ಬುಧವಾರ, ಫೆಬ್ರವರಿ 19, 2020
16 °C
ಇಂದು ಸಿಂಧು ಕಣಕ್ಕೆ

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಗಲ್ಸ್‌ನಲ್ಲಿ ಪ್ರಣೀತ್‌ ಶುಭಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಭಾರತದ ಬಿ.ಸಾಯಿ ಪ್ರಣೀತ್‌, ಬಿಡಬ್ಲ್ಯುಎಫ್‌ ವರ್ಲ್ಡ್‌ ಟೂರ್‌ ಸೂಪರ್‌ 750 ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಪ್ರಣೀತ್‌ 21–17, 21–13 ನೇರ ಗೇಮ್‌ಗಳಿಂದ ಆತಿಥೇಯ ಆಟಗಾರ ಕೆಂಟೊ ನಿಶಿಮೊಟೊ ಅವರನ್ನು ಸೋಲಿಸಿದರು. ಈ ಹೋರಾಟ 42 ನಿಮಿಷ ನಡೆಯಿತು.

ಶ್ರೇಯಾಂಕ ರಹಿತ ಆಟಗಾರ ಪ್ರಣೀತ್‌ ಮತ್ತು ಆತಿಥೇಯ ಆಟಗಾರ ನಿಶಿಮೊಟೊ, ಮೊದಲ ಗೇಮ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಒಂದು ಹಂತದಲ್ಲಿ ಇಬ್ಬರೂ 17–17 ರಿಂದ ಸಮಬಲ ಸಾಧಿಸಿದ್ದರು. ನಂತರ ಪ್ರಣೀತ್‌ ಕೈಚಳಕ ತೋರಿದರು. ಚುರುಕಿನ ಸರ್ವ್‌ ಮತ್ತು ಆಕರ್ಷಕ ಹಿಂಗೈ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ ಗೇಮ್‌ ವಶಪಡಿಸಿಕೊಂಡರು.

ಎರಡನೇ ಗೇಮ್‌ನ ಮೊದಲಾರ್ಧದಲ್ಲೂ ಸಮಬಲದ ಪೈಪೋಟಿ ಕಂಡುಬಂದಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪ್ರಣೀತ್‌ ಮೇಲುಗೈ ಸಾಧಿಸಿದರು. ಬೇಸ್‌ಲೈನ್‌ ಹೊಡೆತಗಳ ಮೂಲಕ ಸತತವಾಗಿ ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡ ಭಾರತದ ಆಟಗಾರ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ಮುಂದಿನ ಸುತ್ತಿನಲ್ಲಿ ಪ್ರಣೀತ್‌, ಜಪಾನ್‌ನ ಮತ್ತೊಬ್ಬ ಆಟಗಾರ ಕೆಂಟ ಸುನೆಯಾಮಾ ವಿರುದ್ಧ ಸೆಣಸಲಿದ್ದಾರೆ.

ಅಶ್ವಿನಿ–ಸಾತ್ವಿಕ್‌ ಎರಡನೇ ಸುತ್ತಿಗೆ: ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರೂ ಎರಡನೇ ಸುತ್ತು ಪ್ರವೇಶಿಸಿದರು.

ಮೊದಲ ಸುತ್ತಿನ ಹೋರಾಟದಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ 21–14, 21–19ರಲ್ಲಿ ಜರ್ಮನಿಯ ಮಾರ್ವಿನ್‌ ಶೀಡೆಲ್‌ ಮತ್ತು ಲಿಂಡಾ ಎಫ್ಲೆರ್‌ ವಿರುದ್ಧ ಗೆಲುವಿನ ತೋರಣ ಕಟ್ಟಿದರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಅವರ ಹೋರಾಟ ಮೊದಲ ಸುತ್ತಿನಲ್ಲೇ ಅಂತ್ಯವಾಯಿತು.

ಮನು ಮತ್ತು ಸುಮೀತ್‌ 12–21, 16–21ರಲ್ಲಿ ಮಲೇಷ್ಯಾದ ಗೊಹ್‌ ಜೆ ಫೇ ಮತ್ತು ನೂರ್‌ ಇಜುದ್ದೀನ್‌ ಎದುರು ಮಣಿದರು.

ಭಾರತದ ಪ್ರಮುಖ ಸಿಂಗಲ್ಸ್‌ ಸ್ಪರ್ಧಿಗಳಾದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಅವರು ಬುಧವಾರ ಅಂಗಳಕ್ಕಿಳಿಯಲಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಐದನೇ ಶ್ರೇಯಾಂಕದ ಆಟಗಾರ್ತಿ ಸಿಂಧು, ಚೀನಾದ ಯೂ ಹಾನ್‌ ಎದುರು ಆಡಲಿದ್ದಾರೆ.

ಶ್ರೀಕಾಂತ್‌ ಅವರಿಗೆ ಮೊದಲ ಸುತ್ತಿನಲ್ಲಿ ಎಚ್‌.ಎಸ್‌.ಪ್ರಣಯ್‌ ಸವಾಲು ಎದುರಾಗಲಿದೆ. ಸಮೀರ್‌ ವರ್ಮಾ ಅವರು ಆ್ಯಂಡ್ರೆಸ್‌ ಆ್ಯಂಟೊನ್‌ಸನ್‌ ವಿರುದ್ಧ ಪೈಪೋಟಿ ನಡೆಸುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು