ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್: ಲವ್ಲಿನಾ ಬೊರ್ಗೊಹೈನ್‌ಗೆ ಆಘಾತ; ಸೆಮಿಫೈನಲ್‌ಗೆ ಅಮಿತ್, ಜಾಸ್ಮಿನ್

Last Updated 4 ಆಗಸ್ಟ್ 2022, 14:32 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಭಾರತದ ಬಾಕ್ಸರ್‌ಗಳಾದ ಅಮಿತ್‌ ಪಂಘಾಲ್ ಮತ್ತು ಜಾಸ್ಮಿನ್‌ ಅವರು ಸೆಮಿಫೈನಲ್‌ ಪ್ರವೇಶಿಸಿದ್ದು, ಪದಕ ಖಚಿತಪಡಿಸಿಕೊಂಡಿದ್ದಾರೆ. ಇದರೊಂದಿಗೆ ಬಾಕ್ಸಿಂಗ್‌ ರಿಂಗ್‌ನಲ್ಲಿ ಭಾರತಕ್ಕೆ ಐದು ಪದಕಗಳು ಖಚಿತವಾದಂತಾಗಿದೆ.

ಗುರುವಾರ ನಡೆದ ಪುರುಷರ ಫ್ಲೈವೇಟ್ (48–51 ಕೆ.ಜಿ) ವಿಭಾಗದಲ್ಲಿ ಅಮಿತ್‌ 5–0 ರಲ್ಲಿ ಸ್ಕಾಟ್ಲೆಂಡ್‌ನ ಲೆನನ್‌ ಮಲಿಗನ್‌ ಎದುರು ಗೆದ್ದರು.

ಕಳೆದ ಬಾರಿಯ ಬೆಳ್ಳಿ ಪದಕ ವಿಜೇತ 26 ವರ್ಷದ ಅಮಿತ್‌, ಶ್ರೇಷ್ಠ ಪ್ರದರ್ಶನ ನೀಡಲು ವಿಫಲವಾದರೂ ತನಗಿಂತ ಕಿರಿಯ ವಯಸ್ಸಿನ ಎದುರಾಳಿಯನ್ನು ಮಣಿಸಲು ಯಶಸ್ವಿಯಾದರು. ಎಲ್ಲ ತೀರ್ಪುಗಾರರು ಅಮಿತ್‌ ಪರ ಪಾಯಿಂಟ್‌ ನೀಡಿದರು.

ಮೊದಲ ಎರಡು ಸುತ್ತುಗಳಲ್ಲಿ ರಕ್ಷಣೆಗೆ ಒತ್ತು ನೀಡಿದ ಅಮಿತ್‌, ಎದುರಾಳಿಯನ್ನು ಪಂಚ್‌ ನೀಡಲು ಪ್ರೇರೇಪಿಸಿದರು. ಆದರೆ ಮಲಿಗನ್‌ ಪಂಚ್‌ ಮಾಡಿದಾಗಲೆಲ್ಲಾ, ಚುರುಕಿನ ಪಾದಚಲನೆ ಮೂಲಕ ತಪ್ಪಿಸಿಕೊಳ್ಳುತ್ತಿದ್ದರು. ಅವಕಾಶ ಸಿಕ್ಕಾಗ ತಮ್ಮ ಎಡಗೈನಿಂದ ಒಂದಷ್ಟು ಪಂಚ್‌ಗಳನ್ನು ನೀಡಿದರು.

ಮೂರನೇ ಸುತ್ತಿನಲ್ಲಿ ನೈಜ ಸಾಮರ್ಥ್ಯ ತೋರಿದ ಭಾರತದ ಬಾಕ್ಸರ್‌, ಎಡ ಹಾಗೂ ಬಲಗೈನಿಂದ ಒಂದರ ಮೇಲೊಂದರಂತೆ ಪಂಚ್‌ ನೀಡಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಜಾಸ್ಮಿನ್‌ ಅವರು ಮಹಿಳೆಯರ ಲೈಟ್‌ವೇಟ್‌ (60 ಕೆ.ಜಿ) ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ 4–1 ರಲ್ಲಿ ನ್ಯೂಜಿಲೆಂಡ್‌ನ ಟ್ರಾಯ್ ಗಾರ್ಟನ್‌ ಅವರನ್ನು ಸೋಲಿಸಿದರು.

ಆಶೀಶ್‌, ಲವ್ಲಿನಾಗೆ ಸೋಲು: ಭಾರತದ ಆಶೀಶ್‌ ಕುಮಾರ್‌ ಮತ್ತು ಲವ್ಲಿನಾ ಬೊರ್ಗೊಹೈನ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದರು.

ಬುಧವಾರ ರಾತ್ರಿ ನಡೆದ ಪುರುಷರ 80 ಕೆ.ಜಿ ವಿಭಾಗದಲ್ಲಿ ಆಶೀಶ್‌ 1–4 ರಲ್ಲಿ ಇಂಗ್ಲೆಂಡ್‌ನ ಆ್ಯರನ್‌ ಬೊವೆನ್‌ ಕೈಯಲ್ಲಿ ಪರಾಭವಗೊಂಡರು.

ಆದರೆ ಮಹಿಳೆಯರ 66– 70 ಕೆ.ಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿಯ ಪದಕ ವಿಜೇತೆ ಲವ್ಲಿನಾ ಸೋಲು ಅನಿರೀಕ್ಷಿತವಾಗಿತ್ತು. ವೇಲ್ಸ್‌ನ ರೋಸಿ ಎಕ್ಲೆಸ್‌ ಅವರು 2–3 ರಲ್ಲಿ ಲವ್ಲಿನಾ ಎದುರು ಗೆದ್ದರು. ಮೊದಲ ಎರಡು ಸುತ್ತುಗಳ ಬಳಿಕ ಮುನ್ನಡೆಯಲ್ಲಿದ್ದ ಭಾರತದ ಬಾಕ್ಸರ್‌, ಕೊನೆಯ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು.

ನಿಖತ್‌ ಜರೀನ್ (50 ಕೆ.ಜಿ), ನೀತು ಗಂಗಾಸ್‌ (48 ಕೆ.ಜಿ) ಮತ್ತು ಮೊಹಮ್ಮದ್‌ ಹುಸಾಮುದ್ದೀನ್‌ (57ಕೆ.ಜಿ) ಅವರು ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT