ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಬಲಕ್ಕಿಂತ ಆತ್ಮಬಲ ದೊಡ್ಡದು: ಸುಬ್ರಮಣಿಯ ಕ್ರೀಡಾ ಪ್ರೀತಿ

Last Updated 23 ಅಕ್ಟೋಬರ್ 2018, 13:13 IST
ಅಕ್ಷರ ಗಾತ್ರ

ಸ್ವಲ್ಪ ಆರ್ಥಿಕ ನೆರವು ಸಿಕ್ಕಿದ್ದರೆ ಈಗ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿದೆಯಲ್ಲಾ ಆ ಏಷ್ಯಾ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದೆ. ಏನ್ಮಾಡೋದು, ಆ ಆರ್ಥಿಕ ಶಕ್ತಿ ನನಗೆ ಸಿಗಲಿಲ್ಲ’ – ನೋವಿನಿಂದಲೇ ಮಾತು ಆರಂಭಿಸಿದರು ಪ್ಯಾರಾ ಅಥ್ಲೀಟ್ ಸುಬ್ರಮಣಿ.

ಮೂವತ್ತೇಳರ ಹರೆಯದ ಸುಬ್ರಮಣಿ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟು. ದೇಶ ವಿದೇಶಗಳ ಕ್ರೀಡೆಗಳಲ್ಲಿ ಭಾಗವಹಿಸಿ, ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಹಣದ ಕೊರತೆ, ಜೀವನದ ಅಭದ್ರತೆ ನಡುವೆಯೂ ಕ್ರೀಡಾಕ್ಷೇತ್ರದಲ್ಲಿ ಮುಗಿಲೆತ್ತರಕ್ಕೆ ಬೆಳೆಯುವ ಕನಸು ಮಾತ್ರ ಕರಗಿಲ್ಲ.

ಕ್ರೀಡಾಕೂಟವೊಂದರಲ್ಲಿ ಟಿ.ವಿ.ಸುಬ್ರಮಣಿ
ಕ್ರೀಡಾಕೂಟವೊಂದರಲ್ಲಿ ಟಿ.ವಿ.ಸುಬ್ರಮಣಿ

ಸುಬ್ರಮಣಿ, ಬೆಂಗಳೂರಿನ ಯಲಹಂಕ ಸಮೀಪದ ದೊಡ್ಡತುಮಕೂರಿನವರು. ವೆಂಕಟೇಶಪ್ಪ-ನಾಗಮ್ಮ ಇವರ ತಂದೆ–ತಾಯಿ. ಅವರು ಕ್ರೀಡಾ ಕ್ಷೇತ್ರದಲ್ಲಿ ವೈಯಕ್ತಿಕ ವಿಭಾಗದಿಂದ ಗುಂಪು ಆಟಗಳವರೆಗೆ ಎಲ್ಲ ಆಟಗಳಿಗೂ ಸೈ ಎಂದವರು. ವೇಗದ ಓಟ, ದೂರದ ಓಟ, ಜಾವೆಲಿನ್‌–ಡಿಸ್ಕಸ್‌ ಥ್ರೋಗಳಲ್ಲಿ ಪರಿಣತರು. ಕಬಡ್ಡಿ, ಕ್ರಿಕೆಟ್‌, ವಾಲಿಬಾಲ್‌, ಕ್ಕೊಕೊದಂತಹ ಗುಂಪು ಆಟಗಳಲ್ಲೂ ಮುಂದಿ ದ್ದಾರೆ. ಇದರ ಜತೆಗೆ ಈಜು ಕ್ರೀಡೆಯನ್ನೂ ಪ್ರತಿನಿಧಿಸುತ್ತಾರೆ. ಅಂತರರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ತಲಾ ಮೂರು ಚಿನ್ನ, ಬೆಳ್ಳಿ ಪದಕಗಳಿಗೆ ಕೊರಳೊಡ್ಡಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಕೂಟಗಳಲ್ಲಿ 61 ಪದಕಗಳನ್ನು ಗೆದ್ದಿದ್ದಾರೆ.

ಬಾಲ್ಯದಲ್ಲೇ ಕೈ ಕಳಚಿತು: ಸುಬ್ರಮಣಿ ಆಗ 4ನೇ ತರಗತಿ. ರಜೆಯಲ್ಲಿ ಆನೇಕಲ್‌ನಲ್ಲಿರುವ ಅಜ್ಜಿ ಮನೆಗೆ ಹೋಗಿದ್ದರು. ಆಗ ಎಡಗೈ ಬೆರಳಿಗೆಕೊಳಕುಮಂಡಲ ಹಾವು ಕಚ್ಚಿತ್ತು. ತಕ್ಷಣ ಔಷಧಿ ಕೊಡಿಸಿ ಉಪಚರಿಸಿದ್ದರೂ ಪ್ರಯೋಜನವಾಗಲಿಲ್ಲ. ಆರಂಭದಲ್ಲಿ ಗಾಯ ಗುಣವಾದಂತೆ ಕಂಡರೂ ಕೆಲದಿನ ಕಳೆಯುವುದರೊಳಗೆ ವಿಷ ಹಸ್ತದವರೆಗೆ ವ್ಯಾಪಿಸಿತ್ತು. ಬ್ಯಾಂಡೇಜಿನಂತೆ ಸುತ್ತಿದ್ದ ಬಟ್ಟೆಯೊಳಗಿನಿಂದಲೇ ಹಸ್ತದವರೆಗೂ ಕೊಳೆತುಹೊಗಿದ್ದ ಮುಂಗೈ ನೇರಾನೇರ ಭೂಮಿಗೆ ಬಿದ್ದಿತ್ತು. ಜೀವ ಉಳಿಸುವುದಕ್ಕಾಗಿ ಮೊಣಕೈ‌ವರೆಗೆ ಕತ್ತರಿಸಿ ತೆಗೆಯಬೇಕಾಯಿತು.

ಆರಂಭದ ದಿನಗಳಲ್ಲಿ ಈ ಅಂಗವೈಕಲ್ಯ ಎನ್ನುವುದು ಗೆಳೆಯರಿಂದ ತಿರಸ್ಕಾರಕ್ಕೊಳಗಾಗುವಂತೆ ಮಾಡಿತು. ಶಿಕ್ಷಕರೂ ಆಟದಂಗಳಕ್ಕೆ ಕಳುಹಿಸಿದೇ ನಯವಾಗಿಯೇ ಅವರನ್ನು ಹಿಂದೆ ನಿಲ್ಲಿಸಿ ಬಿಡುತ್ತಿದ್ದರು. ಸುಬ್ರಮಣಿ, ತನಗಿಂತ ದೊಡ್ಡವರು ಆಡುವಾಗ ಮೈದಾನದಲ್ಲಿ ನಿಂತು ಸಂಭ್ರಮಿಸುತ್ತಿದ್ದರು. ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಹಾಗೆಯೇ ‘ನನಗೊಂದು ಅವಕಾಶ ಸಿಗಬಾರದೇ’ ಎಂದು ಕಾಯುತ್ತಿದ್ದರು. ಅಪರೂಪಕ್ಕೊಮ್ಮೆ ಅವಕಾಶ ಸಿಕ್ಕರೆ, ಪುಟಿವ ಚೆಂಡಿನಂತೆ ಆಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದರು. ಅಂಗವೈಕಲ್ಯದ ನಡುವೆಯೂ ಪ್ರತಿಭೆ ತೋರುತ್ತಿದ್ದ ಅವರು ಎಲ್ಲರ ಆಕರ್ಷಣೆಯೂ ಆಗಿದ್ದರು.

ಆರಂಭಿಕ ದಿನಗಳ ಸವಾಲು: ಸುಬ್ರಮಣಿ ಹುಟ್ಟೂರಲ್ಲಿ ಸುಬ್ಬಣ್ಣ ಎಂದೇ ಪರಿಚಿತರು. 10ನೇ ತರಗತಿ ಮುಗಿಸಿ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದ್ದರು. ಆಟದ ಸಲುವಾಗಿ ಆಗಾಗ್ಗೆ ರಜೆ ಪಡೆಯುತ್ತಿದ್ದರು. ಇವರ ಕ್ರೀಡಾ ಪ್ರೀತಿ ಗುರುತಿಸಿದ ಕಂಪನಿಯ ಮಾಲೀಕ ಎಚ್‌.ನಾಗರಾಜು ಅಂಗವಿಕಲ ಕ್ರೀಡಾಕೂಟಗಳ ಬಗ್ಗೆ ಮಾಹಿತಿ ನೀಡಿ ಪ್ರೋತ್ಸಾಹಿಸಿದರು. ಹೀಗಾಗಿ ಮೈಸೂರಿನಲ್ಲಿ ನಡೆದ ಸೌತ್‌ ಜೋನ್‌ ಅಂಗವಿಕಲರ ಕ್ರೀಡಾಕೂಟದಲ್ಲಿ ಕಬಡ್ಡಿ ಹಾಗೂ ವೇಗದ ಓಟದಲ್ಲಿ ಸ್ಪರ್ಧಿಸಿ ಕ್ರೀಡಾ ಕ್ಷೇತ್ರಕ್ಕೆ ಅಧಿಕೃತ ಪದಾರ್ಪಣೆ ಮಾಡಿದರು.

‘ಕೂಟಕ್ಕೆ ಬಂದಿದ್ದ ಕ್ರೀಡಾಪಟುಗಳನ್ನ ನೋಡಿದಾಗ ಸ್ವಲ್ಪ ಗಾಬರಿಯಾಯಿತು. ಉತ್ತಮ ತರಬೇತಿ ಪಡೆದು ಬಂದಿದ್ದವರ ಮುಂದೆ ಗೆಲ್ಲೋಕೆ ನನ್ನಿಂದ ಸಾಧ್ಯವಿಲ್ಲ ಅನ್ಸಿತ್ತು. ಇನ್ನೊಂದು ಸಾರಿ ಯೋಚಿಸಿದಾಗ, ಎರಡು ಕೈ, ಎರಡು ಕಾಲುಗಳಿಲ್ಲದವರೇ ಏನೇನೋ ಸಾಧನೆ ಮಾಡೋದಕ್ಕೆ ಬಂದಿದ್ದಾರೆ. ನನಗೆ ಒಂದು ಕೈ ಇಲ್ಲ ಅಷ್ಟೆ. ನಾನ್ಯಾಕೆ ಚಿಂತೆ ಮಾಡ್ಬೇಕು ಅನಿಸ್ತು. ಅಂದು ಮನಸು ಮಾಡ್ದೆ. ಅಭ್ಯಾಸ ಶುರುಮಾಡ್ದೆ’ ಎಂದು ಕ್ರೀಡಾ ಬದುಕಿಗೆ ಅಡಿಯಿಟ್ಟ ಬಗೆಯನ್ನು ಬಿಚ್ಚಿಟ್ಟರು ಅವರು.

ಜಿಲ್ಲೆಯಿಂದ ರಾಜ್ಯದವರೆಗೆ: ಶಾಲೆಯಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಕಬಡ್ಡಿ, ಕ್ರಿಕೆಟ್‌, ವಾಲಿಬಾಲ್‌ ಪಂದ್ಯಾವಳಿಯಲ್ಲಿ ಸುಬ್ರಮಣಿ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದರು. ಆ ಪಂದ್ಯಗಳೇ ಅವರನ್ನು ಜಿಲ್ಲೆ, ರಾಜ್ಯಮಟ್ಟದ ಕ್ರೀಡಾಪಟುವನ್ನಾಗಿ ರೂಪಿಸಿದ್ದವು.

‘ಓರಗೆಯವರ ಜೊತೆ ಆಡುವಾಗ ಚುರುಕಾಗಿರುತ್ತಿದ್ದೆ. ಪ್ರೇಕ್ಷಕರ ಪ್ರೋತ್ಸಾಹವಂತೂ ಅದ್ಭುತವಾಗಿತ್ತು. ಅಂಥ ಬೆಂಬಲವೇ ನನ್ನನ್ನು ಇಲ್ಲಿವರೆಗೂ ತಂದು ನಿಲ್ಲಿಸಿದೆ’ ಎಂದು ಸುಬ್ರಮಣಿ. ನೆನಪಿಸಿಕೊಂಡರು.

ವಿದೇಶದ ನೆಲದಲ್ಲಿ: ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸಿದ ನಮತರ 2006ರಲ್ಲಿ ಮಲೇಷ್ಯಾದಲ್ಲಿ ನಡೆದ ಕ್ರೀಡಾ ಕೂಟದಲ್ಲಿ 200ಮೀ. ಓಟದಲ್ಲಿ ಭಾಗವಹಿಸಿದ್ದರು ಸುಬ್ಬಣ್ಣ. ಅಲ್ಲಿ 2ನೇ ಸ್ಥಾನ ಪಡೆದು ಸೆಮಿಫೈನಲ್‌ ಮುಗಿಸಿದ್ದರು. ಈ ವೇಳೆ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಫೈನಲ್‌ನಲ್ಲಿ ಓಡದಂತೆ ವೈದ್ಯರು ಸೂಚಿಸಿದ್ದರು. 2017ರಲ್ಲಿ ಶ್ರೀಲಂಕಾ, ನೇಪಾಳ ಹಾಗೂ 2018ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಜಾವೆಲಿನ್‌ ಹಾಗೂ ಡಿಸ್ಕಸ್‌ ಥ್ರೋ ಸ್ಪರ್ಧೆಗಳಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಪದಕ ಪಡೆದರು. ವಿವಿಧ ಕೂಟಗಳಲ್ಲಿ ಪರಿಚಿತರಾದ ಪ್ರತಿಸ್ಪರ್ಧಿಗಳು, ಸಹಸ್ಪರ್ಧಿಗಳೇ ಇವರ ಮಾರ್ಗದರ್ಶಕರು.

ಕ್ರೀಡಾಕೂಟವೊಂದರಲ್ಲಿ ಟಿ.ವಿ.ಸುಬ್ರಮಣಿ
ಕ್ರೀಡಾಕೂಟವೊಂದರಲ್ಲಿ ಟಿ.ವಿ.ಸುಬ್ರಮಣಿ

ಸ್ಥಳೀಯ ಕೂಟಗಳಲ್ಲಿ ಹೊಸಬರಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ, ಸುಬ್ಬಣ್ಣ ಈಗ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಷ್ಟೇ ಭಾಗವಹಿಸುತ್ತಿದ್ದಾರೆ. ಇದೇ ವರ್ಷದ ಆಗಸ್ಟ್‌ನಲ್ಲಿ ನೇಪಾಳದಲ್ಲಿ ನಡೆದ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಸುಬ್ಬಣ್ಣ ಜಾವೆಲಿನ್‌ ಎಸೆತದಲ್ಲಿ ಚಿನ್ನ, ಡಿಸ್ಕಸ್‌ ಥ್ರೋನಲ್ಲಿ ಬೆಳ್ಳಿ ಗೆದ್ದಿದ್ದರು.

‘ಅಂಗಬಲಕ್ಕಿಂತ ಆತ್ಮಬಲ ದೊಡ್ಡದು’ ಎಂದು ನಂಬಿರುವ ಅವರು ನಿತ್ಯ ಕನಿಷ್ಠ ಮೂರು ತಾಸು ಅಭ್ಯಾಸ ಮಾಡುತ್ತಾರೆ. ಕ್ರೀಡಾಕೂಟಗಳು ಸಮೀಪಿಸಿದಾಗ ಬೆಂಗಳೂರಿನ ತರಬೇತುದಾರರಾದ ಸುರ್ಜಿತ್ ಸಿಂಗ್‌, ತುಳಸೀಧರ, ಸೀತಾರಾಂ ರಮೇಶ್‌ಹಾಗೂ ಆರ್‌. ರಾಮಚಂದ್ರು ಅವರಿಂದ ಮಾರ್ಗದರ್ಶನ ಪಡೆಯುತ್ತಾರೆ.

ಮುಂದೆ ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿತ್ಯ ಮುಂಜಾನೆ ಐದು ಗಂಟೆಗೆ ಸಮೀಪದಲ್ಲಿರುವ ಬಾವಿಯಲ್ಲಿ ಈಜು ಅಭ್ಯಾಸ ಮಾಡುತ್ತಿದ್ದಾರೆ. ‘ಅಷ್ಟು ದೊಡ್ಡ ಸ್ಪರ್ಧೆಯಲ್ಲಿಗೆಲ್ಲಲು ಈ ಬಾವಿಯ ಈಜು ಅಭ್ಯಾಸ ಸಾಕಾಗೋದಿಲ್ಲ. ಆದರೆ, ನನಗೆ ಬೇರೆ ದಾರಿಯಿಲ್ಲ. ಸಾಧ್ಯವಾದಾಗ ಬೆಂಗಳೂರಿಗೂ ಹೋಗಿ ಅಭ್ಯಾಸ ಮಾಡ್ತೀನಿ’ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ.

ಕ್ರೀಡೆಯಲ್ಲಿ ಸುಬ್ಬಣ್ಣ ಇಷ್ಟೆಲ್ಲ ಸಾಧನೆ ಮಾಡಿದ್ದರೂ, ಆರ್ಥಿಕವಾಗಿ ಸದೃಢರಲ್ಲ. ಗೆಲ್ಲುವ ಉತ್ಸಾಹವಿದ್ದರೂ, ಹಣದ ಕೊರತೆಯಿಂದಾಗಿ ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಲಾಗಿಲ್ಲ. ಆದರೆ, ವಿದೇಶಗಳಲ್ಲಿ ನಡೆದ ಕ್ರೀಡಾಕೂಟಗಳಿಗೆ ಹೋಗಲು ನೆರವಾಗುತ್ತಿರುವ ಜನಪ್ರತಿನಿಧಿಗಳು ಹಾಗೂ ಸ್ನೇಹಿತರನ್ನು ಅವರು ಸದಾ ಸ್ಮರಿಸುತ್ತಾರೆ. ಸುಬ್ಬಣ್ಣ ಅವರ ಸಂಪರ್ಕ ಸಂಖ್ಯೆ: 9343838850

**

ಪದಕ ಪ್ರಿಯನ ಹಸಿರು ಪ್ರೇಮ

ಗಿಡ–ಮರಗಳನ್ನು ಬೆಳೆಸುವುದೆಂದರೆ ಸುಬ್ಬಣ್ಣನಿಗೆ ಬಲು ಇಷ್ಟದ ಕೆಲಸ. ರಾಜಾನುಕುಂಟೆ ಬನಶಂಕರಿ ಲೇಔಟ್‌, ಸರ್ಕಾರಿ ಶಾಲೆ, ಬೆಟ್ಟೇನಹಳ್ಳಿಯ ರಾಕುಮ್‌ ಶ್ರೀ ಶಾಲೆ ಮೈದಾನಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜಾತಿಯ ನೂರಾರು ಗಿಡಮರಗಳು ಬೆಳೆಸುತ್ತಿದ್ದಾರೆ. ‘ಮರ ನೆರಳಾಗುತ್ತದೆ. ನಾವು ನಾಕು ಜನರಿಗೆ ನೆರವಾದರೆ ಬದುಕು ಸಾರ್ಥಕವಾಗುತ್ತದೆ’ ಎಂಬುದು ಸುಬ್ಬಣ್ಣರ ಪರಿಸರ ಕಾಳಜಿ ಅದರ ಹಿಂದಿನ ಪ್ರೇರಣೆ.

ಚಾಂಪಿಯನ್‌ಗೆ ಸ್ವಂತ ಸೂರಿಲ್ಲ

ಬಡತನದ ನಡುವೆಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಸುಬ್ಬಣ್ಣರಿಗೆ ಸ್ವಂತ ಸೂರಿಲ್ಲ. ಈಗಿರುವ ಬಾಡಿಗೆ ಮನೆಯಲ್ಲಿ ಇಲ್ಲಿವರೆಗೂ ಗೆದ್ದ ಪದಕಗಳು, ಸ್ಮರಣಿಕೆಗಳನ್ನು ಇಡಲೂ ಜಾಗವಿಲ್ಲ. ಉದ್ಯೋಗಕ್ಕಾಗಿ ಸಾಧನೆಯ ಪ್ರಮಾಣಪತ್ರಗಳನ್ನು ಹಿಡಿದು ಸರ್ಕಾರಿ ಕಚೇರಿಗಳ ಬಾಗಿಲು ಬಡಿಯುತ್ತಿದ್ದಾರೆ. ಹಲವು ಸಲ ಸಿಎಂ ಜನತಾದರ್ಶನಕ್ಕೂ ಹೋಗಿದ್ದಾರೆ. ಕೆಲವರು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾರೆ.

‘ಅಧಿಕಾರಿಗಳು ಮಾತು ಕೊಡ್ತಾರೆ. ಇದುವರೆಗೆ ಯಾವ ಕೆಲ್ಸಾನೂ ಆಗ್ಲಿಲ್ಲ. ಸಾಧನೆ ಮಾಡಿದವರಿಗೂ ಹೀಗೆ ಮಾಡಿದ್ರೆ ಹೆಂಗೆ’ ಎಂದು ಬೇಸರ ಪಟ್ಟುಕೊಳ್ಳುವ ಸುಬ್ಬಣ್ಣರಿಗೆ, ಅಂಗವೈಕಲ್ಯದ ಕಾರಣಕ್ಕೆ ಪಿಂಚಣಿ ರೂಪದಲ್ಲಿ ಮಾಸಿಕ ₹ 1,200 ಬರುತ್ತಿರುವುದು ಬಿಟ್ಟರೆ ಸರ್ಕಾರದಿಂದ ಬೇರೆ ಸೌಲಭ್ಯ ದೊರೆತಿಲ್ಲ. ಸದ್ಯ ಜೀವನ ನಿರ್ವಹಣೆಗಾಗಿ ಮೆಡಿಕಲ್‌ ಸ್ಟೋರ್‌ ಒಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ.

**

ನಾನು ಮಾದರಿ ಅಂತ ಏನೂ ಇಲ್ಲ.ಎಲ್ಲರ ಬದುಕಲ್ಲೂ ಸಮಸ್ಯೆಗಳು ಇದ್ದದ್ದೆ. ಅವುಗಳನ್ನ ಬದಿಗೊತ್ತಿ ಯಶಸ್ಸಿಗಾಗಿ ಪ್ರಯತ್ನ ಮಾಡ್ಬೇಕು. ಪ್ರತಿಫಲ ನಿಧಾನ ಆದ್ರೂ ಸಿಕ್ಕೇ ಸಿಕ್ತದೆ.

- ಸುಬ್ರಮಣಿ, ಅಥ್ಲೀಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT