ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಗೆದ್ದ; ಚಿನ್ನ ಗಳಿಸಿದ

ಮಾಸ್ಕೊದಲ್ಲಿ ನಡೆದ ವಿಶೇಷ ಕ್ರೀಡಾಕೂಟದಲ್ಲಿ ಪಾಲ್ಗೊಂಡ ನಗರದ ಬಾಲಕ
Last Updated 30 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಮಗನ ಮೊಣಕಾಲಿನಲ್ಲಿ ಕ್ಯಾನ್ಸರ್ ಗಡ್ಡೆ ಕಾಣಿಸಿಕೊಂಡಾಗ ತಂದೆ ತಾಯಿ ಆತಂಕಕ್ಕೆ ಒಳಗಾದದ್ದು ಖರೆ. ಆದರೆ ತಕ್ಕ ಸಮಯದಲ್ಲಿ ಸೂಕ್ತ ರೀತಿಯ ಚಿಕಿತ್ಸೆ ನೀಡಿದ ಅವರು ಮಗನಲ್ಲಿ ಧೈರ್ಯ ತುಂಬಿದರು. ಈಜು ಕ್ರೀಡೆಯ ಬಗ್ಗೆ ಆತನಲ್ಲಿ ಇದ್ದ ಆಸಕ್ತಿಯನ್ನು ಪ್ರೋತ್ಸಾಹಿಸಿದರು. ಕೊನೆಗೆ ಬಾಲಕ ಕ್ಯಾನ್ಸರ್ ಗೆದ್ದ. ಇದೀಗ ಚಿನ್ನದ ಪದಕವನ್ನೂ ಗೆದ್ದು ಸಂಭ್ರಮಿಸುತ್ತಿದ್ದಾನೆ.

ನಗರದ ಜಾಲಹಳ್ಳಿಯ ಆರ್ಕಿಡ್ಸ್ ಇಂಟರ್‌ನ್ಯಾಷನಲ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಹೃತಿಕ್ ಅಳಮಂಡ ಕ್ಯಾನ್ಸರ್‌ನಿಂದ ಬಚಾವಾದ ಮಕ್ಕಳಿಗಾಗಿಮಾಸ್ಕೊದಲ್ಲಿ ಆಯೋಜಿಸುವ ಕ್ರೀಡಾಕೂಟದ (ದಿ ವರ್ಲ್ಡ್‌ ಚಿಲ್ಡ್ರನ್ಸ್‌ ವಿನ್ನರ್ಸ್ ಗೇಮ್ಸ್‌) ಈಜು ಸ್ಪರ್ಧೆಯಲ್ಲಿ ಚಿನ್ನ ಮತ್ತು ಚೆಸ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ.

ಭಾರತದಿಂದ ಒಟ್ಟು 10 ಮಂದಿ ಕೂಟದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದಿಂದ ತೆರಳಿದವರು ಋತಿಕ್ ಒಬ್ಬರೇ. ಋತಿಕ್ ಒಳಗೊಂಡಂತೆ ಎಲ್ಲ ಹತ್ತು ಮಂದಿಯ ಹೆಸರನ್ನು ಭಾನುವಾರದ ಮನ್‌ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದ ಪ್ರಧಾನಿ ನರೇಂದ್ರ ಮೋದಿ ಪದಕವನ್ನೂ ಕ್ಯಾನ್ಸರ್‌ ಅನ್ನೂ ಗೆದ್ದದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು.

ಮೂರು ವರ್ಷಗಳ ಹಿಂದೆ ಋತಿಕ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ತಂದೆ ಭೀಮಯ್ಯ ಅಳಮಂಡ ಮತ್ತು ರೀನಾ ಎದೆಗುಂದದೆ ಬೆಂಗಳೂರು ಮತ್ತು ಮುಂಬೈಯಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಿದರು. ಸಣ್ಣ ವಯಸ್ಸಿನಲ್ಲೇ ಈಜಿನಲ್ಲಿ ಆಸಕ್ತಿ ಹೊಂದಿದ್ದ ಋತಿಕ್ ಕ್ಯಾನ್ಸರ್‌ನಿಂದ ಮುಕ್ತಿ ಪಡೆದ ನಂತರ ಅಭ್ಯಾಸ ಮಾಡತೊಡಗಿದರು. ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯವರು 15 ದಿನಗಳ ವಿಶೇಷ ತರಬೇತಿ ಏರ್ಪಡಿಸಿದ್ದರು.

ಮಂಗಳವಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಹೃತಿಕ್ ‘ಪದಕ ಗೆದ್ದದ್ದರಿಂದ ತುಂಬ ಖುಷಿಯಾಗಿದೆ. ಮೈಕೆಲ್ ಫೆಲ್ಪ್ಸ್‌ ಅವರನ್ನು ನೋಡಿ ನಾನೂ ಈಜಾಡಿ ಪದಕ ಗೆಲ್ಲಬೇಕೆಂಬ ಆಸೆಯಾಗುತ್ತಿತ್ತು. ಆ ಆಸೆ ಈಗ ಈಡೇರಿದೆ. ಈಜಿನಲ್ಲಿ ಮುಂದೆಯೂ ಸಾಧನೆ ಮಾಡುವ ಬಯಕೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT