ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲ್‌ ರತ್ನಗೆ ಬಜರಂಗ್‌, ವಿನೇಶಾ ಹೆಸರು ಶಿಫಾರಸು

ಅರ್ಜುನಕ್ಕೆ ರಾಹುಲ್‌, ಹರ್‌ಪ್ರೀತ್‌, ದಿವ್ಯಾ, ಪೂಜಾ
Last Updated 29 ಏಪ್ರಿಲ್ 2019, 17:12 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯೂಎಫ್‌ಐ) ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ವಿನೇಶಾ ಪೋಗಟ್, ಬಜರಂಗ್‌ ಪೂನಿಯಾ ಹೆಸರನ್ನು ಶಿಫಾರಸು ಮಾಡಿದೆ.

ಸೋಮವಾರ ನಡೆದ ಒಕ್ಕೂಟದ ಆಡಳಿತಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

25 ವರ್ಷದ ಬಜರಂಗ್‌ ಪೂನಿಯಾಇತ್ತೀಚೆಗೆ ಚೀನಾದ ಕ್ಸಿಯಾನ್‌ನಲ್ಲಿ ನಡೆದ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಗಮನ ಸೆಳೆದಿದ್ದರು. ಅಲ್ಲದೆ, ಕಳೆದ ವರ್ಷ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮೆನ್‌ವೆಲ್ತ್‌ ಗೇಮ್ಸ್, ಜಕಾರ್ತದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡಿದ್ದರು.‌

24 ವರ್ಷದ ವಿನೇಶಾ ಪೋಗಟ್‌ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕುಸ್ತಿಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಅಲ್ಲದೆ,ಇತ್ತೀಚೆಗೆ ನಡೆದಏಷ್ಯನ್‌ ಚಾಂಪಿಯನ್‌ಷಿಪ್‌ನ 53 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.ಕಳೆದ ಎರಡು ವರ್ಷಗಳಲ್ಲಿ ಇವರಿಬ್ಬರ ಪ್ರದರ್ಶನ ಗಮನಾರ್ಹವಾಗಿದ್ದು, ಖೇಲ್‌ ರತ್ನ ಪ್ರಶಸ್ತಿಗೆ ಅರ್ಹರು ಎಂದು ಒಕ್ಕೂಟ ಹೇಳಿದೆ.

ಅರ್ಜುನಕ್ಕೆ ಶಿಫಾರಸು:ರಾಹುಲ್‌ ಆವಾರೆ, ಹರ್‌ಪ್ರೀತ್‌ ಸಿಂಗ್‌, ದಿವ್ಯಾ ಕಕ್ರಾನ್ ಮತ್ತು ಪೂಜಾ ದಂಡಾ ಅವರ ಹೆಸರನ್ನುಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.25 ವರ್ಷದ ಪೂಜಾ ದಂಡಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರೆ, 21 ವರ್ಷದ ದಿವ್ಯಾ ಕಕ್ರಾನ್‌ ಅವರು ಏಷ್ಯನ್‌ ಚಾಂಪಿಯನ್‌ಷಿಪ್‌, ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದರು.ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ರಾಹುಲ್‌ ಆವಾರೆ, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಪದಕ ತಮ್ಮದಾಗಿಸಿಕೊಂಡಿದ್ದರು. ಹರ್‌ಪ್ರೀತ್‌ ಸಿಂಗ್‌ ಏಷ್ಯನ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ದ್ರೋಣಾಚಾರ್ಯಕ್ಕೆ ಹೆಸರು ಸೂಚನೆ: ತರಬೇತುದಾರರಾದ ವೀರೇಂದರ್ ಕುಮಾರ್‌, ಸುಜೀತ್‌ ಮಾನ್, ನರೇಂದ್ರ ಕುಮಾರ್‌ ಮತ್ತು ವಿಕ್ರಂ ಕಮಾರ್‌ ಅವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಜೀವಮಾನದ ಶ್ರೇಷ್ಠ ಸಾಧನೆಗೆ ನೀಡುವ ಧ್ಯಾನ್‌ಚಂದ್‌ ಪ್ರಶಸ್ತಿಗೆ ಭೀಮ್‌ ಸಿಂಗ್‌ ಮತ್ತು ಜೈಪ್ರಕಾಶ್‌ ಅವರ ಹೆಸರನ್ನು ಸೂಚಿಸಲಾಗಿದೆ.

ಕಳೆದ ವರ್ಷವೂ ಖೇಲ್‌ ರತ್ನ ಪ್ರಶಸ್ತಿಗೆ ಬಜರಂಗ್‌ ಪೂನಿಯಾ ಅವರ ಹೆಸರನ್ನು ಒಕ್ಕೂಟ ಶಿಫಾರಸು ಮಾಡಿತ್ತು. ಆದರೆ, ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರಿಗೆ ಪ್ರಶಸ್ತಿ ಸಂದಿತ್ತು. ಆಯ್ಕೆಯ ಮಾನದಂಡಗಳನ್ನು ಪ್ರಶ್ನಿಸಿಕೋರ್ಟ್‌ ಮೊರೆ ಹೋಗುವ ನಿರ್ಧಾರವನ್ನು ಪೂನಿಯಾ ಕೈಗೊಂಡಿದ್ದರು. ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಕೋಚ್‌ ಯೋಗೇಶ್ವರ್‌ ದತ್‌, ಬಜರಂಗ್‌ ಅವರನ್ನು ಸಮಾಧಾನ ಪಡಿಸಿದ್ದರು.

ಹೀನಾ, ಅಂಕುರ್‌ ಮಿತ್ತಲ್‌ ಹೆಸರು ಸೂಚನೆ

ನವದೆಹಲಿ: ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಶೂಟರ್‌ಗಳಾದ ಹೀನಾ ಸಿಧು ಮತ್ತು ಅಂಕುರ್‌ ಮಿತ್ತಲ್‌ ಹೆಸರನ್ನು ರಾಷ್ಟ್ರೀಯ ಶೂಟಿಂಗ್‌ ಫೆಡರೇಷನ್‌ ಶಿಫಾರಸು ಮಾಡಿದೆ.

ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದ್ದು, ಅರ್ಜುನ ಪ್ರಶಸ್ತಿಗೆ ಅಂಜುಮ್‌ ಮೌದ್ಗಿಲ್‌, ಶಾಹಜಾರ್‌ ರಿಜ್ವಿ, ಓಂ ಪ್ರಕಾಶ್ ಮಿಠರ್‌ವಾಲ್‌ ಅವರ ಹೆಸರನ್ನೂ ಸೂಚಿಸಿದೆ.

ಐಎಸ್‌ಎಸ್‌ಎಫ್ ಶೂಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆದ ಭಾರತದ ಶೂಟರ್ ಎಂಬ ಗೌರವಕ್ಕೆ ಭಾಜನರಾದ ಹೀನಾ ಸಿಧು, ಶೂಟಿಂಗ್‌ ವಿಶ್ವಕಪ್‌, ಕಾಮನ್‌ವೆಲ್ತ್‌ ಗೇಮ್ಸ್ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಅಂಕುರ್‌ ಮಿತ್ತಲ್‌ ವಿಶ್ವಕಪ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕ ಜಯಿಸಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅಂಜುಮ್‌ ಮೌದ್ಗಿಲ್‌ ಚಿನ್ನ ಗೆದ್ದುಟೋಕಿಯೋ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿದ್ದರೆ,ವಿಶ್ವಕಪ್‌ನಲ್ಲಿ ಶಾಹಜಾರ್‌ ರಿಜ್ವಿ ಚಿನ್ನಕ್ಕೆ ಕೊರಳೊಡ್ಡಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 23 ವರ್ಷದಓಂ ಪ್ರಕಾಶ್ ಮಿಠರ್‌ವಾಲ್‌ಚಿನ್ನ ಗೆದ್ದ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT