು ಹಾಕಿದರು.

‘ಶಾಸಕ ಸಿ.ಟಿ.ರವಿ ಅವರನ್ನು ಕೋಟಿ ರವಿ ಎಂದು ಹೀಗಳೆಯುತ್ತಾರೆ. ಚುನಾವಣೆಗೆ ಸಲ್ಲಿಸಿರುವ ಆಸ್ತಿ ದಾಖಲೆ ವಿವರ ನೋಡಿದರೆ ಯಾರು ಶ್ರೀಮಂತರು ಎಂಬುದು ಗೊತ್ತಾಗುತ್ತದೆ’ ಎಂದು ಕಟಕಿಯಾಡಿದರು.

ಬಿಜೆಪಿ ಮುಖಂಡರಾದ ವರಸಿದ್ಧಿ ವೇಣುಗೋಪಾಲ್‌, ಪ್ರೇಂಕುಮಾರ್‌ ಇದ್ದರು.

‘ಬಿಜೆಪಿ ಟೀಕಿಸಲು ಜಗನ್ನಾಥ್‌ಗೆ ನೈತಿಕ ಹಕ್ಕಿಲ್ಲ’

‘ಬಿಜೆಪಿ ಮತ್ತು ಇಲ್ಲಿನ ಶಾಸಕ ಸಿ.ಟಿ.ರವಿ ಅವರನ್ನು ಟೀಕಿಸಲು ಪಕ್ಷ ತೊರೆದಿರುವ ಅತ್ತಿಕಟ್ಟೆ ಜಗನ್ನಾಥ್‌ ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ. ಅವರನ್ನು ಪಕ್ಷವು ಬೆಳೆಸಿದ್ದು, ಅವಕಾಶ ನೀಡಿದ್ದನ್ನು ಮರೆತಿದ್ದಾರೆ’ ಎಂದು ಎಂ.ಕೆ.ಪ್ರಾಣೇಶ್‌ ದೂಷಿಸಿದರು.

‘ಅವರನ್ನು ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಕಾಂಗ್ರೆಸ್‌ನ ಬಿ.ಎಲ್‌.ಶಂಕರ್‌ ಅವರನ್ನು ಬೆಂಬಿಲಿಸುತ್ತೇವೆ ಎಂದು ಅವರು ಈಚೆಗೆ ಹೇಳಿಕೆ ನೀಡಿದ್ದಾರೆ. ಹಲವಾರು ಜವಾಬ್ದಾರಿಗಳನ್ನು ನೀಡಿ ಬೆಳೆಸಿದ್ದಕ್ಕೆ ಪ್ರತಿಫಲವಾಗಿ ಪಕ್ಷದ ವಿರುದ್ಧವೇ ಅವರು ಹೇಳಿಕೆ ನೀಡಿರುವುದು ನೋವುಂಟು ಮಾಡಿದೆ’ ಎಂದು ಹೇಳಿದರು.

‘ಜಗನ್ನಾಥ್‌ ಈವರೆಗೆ ಯಾವುದೇ ಹೋರಾಟ ಮಾಡಿಲ್ಲ. ಅವರು ಪಕ್ಷ ಬಿಟ್ಟಿದ್ದರಿಂದ ಯಾವುದೇ ನಷ್ಟ ಇಲ್ಲ’ ಎಂದರು. ‘ಬಿಜೆಪಿಯಲ್ಲಿ ಎರಡು ಅವಧಿಯಿಂದ ಜಗನ್ನಾಥ್‌ ಅವರ ಸದಸ್ಯತ್ವ ನವೀಕರಣ ಆಗಿಲ್ಲ. ಅವರು ಪಕ್ಷದಲ್ಲಿ ನಿಷ್ಕ್ರಿಯರಾಗಿದ್ದರು’ ಎಂದು ಸಿ.ಎಚ್‌.ಲೋಕೇಶ್‌ ಹೇಳಿದರು.

**
ಜಿಲ್ಲೆಗೆ ಬಿ.ಎಲ್‌.ಶಂಕರ್‌ ಅವರ ಕೊಡುಗೆ ಏನು, ಕ್ಷೇತ್ರದಲ್ಲಿ ಅವರು ಯಾರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂಬುದನ್ನು ತಿಳಿಸಬೇಕು
– ಸಿ.ಎಚ್‌.ಲೋಕೇಶ್‌, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT